ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಮಂಡಳಿ-- ರೈತರಿಗೆ ಸಾಂತ್ವನ ನಿವೇಶನ

Last Updated 13 ಅಕ್ಟೋಬರ್ 2017, 9:28 IST
ಅಕ್ಷರ ಗಾತ್ರ

ರಾಮನಗರ: ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಿಸಿರುವ ಸುಭಾಷ್ ಚಂದ್ರಬೋಸ್ ವಸತಿ ಬಡಾವಣೆಗೆ ಭೂಮಿಯನ್ನು ನೀಡಿದ ರೈತರಿಗೆ ಸಾಂತ್ವನ ನಿವೇಶನ ನೀಡಲು ಒಪ್ಪಿಗೆ ಸೂಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್‌ ನಟರಾಜು ಸ್ವಾಗತಿಸಿದರು.

‘ಬಿಡದಿ ಹೋಬಳಿಯ ಕಾಕರಾಮನಹಳ್ಳಿ, ಬೋರೇಹಳ್ಳಿ, ಮುದ್ದಾಪುರಕರೇನಹಳ್ಳಿ ಭಾಗದ 200ಕ್ಕೂ ರೈತರಿಂದ ಕರ್ನಾಟಕ ಗೃಹ ಮಂಡಳಿಯು ಪ್ರತಿ ಎಕರೆಗೆ ₹26 ಲಕ್ಷ ನಿಗದಿಗೊಳಿಸಿ 490 ಎಕರೆ ಜಮೀನನ್ನು ಖರೀದಿಸಿತ್ತು, ಆದರೆ ಈ ಪರಿಹಾರ ಹಣ ಸಾಕಾಗುವುದಿಲ್ಲ, ರೈತರಿಗೆ ನಿವೇಶನ ನೀಡಬೇಕೆಂದು ಈ ಭಾಗದ ರೈತರು ಉದ್ಘಾಟನಾ ಸಮಾರಂಭದಲ್ಲಿ ಪ್ರತಿಭಟನೆ ನಡೆಸಿದ್ದರು’ ಎಂದರು.

‘ಅಂದಿನ ವಸತಿ ಸಚಿವರಾಗಿದ್ದ ವಿ.ಸೋಮಣ್ಣ ಉದ್ಘಾಟನೆ ವೇಳೆ ಭರವಸೆ ನೀಡಿದ್ದರು, ನಂತರ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಮತ್ತು ಕೃಷ್ಣಪ್ಪ ಅವರ ಪರಿಶ್ರಮ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಸಕ್ತಿಯಿಂದ ಇಂದು ಒಳ್ಳೆಯ ತೀರ್ಮಾನವನ್ನು ಸಚಿವ ಸಂಪುಟ ತೆಗೆದುಕೊಂಡಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಾಂತ್ವನ ನಿವೇಶನ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಆದರೆ ಈ ನಿವೇಶನ ಪಡೆಯಲು ಅರ್ಹ ರೈತರು ಶೇ 25 ರಷ್ಟು ಅಭಿವೃದ್ದಿ ಶುಲ್ಕ ಪಾವತಿಸಬೇಕು ಎಂದು ಸೂಚಿಸಿದ್ದಾರೆ. ಇದು ರೈತರಿಗೆ ಹೊರೆಯಾಗಲಿದ್ದು ಶೇ15 ರಷ್ಟು ಶುಲ್ಕ ಪಾವತಿಸಿ ನಿವೇಶನ ಪಡೆಯಲು ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
ಅಭಿನಂದನಾ ಕಾರ್ಯಕ್ರಮ ಇಂದು: ಮಾಗಡಿಯ ಕೋಟೆ ಮೈದಾನದಲ್ಲಿ ಇದೇ 13ರಂದು ಸಚಿವ ಎಚ್.ಎಂ. ರೇವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಸಿ.ಎಂ. ಲಿಂಗಪ್ಪ, ಸಿ.ಎಂ. ಇಬ್ರಾಹಿಂ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ವ್ಯಕ್ತಿಗಿಂತ ಪಕ್ಷ ಮುಖ್ಯ: ಮಾಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಷಯ ಹೈಕಮಾಂಡ್‍ ಗೆ ಬಿಟ್ಟಿದ್ದು, ನಾನು ಪಕ್ಷ ವಹಿಸಿರುವ ಜವಬ್ದಾರಿಯನ್ನು ನಿಭಾಯಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಪಕ್ಷದ ಸಿದ್ಧಾಂತ ಮತ್ತು ತತ್ವದಲ್ಲಿ ನಂಬಿಕೆ ಇರುವ ನನಗೆ ಅಧಿಕಾರ ಮುಖ್ಯವಲ್ಲ, ತಾಳ್ಮೆ ಇದ್ದರೆ ಅಧಿಕಾರ ಸಿಗಲಿದೆ ಎಂಬ ಆಶಾಭಾವನೆ ನನ್ನದು. ಎ.ಮಂಜು ಕಾಂಗ್ರೆಸ್ ಪಕ್ಷ ಸಂಘಟಿಸುವಲ್ಲಿ ಶ್ರಮಿಸಿದ್ದಾರೆ. ಆದರೆ ತಾಳ್ಮೆಯಿಂದ ಇದ್ದಿದ್ದರೆ ಪಕ್ಷದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿದ್ದವು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆರೆ ತೂಬುಗಳನ್ನು ಸರಿಪಡಿಸಿ: ‘ಈಚೆಗೆ ಚೆನ್ನಾಗಿ ಮಳೆಯಾಗುತ್ತಿರುವುದರಿಂದ ಕೆರೆಗಳು ಭರ್ತಿಯಾಗಿ ಕೋಡಿ ಬೀಳುತ್ತಿವೆ. ಜಿಲ್ಲಾಡಳಿತ ಕೂಡಲೆ ಕೆರೆಕಟ್ಟೆಗಳ ತೂಬುಗಳನ್ನು ದುರಸ್ಥಿಗೊಳಿಸಬೇಕು. ಇಲ್ಲದಿದ್ದರೆ ಕೆರೆಕಟ್ಟೆಗಳಲ್ಲಿ ಭರ್ತಿಯಾಗಿರುವ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತದೆ’ ಎಂದು ತಿಳಿಸಿದರು.
ಬಿಡದಿ ಪುರಸಭೆಯ ನಾಮನಿರ್ದೇಶಿತ ಸದಸ್ಯ ರವಿಕುಮಾರ್, ಮುಖಂಡರಾದ ಹೊಂಬಯ್ಯ, ಹೇಮಂತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT