ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ನೀರು ಬಿಡಲು ಒತ್ತಾಯಿಸಿ ಪ್ರತಿಭಟನೆ

Last Updated 13 ಅಕ್ಟೋಬರ್ 2017, 5:40 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಬಳಿಯ ಮರಗದಕೆರೆ ಹಾಗೂ ಬಂಡಿಗೆರೆಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಬುಧವಾರ ಚಿಕ್ಕಹೊಳೆ ಜಲಾಶಯದ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.

ಶಾಸಕರು ಬಾಗಿನ ಅರ್ಪಿಸಲು ಬಂದಿರುವುದನ್ನು ತಿಳಿದ ರೈತರು ಜಲಾಶಯದ ಮುಂಭಾಗ ಸಮಾವೇಶಗೊಂಡ ನೀರು ಬಿಡುವಂತೆ ಘೋಷಣೆ ಕೂಗಿದರು.
ಈ ವೇಳೆ ಕೆಲಹೊತ್ತು ಅಧಿಕಾರಿಗಳು ಹಾಗೂ ರೈತರ ನಡುವೆ ವಾಗ್ದಾಳಿ ನಡೆಯಿತು. ‘ಕೆರೆಗೆ ಏಕೆ ನೀರು ತುಂಬಿಸುತ್ತಿಲ್ಲ? ಕೂಡಲೇ ನೀರು ತುಂಬಿಸಬೇಕು’ ಎಂದು ಆಗ್ರಹಿಸಿದರು.

ಮರಗದ ಕೆರೆ ಹಾಗೂ ಬಂಡಿಗೆರೆ ಒಟ್ಟು 500 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿದ್ದು 2 ಲಕ್ಷಕ್ಕೂ ಹೆಚ್ಚು ಜನರು ಈ ಕೆರೆಗಳ ನೀರನ್ನು ಅವಲಂಬಿಸಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ನೀರು ಬಿಡದೆ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ದೂರಿದರು.

ಎರಡು ಕೆರೆಗಳು 15 ವರ್ಷದಿಂದ ಭರ್ತಿಯಾಗಿಲ್ಲ. ನೀರು ತುಂಬಿಸುವಂತೆ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಹಲವು ಹೋರಾಟ ಮಾಡಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ವಿನಾ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಸಕ್ತ ವರ್ಷ ಉತ್ತಮ ಮಳೆಯಾಗುತ್ತಿದೆ. ಜಲಾಶಯ ಕೂಡ ಭರ್ತಿಯಾಗಿದೆ. ಆದರೆ, ಕೆರೆಗೆ ಮೊದಲು ನೀರು ತುಂಬಿಸುವ ಬದಲು ನದಿಗೆ ಬಿಡುತ್ತಿದ್ದಾರೆ. ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರಿಗೆ ಅಹವಾಲು ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಪುಟ್ಟರಂಗಶೆಟ್ಟಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ರೈತರಿಗೆ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಂಜು, ಲೋಕೇಶ್‌, ಸುಬ್ರಮಣಿ, ವೇಲ್‌ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಕುಮಾರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT