ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮದ ಜಾಗ ಬಿಟ್ಟು ಕೊಡುವುದು ಅಸಾಧ್ಯ: ಖಾದರ್

Last Updated 13 ಅಕ್ಟೋಬರ್ 2017, 9:06 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಕೊಡಿಪಾಡಿ ಗ್ರಾಮದ ಪಡ್ಪು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸುಮಾರು 40 ಮಂದಿ ದಲಿತರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಸದರಿ ಜಮೀನಿನಲ್ಲಿ ಒಂದಿಂಚು ಜಾಗವನ್ನು ಕೂಡ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ಸ್ಪಷ್ಟಪಡಿಸಿದ್ದಾರೆ.

ಡಿ.ಸಿ ಮನ್ನಾ ಜಾಗವೆಂದು ದಲಿತ ಸಮುದಾಯದವರು ಕೊಡಿಪ್ಪಾಡಿ ಗ್ರಾಮದ ಪಡ್ಪು ಎಂಬಲ್ಲಿರುವ ಗೇರು ನೆಡುತೋಪುವಿನ ಒಳಗಡೆ ಅಕ್ರಮವಾಗಿ ಟರ್ಪಾಲ್ ಅಳವಡಿಸಿದ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡಿ.ಸಿ. ಮನ್ನಾ ಜಮೀನನ್ನು ಮನೆ ನಿರ್ಮಿಸಲು ದಲಿತರಿಗೆ ನೀಡುವುದಕ್ಕೆ ನಮ್ಮ ಆಕ್ಷೇಪಣೆಯಿಲ್ಲ. ಆದರೆ, ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ನಮ್ಮ ಬಳಿಯಿದೆ. ಅರಣ್ಯ ಇಲಾಖೆ ಗೇರು ಅಭಿವೃದ್ಧಿ ನಿಗಮಕ್ಕೆ ಶೇರು ಬಂಡವಾಳವಾಗಿ ಗೇರು ನೆಡುತೋಪು ಬೆಳೆಸಲು ಈ ಸ್ಥಳವನ್ನು ಹಸ್ತಾಂತರಿಸಿದ್ದು, ಅದರಲ್ಲಿ ಗೇರು ಕೃಷಿ ನಡೆಸಲಾಗಿದೆ. ಈ ವಿಚಾರವನ್ನು ತಹಶೀಲ್ದಾರ್ ಅವರ ಗಮನಕ್ಕೂ ತರಲಾಗಿದೆ ಎಂದರು.

1985ರ ಏಪ್ರಿಲ್ 17ರ ಕರ್ನಾಟಕ ಅರಣ್ಯ ಕಾಯಿದೆಯ ಎಫ್‍ಎಫ್‌ಡಿ 68 ಮತ್ತು ಎಫ್‍ಎ 17ರ ಅಡಿಯಲ್ಲಿ 5.90 ಎಕರೆ ಜಮೀನು ರಕ್ಷಿತಾರಣ್ಯ ಪ್ರದೇಶವೆಂದು ಘೋಷಣೆಯಾಗಿದೆ. ಸದರಿ ಜಮೀನಿನ ಪಹಣಿ ಪತ್ರವೂ ಅರಣ್ಯ ಇಲಾಖೆಯ ಹೆಸರಿನಲ್ಲಿದೆ. ಬಳಿಕ ಸರ್ಕಾರದ ಆದೇಶದಂತೆ ಎಫ್‍ಎಫ್‌ಡಿ 37, ಎಫ್‌ಟಿಸಿ 78ರಂತೆ ಕರ್ನಾಟಕ ಅರಣ್ಯ ಇಲಾಖೆಯಿಂದ ಗೇರು ಅಭಿವೃದ್ಧಿ ನಿಗಮಕ್ಕೆ ಈ ಜಾಗ ನೆಡುತೋಪು ಬೆಳೆಸಲು ಹಸ್ತಾಂತರಗೊಂಡಿದೆ.

‘ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ರಕ್ಷಿತಾರಣ್ಯ ಹಾಗೂ ಗೇರು ಅಭಿವೃದ್ಧಿ ನಿಗಮದ ಹೊರತಾದ ಸರ್ಕಾರಿ ಜಮೀನುಗಳಿದ್ದಲ್ಲಿ ಅದನ್ನು ನೀಡುವುದಾಗಿ ತಿಳಿಸಿದ್ದರು. ಇದಕ್ಕೆ ಪೂರಕವಾಗಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚನೆಯೂ ಆಗಿದೆ.

ಈ ಜಾಗದ ವಿವಾದವನ್ನು ಕಂದಾಯ ಸಚಿವರು, ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ. ಗೇರು ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ ಪ್ರಕಾಶ್ ನಟಾಲ್ಕರ್, ಸದಾಶಿವ ಭಟ್, ಪುತ್ತೂರು ಘಟಕದ ನೆಡುತೋಪು ಅಧೀಕ್ಷಕ ಸುರೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT