50 ಎಕರೆಯ ಬೆಳೆ ನಾಶ, ಬದುಕು ಅತಂತ್ರ

ಶನಿವಾರ, ಮೇ 25, 2019
28 °C

50 ಎಕರೆಯ ಬೆಳೆ ನಾಶ, ಬದುಕು ಅತಂತ್ರ

Published:
Updated:
50 ಎಕರೆಯ ಬೆಳೆ ನಾಶ, ಬದುಕು ಅತಂತ್ರ

ಸಾತನೂರ (ಕನಕಪುರ): ಕಾಡು ಹಂದಿ ಮತ್ತು ಕಾಡಾನೆಗಳು ದಾಳಿ ನಡೆಸಿ ರೈತರ ಜಮೀನುಗಳಲ್ಲಿ ಲಕ್ಷಾಂತರ ರೂಪಾಯಿ ಬೆಳೆಯನ್ನು ನಾಶಪಡಿಸಿರುವ ಘಟನೆ ತಾಲ್ಲೂಕಿನ ಸಾತನೂರು ಹೋಬಳಿ ಬೂಹಳ್ಳಿ ಮತ್ತು ದೂಂತೂರು ಗ್ರಾಮದಲ್ಲಿ ನಡೆದಿದೆ.

ಬೂಹಳ್ಳಿ ಗ್ರಾಮದ ರಾಮಕೃಷ್ಣೇ ಗೌಡ, ಶಿವಸ್ವಾಮಿ, ಶಿವಮಾದಪ್ಪ, ಚಂದ್ರಶೇಖರ್‌, ವರದೇಗೌಡ, ಕೆಂಪಮ್ಮ, ಚನ್ನಬಸಪ್ಪ, ಕರಿಯಪ್ಪ ಮೊದಲಾದ ರೈತರು ಬಿತ್ತನೆ ಮಾಡಿದ್ದ ರಾಗಿ ಮತ್ತಿತರ ಬೆಳೆಯನ್ನು ಕಾಡು ಹಂದಿಗಳು ನಾಶಗೊಳಿಸಿವೆ.

ಗ್ರಾಮವು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವುದರಿಂದ ಕಾಡು ಪ್ರಾಣಿ ಮತ್ತು ಕಾಡಾನೆಗಳ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿದ್ದು ರೈತರ ಬದುಕನ್ನು ಅತಂತ್ರಗೊಳಿಸಿವೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಿಲ್ಲದೆ ಭೂಮಿಯನ್ನು ಪಾಳು ಬಿಡಲಾಗಿತ್ತು.

ಈ ಬಾರಿ ಚೆನ್ನಾಗಿ ಮಳೆಯಾಗಿರುವುದರಿಂದ ಆರಂಭದಲ್ಲೇ ಹೊಲವನ್ನು ಉತ್ತುಬಿತ್ತನೆ ಮಾಡಲಾಗಿದೆ. ಮಳೆಯು ಚೆನ್ನಾಗಿ ಆಗುತ್ತಿರುವುದರಿಂದ ಫಸಲು ಸಹ ಉತ್ತಮವಾಗಿ ಬಂದಿದ್ದು ಇನ್ನೆರಡು ತಿಂಗಳಲ್ಲಿ ಕೈ ಸೇರಲಿದೆ. ಆದರೆ ಈಗಾಗಲೆ ಕಾಡು ಹಂದಿಗಳು ಹಿಂಡು ಹಿಂಡಾಗಿ ಹೊಲಗಳಿಗೆಬರುತ್ತಿದ್ದು ಹೊಲದಲ್ಲಿರುವ ಕೊನ್ನಾರೆಗೆಡ್ಡೆಯನ್ನು ತಿನ್ನಲು ಮಣ್ಣು ಮೀಟಿ ಫಸಲನ್ನು ನಾಶ ಮಾಡುತ್ತಿವೆ ಎಂದು ರೈತ ಶಿವಸ್ವಾಮಿ ತಿಳಿಸಿದ್ದಾರೆ.

ಗ್ರಾಮದ ಮುಖಂಡ ಚಂದ್ರಶೇಖರ್‌ ಮಾತನಾಡಿ, ಕಾಡು ಹಂದಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು ಜಮೀನುಗಳಿಗೆ ನುಗ್ಗಿ ರಾಗಿ ಫಸಲು ಮತ್ತು ಹುರುಳಿಯನ್ನು ನಾಶ ಮಾಡುತ್ತಿವೆ. ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆ ನಾಶ ಮಾಡಿದ್ದು ಲಕ್ಷಾಂತರ ರೂಪಾಯಿಯಷ್ಟು ರೈತರಿಗೆ ನಷ್ಟವಾಗಿದೆ. ಈಗಾಗಲೆ ಕೃಷಿಯ ಆಸಕ್ತಿಯನ್ನು ಕಳೆದು ಕೊಂಡಿರುವ ರೈತರು ಕಾಡುಪ್ರಾಣಿಗಳ ದಾಳಿಯಿಂದ ಕಂಗೆಟ್ಟು ಹೋಗಿದ್ದಾರೆ ಎಂದರು.

ದೂಂತೂರು ಗ್ರಾಮದಲ್ಲೂ ಕಾಡಾನೆಗಳು ದಾಳಿ ನಡೆಸಿ ತಿಮ್ಮದಾಸ್‌ ಎಂಬುವರಿಗೆ ಸೇರಿದ 25 ವರ್ಷದ 11 ತೆಂಗಿನ ಮರಗಳನ್ನು ನೆಲಕ್ಕುರುಳಿಸಿ ಧ್ವಂಸ ಮಾಡಿವೆ. ಇದರಿಂದ ಕುಟುಂಬಕ್ಕೆ ಆಧಾರವಾಗಿದ್ದ ತೆಂಗಿನ ಮರನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಸಂಬಂಧ ವನ್ಯ ಜೀವಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ ತಿಮ್ಮದಾಸ್‌ ಆರೋಪಿಸಿದ್ದಾರೆ.

ಮುತ್ತತ್ತಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ 10ಕ್ಕೂ ಹೆಚ್ಚು ಗ್ರಾಮಗಳು ಕಾಡು ಪ್ರಾಣಿಗಳ ಸಮಸ್ಯೆಯಿಂದ ನಲುಗಿವೆ. ಇಲ್ಲಿನ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗಿದ್ದು ಜೀವನ ಅರಸಿ ವಲಸೆ ಹೋಗುತ್ತಿದ್ದಾರೆ ಎಂದರು.

ನಿಯಂತ್ರಣ ಕಷ್ಟ: ರೈತರ ಜಮೀನುಗಳಿಗೆ ಜಮೀನಿಗೆ ನುಗ್ಗುತ್ತಿರುವ ಕಾಡುಪ್ರಾಣಿಗಳ ತಡೆಗೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದರೂ ಕಾಡು ಪ್ರಾಣಿಗಳು ಜಮೀನುಗಳಿಗೆ ನುಗ್ಗುತ್ತಿವೆ, ಅರಣ್ಯ ವ್ಯಾಪ್ತಿ ದೊಡ್ಡದಿರುವುದರಿಂದ ನಿಯಂತ್ರ ಕಷ್ವವಾಗುತ್ತಿದೆ ಹಲಗೂರು ವನ್ಯಜೀವಿ ವಲಯದ ಆರ್‌.ಎಫ್‌.ಒ. ಕಿರಣ್‌ ಕುಮಾರ್‌ ಹೇಳಿದ್ದಾರೆ.

ತರೂ ಮತ್ತು ಬೂಹಳ್ಳಿ ಭಾಗದಲ್ಲಿ ಕಾಡು ಪ್ರಾಣಿಗಳು ದಾಳಿ ನಡೆಸಿದ್ದರೆ ಅದನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟ ವಲಯ ಅಧಿಕಾರಿ ಅಗತ್ಯ ಕ್ರಮಕೈಗೊಂಡು ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry