ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಋತುಮಾನಗಳಿಗೂ ಒಗ್ಗುವ ಖಾದಿ’

Last Updated 13 ಅಕ್ಟೋಬರ್ 2017, 6:38 IST
ಅಕ್ಷರ ಗಾತ್ರ

ಧಾರವಾಡ: ‘ಸ್ವದೇಶಿ ಕಲ್ಪನೆಯ, ನಮ್ಮ ರಾಷ್ಟ್ರಾಭಿಮಾನದ ಸಂಕೇತವಾದ ಖಾದಿ ಎಲ್ಲ ಋತುಮಾನಗಳಿಗೂ ಒಗ್ಗುವ ಬಟ್ಟೆಯಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಬಣ್ಣಿಸಿದರು. ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಹತ್ತು ದಿನಗಳ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ‘ಖಾದಿ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

‘ಖಾದಿ ಉದ್ಯಮವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ನೇಕಾರರು, ಗುಡಿ ಕೈಗಾರಿಕೆ ನಡೆಸುವವರು ಆರ್ಥಿಕ ಸಬಲತೆ ಪಡೆದುಕೊಳ್ಳಬೇಕು. ಪ್ರಸ್ತುತ ಖಾದಿ ಕ್ಷೇತ್ರದಲ್ಲಿ ಸುಮಾರು 70 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಮಹಿಳೆಯರು ತಮ್ಮ ಬಿಡುವಿನ ಸಮಯದಲ್ಲಿ ಹತ್ತಿ ದಾರ ಮತ್ತು ಬಟ್ಟೆ ನೇಯುವ ಮೂಲಕ ಕುಟುಂಬದ ಆರ್ಥಿಕ ಅಗತ್ಯಗಳಿಗೆ ಅನುಕೂಲ ಕಲ್ಪಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ರಾಜ್ಯ ಖಾದಿ ಮಂಡಳಿ ಅಧ್ಯಕ್ಷ ಯಲವನಹಳ್ಳಿ ರಮೇಶ ಮಾತನಾಡಿ, ‘ಆಧುನಿಕತೆಯ ಅಬ್ಬರದಲ್ಲಿ ಖಾದಿಯ ಮಹತ್ವ ಯುವಜನತೆಗೆ ಅರಿವಾಗುತ್ತಿಲ್ಲ. ಬದಲಾಗುತ್ತಿರುವ ವಿನ್ಯಾಸಗಳು ಮತ್ತು ಉತ್ಪನ್ನಗಳಿಗೆ ಮೌಲ್ಯವರ್ಧನೆಗೊಳಿಸುವ ನಿಟ್ಟಿನಲ್ಲಿ ಮಂಡಳಿ ಶ್ರಮಿಸುತ್ತಿದೆ. ಖಾದಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಾರಾಟ ಮೇಳಗಳನ್ನು ಆಯೋಜಿಸುತ್ತಿದೆ’ ಎಂದು ಹೇಳಿದರು.

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್‌ ರಾಯಮಾನೆ, ಶಾಸಕ ಸಿ.ಎಸ್.ಶಿವಳ್ಳಿ, ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಕೊಟಗಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ದೇವಾನಂದ ರತ್ನಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT