ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹೋಮ್‌ ಸ್ಟೇಗಳಿಗೆ ಕಡಿವಾಣಕ್ಕೆ ಮೊರೆ

Last Updated 13 ಅಕ್ಟೋಬರ್ 2017, 6:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಜಿಲ್ಲೆಯಲ್ಲಿ 450 ಹೋಮ್‌ ಸ್ಟೇಗಳಿದ್ದು, ಈ ಪೈಕಿ 281 ಹೋಮ್‌ ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿವೆ. 169 ಹೋಮ್‌ ಸ್ಟೇಗಳು ಈವರೆಗೂ ಅರ್ಜಿ ಸಲ್ಲಿಸದಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ’ ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಿ.ವಿ.ಗಿರೀಶ್, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ತಿಳಿಸಿದ್ದಾರೆ.

‘ಜಿಲ್ಲೆಯ ವನ್ಯಜೀವಿ ಕಾರ್ಯಕರ್ತರ ತಂಡವು ಎರಡು ತಿಂಗಳಿನಿಂದ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಗೊತ್ತಾಗಿದೆ. ಅರ್ಜಿ ಸಲ್ಲಿಸಿರುವ 281 ಹೋಮ್‌ ಸ್ಟೇಗಳಲ್ಲಿ 37 ಪುನರಾವರ್ತನೆಯಾಗಿವೆ. ಅರ್ಜಿ ಸಲ್ಲಿಸದಿರುವ 169 ಹೋಂಸ್ಟೇಗಳು ಈಗಲೂ ಕಾರ್ಯಚಟುವಟಿಕೆ ನಡೆಸುತ್ತಿವೆ. ಒಟ್ಟು 450 ಹೋಮ್‌ ಸ್ಟೇಗಳಲ್ಲಿ ಸರ್ಕಾರದ ನಿಯಮಾನುಸಾರ ಅನ್ವಯ ಕಾರ್ಯನಿರ್ವಹಿಸತ್ತಿರುವುದು 12 ಮಾತ್ರ. ತೊಗರಿಹಂಕಲ್ ಬಳಿ 44 ಕೊಠಡಿಗಳಿರುವ ವಸತಿ ಗೃಹವೊಂದು ಹೋಮ್‌ ಸ್ಟೇ ಎಂದು ಘೋಷಿಸಿಕೊಂಡಿದೆ’ ಎಂದು ದೂರಿದ್ದಾರೆ.

‘ಒಟ್ಟು ಹೋಮ್‌ ಸ್ಟೇಗಳ ಪೈಕಿ 66ರಲ್ಲಿ 20 ಮಂದಿಗೆ, 58ರಲ್ಲಿ 30 ಮಂದಿ, 27ರಲ್ಲಿ 40 ಮಂದಿ, ಎಂಟರಲ್ಲಿ 50 ಮಂದಿ, ನಾಲ್ಕರಲ್ಲಿ 60 ಮಂದಿ, ಎರಡರಲ್ಲಿ 70 ಮಂದಿ, ಇನ್ನೆರಡಲ್ಲಿ 90, ಮತ್ತೊಂದೆರಡಲ್ಲಿ 100 ಮಂದಿ ಹಾಗೂ ಒಂದರಲ್ಲಿ 80 ಮಂದಿಗೆ ವಸತಿ ಒದಗಿಸಲಾಗುತ್ತಿದೆ. 41 ಹೋಮ್‌ ಸ್ಟೇಗಳು ಐದಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿವೆ. ಹೆಚ್ಚು ಜನ ಬಂದರೆ ಕೆಲ ಹೋಮ್‌ ಸ್ಟೇಗಳು ಪಡಸಾಲೆಯಲ್ಲಿ ತಂಗಲು ಅವಕಾಶ ಮಾಡಿದ್ದಾರೆ. ಪಡಸಾಲೆಯಲ್ಲಿ 40 ರಿಂದ 50 ಮಂದಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

‘182 ಹೋಮ್‌ ಸ್ಟೇಗಳಲ್ಲಿ ಸರಾಸರಿ 1820 ಮಂದಿ ತಂಗಲು ಅವಕಾಶ ಇದೆ. ಆದರೆ, ಇಲ್ಲಿ ಸುಮಾರು ಐದು ಸಾವಿರ ಮಂದಿಗೆ ಉಳಿದುಕೊಳ್ಳುತ್ತಿದ್ದಾರೆ. ಪ್ರತಿ ಹೋಮ್‌ ಸ್ಟೇನಲ್ಲೂ ಐದು ಕೊಠಡಿಗಳಲ್ಲಿ 10 ಮಂದಿ ಉಳಿದುಕೊಳ್ಳಲು ಮಾತ್ರ ಅವಕಾಶ ಇರಬೇಕು. ಆದರೆ ಇಲ್ಲಿ ಸರಾಸರಿ 27 ಮಂದಿ ತಂಗಲು ಅವಕಾಶ ಮಾಡಿಕೊಡಲಾಗಿದೆ. ಒಬ್ಬರಿಗೆ ಒಂದು ದಿನಕ್ಕೆ ₹ 550ರಿಂದ 10,500 ವರೆಗೆ ದರ ವಿಧಿಸಲಾಗುತ್ತಿದೆ’ ಎಂದು ದೂಷಿಸಿದ್ದಾರೆ.

‘ಹೋಮ್‌ ಸ್ಟೇಗಳ ಮೂಲ ಉದ್ದೇಶ ಮರೆಯಾಗಿ, ಅವು ಬೇರೆ ಹಾದಿ ತುಳಿದಿವೆ. ತಡರಾತ್ರಿವರೆಗೂ ಮೋಜುಮಸ್ತಿ, ಡಿಜೆ, ಮದ್ಯಪಾನ ನಡೆಯುತ್ತಿವೆ.ಅನೇಕ ಕಡೆ ನಿವಾಸಿಗಳಿಗೆ ಕಿರಿಕಿರಿ ಆರಂಭವಾಗಿದೆ. ಪರಿಸರ ಹಾಳಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಜಿಲ್ಲೆಗೆ ವಾರಾಂತ್ಯದಲ್ಲಿ ಸುಮಾರು 12 ಸಾವಿರ ಮಂದಿ ಭೇಟಿ ನೀಡುತ್ತಾರೆ. ಆದಾಯ ₹ 68 ಲಕ್ಷದಿಂದ ₹ 2.5 ಕೋಟಿವರೆಗೂ ಬರುತ್ತಿದೆ. ಜಿಲ್ಲಾಡಳಿತ ಪರಿಶೀಲಿಸಿ ಕಾನೂನು ಉಲ್ಲಂಘಿಸಿರುವ ಹೋಮ್‌ ಸ್ಟೇಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT