ಕೀಲಾರ: ಕಲೆಗಳ ತವರು, ಅಧ್ಯಾತ್ಮ ಬೇರು

ಭಾನುವಾರ, ಜೂನ್ 16, 2019
32 °C
15ಕ್ಕೂ ಹೆಚ್ಚು ಜನಪದ ಕಲಾ ಪ್ರಕಾರಗಳನ್ನು ಜೀವಂತವಾಗಿಟ್ಟ ಗ್ರಾಮ, ಸರ್ವಧರ್ಮ ಸೌಹಾರ್ದಕ್ಕೆ ಪ್ರಸಿದ್ಧಿ

ಕೀಲಾರ: ಕಲೆಗಳ ತವರು, ಅಧ್ಯಾತ್ಮ ಬೇರು

Published:
Updated:
ಕೀಲಾರ: ಕಲೆಗಳ ತವರು, ಅಧ್ಯಾತ್ಮ ಬೇರು

ಮಂಡ್ಯ: ತೆಂಗಿನ ತೋಟ, ಬಾಳೆ, ಕಬ್ಬು, ಭತ್ತ, ಹಳ್ಳ, ಕೊಳ್ಳ, ತೊರೆ, ಕೆರೆಗಳ ನಡುವೆ ಅರಳಿರುವ ಐತಿಹಾಸಿಕ ‘ಕೀಲಾರ’ ಗ್ರಾಮ ಜನಪದ ಕಲೆಗಳ ತವರು. ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಹುಟ್ಟೂರು. ಈ ಹಳ್ಳಿಯ ಮಕ್ಕಳಿಗೆ ಜ್ಞಾನವೇ ಉಸಿರು, ಗ್ರಾಮಕ್ಕಿದೆ ಅಧ್ಯಾತ್ಮದ ಬೇರು.

ವ್ಯಕ್ತಿಯೊಬ್ಬ ಶಕ್ತಿಯಾದರೆ ಇಡೀ ಸಮಾಜ ಸುಧಾರಣೆಯ ಬೆಳಕು ಕಾಣುತ್ತದೆ ಎಂಬುದಕ್ಕೆ ಕೆ.ವಿ.ಶಂಕರಗೌಡ ಹಾಗೂ ಕೀಲಾರ ಗ್ರಾಮವೇ ಸಾಕ್ಷಿ. ಅಕ್ಷರಗಳ ಬೆಳಕನುಂಡ ಕೀಲಾರ ಗ್ರಾಮ ಸಾಂಸ್ಕೃತಿಕ ಶ್ರೀಮಂತ ಮನಸ್ಸುಗಳನ್ನೊಂದಿದೆ. ಹಣಕಾಸಿನ ವಿಷಯದಲ್ಲಿ ಎಲ್ಲರೂ ಶ್ರೀಮಂತರಲ್ಲ, ಆದರೆ ಕಲೆ, ಸಂಸ್ಕೃತಿ, ಅಧ್ಯಾತ್ಮದಲ್ಲಿ ಶ್ರೀಮಂತರು.

ಡೊಳ್ಳು ಕುಣಿತ, ಪೂಜಾ ಕುಣಿತ, ಮರಗಾಲು ನಡಿಗೆ, ಜನಪದ ಗೀತಾ ಗಾಯನ, ತತ್ವಪದ, ಭಜನೆ ಸೇರಿ 15ಕ್ಕೂ ಹೆಚ್ಚು ಕಲೆಗಳು ಗ್ರಾಮದಲ್ಲಿ ಜೀವಂತವಾಗಿವೆ. ಹಿರಿಯರು ಹಾಕಿಕೊಟ್ಟ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಯ ಯುವಕರು ಉಳಿಸಿ, ಬೆಳೆಸಿ, ಬೆಳಗುತ್ತಿದ್ದಾರೆ.

ತೊಂಬತ್ತರ ದಶಕದಲ್ಲಿ ಕೀಲಾರ ಗ್ರಾಮಕ್ಕೆ ಪ್ರಥಮವಾಗಿ ಡೊಳ್ಳು ಕುಣಿತ ಕಲೆ ಪದಾರ್ಪಣೆ ಮಾಡಿತು. ದಿವಂಗತ ಸಚ್ಚಿದಾನಂದ ಅವರ ಸಹಕಾರ, ಸಹಾಯದಲ್ಲಿ ಜನಪದ ವಾದ್ಯಗಳು ಊರೊಳಗೆ ಬಂದವು. ಶಿವಮೊಗ್ಗೆಯ ಹಿರಿಯ ಕಲಾವಿದರಾದ ಟಾಕಪ್ಪ– ಪೀಕಪ್ಪ ಅವರು ಗ್ರಾಮಕ್ಕೆ ಬಂದು ಯುವಕರಿಗೆ ಡೊಳ್ಳು ನುಡಿಸುವ ಕಲೆಯನ್ನು ಕರಗತಮಾಡಿಕೊಟ್ಟರು.

ಜಿಲ್ಲೆಯ ಇತಿಹಾಸದಲ್ಲಿ ಮೊದಲಬಾರಿಗೆ ಇಲ್ಲಿಂದಲೇ ಡೊಳ್ಳಿನ ನಾದ ವೈಭವ ಮೊಳಗತೊಡಗಿತು. ಕ್ರಮೇಣ ಹಲವು ಹಳ್ಳಿಗಳಲ್ಲಿ ಡೊಳ್ಳು ಕುಣಿತ ಕಲೆ ನೆಲೆಯೂರಿದ್ದು ಜಿಲ್ಲೆಯ ಮಹತ್ವ ಸಾಗರದಾಚೆಗೂ ಸಾಗಿದೆ.

ಕೆ.ವಿ.ಶಂಕರಗೌಡ ಸ್ಮಾರಕ ಯುವಕ ಸಂಘ, ಕ್ಷೀರಸಾಗರ ಮಿತ್ರ ಕೂಟ ಸಂಘಟನೆಗಳು ಗ್ರಾಮದ ಹಿರಿಯರ ಸಹಕಾರದೊಂದಿಗೆ ಯುವ ಮನಸ್ಸುಗಳನ್ನು ಒಂದು ಮಾಡುತ್ತಿವೆ. ಕೆ.ಆರ್‌.ಶಂಕರ್‌‌, ಕೆ.ಆರ್‌.ಜಯಶಂಕರ, ಕೆ.ಎಂ.ಮುದ್ದಪ್ಪ, ಕೃಷ್ಣೇಗೌಡ ಮುಂತಾದವರು ಯುವಕರನ್ನು ಸಂಘಟಿಸುತ್ತಿದ್ದಾರೆ.

2008ರಲ್ಲಿ 15 ಜನಪಪದ ಕಲಾ ಪ್ರಕಾರಗಳನ್ನು ಸಂಗಮಿಸಿ ಸಂಯೋಜಿಸಿದ ಜನಪದ ನೃತ್ಯಕ್ಕೆ ರಾಷ್ಟ್ರಪ್ರಶಸ್ತಿ ಸಂದಿದೆ. ಪಂಜಾಬ್‌ನ ಅಮೃತಸರದಲ್ಲಿ ನಡೆದ ಸ್ಪರ್ಧೆಯದಲ್ಲಿ ಕೀಲಾರದ ಪತಾಕೆ ರಾಷ್ಟ್ರಮಟ್ಟದಲ್ಲಿ ಹಾರಾಡಿದೆ. ಗ್ರಾಮದ 8 ಮಂದಿ ಕಲಾವಿದರು ಚೀನಾದಲ್ಲೂ ಜನಪದ ನೃತ್ಯ ಪ್ರದರ್ಶನ ನೀಡಿದ್ದಾರೆ.

ಯುವಜನೋತ್ಸವದಲ್ಲಿ ಸತತವಾಗಿ ನಾಲ್ಕು ಬಾರಿ ಬಹುಮಾನ ಪಡೆದಿದ್ದಾರೆ. ಪೌರಾಣಿಕ, ಸಾಮಾಜಿಕ ನಾಟಕ, ರಂಗಕುಣಿತಕ್ಕೂ ಹೆಸರುವಾಸಿಯಾದ ಗ್ರಾಮದಲ್ಲಿ ಕುಂಡಬೋರೇಗೌಡರ ರಾಮೇಗೌಡ, ಕಾಳಮ್ಮನ ಜವರೇಗೌಡ, ಮಾಲಣ್ಣನ ಶಿವರಾಮು ಮುಂತಾದ ಹಿರಿಯ ಕಲಾವಿದರಿದ್ದಾರೆ. ಕೆ.ಎಂ.ಕೃಷ್ಣೇಗೌಡ, ಕೆ.ಎನ್‌.ವೀರಯ್ಯ ಮುಂತಾದ ತತ್ವಪದ ಗಾಯಕರಿದ್ದಾರೆ. ಸಾತಂತ್ರ್ಯ ಹೋರಾಟದಲ್ಲೂ ಗ್ರಾಮದ ಪಾತ್ರವಿದ್ದು ಮೂಡಬಳೆ ಚನ್ನಯ್ಯ ಅವರು ಹೋರಾಟದ ನೆನಪುಗಳೊಂದಿಗೆ ಜೀವಿಸುತ್ತಿದ್ದಾರೆ.

ಮೂಲ ಸೌಲಭ್ಯ: ಗ್ರಾಮದ ಜನರು ಪ್ರಗತಿಯ ಪರ್ವವನ್ನೇ ಕಂಡಿದ್ದಾರೆ. ಶಂಕರಗೌಡರ ನೆನಪಿನಲ್ಲಿ ಬಯಲು ರಂಗಮಂದಿರವಿದೆ. ವಿಶ್ವೇಶ್ವರಯ್ಯ ಸ್ಮರಣೆಯಲ್ಲಿ ಪಿಯು ಕಾಲೇಜಿದೆ. ಸಮುದಾಯ ಆರೋಗ್ಯ ಕೇಂದ್ರ, ಇಂಡಿಯನ್‌ ಓವರಸೀಸ್‌ ಬ್ಯಾಂಕ್‌ ಶಾಖೆ, ಪ್ರಾಥಮಿಕ ಪತ್ತಿನ ಸಹಕಾರ ಸಂಘ, ಗ್ರಂಥಾಲಯ, ಸಾವಯವ ಆಹಾರ ಪದಾರ್ಥ ಮಾರಾಟ ಮಳಿಗೆಗಳಿವೆ. ಗ್ರಾಮದ ಕೆ.ಸಿ.ಶಿವರಾಮೇಗೌಡ ಅವರು ಸಾವಯವ ಕಬ್ಬು ಬೆಳೆದು ಪ್ರಗತಿಪರ ರೈತ ಪ್ರಶಸ್ತಿ ಪಡೆದಿದ್ದಾರೆ. ಗ್ರಾಮದಲ್ಲಿ 1,600 ಕುಟುಂಬಗಳಿದ್ದು 10,000ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. 13 ಸದಸ್ಯರ ಗ್ರಾಮ ಪಂಚಾಯಿತಿಯನ್ನು ಕೀಲಾರ ಹೊಂದಿದೆ.

‘ಕೀಲಾರ ಗ್ರಾಮವನ್ನು ಬಯಲು ಶೌಚ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗಿದ್ದು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಹಿರಿಯರ ಆಶೀರ್ವಾದದಿಂದ ಕೀಲಾರ ಪ್ರಗತಿ ಕಾಣುತ್ತಿದೆ. ಮುಸ್ಲಿಂ, ಕ್ರೈಸ್ತ ಧರ್ಮೀಯರು ಸೇರಿ 12ಕ್ಕೂ ಹೆಚ್ಚು ಸಮಾಜಗಳ ಜನರು ಸೌಹಾರ್ದದಿಮದ ಬದುಕುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್‌.ರಮೇಶ್‌ ಹೇಳಿದರು.

ಅಧ್ಯಾತ್ಮ ಕೇಂದ್ರ: 800 ವರ್ಷಗಳ ಇತಿಹಾಸ ಹೊಂದಿರುವ ಸೋಮೇಶ್ವರ ದೇವಾಲಯ ಸೇರಿ ಕಂಚಿನ ಮಾರಮ್ಮ, ತಿರುಮಲ ದೇವಾಲಯ, ಅರ್ಧನಾರೀಶ್ವರ ಪ್ರತಿಮೆ, ಪಾರ್ವತಿ ದೇಗುಲ, ಶಂಕರ ಮಠ, ನಿತ್ಯಾನಂದ ಆಶ್ರಮ ಮುಂತಾದ ಧಾರ್ಮಿಕ ಕೇಂದ್ರಗಳಿವೆ.

ಹಾಲಕೆರೆ ವೀರಭದ್ರೇಶ್ವರ ಕೊಂಡೋತ್ಸವವನ್ನು ಕೀಲಾರ ಜನರು ಬಲು ವಿಜೃಂಭಣೆಯಿಂದ ಆಚರಿಸುತ್ತಾರೆ. ಶಿವರಾತ್ರಿ, ಶರನ್ನವರಾತ್ರಿ ಉತ್ಸಗಳು ಬಲು ವೈಭವದಿಂದ ನಡೆಯುತ್ತವೆ.‘ನಮ್ಮ ಗ್ರಾಮಕ್ಕೆ ಧಾರ್ಮಿಕ ಪರಂಪರೆ ಇದೆ. ಹಬ್ಬ ಹರಿದಿನಗಳನ್ನು ಎಲ್ಲರೂ ಸೇರಿ ಆಚರಣೆ ಮಾಡುತ್ತೇವೆ. ಗ್ರಾಮದ ಅಭಿವೃದ್ಧಿಗೆ ಇದೇ ಕಾರಣ’ ಎಂದು ಹಿರಿಯರಾದ ಡಿ.ಶಿವರಾಮು ತಿಳಿಸಿದರು.

‘ಇದ್ದೂರ ಬಿಟ್ಟು ಬೇರೊಂದು ವಸತಿಯ ಹುಡುಕುತ ನಡೆ, ಬಂಡಿಯ ಕೀಲು ಮುರಿದ ಊರೇ ಕೀಲಾರ’ ಎಂದು ಗ್ರಾಮದ ಇತಿಹಾಸವನ್ನು ಜನಪದ ಲೇಖಕ ಕೆ.ಬಿ.ಪುಟ್ಟಸ್ವಾಮಿ ಅವರು ತತ್ವಪದವೊಂದರ ಮೂಲಕ ವಿವರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry