ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಾವತಿಯಲ್ಲೂ ಜಲ ಸಮೃದ್ಧಿ

Last Updated 13 ಅಕ್ಟೋಬರ್ 2017, 5:49 IST
ಅಕ್ಷರ ಗಾತ್ರ

ಚಾಮರಾಜನಗರ: ಒಂದೆಡೆ ಹಕ್ಕಿಗಳ ಸ್ವಚ್ಛಂದ ವಿಹಾರಕ್ಕೆ ಸಾಕ್ಷಿಯಾಗಿ, ಮೂಡಣದ ಬೆಳಕು ಅರಳುತ್ತಿದ್ದಂತೆ ತನ್ನ ಸುತ್ತ ತುಂಬಿಕೊಂಡಿದ್ದ ಗಿಡಮರಗಳ ನೆಳಲನ್ನು ಪ್ರತಿಫಲಿಸುವ ಆಹ್ಲಾದಕರ ಪ್ರಶಾಂತತೆ. ಮತ್ತೊಂದೆಡೆ ಕಾವೇರಿ ತಾಯಿಯ ಒಡಲು ಸೇರಲು ಆತುರಪಟ್ಟಂತೆ ನೀರಿನ ಧುಮ್ಮಿಕ್ಕುವ ಭೋರ್ಗರೆತದ ಸದ್ದು.

ತಾಲ್ಲೂಕಿನ ಸುವರ್ಣಾವತಿ ಜಲಾಶಯ ಇಂತಹದ್ದೊಂದು ಅಪೂರ್ವ ಅನುಭವ ನೀಡುತ್ತಿದೆ. ಚಿಕ್ಕಹೊಳೆ ಜಲಾಶಯ ಭರ್ತಿಯಾದ ಬೆನ್ನಲ್ಲೇ, ಅದರ ಮತ್ತೊಂದು ಮಗ್ಗುಲಿನಲ್ಲಿರುವ ಸುವರ್ಣಾವತಿ ಕೂಡ ಏಳು ವರ್ಷದ ನಂತರ ತುಂಬಿಕೊಂಡಿದೆ.

ರಾತ್ರಿ 12.30ರ ಸುಮಾರಿಗೆ ಜಲಾಶಯದ ಮೂರು ಕ್ರೆಸ್ಟ್‌ ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಯಿತು. ಸಮುದ್ರಮಟ್ಟದಿಂದ 1455 ಅಡಿ ಎತ್ತರವಿರುವ ಸುವರ್ಣಾವತಿ ಭರ್ತಿಯಾಗಲು ಒಂದೂವರೆ ಅಡಿ ಬೇಕಾಗಿತ್ತು.

ಬುಧವಾರ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಹಿಂದಿನ ದಿನ ಬಿದ್ದ ಮಳೆ ನೀರಿನ ಹರಿವಿನ ಮಟ್ಟ ಹೆಚ್ಚಿದ್ದರಿಂದ ಮತ್ತು ಪಕ್ಕದ ಚಿಕ್ಕಹೊಳೆ ಜಲಾಶಯದಿಂದ ಹೆಚ್ಚುವರಿ ನೀರು ಇಲ್ಲಿಗೆ ಬರುತ್ತಿದ್ದರಿಂದ ರಾತ್ರಿ ವೇಳೆಗೆ ಗರಿಷ್ಠ ಮಟ್ಟ ತಲುಪಿತು.

ಸುತ್ತಮುತ್ತಲಿನ ಗ್ರಾಮಗಳ ಜನರು ಬೆಳಿಗ್ಗೆಯಿಂದಲೇ ಜಲಾಶಯ ನೋಡಲು ಬರುತ್ತಿದ್ದರು. ಕ್ರೆಸ್ಟ್‌ ಗೇಟ್‌ ಮುಂಭಾಗದ ಮತ್ತು ದಂಡೆಯ ಮೇಲೆ ನಿಂತು ನೀರು ಭೋರ್ಗರೆಯುತ್ತ ಚಿಮ್ಮುತ್ತಿದ್ದ ದೃಶ್ಯವನ್ನು ಕಂಡು ಪುಳಕಿತರಾದರು.

‘ಏಳು ವರ್ಷದ ಬಳಿಕ ಜಲಾಶಯ ಭರ್ತಿಯಾಗಿ ನೀರು ಹೊರಬಿಟ್ಟಿದ್ದಾರೆ. ನೋಡಲು ಖುಷಿಯಾಗುತ್ತಿದೆ’ ಎಂದು ಸಿದ್ದಯ್ಯನಪುರ ಗ್ರಾಮದ ಯುವಕ ಮೋಹನ್‌ ಹರ್ಷ ವ್ಯಕ್ತಪಡಿಸಿದರು. ಜಲಾಶಯವು 1258.78 ಎಂಸಿಎಫ್‌ ಟಿ ನೀರು ಸಂಗ್ರಹಣ ಸಾಮರ್ಥ್ಯ ಹೊಂದಿದೆ. ಸುಮಾರು 250 ಕ್ಯುಸೆಕ್‌ ಒಳಹರಿವು ಇದ್ದು, 200 ರಿಂದ 250 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಎಡದಂಡೆ ಕಾಲುವೆಯು 5 ಕಿ.ಮೀ. ಕ್ರಮಿಸಲಿದ್ದು, ಚಿಕ್ಕಹೊಳೆ ಚೆಕ್‌ ಪೋಸ್ಟ್‌, ಸಿದ್ದಯ್ಯನಪುರ ಮುಂತಾದ ಗ್ರಾಮಗಳ 400 ಹೆಕ್ಟೇರ್‌ ಜಮೀನಿಗೆ ನೀರು ಒದಗಿಸುತ್ತದೆ. ಬಲದಂಡೆ ನಾಲೆಯು 24 ಕಿ.ಮೀ. ಕ್ರಮಿಸಲಿದ್ದು, ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಸುಮಾರು 16,000 ಹೆಕ್ಟೇರ್‌ ಕೃಷಿ ಭೂಮಿಗೆ ನೀರು ನೀಡುತ್ತದೆ. ಹೊಂಗಲವಾಡಿ, ಕುಂಬೇಶ್ವರ ಕಾಲೊನಿ, ಕಾಳಿಕಾಂಬ ಕಾಲೊನಿ, ಆಲೂರು, ಹುಲ್ಲೂರು, ದಿಡ್ಡಾಪುರ, ನಾಗವಳ್ಳಿ, ನಲ್ಲೂರು, ಅಮ್ಮನಪುರ, ಕಾಗಲವಾಡಿ ಮೂಲಕ ಕೊಳ್ಳೇಗಾಲದ ಹೊನ್ನಹೊಳೆಯಲ್ಲಿ ಕಾವೇರಿಗೆ ಸೇರುತ್ತದೆ.

ಹಂದಿಗಳ ಕಾಟ ತಪ್ಪಿಸಿ: ಸುವರ್ಣಾವತಿ ಜಲಾಶಯದ ಅಧಿಕಾರಿಗಳ ಕಚೇರಿಯಿಂದ ಅಟ್ಟುಗೂಳಿಪುರದವರೆಗೆ ಬಲದಂಡೆ ನಾಲೆಯುದ್ದಕ್ಕೂ ಪೊದೆಗಳು ಬೆಳೆದುಕೊಂಡಿದೆ.
ಇದರಿಂದ ಸಂಜೆಯಾದರೆ ಕಾಡುಹಂದಿಗಳ ಹಾವಳಿ ವಿಪರೀತವಾಗುತ್ತದೆ. ರಾತ್ರಿ ವೇಳೆ ಓಡಾಡುವುದು ಕಷ್ಟವಾಗಿದೆ. ಕೆಲವೊಮ್ಮೆ ಆನೆಗಳೂ ಕಾಣಿಸಿಕೊಳ್ಳುತ್ತವೆ. ಅಧಿಕಾರಿಗಳು ಗಮನಹರಿಸಿ ಆದಷ್ಟು ಶೀಘ್ರವೇ ಈ ಪೊದೆಗಳನ್ನು ತೆರವುಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT