ಅಲೆಮಾರಿಗಳ ವಸತಿ ಪ್ರದೇಶದಲ್ಲಿ ಡೆಂಗಿ ಭೀತಿ

ಮಂಗಳವಾರ, ಜೂನ್ 25, 2019
23 °C

ಅಲೆಮಾರಿಗಳ ವಸತಿ ಪ್ರದೇಶದಲ್ಲಿ ಡೆಂಗಿ ಭೀತಿ

Published:
Updated:

ಕುಷ್ಟಗಿ: ಪಟ್ಟಣದ ಕೃಷ್ಣಗಿರಿ ಕಾಲೊನಿಯ ಅಲೆಮಾರಿ ಬುಡಕಟ್ಟು ಜನವಸತಿ ಪ್ರದೇಶದಲ್ಲಿ ಅನೇಕ ಜನ ಜ್ವರ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ, ಕೆಲವರಲ್ಲಿ ಡೆಂಗಿ ಲಕ್ಷಣಗಳು ಕಂಡು ಬಂದಿದ್ದು, ಜನರ ಆತಂಕ ಹೆಚ್ಚಿಸಿದೆ.

‘ಪುರಸಭೆ ನೀರಿನ ಮೇಲ್ತೊಟ್ಟಿ ಬಳಿ ಅಲೆಮಾರಿ ಜನರ ಅನೇಕ ಕುಟುಂಬಗಳು ಹಲವು ವರ್ಷಗಳಿಂದ ಗುಡಿಸಲುಗಳಲ್ಲಿ ವಾಸವಾಗಿವೆ. ಪ್ರತಿ ಕುಟುಂಬದಲ್ಲಿ ಇಬ್ಬರು ಮಕ್ಕಳು ಅಥವಾ ಹಿರಿಯರು ಜ್ವರಬಾಧೆಯಿಂದ ಬಳಲುತ್ತಿದ್ದಾರೆ. ಕೆಲವರಲ್ಲಿ ಜ್ವರ ಕಡಿಮೆಯಾಗದಿರುವುದರಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಹಲವು ಜನರಲ್ಲಿ ವಿಷಮಶೀತಜ್ವರ, ಗಂಟಲು ಬೇನೆ ಇದೆ. ಜನ ಅನಾರೋಗ್ಯ ಪೀಡಿತರಾಗಿರುವುದು ಮತ್ತು ಪರಿಸರದಲ್ಲಿ ಮಾಲಿನ್ಯ ಉಂಟಾಗಿದ್ದನ್ನು ಗಮನಿಸಿದ ಕಾಲೊನಿಯ ನಿವಾಸಿಗಳು ಗುರುವಾರ ಸಮಸ್ಯೆಯನ್ನು ಪುರಸಭೆ ಮತ್ತು ಆರೋಗ್ಯ ಇಲಾಖೆ ಗಮನಕ್ಕೆ ತಂದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಅಧ್ಯಕ್ಷ ಖಾಜಾ ಮೈನುದ್ದೀನ್‍ಮುಲ್ಲಾ, ಅಗತ್ಯ ಸ್ಥಳದಲ್ಲಿ ಬ್ಲೀಚಿಂಗ್, ಫಾಗಿಂಗ್‌ ಮೂಲಕ ನೈರ್ಮಲ್ಯ ಸಂಬಂಧಿ ಕೆಲಸಗಳನ್ನು ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಿದರು.

ನಂತರ ಸ್ಥಳಕ್ಕೆ ಬಂದ ಸಾರ್ವಜನಿಕ ಆಸ್ಪತ್ರೆ  ವೈದ್ಯಾಧಿಕಾರಿ ಡಾ.ಚಂದ್ರಕಾಂತ ಮಂತ್ರಿ, ಆ ಪ್ರದೇಶದಲ್ಲಿ ಸಂಗ್ರವಾಗಿರುವ ನೀರಿನಲ್ಲಿ ಲಾರ್ವಾಗಳ ಸಮೀಕ್ಷೆ ನಡೆಸಿದರು. ನೀರು ನಿಂತ ಸ್ಥಳದಲ್ಲಿ ಲಾರ್ವಾ ನಿಯಂತ್ರಿಸುವ ನಾಶಕ ಸಿಂಪಡಿಸಿದರು. ಖಾಲಿ ಬ್ಯಾರಲ್, ಟ್ಯಾಂಕ್‍ಗಳಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಬಹಳಷ್ಟು ಪ್ರಮಾಣದ ಲಾರ್ವಾಗಳು ಪತ್ತೆಯಾಗಿದ್ದು, ಅಂಥ ನೀರನ್ನು ವಿಲೇವಾರಿ ಮಾಡಲಾಯಿತು. ವಾರಗಟ್ಟಲೆ ನೀರು ಸಂಗ್ರಹಿಸುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಖಾಲಿಕೊಡಗಳ ರಾಶಿ: ಈ ಪ್ರದೇಶದ ಸಮೀಪದಲ್ಲಿ ಪ್ಲಾಸ್ಟಿಕ್ ಕೊಡಗಳನ್ನು ತಯಾರಿಸುವ ಕಾರ್ಖಾನೆ ಇದ್ದು, ಅಲ್ಲಿ ಹಳೆಯ ನೂರಾರು ಕೊಡ, ಪ್ಲಾಸ್ಟಿಕ್ ಡಬ್ಬ, ಬ್ಯಾರಲ್‍ಗಳ ರಾಶಿಯೇ ಇದೆ. ಅವುಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳ ಲಾರ್ವಾಗಳು ಹೆಚ್ಚಾಗಲು ಕಾರಣವಾಗಿದೆ ಎಂಬುದನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದರು. ಕೊಡಗಳನ್ನು ಬಯಲಿನಲ್ಲಿ ಸಂಗ್ರಹಿಸಿರುವುದರಿಂದ ನೀರು ನಿಲ್ಲುತ್ತದೆ. ಕಾರ್ಖಾನೆಯವರು ಸುರಕ್ಷತೆಗೆ ಗಮನಹರಿಸದ ಕಾರಣ ಸುತ್ತಲಿನ ಜನ ತೊಂದರೆ ಅನುಭವಿಸುವಂತಾಗಿದೆ ಎಂದು ಕಾಲೊನಿ ನಿವಾಸಿಗಳು ದೂರಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry