ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಬಾರ ಈರುಳ್ಳಿಗೂ ಬೀಜದ ಭಾಗ್ಯ

Last Updated 13 ಅಕ್ಟೋಬರ್ 2017, 9:08 IST
ಅಕ್ಷರ ಗಾತ್ರ

ಮೈಸೂರು: ಸಾಂಬಾರ ಈರುಳ್ಳಿ ಬೆಳೆಯುವ ರೈತರಿಗೆ ಸಿಹಿ ಸುದ್ದಿ. ಇಲ್ಲಿಯವರೆಗೆ ಈರುಳ್ಳಿ ಗೆಡ್ಡೆ ಬಿತ್ತಿ ಗೆಡ್ಡೆಯನ್ನೇ ಬೆಳೆಯುತ್ತಿದ್ದವರು ಇನ್ನು ಮುಂದೆ ಬೀಜ ಬಿತ್ತಿ ಗೆಡ್ಡೆ ಬೆಳೆಯಬಹುದು. ತಾಲ್ಲೂಕಿನ ಇಲವಾಲದಲ್ಲಿರುವ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ತೋಟಗಾರಿಕೆ ಮಹಾವಿದ್ಯಾಲಯ ಇಂಥ ಹೊಸ ಪ್ರಯೋಗಕ್ಕೆ ಕೈಹಾಕಿದೆ.

ಕೊಯಮತ್ತೂರು ಮೂಲದ ‘ಕೋ–ಫೈವ್‌ (KO-5)‘ ಎಂಬ ಬೀಜವನ್ನು ರಾಜ್ಯಕ್ಕೆ ಪರಿಚಯಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ನೀಡುವ ತಳಿ ಇದಾಗಿದೆ. ದಪ್ಪ ಈರುಳ್ಳಿಯ ಬೀಜಗಳ ಬಗ್ಗೆ ಈಗಾಗಲೇ ರೈತರಿಗೆ ಪರಿಚಯ ಇದೆ. ಇದು ಒಂದು ಬೀಜದಿಂದ ಒಂದೇ ಗೆಡ್ಡೆ ಬೆಳೆಯುವಂಥದ್ದು. ನಾಟಿ ಈರುಳ್ಳಿಗೆ ಈಗ ಹೊಸದಾಗಿ ಬೀಜ ಸಂಶೋಧನೆ ಮಾಡಲಾಗಿದೆ.‌

‘ನಾಟಿ ಈರುಳ್ಳಿಯ ಒಂದು ಗೆಡ್ಡೆ ಬಿತ್ತಿದರೆ 6 ಅಥವಾ 8 ಗೆಡ್ಡೆ ಫಸಲು ಬರುತ್ತದೆ. ಹೊಸ ತಳಿಯ ಒಂದು ಬೀಜದಿಂದ ಕನಿಷ್ಠ 12ರಿಂದ 15 ಗೆಡ್ಡೆ ಪಡೆಯಬಹುದು. ಅಲ್ಲದೇ, ಬಿತ್ತನೆಗಾಗಿ ಬರುವ ಗೆಡ್ಡೆಗಳ ದರವೂ ಅಧಿಕ. ಸದ್ಯ ಚಾಮರಾಜನಗರ ಜಿಲ್ಲೆಯ ತೆರಕನಾಂಬಿ ಸಂತೆಯಲ್ಲಿ ಸಿಗುವ ಒಂದು ಕ್ವಿಂಟಲ್‌ ಬಿತ್ತನೆ ಗೆಡ್ಡೆಗೆ ₹ 4ರಿಂದ 8 ಸಾವಿರದವರೆಗೂ ಬೆಲೆ ಇದೆ. ಎಕರೆಗೆ ನಾಲ್ಕು ಕ್ವಿಂಟಲ್‌ ಗೆಡ್ಡೆ ಅಗತ್ಯ.

ಅಂದರೆ, ಅಂದಾಜು ₹ 25,000 ವೆಚ್ಚ. ಈರುಳ್ಳಿ ಬೀಜ ಬಿತ್ತುವುದಾದರೆ ಎಕರೆಗೆ ಒಂದು ಅಥವಾ ಒಂದೂವರೆ ಕೆ.ಜಿ ಬೀಜ ಸಾಕು. ಇದರ ದರ ಗರಿಷ್ಠ ₹ 2,500. ಹೆಚ್ಚೆಂದರೆ ಎಕರೆಗೆ ₹ 3ರಿಂದ 4 ಸಾವಿರ ವೆಚ್ಚ ಮಾಡಿದರೆ ಸಾಕು. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯುವುದು ಇದರ ಉದ್ದೇಶ’ ಎನ್ನುತ್ತಾರೆ ತೋಟಗಾರಿಕಾ ಮಹಾವಿದ್ಯಾಲಯದ ಬೀಜವಿಜ್ಞಾನಿ ಎಚ್‌.ಎಂ.ಪಲ್ಲವಿ.

ಸದ್ಯ ತಮಿಳುನಾಡಿನಿಂದ ಬರುವ ಗೆಡ್ಡೆಯನ್ನೇ ಖರೀದಿ ಮಾಡಿ ಬಿತ್ತುತ್ತಿದ್ದಾರೆ. ಅದರ ದರ, ಗುಣಮಟ್ಟ ಯಾವುದೂ ನಿರ್ದಿಷ್ಟವಾಗಿಲ್ಲ. ಮೇ ಅಥವಾ ಜೂನ್‌ನಲ್ಲಿ ಬಿತ್ತನೆ ಮಾಡಿದರೆ 70 ದಿನಗಳಲ್ಲಿ ಬೆಳೆ ಬರುತ್ತದೆ.

ಆದರೆ, ಬೀಜವನ್ನು ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಬಿತ್ತನೆ ಮಾಡಬಹುದು. ಇದು ಗರಿಷ್ಠ 90 ದಿನಗಳಲ್ಲಿ ಫಸಲು ನೀಡುತ್ತದೆ. ಎಕರೆಗೆ ಸುಮಾರು 80ರಿಂದ 90 ಕ್ವಿಂಟಲ್‌ ಬೆಳೆಯುತ್ತದೆ (ಗೆಡ್ಡೆ ಬೇಸಾಯದಿಂದ 60 ಕ್ವಿಂಟಲ್‌ ಬೆಳೆದ ಉದಾಹರಣೆ ಇವೆ). ತಿಳಿಗೆಂಪು ಬಣ್ಣದಲ್ಲಿ ಬರುವ ಈ ಗೆಡ್ಡೆ ದುಂಡಗಿದ್ದು ಗುಣಮಟ್ಟದ್ದಾಗಿರುತ್ತವೆ ಎನ್ನುತ್ತಾರೆ.

16 ಎಕರೆಯಲ್ಲಿ ಪ್ರಾತ್ಯಕ್ಷಿಕೆ: ‘ಚಾಮರಾಜನಗರ ಜಿಲ್ಲೆಯಲ್ಲಿ ಸಾಂಬಾರ ಈರುಳ್ಳಿ ಬೆಳೆಗೆ ಹೆಚ್ಚು ಆಸಕ್ತಿ ಇದೆ. ಹೀಗಾಗಿ, ಇಲ್ಲಿನ ರೈತರಿಗೇ ಮೊದಲು ಬೀಜ ಬಿತ್ತನೆಯ ಪರಿಚಯ ಮಾಡಲು ಮುಂದಾಗಿದ್ದೇವೆ. ಗುಂಡ್ಲುಪೇಟೆ ತಾಲ್ಲೂಕಿನ ವಿವಿಧೆಡೆ 16 ಎಕರೆ ಜಮೀನು ಪಡೆದು ಅಲ್ಲಿ ಈರುಳ್ಳಿ ಬೀಜ ಬಿತ್ತನೆ ಮಾಡಿ, ರೈತರಿಗೆ ಭರವಸೆ ಮೂಡಿಸಲಾಗುವುದು’ ಎಂದು ಅವರು ತಿಳಿಸಿದರು.

‘ಬಿತ್ತನೆಗೆ ಮುಂದೆ ಬರುವ ರೈತರಿಗೆ ಬೀಜ, ಗೊಬ್ಬರ, ಬೇಸಾಯಕ್ಕೆ ಬೇಕಾದ ತರಬೇತಿ, ತಾಂತ್ರಿಕ ಸಹಾಯವನ್ನೂ ನೀಡಲಾಗುತ್ತದೆ. ಮೊದಲು ಬಿತ್ತನೆಗೆ ಪ್ರೋತ್ಸಾಹ ನೀಡಿ, ಮುಂದಿನ ದಿನಗಳಲ್ಲಿ ಇಲ್ಲಿಯೇ ಬೀಜೋತ್ಪಾದನೆ ಮಾಡುವುದು ನಮ್ಮ ಗುರಿ’ ಎಂದು ಹೇಳಿದರು.

ಚಾಮರಾಜನಗರ, ಮಂಡ್ಯ, ಮೈಸೂರು, ಬೆಳಗಾವಿ, ಮಂಗಳೂರು, ಬಾಗಲಕೋಟೆ ಸೇರಿದಂತೆ ಈರುಳ್ಳಿಗೆ ಹದವಾದ ಮಣ್ಣಿರುವಲ್ಲಿ ಇದು ಫಲಕಾರಿಯಾಗಲಿದೆ ಎಂಬುದು ವಿಜ್ಞಾನಿಗಳ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT