ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣ ಸಿಐಡಿಗೆ ವರ್ಗ

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚೀಟಿ ವ್ಯವಹಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಸಿದ ಆರೋಪ ಎದುರಿಸುತ್ತಿರುವ ಮಲ್ಲೇಶ್ವರದ ‘ಪ್ರಸಿದ್ಧಿ ಚಿಟ್ ಫಂಡ್’ ಸಂಸ್ಥೆ ವಿರುದ್ಧದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ.

‘ನೂರಕ್ಕೂ ಹೆಚ್ಚು ಮಂದಿಯಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿರುವ ಪ್ರಸಿದ್ಧಿ ಚಿಟ್ ಫಂಡ್ ಸಂಸ್ಥೆ, ಗ್ರಾಹಕರಿಗೆ ಹಣ ಮರಳಿಸಿದೆ ವಂಚನೆ ಮಾಡಿದೆ. ಈ ಸಂಬಂಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಆರೋಪಿಸಿ ಚಿತ್ರನಟಿ ಸಂಜನಾ ಸೇರಿ ಹಲವರು ಮಲ್ಲೇಶ್ವರ ಠಾಣೆಗೆ ಇದೇ ಆಗಸ್ಟ್‌ನಲ್ಲಿ ದೂರು ಕೊಟ್ಟಿದ್ದರು.

ಅ.12ರಂದು ಪ್ರಕರಣ ಸಿಐಡಿಗೆ ವರ್ಗವಾಗಿದ್ದು, ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಮಹೇಶ್, ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಅವರ ಪತ್ನಿ ನಿರೂಪಾ, ಏಜೆಂಟ್‌ಗಳಾದ ರಾಜೀವ್ ಹಾಗೂ ರಂಗಸ್ವಾಮಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ಕಳುಹಿಸಿದ್ದಾರೆ.

ಸಂಜನಾ ಅವರಿಗೆ 2014ರಲ್ಲಿ ಮಹೇಶ್ ಹಾಗೂ ನಿರೂಪಾ ದಂಪತಿಯ ಪರಿಚಯವಾಗಿತ್ತು. ಸಂಸ್ಥೆಯಲ್ಲಿ ಹಣ ಹೂಡಿದರೆ ಲಾಭ ಗಳಿಸಬಹುದು ಎಂದು ಹೇಳಿದ ದಂಪತಿಯ ಮಾತಿಗೆ ಒಪ್ಪಿದ್ದ ಸಂಜನಾ ಹಾಗೂ ಅವರ ತಾಯಿ, 2014ರ ಜೂನ್‌ನಲ್ಲಿ ₹ 10 ಲಕ್ಷ ಮೊತ್ತದ ಚೀಟಿ ಹಾಕಿದ್ದರು. ಪ್ರತಿ ತಿಂಗಳು ₹ 20 ಸಾವಿರದಂತೆ 30 ಕಂತು ಕಟ್ಟಿದ್ದರು. ಆ ನಂತರ 2016ರ ಡಿಸೆಂಬರ್‌ನಲ್ಲಿ ₹ 10 ಲಕ್ಷದ ಮತ್ತೊಂದು ಚೀಟಿ ಹಾಕಿದ್ದರು. ಆದರೆ, ಸಂಸ್ಥೆಯು ಈವರೆಗೂ ಹಣ ಮರಳಿಸಿಲ್ಲ ಎಂದು ತಿಳಿದು ಬಂದಿದೆ.

‘ಸರ್ಕಾರದ ನೋಂದಾಯಿತ ಸಂಸ್ಥೆಯಾಗಿರುವ ಪ್ರಸಿದ್ಧಿ ಚಿಟ್‌ ಫಂಡ್ ಸಂಸ್ಥೆ 2006ರಿಂದ ಮಲ್ಲೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದೆ. ನೂರಕ್ಕೂ ಹೆಚ್ಚು ಮಂದಿ ವಂಚನೆಗೆ ಒಳಗಾಗಿದ್ದು, ಎಲ್ಲರ ಹೇಳಿಕೆ ಪಡೆಯಲು ಸಿಬ್ಬಂದಿಯ ವಿಶೇಷ ತಂಡ ರಚಿಸಿದ್ದೇವೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT