ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ ಉದ್ಯೋಗಿಗಳ ಸಮಾಜ ಸೇವೆ

Last Updated 13 ಅಕ್ಟೋಬರ್ 2017, 5:38 IST
ಅಕ್ಷರ ಗಾತ್ರ

ಉದ್ಯೋಗದೊಂದಿಗೆ ಸಮಾಜಸೇವೆ, ಶಿಕ್ಷಣ, ಗ್ರಾಮ ಸುಧಾರಣೆಯಲ್ಲೂ ತೊಡಗಿಕೊಳ್ಳಬೇಕು ಎಂಬ ಸದುದ್ದೇಶದಿಂದ ಆರಂಭವಾದ ಸಂಸ್ಥೆ ಬೆಂಗಳೂರು ಇನ್ಫೊಸಿಸ್‌ ಉದ್ಯೋಗಿಗಳ ‘ಸಮರ್ಪಣ ಟ್ರಸ್ಟ್‌’.

ಕಳೆದ 14 ವರ್ಷಗಳಿಂದ ಕಾರ್ಯನಿರತವಾಗಿದ್ದರೂ, ಈ ಸಂಸ್ಥೆ ಅಧಿಕೃತವಾಗಿ ನೋಂದಣಿಯಾಗಿದ್ದು 2010ರಲ್ಲಿ. ಗ್ರಾಮೀಣ ಪ್ರದೇಶಗಳ ಜನರಿಗೆ ಮೂಲಸೌಕರ್ಯ ಒದಗಿಸಲು ನೆರವು ನೀಡುವುದು ಈ ತಂಡದ ಪ್ರಾಥಮಿಕ ಉದ್ದೇಶ. ಇನ್ಫೊಸಿಸ್‌ನ ಸಾಫ್ಟ್‌ವೇರ್‌, ಹಣಕಾಸು, ಇನ್ಷುರೆನ್ಸ್‌ ಹೀಗೆ ಎಲ್ಲಾ ವಿಭಾಗದ ಸುಮಾರು 2000ಕ್ಕೂ ಹೆಚ್ಚು ಜನರು ಸ್ವಯಂ ಸೇವಕರಾಗಿ ಈ ತಂಡದಲ್ಲಿದ್ದಾರೆ. 14 ವರ್ಷಗಳಿಂದಲೂ ಈ ತಂಡದ ಕೆಲಸಗಳಲ್ಲಿ ಸಕ್ರಿಯರಾಗಿರುವ 30 ಜನ ಶಾಶ್ವತ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.

‘ಬೆಂಗಳೂರಿನ ಇನ್ಫೊಸಿಸ್‌ನಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಇಲ್ಲಿರುವ ಬಹುತೇಕರು ಸಮಾಜಕ್ಕೆ ಏನಾದರೂ ಸೇವೆ ನೀಡಬೇಕು ಎಂಬ ಮನೋಧರ್ಮ ಹೊಂದಿದ್ದಾರೆ. ಅಂತಹವರಿಗೆ ಒಂದು ವೇದಿಕೆ ಕಲ್ಪಿಸಿಕೊಡುವ ಸಲುವಾಗಿ ಸಮಾನ ಮನಸ್ಕರಿಂದ ಈ ಟ್ರಸ್ಟ್‌ ಆರಂಭವಾಯಿತು’ ಎಂದು ಟ್ರಸ್ಟ್‌ ಆರಂಭದ ಕತೆಯನ್ನು ಹೇಳುತ್ತಾರೆ ತಂಡದ ಮುಖ್ಯಸ್ಥ ಗುರುರಾಜ್‌ ದೇಶಪಾಂಡೆ.

ಸತೀಶ್‌ ಹಾಗೂ ಮಹೇಶ್‌ ಅವರು ಕೂಡ ಟ್ರಸ್ಟ್‌ನ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಬೇರೆ ಬೇರೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿ ಜಾಗೃತಿ ಅಭಿಯಾನ, ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ, ಗ್ರಂಥಾಲಯ ನಿರ್ಮಾಣ, ಶಾಲೆಗಳಿಗೆ ಕಂಪ್ಯೂಟರ್‌ ವಿತರಣೆ, ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಇನ್ಫೊಸಿಸ್‌ನಲ್ಲಿ ಕೆಲಸ ಮಾಡುವ ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೂ ಈ ಟ್ರಸ್ಟ್‌ ನೀಡುತ್ತಿದೆ

ಇತ್ತೀಚೆಗೆ ಸಮರ್ಪಣ ಟ್ರಸ್ಟ್‌ ‘ನನ್ನ ಕಣ್ಣು’ ಎಂಬ ಹೆಸರಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ಉಚಿತ ಪರೀಕ್ಷೆಯನ್ನು ಆಯೋಜಿಸುತ್ತಿದೆ. ‘ಗ್ರಾಮೀಣ ಶಾಲೆಗಳಿಗೆ ಕಂಪ್ಯೂಟರ್‌ ವಿತರಿಸಿದ್ದೇವೆ. ಆಗ ಮಕ್ಕಳಲ್ಲಿ ಕಣ್ಣಿನ ದೋಷ ಇರುವುದು ಗೊತ್ತಾಯಿತು. ಹೀಗಾಗಿ ಶಂಕರ ಆಸ್ಪತ್ರೆ ಸಹಯೋಗದಲ್ಲಿ ‘ನನ್ನ ಕಣ್ಣು’ಉಚಿತ ಕಣ್ಣು ಪರೀಕ್ಷೆ ಕಾರ್ಯಕ್ರಮ ನಡೆಸುತ್ತಿದ್ದೇವೆ’  ಎಂದು ಹೇಳುತ್ತಾರೆ ಗುರುರಾಜ್‌.

‘ರಾಜ್ಯದ ಅನೇಕ ಕಡೆಗಳಲ್ಲಿ ಈಗಾಗಲೇ 12 ಸಾವಿರ ಮಕ್ಕಳನ್ನು ತಪಾಸಣೆ ಮಾಡಿದ್ದೇವೆ. ಅದರಲ್ಲಿ 980 ಜನರಲ್ಲಿ ಕಣ್ಣಿನ ದೋಷ ಪತ್ತೆಯಾಗಿದೆ. ಅವರಿಗೆ ಶಂಕರ್‌ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಲಾಗುತ್ತಿದೆ. ಟ್ರಸ್ಟ್‌ ಸದಸ್ಯರೇ ಕಣ್ಣಿನ ಪರೀಕ್ಷೆ ನಡೆಸುವುದು ವಿಶೇಷ. ಸಾವಿರಾರು ಮಕ್ಕಳ ತಪಾಸಣೆಗೆ ವೈದ್ಯರಿಗೆ ತುಂಬ ಹೊತ್ತು ತಗುಲುತ್ತದೆ ಮತ್ತು ವೈದ್ಯರ ಕೊರತೆಯೂ ಇದೆ. ಹೀಗಾಗಿ ಶಂಕರ ಆಸ್ಪತ್ರೆಯು ಟ್ರಸ್ಟ್‌ ಸದಸ್ಯರಿಗೆ ಕಣ್ಣುಗಳ ಪರೀಕ್ಷೆ ಹೇಗೆ, ದೃಷ್ಟಿದೋಷಗಳನ್ನು ಪತ್ತೆ ಹಚ್ಚುವ ಬಗ್ಗೆ 300 ಜನರಿಗೆ ತರಬೇತಿ ನೀಡಿದೆ. ಇದರಲ್ಲಿ 130 ಜನರಿಗೆ ಪ್ರಮಾಣಪತ್ರವೂ ಸಿಕ್ಕಿದೆ. ಇವರು ಪರೀಕ್ಷೆ ಮಾಡಿ ಮಕ್ಕಳಲ್ಲಿ ಕಣ್ಣಿನ ದೋಷ ಪತ್ತೆಯಾದರೆ ಶಂಕರ ಆಸ್ಪತ್ರೆ ವೈದ್ಯರ ಬಳಿ ಕಳುಹಿಸುತ್ತಾರೆ’ ಎಂದು ಗುರುರಾಜ್‌ ವಿವರಣೆ ನೀಡಿದರು.

ಸಮರ್ಪಣ ಈಗಾಗಲೇ ಗದಗ, ಬಿಜಾಪುರ, ರಾಯಚೂರು ಮುಂತಾದ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಪರಿಕರಗಳನ್ನೊಳಗೊಂಡ ‘ಸೈನ್ಸ್‌ ಕಿಟ್‌’ಗಳನ್ನು ಒದಗಿಸಿದೆ. ‘ಗ್ರಾಮೀಣ ಭಾಗದಲ್ಲಿ ವಿಜ್ಞಾನ ಪ್ರಯೋಗಾಲಯಗಳಿಲ್ಲ. ಅವರಿಗೆ ವಿಜ್ಞಾನದ ಬಗ್ಗೆ ಎಳವೆಯಲ್ಲಿಯೇ ಕುತೂಹಲ ಮೂಡಿಸಲು ಈ ವ್ಯವಸ್ಥೆ’ ಎಂಬುದು ಟ್ರಸ್ಟ್‌ನ ಸದಸ್ಯ ಮಹೇಶ್‌ ಅಭಿಪ್ರಾಯ.

ಒಂದು ಸೈನ್ಸ್‌ ಕಿಟ್‌ ಬೆಲೆ ₹1.80 ಲಕ್ಷ. ಇದರಲ್ಲಿ 4ನೇ ತರಗತಿಯಿಂದ 10 ತರಗತಿವರೆಗಿನ ವಿಜ್ಞಾನ ಪಠ್ಯದಲ್ಲಿನ ಎಲ್ಲಾ ಪ್ರಯೋಗಗಳ ಪರಿಕರಗಳಿವೆ. ‘ಕ್ಲಸ್ಟರ್‌ ಮಟ್ಟದಲ್ಲಿ 16 ಶಾಲೆಗಳಿಗೆ ಒಂದು ಕಿಟ್‌ ಎಂಬಂತೆ ವಿತರಣೆ ಮಾಡಿದ್ದೇವೆ. ಅಗತ್ಯವಾದ ಶಾಲೆಯವರು 15 ದಿನದ ತನಕ ಆ ಕಿಟ್‌ ಬಳಸಬಹುದು. ಈ ಸೈನ್ಸ್‌ ಕಿಟ್‌ಗಳನ್ನು ಬಳಸಲು ಕೆಲವು ಶಿಕ್ಷಕರಿಗೆ ಗೊತ್ತಾಗದೇ ಇದ್ದಾಗ ಆ ಶಿಕ್ಷಕರಿಗೆ ಆಗಸ್ತ್ಯ ಫೌಂಡೇಷನ್‌ ಮೂಲಕ ತರಬೇತಿ ನೀಡಿದ್ದೇವೆ’ ಎನ್ನುತ್ತಾರೆ ಅವರು.

‘ತಂಡದ ಎಲ್ಲಾ ಕಾರ್ಯಗಳಿಗೆ ಸದಸ್ಯರೇ ಹಣ ಹಾಕುತ್ತಾರೆ. ಅಗತ್ಯ ಬಿದ್ದಲ್ಲಿ ಇನ್ಫೊಸಿಸ್‌ ಆವರಣ, ಫುಡ್‌ಕೋರ್ಟ್‌ಗಳಲ್ಲಿ  ಪೆಟ್ಟಿಗೆ ಇಟ್ಟು ಹಣ ಸಂಗ್ರಹ ಮಾಡಲಾಗುತ್ತದೆ’ ಎನ್ನುತ್ತಾರೆ ಮಹೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT