ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರೀ ಮಳೆಗೆ ಕೆರೆ ಏರಿ ರಸ್ತೆ ಕುಸಿತ: ಸಂಚಾರಕ್ಕೆ ಅಡಚಣೆ

Last Updated 13 ಅಕ್ಟೋಬರ್ 2017, 6:24 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಬಿದರಕೆರೆ ಗೊಲ್ಲರಹಟ್ಟಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಕೆರೆ ಏರಿಯ ಮೇಲಿನ ರಸ್ತೆ ಕುಸಿದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕೆರೆಯ ಮಧ್ಯದಲ್ಲಿ ಎತ್ತರವಾದ ರಸ್ತೆ ನಿರ್ಮಿಸಿದ್ದು, ಗ್ರಾಮಸ್ಥರು ಇದೇ ರಸ್ತೆಯ ಮೇಲೆ ಮಲ್ಲಪ್ಪನಹಳ್ಳಿ ಕಡೆಗೆ ಸಾಗಬೇಕು. ರೈತರು, ದನಕರುಗಳು, ಎತ್ತಿನ ಗಾಡಿಗಳು ಇದೇ ರಸ್ತೆಯ ಮೇಲೆ ಸಂಚರಿಸುತ್ತಿದ್ದವು. ಆದರೆ ಭಾರೀ ಮಳೆಯಿಂದ ರಸ್ತೆ ಕುಸಿದಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

ಕಳಪೆ ಕಾಮಗಾರಿ ಕಾರಣ: ‘32 ಎಕರೆ ವಿಸ್ತಾರ ಇರುವ ಈ ಕೆರೆಯ ಮಧ್ಯದಲ್ಲಿ ರಸ್ತೆ ನಿರ್ಮಿಸಿರುವುದರಿಂದ ನೀರು ಎರಡು ಭಾಗ ಆಗಿದೆ. ಕಳೆದ ತಿಂಗಳು ಗ್ರಾಮ ಪಂಚಾಯ್ತಿಯಿಂದ ರಸ್ತೆ ಎತ್ತರ ಮಾಡಲಾಗಿತ್ತು. ಒಂದು ಕಡೆಯ ನೀರು ಮತ್ತೊಂದು ಕಡೆ ಹರಿಯಲು ಮೂರು ಪೈಪ್ ಅಳವಡಿಸಲಾಗಿತ್ತು. ಆದರೆ ಕಾಂಕ್ರೀಟ್ ಬಳಸದೆ ಪೈಪ್‌ಗಳ ಮೇಲೆ ಬರೀ ಮಣ್ಣು ಹಾಕಿರುವುದರಿಂದ ರಸ್ತೆ ಕುಸಿದಿದೆ.

ರಸ್ತೆ ಕುಸಿದಿರುವುದರಿಂದ ಮಣ್ಣು ಅಡ್ಡ ಬಿದ್ದಿದ್ದು, ನೀರು ಸರಾಗವಾಗಿ ಹೋಗುತ್ತಿಲ್ಲ. ಮತ್ತೆ ಮಳೆ ಬಂದರೆ ಕೆರೆಯ ನೀರು ಗ್ರಾಮದ ಒಳಗೆ ನುಗ್ಗುತ್ತದೆ’ ಎಂದು ಗ್ರಾಮದ ಮುಖಂಡ ವಿ.ಏಕಾಂತಪ್ಪ ಆರೋಪಿಸಿದರು.

‘ಮೊದಲು ಭೂಮಿ ಮಟ್ಟಕ್ಕೆ ರಸ್ತೆ ಇತ್ತು. ಆಗ ನೀರು ಸರಾಗವಾಗಿ ಹರಿಯುತ್ತಿತ್ತು. ಗ್ರಾಮ ಪಂಚಾಯ್ತಿಯವರು ರಸ್ತೆ ಮೇಲೆ ಮಣ್ಣು ಹಾಕಿರುವುದರಿಂದ ನೀರು ಎರಡು ಭಾಗ ಆಗಿದೆ. ಪಕ್ಕದಲ್ಲೇ ಗುಡ್ಡ ಇದ್ದು, ಮಳೆ ಬಂದರೆ ಹೆಚ್ಚು ನೀರು ಬರುತ್ತದೆ. ರಸ್ತೆ ಕುಸಿದಿರುವುದರಿಂದ ಜನ, ಜಾನುವಾರುಗಳು ಗುಂಡಿಯ ಒಳಗೆ ಬೀಳುವ ಭಯ ಇದೆ.

ರಾತ್ರಿ ವೇಳೆ ಇಲ್ಲಿಗೆ ಬಂದರಂತೂ ಅಪಾಯ ತಪ್ಪಿದ್ದಲ್ಲ. ಗುತ್ತಿಗೆದಾರರು ಕಾಂಕ್ರೀಟ್ ಬೆಡ್ ಹಾಕಿ ಪೈಪ್ ಅಳವಡಿಸಿದ್ದರೆ ರಸ್ತೆ ಕುಸಿಯುತ್ತಿರಲಿಲ್ಲ. ಇಲ್ಲಿ ಒಂದು ವಿದ್ಯುತ್ ಕಂಬವೂ ಕುಸಿದು ಬೀಳುವ ಹಂತದಲ್ಲಿದೆ’ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಪಾತಲಿಂಗೇಶ್ ಹಾಗೂ ಸುರೇಶ್ ಹೇಳಿದರು.

ಇಲ್ಲಿ ನೀರು ಸರಾಗವಾಗಿ ಹರಿಯುಂತೆ ಸುಸಜ್ಜಿತ ಸೇತುವೆ ನಿರ್ಮಿಸಬೇಕು. ಮಳೆಗಾಲದಲ್ಲಿ ಕೆಸರು ತುಂಬುವುದರಿಂದ ಸಂಚಾರಕ್ಕೆ ಅನುಕೂಲ ಆಗುವಂತೆ ಡಾಂಬರು ರಸ್ತೆ ನಿರ್ಮಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

ಮಳೆಗೆ ನೆಲಕಚ್ಚಿದ ರಾಗಿ ಬೆಳೆ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಬಿರುಸಿನ ಮಳೆ ಸುರಿದಿದೆ. ಗುಡ್ಡದ ಸಾಂತೇನಹಳ್ಳಿ, ಆವಿನಹಟ್ಟಿ, ಎಮ್ಮೆಹಟ್ಟಿ ಸುತ್ತಮುತ್ತ ಸುರಿದ ಮಳೆಯಿಂದ ನೂರಾರು ಎಕರೆ ರಾಗಿ ಬೆಳೆ ನೆಲಕಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT