ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ...’

Last Updated 13 ಅಕ್ಟೋಬರ್ 2017, 5:07 IST
ಅಕ್ಷರ ಗಾತ್ರ

ಸವದತ್ತಿ: ತಾಲ್ಲೂಕಿನಾದ್ಯಂತ ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳು ನಾಶವಾಗಿವೆ. ಹಿಂಗಾರು ಬಿತ್ತನೆಯ ಬೀಜ ಮೊಳಕೆಯಲ್ಲಿಯೇ ಕಮರುತ್ತಿರುವುದರಿಂದ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾಲ್ಕು ವರ್ಷದಿಂದ ಸತತ ಬರಗಾಲದಿಂದ ಕಂಗಾಲಾಗಿದ್ದ ರೈತರು, ಈ ಬಾರಿಯಾದರೂ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿ ಭೂದೇವಿಯ ಮಡಿಲು ತುಂಬಿದ್ದರು. ಆದರೆ, ಮಳೆ ಕೊರತೆಯಿಂದ ನಲುಗಿದ್ದ ಬೆಳೆಗೆ ಅಕ್ಕಪಕ್ಕದವರ ಪಂಪ್‌ಸೆಟ್‌ನಿಂದ ನೀರು ಹಾಯಿಸಿದ್ದರು. ಕೆಲವರು ಟ್ಯಾಂಕರ್‌ನಿಂದ ನೀರು ತಂದು ಹಾಕುವ ಮೂಲಕ ಉಳ್ಳಾಗಡ್ಡಿ, ಹತ್ತಿ ಹಾಗೂ ಗೋವಿನಜೋಳ ಬೆಳೆಗಳನ್ನು ಹರಸಾಹಸಪಟ್ಟು ಉಳಿಸಿಕೊಂಡಿದ್ದರು.

ಇನ್ನೇನು ಬೆಳೆ ಫಸಲು ಕೊಡುವ ಹೊತ್ತಿಗೆ ಬಂದ ಸತತವಾಗಿ ಮಳೆ ಸುರಿಯಲು ಆರಂಭವಾಗಿದ್ದರಿಂದ ಜಮೀನುಗಳು ಕರೆಗಳಂತಾಗಿವೆ. ವಾರಗಟ್ಟಲೆ ಜಲಾವೃತವಾದ್ದರಿಂದ ಉಳ್ಳಾಗಡ್ಡಿ ಹಾಗೂ ಹತ್ತಿ ಬೆಳೆ ಅಲ್ಲಿಯೇ ಕಮರುತ್ತಿವೆ. ಗೋವಿನಜೋಳಕ್ಕೆ ಕೋರಿಹುಳಗಳು ದಾಳಿ ಮಾಡಿವೆ. ಇದರಿಂದಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾದ ಸ್ಥಿತಿಯಲ್ಲಿ ರೈತರು ಇದ್ದಾರೆ.

‘ಮುಂಗಾರು ಹಂಗಾಮಿನಲ್ಲಿ ಹತ್ತಿ ಬೀಜ ಬಿತ್ತಿ ಅದಕ್ಕೆ ಚರಗಿಲೇ ನೀರು ಹಾಕಿ ಜೋಪಾನ ಮಾಡಿದ್ದೆವು. ಆದರೆ, ಈಚೆಗೆ ಸುರಿದ ಮಳೆಯಿಂದಾಗಿ ಬೆಳೆಯಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಬೆಳೆ ಸಂಪೂರ್ಣ ಹಾಳಗಗೈತಿ. ಕೊಡಲೇ ಸರ್ಕಾರ ಇತ್ತ ಗಮನಹರಿಸಬೇಕು. ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ದೇವರೇ ನಮ್ಮನ್ನು ಕಾಪಾಡಬೇಕಾಗುತ್ತದೆ’ ಎಂದು ರೈತ ಸಿದ್ದು ದ್ಯಾಮಣ್ಣವರ ಹೇಳಿದರು.

ರೈತರ ಅಳಲು: ‘ಈ ಬಾರಿಯಾದರೂ ಭೂಮಾತೆ ನಮ್ಮ ಕೈ ಹಿಡಿದಾಳು ಎಂಬ ಭರವಸೆಯಿಂದ ಉಳ್ಳಾಗಡ್ಡಿ ಬಿತ್ತಿದ್ದೆವು. ತಿಂಗಳಲ್ಲಿ ಫಸಲು ಬರುತ್ತಿತ್ತು. 15 ದಿನದಿಂದ ಪ್ರತಿದಿನ ಸಂಜೆ ವೇಳೆಗೆ ಮಳೆ ಆಗುತ್ತಿರುವುದರಿಂದ, ಜಮೀನಿನಲ್ಲಿ ನೀರು ತುಂಬಿಕೊಂಡು ಬೆಳೆ ಕೊಳೆಯುತ್ತಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದೆವು. ಈಗ, ಬೆಳೆ ವಿಫಲವಾಗಿ ಮತ್ತಷ್ಟು ಸಾಲಗಾರರಾಗಿದ್ದೇವೆ’ ಎಂದು ಗೊರವನಕೊಳ್ಳದ ರೈತ ಕಿರಣ ಇನಾಮದಾರ ಅಳಲು ತೋಡಿಕೊಂಡರು.

‘ತಾಲ್ಲೂಕಿನಲ್ಲಿ 9247 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿತ್ತು. ಅದರಲ್ಲಿ ಮಳೆ ಇಲ್ಲದೇ 3663 ಹೆಕ್ಟೇರ್‌ನಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು. ಉಳಿದ ಬೆಳೆ ಈಗ ಅತಿವೃಷ್ಟಿಯಿಂದ ಹಾನಿಯಾದ ಅಂದಾಜಿದೆ. ಗೋವಿನಜೋಳ ಒಟ್ಟು 8091 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಅದರಲ್ಲಿ ಸೈನಿಕಹುಳು (ಕೋರಿಹುಳ) ಬಾಧೆ ಕಾಣಿಸಿಕೊಂಡು, 1413 ಹೆಕ್ಟೇರ್‌ನಷ್ಟು ಹಾನಿ ಸಂಭವಿಸಿದೆ. ಒಟ್ಟು 6206 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ’ ಎಂದು ಕೃಷಿ ಅಧಿಕಾರಿ ಎಂ.ಐ. ಅತ್ತಾರ ಮಾಹಿತಿ ನೀಡಿದರು.

ವಾಡಿಕೆ ಮಳೆ: ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ 110 ಮಿ.ಮೀ. ಇತ್ತು. ಆದರೆ 188 ಮಿ.ಮೀ.ನಷ್ಟು ಸುರಿದಿದೆ. ಅಂದರೆ ಶೇ 70ರಷ್ಟು ಅಧಿಕವಾಗಿದೆ. ಅ.11ರವರೆಗೆ 60 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು. 66 ಮಿ.ಮೀ.ನಷ್ಟು ಬಂದಿದೆ. ಶೇ 8ರಷ್ಟು ಮಳೆ ಅಧಿಕವಾಗಿದ್ದರಿಂದ ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿಸಿದಷ್ಟು ಬಿತ್ತನೆಯಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಹಿಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 74145 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 4699 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಇದರಲ್ಲಿ ಬಹಳಷ್ಟು ಪ್ರದೇಶದ ಬೆಳೆ ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಲ್‌. ಹೊಸಮನಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT