ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯದ ಬಿಗಿಮುಷ್ಟಿಯಲ್ಲಿ ನಗರ

ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಅಗತ್ಯ: ತಜ್ಞರ ಸಲಹೆ
Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಯುಮಾಲಿನ್ಯದ ಬಿಗಿಮುಷ್ಟಿಯಲ್ಲಿ ಸಿಲುಕಿರುವ ಬೆಂಗಳೂರು ನಗರಕ್ಕೆ ಪ್ರಮುಖವಾಗಿ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಾಗೂ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡಿದರು.

ಐರೋಪ್ಯ ಒಕ್ಕೂಟ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಾಯುಮಾಲಿನ್ಯ ಕಡಿಮೆಗೊಳಿಸಲು ಐರೋಪ್ಯ ಒಕ್ಕೂಟದೊಂದಿಗೆ (ಇಯು) ಭಾರತ ಒಪ್ಪಂದ ಮಾಡಿಕೊಂಡಿದೆ. ಅದರ ಭಾಗವಾಗಿ ವಾಯುಮಾಲಿನ್ಯ ಹೆಚ್ಚಿರುವ ನಗರಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸುವ ಕಾರ್ಯಕ್ರಮಕ್ಕೆ ಇಯು ಆರ್ಥಿಕ ನೆರವು ನೀಡುತ್ತಿದೆ.

ವಾಯುಮಾಲಿನ್ಯ ಸೂಚ್ಯಂಕವನ್ನು ಶತಾಯಗತಾಯ ಕಡಿಮೆ ಮಾಡಲು ಪಣತೊಟ್ಟಿರುವ ಲಂಡನ್‌, ಮಾಲಿನ್ಯ ನಿಯಂತ್ರಿಸಲು ಏನೆಲ್ಲ ಕ್ರಮ ಕೈಗೊಂಡಿದೆ ಎಂಬುದನ್ನು ಅಲ್ಲಿನ ಅಧಿಕಾರಿಗಳು ಪ್ರಸ್ತುತಪಡಿಸಿದರು.

‘ಖಾಸಗಿ ವಾಹನಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ನೀತಿಗಳು ರೂಪುಗೊಳ್ಳಬೇಕು. ಸಾರ್ವಜನಿಕ ಸಾರಿಗೆ ಬಳಸುವ ವಾತಾವರಣ ನಿರ್ಮಿಸಬೇಕು. ಕಟ್ಟುನಿಟ್ಟಿನ ನಿಯಮ ಜಾರಿಯಾದರಷ್ಟೇ ಮಾಲಿನ್ಯ ಪ್ರಮಾಣ ತಗ್ಗಿಸಲು ಸಾಧ್ಯ’ ಎಂದು ಇಯು ತಾಂತ್ರಿಕ ನಿರ್ದೇಶಕಿ ಅನಾ ಗ್ರಾಸಿನೊ ಅಭಿಪ್ರಾಯಪಟ್ಟರು.

‘ಲಂಡನ್‌ನಲ್ಲಿ ವಾಯುಮಾಲಿನ್ಯ ತಗ್ಗಿಸಲು ವಿವಿಧ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾಲಿನ್ಯದ ದತ್ತಾಂಶಗಳನ್ನು ನೀಡುವ ಬದಲು ವಾಯುಮಾಲಿನ್ಯ ಮೂನ್ಸೂಚನೆ ನೀಡುವ ಪರಿಪಾಠವನ್ನು ಇಲ್ಲಿ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ರಸ್ತೆ ಆಧಾರಿತ ಸಾರಿಗೆ ವ್ಯವಸ್ಥೆಗಿಂತ ರೈಲು ಆಧಾರಿತ ಸಾರಿಗೆ ಹೆಚ್ಚು ಪರಿಸರ ಸ್ನೇಹಿಯಾಗಿರುತ್ತದೆ. ಆ ಬಗ್ಗೆ ಸರ್ಕಾರ ಹೆಚ್ಚು ಒತ್ತು ನೀಡಬೇಕು. ಬೆಂಗಳೂರಿನ ವಾತಾವರಣದಲ್ಲಿರುವ ನೈಟ್ರೋಜನ್‌ ಆಕ್ಸೈಡ್‌ ಪ್ರಮಾಣ ನೋಡಿದರೆ ಲಂಡನ್‌ ಪರಿಸ್ಥಿತಿಗಿಂತ ಹೆಚ್ಚು ದೂರವಿಲ್ಲ’ ಎಂದು ಹೇಳಿದರು.

ಲಂಡನ್‌ ಸಾರಿಗೆ ವಿಭಾಗದ ಪರಿಸರ ವ್ಯವಸ್ಥಾಪಕ ಫಿನ್‌ ಕೊಯ್ಲಿ, ‘ಲಂಡನ್‌ನಲ್ಲಿ ಪ್ರಸ್ತುತ ಯುರೊ–6 (ಹೊಗೆ ಹೊರಸೂಸುವ ಯುರೋಪಿಯನ್‌ ಮಾಪಕ; ಲಘು ವಾಹನಗಳ ಹೊಗೆ ಹೊರಸೂಸುವ ಪ್ರಮಾಣದ ನಿಯಂತ್ರಣಕ್ಕಾಗಿ ಈ ಮಾರ್ಗಸೂಚಿಯನ್ನು ರೂಪಿಸಲಾಗಿದೆ) ಮಾರ್ಗಸೂಚಿ ಬಳಸಲಾಗುತ್ತಿದೆ. ಗಾಳಿಯಲ್ಲಿ ನೈಟ್ರೋಜನ್‌ ಆಕ್ಸೈಡ್‌ ಪ್ರಮಾಣವನ್ನು ತಗ್ಗಿಸಲು ಈ ಮಾಪಕ ಅಳವಡಿಕೆ ಅನಿವಾರ್ಯ’ ಎಂದು ವಿವರಿಸಿದರು.

‘ಕಾರುಗಳು ಹೊರಸೂಸುವ ನೈಟ್ರೋಜನ್‌ ಆಕ್ಸೈಡ್‌, ಕಾರ್ಬನ್‌ ಮೊನಾಕ್ಸೈಡ್‌, ಹೈಡ್ರೋಕಾರ್ಬನ್‌ ಹಾಗೂ ದೂಳಿನ ಕಣಗಳ ನಿಯಂತ್ರಣಕ್ಕೆ ಈ ಮಾರ್ಗಸೂಚಿ ಅವಕಾಶ ಕಲ್ಪಿಸುತ್ತದೆ. ಪ್ರಸ್ತುತ ಭಾರತದಲ್ಲಿ ಯುರೊ–4 ಮಾರ್ಗಸೂಚಿಯನ್ನು ಬಳಸಲಾಗುತ್ತಿದೆ. ಇದಕ್ಕಿಂತ ಯುರೊ–6 ದುಬಾರಿಯಾಗಿದೆ. ಆದರೆ, ಪರಿಸರಕ್ಕೆ ಯೋಗ್ಯವಾಗಿದೆ’ ಎಂದು ಹೇಳಿದರು.

‘ದುಬಾರಿ ದಂಡವೇ ಪರಿಹಾರ’
‘ಲಂಡನ್‌ನಲ್ಲಿ 15 ವರ್ಷ ದಾಟಿದ ಡಿಸೇಲ್‌ ಕಾರುಗಳನ್ನು ಬಳಸಿದರೆ ದಿನವೊಂದಕ್ಕೆ 100 ಪೌಂಡ್‌ (₹8,566) ದಂಡ ವಿಧಿಸಲಾಗುತ್ತದೆ. ಪದೇ ಪದೇ ನಿಯಮ ಉಲ್ಲಂಘಿಸಿದರೆ ದಂಡದ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. 2006ಕ್ಕೂ ಮೊದಲಿನ ಕಾರುಗಳು ಲಂಡನ್‌ ನಗರ ಪ್ರವೇಶಿಸಬೇಕಾದರೆ ಶುಲ್ಕ ತೆರುವುದು ಅನಿವಾರ್ಯ’ ಎಂದು ಫಿನ್‌ ಕೊಯ್ಲಿ ತಿಳಿಸಿದರು.

‘ಮೆಲ್ಸೇತುವೆಗಳು ವಾಯುಮಾಲಿನ್ಯ ತಗ್ಗಿಸುವುದಿಲ್ಲ’
‘ಮೇಲ್ಸೇತುವೆಗಳ ನಿರ್ಮಾಣದಿಂದ ವಾಯುಮಾಲಿನ್ಯ ಕಡಿಮೆಯಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತದೆ. ಆದರೆ, ಅದರಿಂದ ಮಾಲಿನ್ಯ ಪ್ರಮಾಣ ತಗ್ಗುವುದಿಲ್ಲ. ಬದಲಿಗೆ ಇನ್ನೂ ಹೆಚ್ಚಿನ ವಾಹನಗಳು ರಸ್ತೆಗೆ ಬರಲು ಕಾರಣವಾಗುತ್ತದೆ. ಹಾಗಾಗಿ ರೈಲುಗಳ ಬಳಕೆಗೆ ಹೆಚ್ಚು ಒತ್ತು ನೀಡಬೇಕು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಆಶಿಶ್‌ ವರ್ಮಾ ಪ್ರತಿಪಾದಿಸಿದರು.

‘ಮಿತಿ ಮೀರಿದೆ ವಿದ್ಯುತ್‌ ಜನರೇಟರ್‌ಗಳ ಹಾವಳಿ’
‘ನಗರದ ವಾಯುಮಾಲಿನ್ಯಕ್ಕೆ ಎರಡನೇ ಅತಿ ಹೆಚ್ಚು ಕೊಡುಗೆ ನೀಡುತ್ತಿರುವುದು ವಿದ್ಯುತ್‌ ಜನರೇಟರ್‌ಗಳು. ವಸತಿ ಪ್ರದೇಶಗಳಲ್ಲೂ ವಾಯುಮಾಲಿನ್ಯ ಹೆಚ್ಚಳವಾಗಲು ಇವುಗಳು ಪ್ರಮುಖ ಕಾರಣ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT