ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ: ಕೈ ತಪ್ಪಿದ ಕುಸ್ತಿ ಮೈದಾನ

Last Updated 13 ಅಕ್ಟೋಬರ್ 2017, 5:04 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಪ್ರತಿ ವರ್ಷದಂತೆ ಕಿತ್ತೂರು ಉತ್ಸವದಲ್ಲಿ ಈ ಸಲವೂ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ. ಆದರೆ, ಈ ಸ್ಪರ್ಧೆ ನಡೆಸಲು ಮೈದಾನವೇ ಇಲ್ಲದಂತಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕ್ರೀಡಾಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರತಿ ವರ್ಷ ಕಿತ್ತೂರ ಉತ್ಸವದ ಕುಸ್ತಿ ಸ್ಪರ್ಧೆಯು ಇಲ್ಲಿನ ವಿಜಯ ವಳಸಂಗ ಅವರಿಗೆ ಸೇರಿದ ಜಮೀನಿನಲ್ಲಿ ನಡೆಯುತ್ತಿತ್ತು. ಆದರೆ, ಈ ಬಾರಿ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿಲ್ಲ. ನಾವು ಎಂದಿನಂತೆ ಜಮೀನಿನಲ್ಲಿ ಹುರಳಿ ಬೀಜ ಬಿತ್ತನೆ ಮಾಡಿದ್ದೇವೆ’ ಎಂದು ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶರೀಫ್ ಬೀಡಿ ತಿಳಿಸಿದರು.

‘ಬಿತ್ತನೆ ಮಾಡುವ ಪೂರ್ವದಲ್ಲೇ ಕೇಳಿದ್ದರೆ ನಾವುಕುಸ್ತಿಗೆ ಜಮೀನು ನೀಡುತ್ತಿದ್ದೆವು. ಈಗ ಬಿತ್ತನೆ ಮಾಡಿ ಆಗಿದೆ. ಇದೇ ಜಾಗೆಯಲ್ಲಿ ಸ್ಪರ್ಧೆ ನಡೆದರೆ ಬೆಳೆ ಉಳಿಯುವುದಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಸುಮಾರು 4 ವರ್ಷಗಳಿಂದ ನಾವು ಹೊಲ ನೀಡುತ್ತ ಬಂದಿದ್ದೇವೆ. ಸರ್ಕಾರದವರು ನಮಗೆ ನಯಾಪೈಸೆ ದುಡ್ಡು ಕೊಟ್ಟಿಲ್ಲ. ಅದರ ಬಗ್ಗೆ ನಮ್ಮ ಮಾಲೀಕರಿಗೆ ಬೇಸರವಿಲ್ಲ. ಊರಿನ ಉತ್ಸವ ಎಂದು ನಾವು ಭೂಮಿ ನೀಡುತ್ತ ಬಂದಿದ್ದೇವೆ. ಆದರೆ ಈ ಬಾರಿ ಯಾರೂ ಕೇಳಲಿಲ್ಲ’ ಎಂದು ಅವರು ಪುನರುಚ್ಛರಿಸಿದರು.

ಕಳೆದ 6ರಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಕಿತ್ತೂರು ಉತ್ಸವ ಪ್ರಯುಕ್ತ ಅಧಿಕಾರಿಗಳ ಸಭೆ ಆಯೋಜಿಸಿದ್ದರು. ಈ ವೇಳೆ, ಪ್ರತಿಸಲ ಕುಸ್ತಿ ಸ್ಪರ್ಧೆಗೆ  ಭೂಮಿ ನೀಡಿದ ಹಾಗೆ ಈ ಬಾರಿಯೂ ನೀಡುವಂತೆ ಜಮೀನಿನ ಮಾಲೀಕರಿಗೆ ವಿನಂತಿಸಿಕೊಳ್ಳಬೇಕು ಎಂದು ಸೂಚಿಸಿದ್ದರು. ಆದರೆ ಯಾರೂ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ ಎಂದು ಕ್ರೀಡಾಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಲು ವ್ಯವಸ್ಥೆ ಮಾಡಲಾಗಿದೆ. 23ರಿಂದ 25ರವರೆಗೆ ಉತ್ಸವ ನಡೆಯಲಿದ್ದು, ಕೊನೆಯ ದಿನ ಕುಸ್ತಿ ಸ್ಪರ್ಧೆ ನಡೆಸಲಾಗುವುದು’ ಎಂದು ತಹಶೀಲ್ದಾರ್‌ ಪ್ರವೀಣ್‌ ಹುಚ್ಚಣ್ಣವರ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT