ಬಿಜೆಪಿಯಲ್ಲಿ ಮತ್ತೆ ಅಸಮಾಧಾನ

ಬುಧವಾರ, ಜೂನ್ 19, 2019
32 °C
ಚುನಾವಣಾ ಪ್ರಚಾರ ತಂಡದಲ್ಲಿ ಹಿರಿಯರನ್ನು ಕಡೆಗಣಿಸಿದ ಬಿಎಸ್‌ವೈ

ಬಿಜೆಪಿಯಲ್ಲಿ ಮತ್ತೆ ಅಸಮಾಧಾನ

Published:
Updated:
ಬಿಜೆಪಿಯಲ್ಲಿ ಮತ್ತೆ ಅಸಮಾಧಾನ

ಬೆಂಗಳೂರು: ಚುನಾವಣಾ ತಯಾರಿಗಾಗಿ ರಚಿಸಿರುವ ಮೂರು ಸಮಿತಿಗಳ ನೇತೃತ್ವದ ವಿಷಯವು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ, ಸಾಂಪ್ರದಾಯಿಕ ಪ್ರಚಾರ ತಂಡ, ಅಸಾಂಪ್ರದಾಯಿಕ ಪ್ರಚಾರ ತಂಡ ಹಾಗೂ ಬೂತ್ ಮಟ್ಟದ ಸಮಿತಿ ರಚಿಸಲಾಗಿದೆ. ಈ ವಿಷಯದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಗುಂಪುಗಳಿಗೆ ನೀಡಲಾಗಿರುವ ಪ್ರಾತಿನಿಧ್ಯ ಹಾಗೂ ಆದ್ಯತೆ ಪಕ್ಷದ ಆಂತರಿಕ ವಲಯದಲ್ಲಿ ಅತೃಪ್ತಿ ಹುಟ್ಟುಹಾಕಿದೆ.

ಪಕ್ಷದ ಜವಾಬ್ದಾರಿಯನ್ನು ಬೇರೆ ಬೇರೆಯವರಿಗೆ ಹಂಚುವ ತೀರ್ಮಾನ ಕೈಗೊಂಡಿದ್ದ ಅಮಿತ್‌ ಷಾ, ತಂಡ ರಚಿಸುವ ಹೊಣೆಯನ್ನು ಸಂತೋಷ್‌ಗೆ ವಹಿಸಿದ್ದರು. ಅವರು ಸಿದ್ಧಪಡಿಸಿದ್ದ ಕರಡು ಪಟ್ಟಿಯಲ್ಲಿ ಸಭೆ, ರ‍್ಯಾಲಿ, ಯಾತ್ರೆ ಆಯೋಜಿಸುವ ಸಾಂಪ್ರದಾಯಿಕ ಪ್ರಚಾರ ತಂಡಕ್ಕೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಆಧುನಿಕ ಪ್ರಚಾರ ತಂಡಕ್ಕೆ ಸಂಸದ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಮಟ್ಟದ ಬೂತ್ ಮಟ್ಟದ ಸಮಿತಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾವ ಇತ್ತು.

ಗೌಡ, ಜೋಷಿಗೆ ಕಡೆಗಣನೆ? ಎರಡು ವಾರಗಳ ಬಳಿಕ ಯಡಿಯೂರಪ್ಪ ಅಧಿಕೃತವಾಗಿ ಪ್ರಕಟಿಸಿದ ಪಟ್ಟಿಯಲ್ಲಿ ತಂಡ ಮತ್ತು ಸಮಿತಿಗಳಿಗೆ ಅವರೇ ಅಧ್ಯಕ್ಷರಾಗಿರುತ್ತಾರೆ. ಸದಾನಂದಗೌಡರ ಬದಲಾಗಿ ಶೋಭಾ ಕರಂದ್ಲಾಜೆ, ಜೋಶಿ ಅವರ ಬದಲಿಗೆ ಅರವಿಂದ ಲಿಂಬಾವಳಿ ಹಾಗೂ ಅರುಣ್‌ ಕುಮಾರ್ ಬದಲಿಗೆ ಸಿ.ಟಿ.ರವಿ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

ಶೋಭಾ ಸಂಚಾಲಕರಾಗಿರುವ ತಂಡದಲ್ಲಿ  ಕೇಂದ್ರ ಸಚಿವರಾದ ಅನಂತಕುಮಾರ್‌ ಹಾಗೂ ಸದಾನಂದಗೌಡ ಅವರ ಹೆಸರು ಕ್ರಮವಾಗಿ ಮೂರು ಮತ್ತು ನಾಲ್ಕನೆ ಸ್ಥಾನದಲ್ಲಿವೆ. ಸಚಿವರಾದ ರಮೇಶ ಜಿಗಜಿಣಗಿ, ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಹೆಸರುಗಳು ಆನಂತರದ ಸ್ಥಾನ ಪಡೆದಿವೆ.

ಮುಖ್ಯಮಂತ್ರಿ, ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಸದಾನಂದಗೌಡ, ಹಿಂದೆ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪ್ರಹ್ಲಾದ ಜೋಶಿ ಅವರನ್ನು ಕೈಬಿಟ್ಟು ಎರಡನೇ ಹಂತದ ನಾಯಕರಿಗೆ ಜವಾಬ್ದಾರಿ ವಹಿಸಿರುವುದು ಅತೃಪ್ತಿಗೆ ಕಾರಣ ಎನ್ನಲಾಗಿದೆ. ಆರ್‌ಎಸ್ಎಸ್‌ನಿಂದ ಬಿಜೆಪಿ ಸಂಘಟನೆಗೆ ನಿಯೋಜಿತರಾಗಿರುವ ಅರುಣ್‌ ಕುಮಾರ್ ಅವರನ್ನು ಅದೇ ಕಾರಣಕ್ಕೆ ರಾಜ್ಯ ಮಟ್ಟದ ಬೂತ್ ಸಮಿತಿಯ ಜವಾಬ್ದಾರಿ ನೀಡಲು ಚಿಂತನೆ ನಡೆಸಲಾಗಿತ್ತು. ಅವರನ್ನೂ ಕೈಬಿಡಲಾಗಿದೆ.

‘ಕರಡು ಪಟ್ಟಿಯಲ್ಲಿ ಹೆಸರಿತ್ತು. ಬದಲಾವಣೆ ಮಾಡಿ ಅಧಿಕೃತ ಪಟ್ಟಿ ಪ್ರಕಟಿಸಿದ ಮೇಲೆ ಅದರ ಬಗ್ಗೆ ಆಕ್ಷೇಪ ಎತ್ತಿದರೆ ಪಕ್ಷ ವಿರೋಧಿ ಚಟುವಟಿಕೆಯಾಗಬಹುದು ಎಂಬ ಕಾರಣಕ್ಕೆ ನಾಯಕರೆಲ್ಲ ಸುಮ್ಮನಾಗಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮ ಒಗ್ಗಟ್ಟನ್ನು ಒಡೆಯಲು ಕೆಲವರು ಈ ರೀತಿ ಹಬ್ಬಿಸುತ್ತಿದ್ದಾರೆ. ಇದು ಸುಳ್ಳು’ ಎಂದು ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಜಾವಡೇಕರ್‌ ಸಮ್ಮುಖದಲ್ಲಿ ತಂಡಗಳ ಮೊದಲ ಸಭೆ ಇಂದು

ರಾಜ್ಯ ಚುನಾವಣಾ ಉಸ್ತುವಾರಿ, ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಸಮ್ಮುಖದಲ್ಲಿ ಎರಡು ತಂಡ ಹಾಗೂ ಸಮಿತಿಗಳ ಮೊದಲ ಸಭೆ ಶುಕ್ರವಾರ ನಡೆಯಲಿದೆ.

ಎರಡು ತಂಡ, ಸಮಿತಿಯ ಪ್ರತ್ಯೇಕ ಸಭೆಗಳನ್ನು ನಡೆಸಲಿರುವ ಜಾವಡೇಕರ್‌, ಮುಂದಿನ ಕಾರ್ಯಸೂಚಿಯನ್ನು ನೀಡಲಿದ್ದಾರೆ.

ಪಕ್ಷದ ಪ್ರಮುಖರ ಸಮಿತಿಯ ಸಭೆ ಕೂಡ ನಡೆಯಲಿದೆ. 2018ರ ಜೂನ್‌ ತಿಂಗಳಲ್ಲಿ ಅವಧಿ ಮುಗಿಯಲಿರುವ ವಿಧಾನಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆಯಾಗಲಿದೆ.

ಸಭಾಪತಿ ಡಿ.ಎಚ್. ಶಂಕರಮೂರ್ತಿ, ರಾಮಚಂದ್ರಗೌಡ, ಗಣೇಶ ಕಾರ್ಣಿಕ್, ಅಮರನಾಥ ಪಾಟೀಲ ಅವಧಿ ಮುಗಿಯಲಿದೆ. ಉಳಿದ ಎರಡು ಕ್ಷೇತ್ರಗಳನ್ನು ಸದ್ಯ ಜೆಡಿಎಸ್ ಪ್ರತಿನಿಧಿಸುತ್ತಿದೆ. ಈ ಕ್ಷೇತ್ರಗಳ ಮತದಾರರ ನೋಂದಣಿ ಪ್ರಕ್ರಿಯೆ ಇದೇ ತಿಂಗಳಲ್ಲಿ ಆರಂಭವಾಗಬೇಕಿದೆ. ಹೀಗಾಗಿ, ಅಭ್ಯರ್ಥಿಯನ್ನು ಆಖೈರುಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry