ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರುಗಳ ಸುರಿಮಳೆ: ಸಿಬ್ಬಂದಿ ವಿರುದ್ಧ ಆಕ್ರೋಶ

Last Updated 13 ಅಕ್ಟೋಬರ್ 2017, 7:41 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಗುರುವಾರ ನಡೆದ ಬೆಸ್ಕಾಂ ಅಧಿಕಾರಿಗಳು ಮತ್ತು ಗ್ರಾಹಕರ ಸಂವಾದದಲ್ಲಿ ವಿದ್ಯುತ್‌ ಸಮಸ್ಯೆ ಸಂಬಂಧ ದೂರುಗಳ ಸುರಿಮಳೆಯಾಯಿತು.
ಗ್ರಾಹಕರ ಸಲಹಾ ಸಮಿತಿ ಸದಸ್ಯೆ ಗೌರಮ್ಮ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗಳು ನೆಲ ಮಟ್ಟದಲ್ಲಿ ನೇತಾಡುತ್ತಿವೆ. ತಾಲ್ಲೂಕಿನ ಹೋಳೂರು ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್‌ ಅವಘಡದಿಂದ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್‌ ತಂತಿಗಳನ್ನು ದುರಸ್ತಿ ಮಾಡುವಂತೆ ಸಿಬ್ಬಂದಿಗೆ ಹಲವು ಬಾರಿ ದೂರು ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಸಚಿವರ ಕಡೆಯಿಂದ ಅರ್ಜಿ ಹಾಕಿಸಿ ಎಂದು ಉಡಾಫೆಯಾಗಿ ಮಾತನಾಡುತ್ತಾರೆ. ಪರಿಹಾರ ಕೊಡುವ ಮೊದಲೇ ಪ್ರಾಣ ಹಾನಿ ತಪ್ಪಿಸಲು ಅಧಿಕಾರಿಗಳಿಗೆ ಏನು ಸಮಸ್ಯೆ. ವಿದ್ಯುತ್‌ ಮಾರ್ಗದ ದುರಸ್ತಿಗೆ ಅಧಿಕಾರಿಗಳು ಅಥವಾ ಸಿಬ್ಬಂದಿ ತಮ್ಮ ಹಣ ಖರ್ಚು ಮಾಡುವುದಿಲ್ಲ. ಸರ್ಕಾರ ಅನುದಾನ ಕೊಟ್ಟರೂ ಕೆಲಸ ಮಾಡಲು ಸಿಬ್ಬಂದಿ ಬೇಜವಾಬ್ದಾರಿ ತೋರುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೆಸ್ಕಾಂ ವಿದ್ಯುತ್‌ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ. ಗುತ್ತಿಗೆದಾರರು ನಿಯಮಬಾಹಿರವಾಗಿ ಒಂದೇ ಕಾಮಗಾರಿಯನ್ನು ಮೂರ್ನಾಲ್ಕು ಮಂದಿಗೆ ತುಂಡು ಗುತ್ತಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಧಿಕೃತವಾಗಿ ಟೆಂಡರ್‌ ಪಡೆದ ಗುತ್ತಿಗೆದಾರರೇ ಕಾಮಗಾರಿ ನಿರ್ವಹಣೆ ಮಾಡಬೇಕು’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.

ಲಂಚ ಕೇಳುತ್ತಾರೆ: ‘ಗ್ರಾಮೀಣ ಭಾಗದಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋದಾಗ ಶೀಘ್ರವೇ ದುರಸ್ತಿ ಮಾಡುವುದಿಲ್ಲ. ಜತೆಗೆ ಟ್ರಾನ್ಸ್‌ಫಾರ್ಮರ್‌ಗಳ ಬದಲಾವಣೆಗೆ ಸಿಬ್ಬಂದಿಯು ಸ್ಥಳೀಯರಿಂದ ಲಂಚ ಕೇಳುತ್ತಾರೆ. ಅಂತಹ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಸಹಕಾರ ನೀಡಬೇಕು: ‘ಪ್ರತಿ ಕ್ಷೇತ್ರದಲ್ಲೂ ಸಮಸ್ಯೆ ಸಹಜ. ಆದರೆ, ಸಮಸ್ಯೆಯ ನಿವಾರಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಸಹಾಯವಾಣಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಬೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಚೌಡಪ್ಪ ಭರವಸೆ ನೀಡಿದರು

‘ಟ್ರಾನ್ಸ್‌ಫಾರ್ಮರ್‌ ದುರಸ್ತಿ ಅಥವಾ ಬದಲಾವಣೆಗೆ ಸಾರ್ವಜನಿಕರು ಹಣ ಕೊಡಬೇಕಿಲ್ಲ. ಸಿಬ್ಬಂದಿ ಲಂಚ ಕೇಳಿದರೆ ಆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಖಂಡಿತ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.

ಶಿಕ್ಷಾರ್ಹ ಅಪರಾಧ: ‘ಬೆಸ್ಕಾಂ ಕಡೆಯಿಂದ ಗುಣಮಟ್ಟದ ಸೇವೆ ಕಲ್ಪಿಸುವ ಉದ್ದೇಶದಿಂದ ಗ್ರಾಹಕರ ಸಭೆಗಳನ್ನು ನಡೆಸಲಾಗುತ್ತಿದೆ. ವಿದ್ಯುತ್‌ ಕಳ್ಳತನ ಶಿಕ್ಷಾರ್ಹ ಅಪರಾಧ. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರನ್ನು ಅಧಿಕಾರಿಗಳು ಪತ್ತೆ ಹಚ್ಚಿ ಜಾಗೃತ ದಳಕ್ಕೆ ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ. ಮೊದಲ ಹಂತದಲ್ಲಿ ತಪ್ಪು ತಿದ್ದಿಕೊಳ್ಳದಿದ್ದರೆ ಮುಂದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಬೆಸ್ಕಾಂ ಜಾಗೃತದಳ ಎಸ್ಪಿ ಎಂ.ನಾರಾಯಣ್ ಎಚ್ಚರಿಕೆ ನೀಡಿದರು.

‘ಕೋಲಾರ ಜಿಲ್ಲೆಯಲ್ಲಿ ಸುಮಾರು ಮೂರು ವರ್ಷಗಳ ₹ 14 ಕೋಟಿ ವಿದ್ಯುತ್‌ ಬಿಲ್‌ ವಸೂಲಿ ಆಗಬೇಕಿದೆ. ಬಾಕಿ ಬಿಲ್‌ ವಸೂಲಿಗೆ ಹೋಗುವ ಸಿಬ್ಬಂದಿ ಮೇಲೆ ಗ್ರಾಹಕರು ಹಲ್ಲೆ ನಡೆಸಿರುವ ಉದಾಹರಣೆಗಳು ಸಾಕಷ್ಟಿವೆ. ಬಾಕಿ ಬಿಲ್‌ ಕಟ್ಟದಿದ್ದರೆ ಸಮಸ್ಯೆ ಬಗೆಹರಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಹಿತ ರಕ್ಷಣೆ ಧ್ಯೇಯವಾಗಬೇಕು: ‘ಅಧಿಕಾರಿಗಳು ಮತ್ತು ಸಿಬ್ಬಂದಿಯು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಮಸ್ಯೆಗಳಿಗೆ ಸ್ಪಂದಿಸಿದಾಗ ಗ್ರಾಹಕರು ಸಮಾಧಾನದಿಂದ ಇರುತ್ತಾರೆ. ಸಮಸ್ಯೆ ಬಗೆಹರಿಸದೆ ಗ್ರಾಹಕರಿಗೆ ತೊಂದರೆ ಉಂಟು ಮಾಡುವುದು ಸರಿಯಲ್ಲ. ಗ್ರಾಹಕರ ಹಿತ ರಕ್ಷಣೆಯು ಸಿಬ್ಬಂದಿಯ ಧ್ಯೇಯವಾಗಬೇಕು’ ಎಂದು ಸಲಹೆ ನೀಡಿದರು.

‘ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಹಾಗೂ ಅನಧಿಕೃತ ವಿದ್ಯುತ್ ಸಂಪರ್ಕಗಳ ಸಂಬಂಧ ಸಾರ್ವಜನಿಕರು 9448042375, 9448094801 ಅಥವಾ 9442094811 ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು’ ಎಂದು ಮಾಹಿತಿ ನೀಡಿದರು. ಜಾಗೃತ ದಳದ ಡಿವೈಎಸ್ಪಿಗಳಾದ ಸುರೇಶ್, ಭಾಸ್ಕರ್, ಎಂಜಿನಿಯರ್‌ ಗಳಾದ ಸತೀಶ್, ಕಾಂತರಾಜ್ ಸಭೆಯ ಗ್ರಾಹಕರ ಸಮಸ್ಯೆಗೆ ಪರಿಹಾರ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT