ಭಾನುವಾರ, ಸೆಪ್ಟೆಂಬರ್ 22, 2019
22 °C

‘ಪ್ರೀತಿಯಲ್ಲಿ ‘ಜ್ವರ’ ಮರೆಯಬೇಡಿ’

Published:
Updated:
‘ಪ್ರೀತಿಯಲ್ಲಿ ‘ಜ್ವರ’ ಮರೆಯಬೇಡಿ’

ಅದೊಂದು ಸುಂದರ ಉದ್ಯಾನ, ತಂಪಾದ ಮರದ ನೆರಳಲ್ಲೊಂದು ಕಲ್ಲುಬೆಂಚು. ನಿತ್ಯವೂ ಅಲ್ಲಿ ಗೆಳೆಯರ ಸಂತೆ. ಮಾತು, ಹರಟೆ ಎಲ್ಲವೂ ತುಸು ಹೆಚ್ಚೇ. ಸೆಲ್ಫಿಗೊಂದು ಮಂದಹಾಸ. ಅದು ಫೆಬ್ರುವರಿ 11. ಅಂದಿನ ದಿನ ಎಂದಿನಂತಿರಲಿಲ್ಲ. ಸುಂದರ ತರುಣಿಯೊಬ್ಬಳು ತನ್ನ ಕೆಂಗೂದಲನ್ನು ನೇವರಿಸುತ್ತಾ ತನ್ನ ಗೆಳತಿ ಜತೆ ಹುಡುಗರ ಗುಂಪಿನ ಮುಂದೆಯೇ ಸಾಗಿದಳು. ಗೆಳೆಯರ ಮಾತು ಅರೆಕ್ಷಣ ಸ್ತಬ್ಧ. ಅಲ್ಲಿದ್ದವರ ಪೈಕಿ ಒಬ್ಬ, ಆಕೆಗೆ ಮನಸೋಲುತ್ತಾನೆ, ಪರವಶವಾಗುತ್ತಾನೆ.

ಗೆಳೆಯರು ಪ್ರತಿನಿತ್ಯದಂತೆ ಆ ಕಲ್ಲುಬೆಂಚಿನ ಬಳಿ ಸೇರುವುದು. ಅದೇ ಮಾರ್ಗದಲ್ಲಿ ಆ ಹುಡುಗಿ ಸಾಗುವುದು. ಅಕೆಯನ್ನು ಕಂಡು ಆ ಹುಡುಗ ಕಣ್ಣಲ್ಲೇ ಮಾತಾಡುವುದು. ಇದು ನಿತ್ಯದ ಬದುಕಾಗುತ್ತದೆ.

ಅಂದು ಫೆಬ್ರುವರಿ 23. ಗೆಳೆಯರ ಬಳಗವೂ ಇಲ್ಲ, ಅದರಲ್ಲಿ ತನ್ನ ನೆಚ್ಚಿನ ಹುಡುಗನೂ ಇಲ್ಲ. ಹುಡುಗಿ ದಿಗಿಲು ಬೀಳುತ್ತಾಳೆ. ಮೂರ್ನಾಲ್ಕು ದಿನವಾದರೂ ಯಾರೊಬ್ಬರ ಸುಳಿವಿಲ್ಲ. ಫೆ 27ರಂದು ಅದೇ ಕಲ್ಲು ಬೆಂಚಿನ ಬಳಿ ಬಂದ ಹುಡುಗಿಗೆ ಗೆಳೆಯರು ಎದುರಾಗುತ್ತಾರೆ. ಎಲ್ಲರ ಮುಖದಲ್ಲೂ ಶೋಕ. ಅವನು ಬದುಕಿಲ್ಲ ಎಂಬುದು ಆಕೆಗೆ ಗೊತ್ತಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಶ್ರದ್ಧಾಂಜಲಿ ಕೋರುವ ಚಿತ್ರ ಮರದ ಮೇಲೆ ನೇತಾಡುತ್ತಿರುತ್ತದೆ.

ಇಲ್ಲಿಯವರೆಗೂ ಕತೆಯು ಎಲ್ಲಿಯೂ ಹುಡುಗ ಹೇಗೆ ಸತ್ತ ಎಂಬ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಇದೇ ಕುತೂಹಲದಿಂದ ಪ್ರೇಕ್ಷಕರನ್ನು ಹಿಡಿದಿಡುವ ತಂತ್ರಗಾರಿಕೆ ಅನುಸರಿಸಿದ್ದಾರೆ ರೆಹಮಾನ್. ಡೆಂಗಿ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರವಾದರೂ, ಆರಂಭದಲ್ಲಿ ಇದು ನವಿರಾದ ಪ್ರೇಮ ಕಥೆ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ.

ಪ್ರೀತಿಯಲ್ಲಿ ಬೀಳುವ ಹುಡುಗನೊಬ್ಬನಿಗೆ ತನಗೇನಾಗುತ್ತಿದೆ ಎಂಬ ಬಗ್ಗೆ ಅರಿವೇ ಇರುವುದಿಲ್ಲ. ಡೆಂಗಿ ಜ್ವರಕ್ಕೆ ಕಾರಣವಾಗುವ ಸೊಳ್ಳೆ ಕಚ್ಚಿದ್ದರೂ ಆತ ಗಮನಿಸಿರುವುದಿಲ್ಲ. ಫೆ. 13ರಂದೇ ಹುಡುಗನಿಗೆ ಸೊಳ್ಳೆ ಕಚ್ಚಿರುತ್ತದೆ. ಆದರೆ ಪ್ರೀತಿಯಲ್ಲಿ ಬಿದ್ದ ಹುಡುಗನಿಗೆ ಇದು ಗಮನಕ್ಕೂ ಬಂದಿರುವುದಿಲ್ಲ. ಅಲ್ಲಿಂದ ಒಂದು ವಾರದ ಬಳಿಕ ಆತನಿಗೆ ವಿಪರೀತ ಜ್ವರ ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆ ಸೇರಿದ ಅವನು ಬದುಕಿ ಬರುವುದಿಲ್ಲ.

ಕಿರುಚಿತ್ರದ ಸಮಾರೋಪ ಭಾಗದಲ್ಲಿ ಸ್ವತಃ ಕಾಣಿಸಿಕೊಳ್ಳುವ ರೆಹಮಾನ್, ಸೊಳ್ಳೆ ಕಡಿತದಿಂದ ಆಗುವ ಅಪಾಯಗಳು, ಜ್ವರದ ಲಕ್ಷಣಗಳು ಹಾಗೂ ಅದರಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸುತ್ತಾರೆ. ‘ಪ್ರೀತಿಯಲ್ಲಿ ಬಿದ್ದಿದ್ದರೂ, ಮನೆ, ಕಚೇರಿ ಕೆಲಸ, ಓದು ಏನೇ ಇದ್ದರೂ ಆರೋಗ್ಯವನ್ನು ಕಡೆಗಣಿಸಬೇಡಿ’ ಎಂಬ ಸಂದೇಶದೊಂದಿಗೆ ತಮ್ಮ ಮಾತು ಮುಗಿಸುತ್ತಾರೆ.

ನಿಖಿಲ್ ಕುಮಾರ್ ಹಿನ್ನೆಲೆ ಸಂಗೀತ ವಿಶೇಷವಾಗಿ ಮೂಡಿಬಂದಿದೆ. ಇಡೀ ಕಿರುಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ. ಎಲ್ಲವನ್ನೂ ಸಂಗೀತವೇ ಸರಿದೂಗಿಸಿದೆ. ಸಮೀನಾ ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಶ್ರೀತಿ ಅವರು ಸಹಾಯಕ ನಿರ್ದೇಶನ ಜವಾಬ್ದಾರಿ ನಿಭಾಯಿಸಿದ್ದಾರೆ.

**

ಕಿರುಚಿತ್ರ: ಲವ್‌ಬೈಟ್

ನಿರ್ದೇಶನ: ರೆಹಮಾನ್ ಹಾಸನ್

ಸಂಕಲನ: ಸತ್ಯ. ಎಂ

ಇಮೇಲ್: beingrahmaan@gmail.com

Post Comments (+)