ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ: ಹೈಕೋರ್ಟ್‌ ಆದೇಶ ರದ್ದು

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗ್ರಾನೈಟ್ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು ಮತ್ತು ಕೆಲ ಖಾಸಗಿ ವ್ಯಕ್ತಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಕೈಗೊಂಡಿದ್ದ ತನಿಖೆಯನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿದೆ.

ಮಾರ್ಚ್‌ 28ರ  ಹೈಕೋರ್ಟ್‌  ಆದೇಶದ ವಿರುದ್ಧ ಕರ್ನಾಟಕ ಸರ್ಕಾರದ ಪರ ವಕೀಲ ಜೋಸೆಫ್‌ ಅರಿಸ್ಟಾಟಲ್‌ ಅವರು ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆಗೆ ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯಲ್‌ ಮತ್ತು ಯು.ಯು.ಲಲಿತ್‌ ಅವರನ್ನು ಒಳಗೊಂಡ ಪೀಠವು ಒಪ್ಪಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಆರೋಪ ಮಾಡಿರುವುದರಿಂದ ತನಿಖೆಗೆ ಯಾವುದೇ ಅಡ್ಡಿ ಇಲ್ಲ ಎಂದು ಪೀಠ ಹೇಳಿದೆ.

ಆರೋಪಿಗಳ ಪರ ವಕಾಲತ್ತು ವಹಿಸಿದ ಹಿರಿಯ ವಕೀಲ ಜಯಂತ ಭೂಷಣ್‌ ಅವರು ಅರ್ಜಿಯಲ್ಲಿ, ಗಣಿ ಮತ್ತು ಖನಿಜ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯಡಿ ಈಗಾಗಲೇ ದಾಖಲಾಗಿರುವ ದೂರುಗಳ ಬಗ್ಗೆ ಅಧಿಕಾರಿಗಳು ಮಾತ್ರ ದೂರು ದಾಖಲಿಸಬಹುದು ಎಂದು ಪ್ರತಿಪಾದಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನೀಡಿರುವ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂಬುದನ್ನು ನ್ಯಾಯಮೂರ್ತಿಗಳು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಭೂಷಣ್‌ ಅವರು, ಲೋಕಾಯುಕ್ತ ಪೊಲೀಸ್ ರಚಿಸಿದ ವಿಶೇಷ ತನಿಖಾ ತಂಡವು ಅಪರಾಧಗಳ ತನಿಖೆ ನಡೆಸುವುದಿಲ್ಲ. ಕೇವಲ ಶಿಫಾರಸು ಮಾಡಿರುವ ಪ್ರಕರಣಗಳಲ್ಲಿ ಮಾತ್ರ ಅದು ತನಿಖೆ ನಡೆಸುತ್ತದೆ ಎಂದು ಪೀಠದ ಗಮನಕ್ಕೆ ತಂದರು. ದೂರು ಪಡೆ‌ದು ಎಫ್‌ಐಆರ್‌ ದಾಖಲಿಸಲು ಮತ್ತು ತನಿಖೆ ನಡೆಸಲು ಲೋಕಾಯುಕ್ತವು ಪೊಲೀಸ್‌ ಠಾಣೆಯಲ್ಲ ಎಂದು ಭೂಷಣ್‌ ಹೇಳಿದರು.

ಭೂಷಣ್‌ ಅವರ ವಾದಕ್ಕೆ ಪ್ರತಿಕ್ರಿಯಿಸಿದ ವಕೀಲ ಅರಿಸ್ಟಾಟಲ್‌ ಅವರು, ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ. ಇಲ್ಲಿ ಸರ್ಕಾರಿ ಅಧಿಕಾರಿಗಳೇ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಅಕ್ರಮ ಕ್ವಾರಿಗೆ ಅವಕಾಶ ಕಲ್ಪಿಸಿದ್ದಾರೆ. ಅಕ್ರಮ ಗಣಿಗಾರಿಕೆ ಮತ್ತು ಕ್ವಾರಿಗಳಿಗೆ ಸಂಬಂಧಿಸಿದಂತೆ ಪ್ರಕರಣಗಳ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬಹುದು. ಈ ಪ್ರಕರಣದಲ್ಲಿ ಕೆಲ ಎಫ್‌ಐಆರ್‌ಗಳನ್ನು ಎಸ್‌ಐಟಿಗೆ ವರ್ಗಾಯಿಸಲಾಗಿದೆ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ನ್ಯಾಯಾಲಯವು ಲಿಂಗನಗೌಡ, ವೆಂಕಟೇಶ ಬಾಬು, ಪ್ರೇಮಚಂದ ಜೈನ್‌, ಮಲ್ಲಿಕಾರ್ಜುನ ಮತ್ತು ಶೇಖರಪ್ಪ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.  ಕೊಪ್ಪಳದಲ್ಲಿ ಅಕ್ರಮ ಕ್ವಾರಿ ನಡೆಸುತ್ತಿರುವ ಆರೋಪದ ಮೇಲೆ 2014ರಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಸ್‌ಐಟಿ ತನಿಖೆ ನಡೆಸುತ್ತಿದೆ.

ಬಾಗಲಕೋಟೆಯಲ್ಲಿ ಗ್ರಾನೈಟ್‌ ಅಕ್ರಮ ಗಣಿಗಾರಿಕೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಶರಣಪ್ಪ, ಸಂಗಪ್ಪ ಮತ್ತು ಭದ್ರಪ್ಪ ಅವರನ್ನೂ ಎಸ್‌ಐಟಿ ತನಿಖೆಗೆ ಒಳಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT