ಸೋಮವಾರ, ಸೆಪ್ಟೆಂಬರ್ 16, 2019
29 °C

ಇಂದಿಗೂ ನೆಲೆಗೊಳ್ಳದ ಶರಣರ ಜಾತ್ಯಾತೀತ ವಿಚಾರ’

Published:
Updated:

ಗದಗ: ‘12ನೇ ಶತಮಾನದ ಕಲ್ಯಾಣದಲ್ಲಿ ನೆಲೆಯೂರಿದ್ದ ಜಾತ್ಯಾತೀತ ವಿಚಾರಗಳು 21ನೇ ಶತಮಾನದಲ್ಲೂ ಜಾರಿಗೊಂಡಿಲ್ಲ. ಜಾತಿಯ ಸಂಕೋಲೆಗಳು ಹೆಚ್ಚು ಬಿಗಿಯಾಗುತ್ತಾ ಸಾಗಿರುವುದು ದುರ್ದೈವದ ಸಂಗತಿ’ ಎಂದು ಸಾಹಿತಿ ಪೂರ್ಣಾಜಿ ಖರಾಟೆ ಹೇಳಿದರು.

ನಗರದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದಿಂದ ಈಚೆಗೆ ನಡೆದ ವಾರದ ಸಾಹಿತ್ಯ ಚಿಂತನ ಮಾಲಿಕೆಯಲ್ಲಿ ಡೋಹರ ಕಕ್ಕಯ್ಯನವರ ಕುರಿತು ಅವರು ಉಪನ್ಯಾಸ ನೀಡಿದರು.

‘ಬಸವಣ್ಣನವರ ಆಚಾರ, ವಿಚಾರಗಳಿಂದ ಪ್ರಭಾವಿತರಾದ ಡೋಹರ ಕಕ್ಕಯ್ಯನವರ ವಚನಗಳು ಗಮನಸೆಳೆಯುತ್ತವೆ. ಆಚಾರ ಸಂಪನ್ನತೆಯನ್ನು ಬೆಳೆಸಿಕೊಂಡು ಅಭಿನವ ಮಲ್ಲಿಕಾರ್ಜುನ ಎಂಬ ನಾಮಾಂಕಿತದ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಾಮಾಯಣ, ಮಹಾಭಾರತಕ್ಕಿಂತ ಬದುಕಿಗೆ ವಚನಗಳು ಇಂದು ಅವಶ್ಯವಾಗಿವೆ.

ಲಭ್ಯವಿರುವ ಕಕ್ಕಯ್ಯನವರ ಕೆಲವು ವಚನಗಳು ಮೌಲಿಕವಾಗಿವೆ. ಬಸವಾದಿ ಶರಣರ ಸತ್ ಚಿಂತನೆಗಳ ಅರಿವಿದ್ದ ಅನೇಕ ಶರಣರು ದೂರದ ಪ್ರದೇಶಗಳಿಂದ ಬಂದು ಕಲ್ಯಾಣದಲ್ಲಿ ನೆಲೆಯೂರಿ ಅನುಭವ ಮಂಟಪದಲ್ಲಿ ಚರ್ಚಿಸುತ್ತಿದ್ದರು. ಮಾಳವ ಪ್ರದೇಶದಿಂದ ಬಂದ ಕಕ್ಕಯ್ಯ ಮತ್ತು ಬಿಷ್ಟಮ್ಮನವರು ಲಿಂಗದೀಕ್ಷೆ ಪಡೆದು ಶರಣರಾಗಿ, ಅನುಭಾವಿಗಳಾಗಿ ಕಲ್ಯಾಣ ಕ್ರಾಂತಿಯಲ್ಲಿ ಭಾಗವಹಿಸಿದ್ದರು’ ಎಂದು ತಿಳಿಸಿದರು.

‘ವಚನ ಸಾಹಿತ್ಯ ನಾಡಿನ ಅಮೂಲ್ಯ ಸಂಪತ್ತು. ಜಾತಿ, ಲಿಂಗ ತಾರತಮ್ಯವನ್ನಳಿದು ಶ್ರೇಷ್ಠ ಮಾನವತೆಯನ್ನು ಸಾರಿದ ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಬದುಕು ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಗೇರಿ ಹೇಳಿದರು.

ವಿದ್ಯಾರ್ಥಿ ಅನಿಲ ಬಳ್ಳಾರಿ ಕವನ ವಾಚನ ಮಾಡಿದರು. ಕೆ.ಎಸ್.ಬೆನಕನವಾರಿ, ಪ್ರಕಾಶ ಮಂಗಳೂರ, ರತ್ನಕ್ಕ ಪಾಟೀಲ, ಬಸವರಾಜ ಗಣಪ್ಪನವರ, ಅ.ಓಂ.ಪಾಟೀಲ, ಶಿವಾನಂದ ಗಿಡ್ನಂದಿ, ಕೆ.ವಿ.ಕುಂದಗೋಳ, ಎ.ಎಸ್.ತಡಹಾಳ, ಎನ್.ಆರ್.ಸಾತಪುತೆ, ಆರ್.ಡಿ.ಕಪ್ಪಲಿ, ಗೌರಮ್ಮ ಹುಬ್ಬಳ್ಳಿ, ಅನ್ನಪೂರ್ಣಾ ಮಾಳಾಪುರ, ಸಿ.ಕೆ.ಕೇಸರಿ, ಪ್ರ.ತೋ.ನಾರಾಯಣಪುರ, ಅ.ದ.ಕಟ್ಟಿಮನಿ, ಪ್ರಕಾಶ ಅಸುಂಡಿ, ಡಿ.ಟಿ.ಮೇರವಾಡೆ, ವೈ.ಎಚ್.ಹಡಪದ, ದಾಕ್ಷಾಯಿಣಿ ಕೊಡ್ಲಿ, ಎಸ್.ಬಿ.ದೊಡ್ಡಣ್ಣವರ, ಅನಸೂಯಾ ಮಿಟ್ಟಿ, ಸಂತೋಷ ಎಸ್.ಕೆ, ಎ.ವಿ.ಹಿರೇಮಠ, ಜಯಶ್ರೀ ಗಂಜಿ ಇದ್ದರು.

Post Comments (+)