ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ದೂರು ಸೇವೆ ಆರಂಭ

Last Updated 13 ಅಕ್ಟೋಬರ್ 2017, 7:24 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿನ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಬರುವ ದೂರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಈ ಕೇಂದ್ರವು ಹೊಸದಾಗಿ ವ್ಯಾಟ್ಸ್‌ಆ್ಯಪ್‌ (8618249402) ದೂರು ಸೇವೆಯನ್ನು ಆರಂಭಿಸಿದೆ.

ಸಂಕಷ್ಟಕ್ಕೆ ಅಥವಾ ಸಮಸ್ಯೆಗೆ ಸಿಲುಕಿದ ಹಿರಿಯ ನಾಗರಿಕರು ಈ ಹಿಂದೆ ಸಹಾಯವಾಣಿ ಕೇಂದ್ರದ 1090 ಸಂಖ್ಯೆಗೆ (ಉಚಿತ ಕರೆ), ದೂ.ಸಂ: 08382– 220034ಗೆ ಕರೆ ಮಾಡಿ ಅಥವಾ ಖುದ್ದಾಗಿ ಕೇಂದ್ರದ ಕಚೇರಿಗೆ ಬಂದು ದೂರು ದಾಖಲಿಸಬಹುದಾಗಿತ್ತು. ಸಮಸ್ಯೆಗೆ ಸಂಬಂಧಿಸಿದಂತೆ ಇನ್ಮುಂದೆ ವ್ಯಾಟ್ಸ್‌ ಆ್ಯಪ್‌ ಸಂಖ್ಯೆಗೂ ಸಂದೇಶ, ಚಿತ್ರ ಹಾಗೂ ವಿಡಿಯೊವನ್ನೂ ಕಳುಹಿಸಿಕೊಡಬಹುದು.

ಕೇಂದ್ರದ ಉದ್ದೇಶ: ಸಮಾಜದಲ್ಲಿ ಹಿರಿಯ ನಾಗರಿಕರ ಸ್ಥಾನಮಾನ ಕಾಪಾಡುವುದು, ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು. ಮನೋಸ್ಥೈರ್ಯ ಹೆಚ್ಚಿಸುವುದು. ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲು ನೆರವಾಗುವುದು. ತೊಂದರೆಯಲ್ಲಿರುವ ಹಿರಿಯ ನಾಗರಿಕರಿಗೆ ಸಾಧ್ಯವಾದ ಎಲ್ಲ ರೀತಿಯ ನೆರವು ಕಲ್ಪಿಸುವುದು. ಆದ್ಯತೆ ಮೇರೆಗೆ ಪೊಲೀಸ್ ಇಲಾಖೆಯಿಂದ ವಿಶೇಷ ಕಾಳಜಿ ವಹಿಸುವುದು ಸಹಾಯವಾಣಿ ಕೇಂದ್ರದ ಮುಖ್ಯ ಉದ್ದೇಶವಾಗಿದೆ.

ಸಾಮಾಜಿಕ ಮತ್ತು ಕೌಟುಂಬಿಕವಾಗಿ ಮಾನಸಿಕ ಅಸ್ವಸ್ಥಗೊಂಡ ಹಿರಿಯ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು. ಹಿರಿಯ ನಾಗರಿಕರ ಗುರುತಿನ ಚೀಟಿ ಒದಗಿಸುವುದು. ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರಿಕರ ಕುಟುಂಬದ ಸದಸ್ಯರಿಗೆ ಸಲಹೆ ನೀಡಿ ಕಾಳಜಿ ವಹಿಸಲು ಸೂಚಿಸುವುದು ಸೇರಿ ಅನೇಕ ಧ್ಯೇಯೋದ್ದೇಶಗಳನ್ನು ಈ ಕೇಂದ್ರ ಹೊಂದಿದೆ.

ಆರೋಪಿಗಳಿಗೆ ತಕ್ಕ ಶಾಸ್ತಿ: ‘ಸಮಸ್ಯೆಗೊಳಗಾದ ಹಿರಿಯ ನಾಗರಿಕರು ಇರುವ ಸ್ಥಳ, ತೊಂದರೆ ನೀಡುತ್ತಿರುವ ಹಾಗೂ ಒಳಗಾಗುತ್ತಿರುವವರ ಮಾಹಿತಿ ನೀಡಿದರೆ ಸಾಕು. ಅವರು ಇರುವಲ್ಲಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ತಿಳಿದು ದೂರು ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಉಪ ವಿಭಾಗಾಧಿಕಾರಿಯ ಮೂಲಕ ಈ ಸಮಸ್ಯೆಗೆ ಪರಿಹಾರದ ಜತೆಗೆ ಅವರಿಗೆ ರಕ್ಷಣೆ ಹಾಗೂ ಸೌಲಭ್ಯಗಳನ್ನು ನೀಡಲಾಗುವುದು. ಕೆಲವೊಮ್ಮೆ ಆರೋಪಿಗಳಿಗೆ ನ್ಯಾಯಾಲಯದಿಂದ ಶಿಕ್ಷೆ ಕೂಡ ಕೊಡಿಸಲಾಗುವುದು’ ಎಂದು ಜಿಲ್ಲಾ ಯೋಜನಾ ಸಂಯೋಜಕ ಆಗ್ನೇಲ್ ರೋಡ್ರಿಗ್ಸ್‌ ‘ಪ್ರಜಾವಾಣಿ’ಗೆ ಅವರು ತಿಳಿಸಿದರು.

ಪಾಲಕರ ಕಡೆಗಣನೆ: ‘ಪಾಲಕರನ್ನು ಕಡೆಗಣಿಸುವ ಮಕ್ಕಳು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದು ಗಂಭೀರ ಅಪರಾಧವಾಗಿದ್ದು, ಈ ಬಗ್ಗೆ ದೂರು ಬಂದರೆ ವಿಚಾರಣೆ ನಡೆಸಿ ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಕೂಡ ಜಾರಿ ಮಾಡಲಾಗುತ್ತದೆ.

ಇನ್ನು ಜೀವನ ನಿರ್ವಹಣಾ ವೆಚ್ಚ ನೀಡದ ಬಗ್ಗೆ ದೂರು ದಾಖಲಾದಲ್ಲಿ ಅದನ್ನು ತನಿಖೆ ನಡೆಸಿ, ಮಕ್ಕಳು ಎಷ್ಟು ಜೀವನಾಂಶ ನೀಡಬೇಕು ಎನ್ನುವುದನ್ನು ನಿರ್ಧರಿಸಿ ಆದೇಶಿಸಲಾಗುತ್ತದೆ. ತಪ್ಪಿದರೆ ಅವರಿಗೆ ವಾರಂಟ್ ಜಾರಿ ಮಾಡ ಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಕೆಲವರು ಪಾಲಕರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡು, ಆ ಬಳಿಕ ಅವರನ್ನು ದೂರ ತಳ್ಳುತ್ತಾರೆ. ಇಂಥ ಪ್ರಕರಣಗಳಲ್ಲಿ ಅವರು ತಮ್ಮ ಆಸ್ತಿಯನ್ನು ಮರಳಿ ಪಡೆಯಲು ಸಂಪೂರ್ಣವಾದ ಹಕ್ಕನ್ನು ಹೊಂದಿರುತ್ತಾರೆ. ತಮ್ಮ ಆಸ್ತಿಯೆಲ್ಲವನ್ನೂ ಮಕ್ಕಳಿಂದ ಮರಳಿ ಪಡೆಯಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ’ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT