ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪಗೊಂಡನಹಳ್ಳಿಗೆ 65 ಅಡಿ ನೀರು

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ತಿಂಗಳಲ್ಲಿ ನಗರದ ಆಸುಪಾಸಿನಲ್ಲಿ ಸುರಿದ ಭರ್ಜರಿ ಮಳೆಯಿಂದಾಗಿ ತಿಪ್ಪಗೊಂಡ­ನ­­ಹಳ್ಳಿ ಜಲಾಶ­ಯ­­ದ ನೀರಿನ ಮಟ್ಟ 65 ಅಡಿಗೆ ಏರಿದೆ.

ಈ ಜಲಾ­ಶಯವನ್ನು ನಿರ್ಮಿಸಿದ್ದು 1930ರ­ ದಶಕದಲ್ಲಿ. ಹೆಸರಘಟ್ಟ ಬಿಟ್ಟರೆ ನಗರಕ್ಕೆ ಕುಡಿಯುವ ನೀರಿನ ಮುಖ್ಯ ಮೂಲ­ವಾಗಿದ್ದ ಇಲ್ಲಿಗೆ 1970ರ ನಂತರ ನೀರಿನ ಹರಿವು ಕಡಿಮೆಯಾಗಿತ್ತು. 1992ರ ಜೂನ್‌ನಲ್ಲಿ ಜಲಾಶಯ ತುಂಬಿತ್ತು. ಮತ್ತೆ 1998–99ರಲ್ಲಿ ನೀರಿನ ಮಟ್ಟ 71 ಅಡಿಗೆ ತಲುಪಿತ್ತು.

ಇದಾದ ಬಳಿಕ ನೀರಿನ ಮಟ್ಟ 43 ಅಡಿ ದಾಟಿರಲಿಲ್ಲ. ನೀರಿನ ಪ್ರಮಾಣ ಕಡಿಮೆ ಆದ ಕಾರಣ 2012ರ ಅಕ್ಟೋಬರ್‌ನಲ್ಲಿ ನಗರಕ್ಕೆ ನೀರು ಪೂರೈಕೆ ನಿಲ್ಲಿಸಲಾಗಿತ್ತು. ಇದೀಗ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದೆ.

‘ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಮಾಗಡಿ ಮತ್ತು ಬೆಂಗಳೂರು ಭಾಗದ 1,453 ಚದರ ಕಿ.ಮೀ ಜಲಾನಯನ ಪ್ರದೇಶವನ್ನು ಇದು ಒಳಗೊಂಡಿದೆ. ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಜಲಾಶಯ ತುಂಬಲು ಮುಕ್ಕಾಲು ಟಿಎಂಸಿ ಅಡಿ ನೀರು ಬೇಕು’ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಅನುಷ್ಠಾನಗೊಳ್ಳದ ಶಿಫಾರಸು: ‘ಜಲಾಶಯಕ್ಕೆ ನೀರಿನ ಒಳಹರಿವು ಮತ್ತು ಗುಣಮಟ್ಟ ಕಡಿಮೆಯಾಗಿರುವ ಬಗ್ಗೆ ಇಸ್ರೊ ಅಧ್ಯಯನ ನಡೆಸಿ ಕೆಲವು ಶಿಫಾ­ರಸುಗಳನ್ನು ಮಾಡಿತ್ತು. ಅದರಂತೆ ಸರ್ಕಾರ ಜಲಾಶಯದ ಜಲಾನಯನವನ್ನು ನಾಲ್ಕು ವಲಯಗಳಾಗಿ ವಿಂಗಡಿಸಿ, ಕೆಲವು ಚಟುವಟಿಕೆಗಳನ್ನು ನಿರ್ಬಂಧಿಸಲು ಅಧಿಸೂಚನೆ­ ಜಾರಿ ಮಾಡಿತ್ತು. ಅಧಿಸೂಚನೆಯ ಬಹುಭಾಗ ಈವರೆಗೆ ಅನುಷ್ಠಾನ ಆಗಿಲ್ಲ’ ಎಂದು ಜಲತಜ್ಞರು ಬೇಸರ ವ್ಯಕ್ತಪಡಿಸುತ್ತಾರೆ.

‘ಈ ಭಾಗದಲ್ಲಿ ಅಂತರ್ಜಲ ಅತಿ ಬಳಕೆಯನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಅಂತರ್ಜಲದ ಮಟ್ಟ 700 ಅಡಿಗೆ ಇಳಿದಿತ್ತು. ಈ ಸಲದ ವರ್ಷಧಾರೆಯಿಂದಾಗಿ ಅಂತರ್ಜಲದ ಮಟ್ಟ ಏರುವ ನಿರೀಕ್ಷೆ ಇದೆ’ ಎಂದು ಅವರು ಹೇಳುತ್ತಾರೆ.

‘ಜಲಾಶಯದ ನೀರು ರಾಸಾಯನಿಕ ಮಿಶ್ರಿತವಾಗಿದೆ. ಜಲಾಶಯದಲ್ಲಿ ನೈಟ್ರೇಟ್‌ ಸೇರಿದಂತೆ ನೀರಿನಲ್ಲಿ ಕರಗಿದ ಲವಣಗಳ (ಟಿಡಿಎಸ್‌) ಪ್ರಮಾಣ ಶೇ 800ರಷ್ಟು ಇತ್ತು. ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಇದು ಸ್ವಲ್ಪ ಕಡಿಮೆಯಾಗಿದೆ. ಈ ಪ್ರಮಾಣ ಶೇ 500ಕ್ಕಿಂತ ಕಡಿಮೆ ಇದ್ದರೆ ನೀರನ್ನು ಕುಡಿಯಲು ಬಳಸಬಹುದು. ಇದರ ಶುದ್ಧೀಕರಣಕ್ಕೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಎತ್ತಿನಹೊಳೆ ಯೋಜನೆಯಿಂದಲೂ ಇಲ್ಲಿಗೆ 1.5 ಟಿಎಂಸಿ ಅಡಿ ನೀರು ಹರಿಸಲು ಉದ್ದೇಶಿಸಲಾಗಿದೆ’ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT