ಭಾನುವಾರ, ಸೆಪ್ಟೆಂಬರ್ 22, 2019
23 °C

ಮನೆಗಳಿಗೆ ಮತ್ತೆ ನುಗ್ಗಿದ ನೀರು

Published:
Updated:
ಮನೆಗಳಿಗೆ ಮತ್ತೆ ನುಗ್ಗಿದ ನೀರು

ಮೈಸೂರು: ನಗರದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಡುವಾರಹಳ್ಳಿಯ ಮಹದೇಶ್ವರ ದೇಗುಲದ ಸಮೀಪದ 7 ಮನೆಗಳಿಗೆ ನೀರು ನುಗ್ಗಿತು. ಆಕ್ರೋಶಗೊಂಡ ಸ್ಥಳೀಯರು ಹುಣಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಂಜೆ 7 ಗಂಟೆಗೆ ಬಿರುಗಾಳಿ ಸಹಿತ ಆರಂಭವಾದ ಮಳೆ ಸತತ ಎರಡು ಗಂಟೆ ಸುರಿಯಿತು. ಆರಂಭದ 45 ನಿಮಿಷದ ಬಿರುಸಿನ ಮಳೆಗೆ ಚರಂಡಿಗಳು ಉಕ್ಕಿ ಹರಿದವು. ಚರಂಡಿಯಲ್ಲಿ ಕಸ ಕಟ್ಟಿಕೊಂಡು ದೇವರಾಜ ಮಾರು ಕಟ್ಟೆಗೂ ನೀರು ನುಗ್ಗಿತು. ಶ್ರೀರಾಂಪುರ ನಿವಾಸಿಗಳಲ್ಲಿಯೂ ಮಳೆ ನೀರು ಭೀತಿ ಸೃಷ್ಟಿಸಿತು. ಅಶ್ವಿನಿ ಛತ್ರದ

ಬಳಿಯ ಹಲವು ಮನೆಗಳಿಗೆ ನೀರು ನುಗ್ಗಿತು.

ಪಡುವಾರಹಳ್ಳಿಯ ಹಲವು ಮನೆಗಳಲ್ಲಿ ಎದೆಯವರೆಗೂ ನೀರು ನಿಂತಿತ್ತು. ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದ ಕತ್ತಲಲ್ಲಿ ನಿವಾಸಿಗಳು ಪರದಾಡಿದರು. ಪಾಲಿಕೆಯ ‘ಅಭಯ’ ತಂಡ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಿದರು. ರಕ್ತದ ಒತ್ತಡ ಹಾಗೂ ಗಾಬರಿಯಿಂದ ಅಸ್ವಸ್ಥಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕ ವಾಸು ಪಡುವಾರಹಳ್ಳಿಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿದರು.

ರಸ್ತೆ ತಡೆದು ಪ್ರತಿಭಟನೆ: ‘ಜಯಲಕ್ಷ್ಮಿಪುರಂ, ಕಾಳಿದಾಸ ರಸ್ತೆ, ಒಂಟಿಕೊಪ್ಪಲು ಸೇರಿ ವಿವಿಧ ಬಡಾವಣೆಯ ನೀರು ಪಡುವಾರಹಳ್ಳಿಯ ಮೂಲಕ ಕುಕ್ಕರಹಳ್ಳಿಗೆ ಸೇರುತ್ತದೆ. ಮಹಾರಾಣಿ ಕಾಲೇಜು ಹಾಗೂ ಹಾಸ್ಟೆಲ್‌ ನೂತನ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ರಾಜಕಾಲುವೆ ಮುಚ್ಚಿಹೋಗಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘15 ದಿನಗಳಲ್ಲಿ ಎರಡನೇ ಬಾರಿಗೆ ಮಳೆ ನೀರು ಮನೆಗಳಿಗೆ ನುಗ್ಗಿದೆ. ಸೆ.26ರಂದು ರಾತ್ರಿಯಿಡಿ ನಿದ್ದೆ ಬಿಟ್ಟು ನೀರು ಹೊರಗೆ ಹಾಕುವಲ್ಲಿ ಶ್ರಮಿಸಿದ್ದೆವು. ಸ್ಥಳಕ್ಕೆ ಧಾವಿಸಿದ ಪಾಲಿಕೆ ಅಧಿಕಾರಿಗಳು ಚರಂಡಿ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಕಾಮಕಾರಿ ಕೈಗೆತ್ತಿಕೊಂಡಿಲ್ಲ’ ಎಂದು ದೂರಿದರು.

ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಿದರು. ಪ್ರತಿಭಟನೆಯಿಂದ ಸುಮಾರು ಅರ್ಧ ಗಂಟೆ ಹುಣಸೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು.

ವಸ್ತು‍ಪ್ರದರ್ಶನ ಜಲಾವೃತ: ರಾಜಕಾಲುವೆ ಉಕ್ಕಿ ದೊಡ್ಡಕೆರೆ ಮೈದಾನಕ್ಕೆ ಹರಿದ ಪರಿಣಾಮ ವಸ್ತುಪ್ರದರ್ಶನ ಮೈದಾನ ಜಲಾವೃತಗೊಂಡಿತ್ತು. ಇದರಿಂದ ಹಲವು ಮಳಿಗೆಗಳಿಗೆ ನೀರು ನುಗ್ಗಿತು. ವಸ್ತುಪ್ರದರ್ಶನ ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರು ಸಮಸ್ಯೆಗೆ ಸಿಲುಕಿದರು. ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕರನ್ನು ಸಾರ್ವಜನಿಕರು ರಕ್ಷಿಸಿದರು.

ದೇವರಾಜ ಮೊಹಲ್ಲಾದ ಕಾಟಪ್ಪನ ಗಲ್ಲಿಯಲ್ಲಿ ಚರಂಡಿ ಕಟ್ಟಿಕೊಂಡಿದ್ದರಿಂದ ಕೆಲ ಮಳಿಗೆಗಳಿಗೆ ನೀರು ನುಗ್ಗಿತು. ಚಿಕ್ಕಗಡಿಯಾರದ ಬಳಿ ನೀರು ನಿಂತಿತ್ತು. ಇದರಿಂದ ವ್ಯಾಪಾರಸ್ಥರು ಸಮಸ್ಯೆ ಅನುಭವಿಸಿದರು.

ಚಾಮರಾಜಜೋಡಿ ರಸ್ತೆಯ ಗಾಯತ್ರಿ ಚಿತ್ರಮಂದಿರದ ಸಮೀಪ ಮಳೆನೀರು ರಸ್ತೆಯ ಮೇಲೆ ಹರಿಯಿತು. ನೀರಿನ ರಭಸದಿಂದಾಗಿ ಈ ಮಾರ್ಗದಲ್ಲಿ ಸಂಚಾರ ಸಮಸ್ಯೆ ನಿರ್ಮಾಣವಾಗಿತ್ತು. ‘ಅಭಯ’ ತಂಡದ ಸಿಬ್ಬಂದಿ ಧಾವಿಸಿ ನೀರು ಸರಾಗವಾಗಿ ಹರಿಯುವಂತೆ ದುರಸ್ತಿ ಮಾಡಿದರು. ಮಾನಸಗಂಗೋತ್ರಿಯ ಹಾಸ್ಟೆಲ್‌ ಗಳಿಗೂ ನೀರು ನುಗ್ಗಿತ್ತು. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

Post Comments (+)