ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭಾಷಣಕ್ಕೆ ಅವಕಾಶವಿದೆಯೇ?

Last Updated 12 ಅಕ್ಟೋಬರ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವ ಅಂಗವಾಗಿ ಈ ತಿಂಗಳ 25ರಿಂದ ಎರಡು ದಿನ ನಡೆಯಲಿರುವ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಆಹ್ವಾನಿಸಿದ ಬಳಿಕ ವಿಧಾನಸಭೆ ಸಚಿವಾಲಯ ಹಾಗೂ ಸರ್ಕಾರದ ಸಚಿವಾಲಯ ಗೊಂದಲಕ್ಕೆ ಸಿಲುಕಿವೆ.

‘ರಾಷ್ಟ್ರಪತಿ, ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬಹುದೇ’ ಎಂಬ ಪ್ರಶ್ನೆ ಈ ಗೊಂದಲಕ್ಕೆ ಕಾರಣವಾಗಿದೆ. 

‘ಕೋವಿಂದ್‌ ವಿಧಾನಮಂಡಲ ಉಭಯ ಸದನಗಳ ಸದಸ್ಯರಲ್ಲದೆ ಇರುವುದರಿಂದ ಅಧಿಕೃತವಾಗಿ ಸೇರುವ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಅವಕಾಶವಿಲ್ಲ. ಆದರೆ, ವಜ್ರಮಹೋತ್ಸವ ಸಂಭ್ರಮಾಚರಣೆಗೆ ಸೇರುವ ವಿಶೇಷ ಅಧಿವೇಶನದಲ್ಲಿ ಮಾತನಾಡಲು ಅಡ್ಡಿಯಿಲ್ಲ’ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ವಿಧಾನಸಭೆ ಅಧ್ಯಕ್ಷ ಕೆ.ಬಿ. ಕೋಳಿವಾಡ ಹಾಗೂ ವಿಧಾನಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಸೋಮವಾರ ರಾಷ್ಟ್ರಪತಿಯನ್ನು ಭೇಟಿ ಮಾಡಿ ವಜ್ರಮಹೋತ್ಸವಕ್ಕೆ ಆಹ್ವಾನಿಸಿದ್ದಾರೆ. ಕೋವಿಂದ್‌ ಅವರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆಯೂ ದೊರೆತಿದ್ದು, ಸಮಾರಂಭದ ಆಹ್ವಾನ ಪ‍ತ್ರಿಕೆಗಳು ಮುದ್ರಣವಾದ ಬಳಿಕ ಗೊಂದಲ ಸೃಷ್ಟಿಯಾಗಿದೆ.

ಸಂವಿಧಾನದ 176ನೇ ಕಲಮಿನ ಅನ್ವಯ, ಸಾರ್ವತ್ರಿಕ ಚುನಾವಣೆ ಮುಗಿದ ಬಳಿಕ ಸೇರುವ ಚೊಚ್ಚಲ ಹಾಗೂ ವರ್ಷದ ಆರಂಭದಲ್ಲಿ ನಡೆಯುವ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಲು ಅವಕಾಶವಿದೆ.

‘ರಾಜ್ಯ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಮಾತನಾಡಬಹುದು. ಇಂಥದ್ದೊಂದು ಪರಂಪರೆ ನಮ್ಮಲ್ಲಿ ಇದೆ. 2005ರಲ್ಲಿ ರಾಷ್ಟ್ರಪತಿ ಆಗಿದ್ದ ಎ.ಪಿ.ಜೆ ಅಬ್ದುಲ್‌ ಕಲಾಂ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು. 1962ರಲ್ಲಿ ಪ್ರೊ. ಎಸ್‌. ರಾಧಾಕೃಷ್ಣನ್‌ ಅವರೂ ಭಾಷಣ ಮಾಡಿದ್ದರು. ಆದರೆ, ಅವೆರಡೂ ಅಧಿಕೃತ ಕಲಾಪ ನಡೆಸಲು ಸೇರಿದ್ದ ಅಧಿವೇಶನಗಳಾಗಿರಲಿಲ್ಲ’ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ವಿಧಾನಸಭೆ ಸಚಿವಾಲಯ ಹಾಗೂ ಸರ್ಕಾರದ ನಡುವಿನ ತಿಕ್ಕಾಟದಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ. ಇದು ಅನಗತ್ಯ. ರಾಷ್ಟ್ರಪತಿ ಆಹ್ವಾನಿಸುವ ಮೊದಲು ವಿಧಾನಮಂಡಲದ ಉಭಯ ಸದನಗಳ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರ ಜೊತೆ ಸಮಾಲೋಚಿಸಬಹುದಿತ್ತು. ರಾಷ್ಟ್ರಪತಿ ಅವರನ್ನು ಆಹ್ವಾನಿಸಲು ಸರ್ಕಾರದ ಪ್ರತಿನಿಧಿಗಳನ್ನು ಜೊತೆಗೆ ಕರೆದೊಯ್ಯಬಹುದಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

‘ಅಧಿವೇಶನದ ದಿನಾಂಕ ನಿಗದಿಪಡಿಸುವ ಬಗ್ಗೆಯೂ ಸರ್ಕಾರದ ಜೊತೆ ಚರ್ಚಿಸಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟಕ್ಕೆ ಟಿಪ್ಪಣಿ ಕಳುಹಿಸಬೇಕಿತ್ತು. ಅದನ್ನೂ ವಿಧಾನಸಭೆ ಸಚಿವಾಲಯ ಮಾಡಲಿಲ್ಲ. ಬುಧವಾರ ಸಚಿವ ಸಂಪುಟ ಸಭೆ ಮುಗಿದ ಬಳಿಕ ಟಿಪ್ಪಣಿ ಕಳುಹಿಸಲಾಗಿದೆ’ ಎಂದೂ ಅಧಿಕಾರಿ ಸ್ಪಷ್ಟಪಡಿಸಿದರು.

ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾಡುವ ಭಾಷಣಕ್ಕೆ ಸಂಬಂಧಿಸಿದಂತೆ ತಲೆದೋರಿರುವ ಗೊಂದಲಕ್ಕೆ ಪರಿಹಾರ ಕಂಡು ಹಿಡಿಯಲು ಗುರುವಾರ ಮಧ್ಯಾಹ್ನ ಕಾನೂನು ಸಚಿವ ಟಿ.ಬಿ ಜಯಚಂದ್ರ, ಕೋಳಿವಾಡ ಹಾಗೂ ಶಂಕರಮೂರ್ತಿ ಅವರನ್ನು ಭೇಟಿ ಮಾಡಿ ಚರ್ಚಿಸಬೇಕಿತ್ತು. ಆದರೆ, ಈ ಸಭೆ ನಡೆಯಲಿಲ್ಲ ಎಂದೂ ಅಧಿಕಾರಿ ಹೇಳಿದರು.

ವಿಧಾನಸಭೆ ಸಚಿವಾಲಯದ ಕಾರ್ಯವೈಖರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅತೃಪ್ತಿ ಹೊಂದಿದ್ದಾರೆ. ಅಧಿವೇಶನಕ್ಕೆ ಖರ್ಚು ಮಾಡುತ್ತಿರುವ ಬಗ್ಗೆಯೂ ಅವರು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಣಕಾಸು ಇಲಾಖೆ ತಕರಾರು ತೆಗೆದಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT