ಗುರುವಾರ, 28 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರುಷಿ–ಹೇಮರಾಜ್‌ ಹತ್ಯೆ: ತಲ್ವಾರ್‌ ದಂಪತಿ ಖುಲಾಸೆ–ಅಲಹಾಬಾದ್‌ ಹೈಕೋರ್ಟ್‌ ತೀರ್ಪು

Last Updated 13 ಅಕ್ಟೋಬರ್ 2017, 9:07 IST
ಅಕ್ಷರ ಗಾತ್ರ
ADVERTISEMENT

ಲಖನೌ: ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ 9 ವರ್ಷಗಳ ಹಿಂದೆ ನೊಯಿಡಾದಲ್ಲಿ ನಡೆದಿದ್ದ ಆರುಷಿ–ಹೇಮರಾಜ್‌  ಕೊಲೆ ಪ್ರಕರಣದಲ್ಲಿ ಆರುಷಿ ಪೋಷಕರಾದ ರಾಜೇಶ್‌ ತಲ್ವಾರ್‌ ಮತ್ತು ನೂಪುರ್‌ ತಲ್ವಾರ್‌ ಅವರನ್ನು ಅಲಹಾಬಾದ್‌ ಹೈಕೋರ್ಟ್‌ ಗುರುವಾರ ಖುಲಾಸೆಗೊಳಿಸಿದೆ.

ಜನರಿಂದ ತುಂಬಿತುಳುಕುತ್ತಿದ್ದ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದ ವಿಭಾಗೀಯ ಪೀಠವು, ತಲ್ವಾರ್‌ ದಂಪತಿಗೆ ಸಿಬಿಐ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಗೊಳಿಸಿದೆ. ಗಾಜಿಯಾಬಾದ್‌ನ ದಾಸ್ನಾ ಕಾರಾಗೃಹದಲ್ಲಿರುವ ತಲ್ವಾರ್‌ ದಂಪತಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ನ್ಯಾಯಪೀಠ ಸೂಚಿಸಿದೆ.

‘ಕೇವಲ ಅನುಮಾನದ ಆಧಾರದಲ್ಲಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಲು ಸಾಧ್ಯವಿಲ್ಲ.ಆರುಷಿ ಪೋಷಕರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಮತ್ತು ಲಭ್ಯವಿರುವ ಸಾಂದರ್ಭಿಕ ಸಾಕ್ಷ್ಯಗಳು ಆರೋಪವನ್ನು ಸಾಬೀತು ಮಾಡುವಲ್ಲಿ ವಿಫಲವಾಗಿವೆ’ ಎಂದು ನ್ಯಾಯಪೀಠ ಹೇಳಿದೆ.

‘ಹೈಕೋರ್ಟ್‌ನ ತೀರ್ಪಿನ ಪ್ರತಿಗಾಗಿ ಕಾಯುತ್ತಿದ್ದು, ಶುಕ್ರವಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ’ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.ಈ ಮಧ್ಯೆ ಅಲಹಾಬಾದ್‌ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಬಿಐ ವಕೀಲರು ಹೇಳಿದ್ದಾರೆ.

9 ವರ್ಷ ಹಳೆಯ ಪ್ರಕರಣ: ವೃತ್ತಿಯಲ್ಲಿ ದಂತವೈದ್ಯರಾಗಿರುವ ರಾಜೇಶ್‌ ಮತ್ತು ನೂಪುರ್ ತಲ್ವಾರ್‌ ಅವರ ನೊಯಿಡಾ ನಿವಾಸದಲ್ಲಿ 2008ರ ಮೇ 16ರಂದು ಅವರ ಪುತ್ರಿ ಆರುಷಿ ಶವ ಪತ್ತೆಯಾಗಿತ್ತು. ಒಂದು ದಿನದ ಬಳಿಕ ಮನೆಯ ಕೆಲಸಗಾರ ಹೇಮರಾಜ್‌ ಶವ ಮನೆಯ ಚಾವಣಿಯಲ್ಲಿ ಪತ್ತೆಯಾಗಿತ್ತು.

ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು.

ತಲ್ವಾರ್‌ ದಂಪತಿ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿಲ್ಲ ಎಂಬ ಕಾರಣಕ್ಕೆ ಆರಂಭದಲ್ಲಿ ಸಿಬಿಐ, ವಿಚಾರಣಾ ನ್ಯಾಯಾಲಯದಲ್ಲಿ ಪರಿಸಮಾಪ್ತಿ ವರದಿ ಸಲ್ಲಿಸಿತ್ತು. ಆದರೆ, ನ್ಯಾಯಾಲಯ ಈ ವರದಿ ತಿರಸ್ಕರಿಸಿತ್ತು. ಬಳಿಕ ಸಿಬಿಐ ತಲ್ವಾರ್‌ ದಂಪತಿಯನ್ನು ವಿಚಾರಣೆಗೆ ಒಳಪಡಿಸಿತ್ತು.

ಇದಕ್ಕೂ ಮೊದಲು ಸಿಬಿಐಯು ತಲ್ವಾರ್‌ ದಂಪತಿಯ ಸಹಾಯಕ ಕೃಷ್ಣ ಮತ್ತು ಮತ್ತಿಬ್ಬರು ವಿಜಯ ಮಂಡಲ್‌ ಹಾಗೂ ರಾಜಕುಮಾರ್‌ ಎಂಬುವವರನ್ನು ಬಂಧಿಸಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಅವರನ್ನು ಬಿಡುಗಡೆಗೊಳಿಸಿತ್ತು.

ಆರುಷಿ ಮತ್ತು ಹೇಮರಾಜ್‌ ಅವರನ್ನು ತಲ್ವಾರ್‌ ದಂಪತಿ ಹತ್ಯೆ ಮಾಡಿದ್ದಾರೆ ಎಂದು 2013ರಲ್ಲಿ ಹೇಳಿದ್ದ ಸಿಬಿಐ ವಿಶೇಷ ನ್ಯಾಯಾಲಯ, ಇಬ್ಬರಿಗೂ ಜೀವವಾಧಿ ಶಿಕ್ಷೆ ವಿಧಿಸಿತ್ತು.

ನ್ಯಾಯ ಸಿಕ್ಕಿದೆ: ತಲ್ವಾರ್‌ ದಂಪತಿ

ಅಲಹಾಬಾದ್‌ ಹೈಕೋರ್ಟ್‌ ತಮ್ಮನ್ನು ನಿರ್ದೋಷಿ ಎಂದು ಘೋಷಿಸಿದ ಸುದ್ದಿ ತಿಳಿಯುತ್ತಲೇ ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿರುವ ತಲ್ವಾರ್‌ ದಂಪತಿ ಕಣ್ಣೀರು ಹರಿಸಿದರು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

‘ಹೈಕೋರ್ಟ್‌ ತೀರ್ಪಿನಿಂದ ದಂಪತಿ ಸಂತಸಗೊಂಡಿದ್ದಾರೆ. ಕೊನೆಗೂ ತಮಗೆ ನ್ಯಾಯ ಸಿಕ್ಕಿದೆ ಎಂದು ಅವರು ಹೇಳಿದರು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಗುರುವಾರ ಬೆಳಿಗ್ಗೆಯಿಂದ ದಂಪತಿ ಏನೂ ತಿಂದಿಲ್ಲ. ಗಂಟೆಗಳ ಕಾಲ ಅವರು ಪ್ರಾರ್ಥನೆ ಮಾಡುತ್ತಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಗಾದರೆ ಆರುಷಿ ಕೊಂದವರು ಯಾರು?: ನಿಗೂಢವಾಗಿ ಉಳಿದ ಪ್ರಶ್ನೆ!

ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ದಂಪತಿ ಆರುಷಿ–ಹೇಮರಾಜ್‌ ಜೋಡಿ ಕೊಲೆ ಮಾಡಿಲ್ಲ ಎಂದಾದರೆ ಈ ಕೊಲೆಗಳನ್ನು ಮಾಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಅಲಹಾಬಾದ್‌ ಹೈಕೋರ್ಟ್ ತೀರ್ಪಿನಿಂದ ತಲ್ವಾರ್‌ ದಂಪತಿ ನಿರಾಳರಾಗಿದ್ದಾರೆ. 9 ವರ್ಷದ ಬಳಿಕವೂ ಆಕೆಯ ಹಂತಕರು ಯಾರು ಎಂಬುವುದು ಪ್ರಶ್ನೆಯಾಗಿಯೇ ಉಳಿದಿದೆ. ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ!

ಆರುಷಿ–ಹೇಮರಾಜ್‌ ಕೊಲೆ ಪ್ರಕರಣದ ಹಾದಿ

ಮೇ 16,2008: ನೊಯಿಡಾದಲ್ಲಿರುವ ತಲ್ವಾರ್‌ ದಂಪತಿ ಮನೆಯಲ್ಲಿ 14 ವರ್ಷದ ಅವರ ಮಗಳು ಆರುಷಿ ಶವ ಪತ್ತೆ. ಮನೆ ಕೆಲಸಗಾರನ ಕೃತ್ಯ ಶಂಕೆ

ಮೇ 17, 2008: ಮನೆಯ ಚಾವಣಿಯಲ್ಲಿ ಕೆಲಸಗಾರ ಹೇಮರಾಜ್‌ ಶವ ಪತ್ತೆ

ಮೇ 18:  ಶಸ್ತ್ರಕ್ರಿಯೆಯಲ್ಲಿ ಬಳಸುವ ಚಾಕುವಿನಿಂದ ಎರಡೂ ಕೊಲೆ ಮಾಡಲಾಗಿದೆ ಎಂದು ಹೇಳಿದ ಪೊಲೀಸರು

ಮೇ 21: ಉತ್ತರ ಪ್ರದೇಶ ಪೊಲೀಸರಿಗೆ ತನಿಖೆಗೆ ನೆರವಾದ ದೆಹಲಿ ಪೊಲೀಸರು

ಮೇ 22: ಮರ್ಯಾದೆ ಗೇಡು ಹತ್ಯೆಯ ಶಂಕೆ. ಆರುಷಿ ಪೋಷಕರ ವಿರುದ್ಧ ಅನುಮಾನ ವ್ಯಕ್ತಪಡಿಸಿದ ಪೊಲೀಸರು

ಮೇ 23: ರಾಜೇಶ್‌ ತಲ್ವಾರ್‌, ನೂಪುರ್‌ ತಲ್ವಾರ್‌ ಬಂಧನ

ಜೂನ್‌ 1: ಸಿಬಿಐಗೆ ತನಿಖೆಯ ಹೊಣೆ

ಜೂನ್‌ 20: ರಾಜೇಶ್‌ ತಲ್ವಾರ್‌ ಅವರ ಸುಳ್ಳುಪತ್ತೆ ಪರೀಕ್ಷೆ ನಡೆಸಿದ ಸಿಬಿಐ

ಜೂನ್‌ 25: ಎರಡನೇ ಬಾರಿ ನೂಪುರ್‌ ತಲ್ವಾರ್‌ ಅವರ ಸುಳ್ಳುಪತ್ತೆ ಪರೀಕ್ಷೆ ನಡೆಸಿದ ತನಿಖಾಧಿಕಾರಿಗಳು

ಫೆಬ್ರುವರಿ 2010: ಫೆ.15–20ರ ನಡುವೆ ರಾಜೇಶ್‌ ತಲ್ವಾರ್‌ಗೆ ಮಂಪರು ಪರೀಕ್ಷೆ ನಡೆಸಿದ ಸಿಬಿಐ

ಡಿಸೆಂಬರ್‌ 29: ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ ವಿಚಾರಣಾ ನ್ಯಾಯಾಲಯದಲ್ಲಿ ಪರಿಸಮಾಪ್ತಿ ವರದಿ ಸಲ್ಲಿಸಿದ ಸಿಬಿಐ

2011, ಜನವರಿ 25: ಗಾಜಿಯಾಬಾದ್‌ನ ವಿಶೇಷ ಸಿಬಿಐ ನ್ಯಾಯಾಲಯದ ಆವರಣದಲ್ಲಿ ರಾಜೇಶ್‌ ತಲ್ವಾರ್‌ ಮೇಲೆ ದಾಳಿ. ಗಂಭೀರ ಗಾಯ

ಫೆಬ್ರುವರಿ 9: ಸಿಬಿಐನ ಪರಿಸಮಾಪ್ತಿ ವರದಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯ. ಹತ್ಯೆ ಆರೋಪದಲ್ಲಿ ವಿಚಾರಣೆ ಎದುರಿಸುವಂತೆ ಆರುಷಿ ಪೊಷಕರಿಗೆ ಸಮನ್ಸ್‌

ಫೆಬ್ರುವರಿ 21: ವಿಚಾರಣಾ ನ್ಯಾಯಾಲಯದ ಸಮನ್ಸ್‌ಗಳನ್ನು ರದ್ದುಗೊಳಿಸುವಂತೆ ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋದ ತಲ್ವಾರ್‌ ದಂಪತಿ

ಮಾರ್ಚ್‌ 18: ಅರ್ಜಿ ತಳ್ಳಿಹಾಕಿದ ಹೈಕೋರ್ಟ್‌

ಮಾರ್ಚ್‌ 19: ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ದಂಪತಿ

2013, ನವೆಂಬರ್‌: ಜೋಡಿ ಕೊಲೆ ಪ್ರಕರಣದಲ್ಲಿ ತಲ್ವಾರ್‌ ದಂಪತಿ ಅಪರಾಧಿಗಳು ಎಂದು ಘೋಷಿಸಿದ ಗಾಜಿಯಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ. ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ

2013:  ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಸಿಬಿಐ ನ್ಯಾಯಾಲಯದ ಆದೇಶ ಪ್ರಶ್ನಿಸಿದ ತಲ್ವಾರ್‌ ದಂಪತಿ

2017 ಸೆಪ್ಟೆಂಬರ್‌ 7: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

2017 ಅಕ್ಟೋಬರ್‌ 12: ಆರುಷಿ–ಹೇಮರಾಜ್‌ ಪ್ರಕರಣದಲ್ಲಿ ತಲ್ವಾರ್‌ ದಂಪತಿಯನ್ನು ಖುಲಾಸೆಗೊಳಿಸಿ ಹೈಕೋರ್ಟ್‌ ತೀರ್ಪು

ಮುಖ್ಯಾಂಶಗಳು

* ಮಾಧ್ಯಮಗಳಲ್ಲಿ ಮರ್ಯಾದೆಗೇಡು ಹತ್ಯೆ ಎಂದು ಬಿಂಬಿತವಾಗಿತ್ತು

* ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿದ ಹೈಕೋರ್ಟ್‌

* 9ವರ್ಷಗಳ ನಂತರವೂ ನಿಗೂಢವಾಗಿಯೇ ಉಳಿದ ಪ್ರಕರಣ

* ಆರುಷಿ ಪೋಷಕರಾದ ತಲ್ವಾರ್‌ ದಂಪತಿಗೆ 2013ರಲ್ಲಿ ಜೀವಾವಧಿ ಶಿಕ್ಷೆ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT