ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮತ ಸಿಗದಿದ್ದರೆ ವಿಪಕ್ಷದಲ್ಲಿರುತ್ತೇವೆ, ಸಮ್ಮಿಶ್ರ ಸರ್ಕಾರ ಮಾಡಲ್ಲ: ಎಚ್.ಡಿ. ದೇವೇಗೌಡ

Last Updated 13 ಅಕ್ಟೋಬರ್ 2017, 10:46 IST
ಅಕ್ಷರ ಗಾತ್ರ

ಹಾಸನ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಸಿಗದಿದ್ದರೆ ವಿಪಕ್ಷದಲ್ಲಿ ಕೂರುತ್ತೇವೆಯೇ ಹೊರತು ಯಾರೊಂದಿಗೂ ಸೇರಿ ಸಮ್ಮಿಶ್ರ ಸರ್ಕಾರ ಮಾಡುವುದಿಲ್ಲ ಎಂದು ಜೆಡಿಎಸ್‌ ಸಂಸದ ಹಾಗೂ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ನಡೆಸಿ ಈಗಾಗಲೇ ಸಾಕಷ್ಟು ನೊಂದಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

‘ನಾನು ಶ್ರೀನಿವಾಸ್ ಪ್ರಸಾದ್‌ರನ್ನು ಜೆಡಿಎಸ್‌ಗೆ ಕರೆತಂದಿದ್ದಾಗ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಈಗ ಸಿದ್ದರಾಮಯ್ಯ ವಿರುದ್ಧ ನನ್ನ ಹೋರಾಟ ಎಂದು ಪ್ರಸಾದ್ ಹೇಳುತ್ತಿದ್ದಾರೆ. ಅವರಿಗೆ ನಂಜನಗೂಡು ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಸಲಹೆ ನೀಡಿದ್ದೆ’ ಎಂದು ದೇವೇಗೌಡ ತಿಳಿಸಿದ್ದಾರೆ.

ಸಿ.ಪಿ.ಯೋಗೇಶ್ವರ್‌ ಜೆಡಿಎಸ್‌ ಸೇರಲಿದ್ದಾರೆ ಎನ್ನುವ ವಿಚಾರ ಕುರಿತು, ಯೋಗೇಶ್ವರ್‌ ನಮ್ಮ ಪಕ್ಷ ಸೇರಲಿರುವ ಬಗ್ಗೆ ನನಗೆ ಗೊತ್ತಿಲ್ಲ ಈ ಕುರಿತು ನಾನು ಮಾತನಾಡಿಲ್ಲ ಎಂದಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಮಕ್ಕಳ ಕುರಿತು ಮಾತನಾಡಿದ ದೇವೇಗೌಡ, ‘ನಿಖಿಲ್ ಒಬ್ಬ ನಟ. ಅವನ‌ ಚರಿಷ್ಮಾ ಪಕ್ಷಕ್ಕೆ ಅನುಕೂಲ ಆಗಲಿದೆ ಎನ್ನುವುದಾದರೆ ಏಕೆ ಬಳಕೆ ಮಾಡಿಕೊಳ್ಳಬಾರದು? ಪಕ್ಷಕ್ಕೆ ಶಕ್ತಿ ತುಂಬೋದಾದ್ರೆ ಏಕೆ ಬೇಡ ಅನ್ನಲಿ? ತಂದೆಗಾಗಿ‌ ಓಡಾಡಿದ್ರೆ ಏಕೆ ಬೇಡ ಅನ್ನಲಿ?

ಪ್ರಜ್ವಲ್ ಸದ್ಯ ರಾಜಕೀಯದಲ್ಲಿದ್ದಾನೆ. ಬೇಲೂರಿನಿಂದ ಸ್ಪರ್ಧಿಸುತ್ತಾನೆ. ಪ್ರಜ್ವಲ್ ಈ ಮೊದಲು ಹುಣಸೂರಿನಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಈಗ ರಾಜರಾಜೇಶ್ವರಿ ನಗರ ಎನ್ನಲಾಗುತ್ತಿದೆ. ಆದರೆ ಪ್ರಜ್ವಲ್ ಅಲ್ಲಿಗೆ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ತಾವೇ ಅಂತಿಮವಾಗಿ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಪ್ರಧಾನಿ ಹೇಳಿದ್ದಾರೆ.

ಜತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರೂ ಮುಂದೆ ಬರದಿದ್ದರೆ ಪ್ರಜ್ವಲ್ ಅವರನ್ನ ಕಣಕ್ಕಿಳಿಸಲಾಗುವುದು ಎಂಬ ಸುಳಿವನ್ನೂ ನೀಡಿದ್ದಾರೆ.

ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ ಒಟ್ಟಿಗೆ ನಡೆಯುತ್ತದೆ ಎಂದು ಭಾವಿಸಿದ್ದೆವು. ಆದರೆ ಈ ವಿಷಯದಲ್ಲಿ ಪ್ರಧಾನಿ ಪ್ರಯೋಗ ಮಾಡಲು ಹೊರಟಿದ್ದಾರೆ. ನಾಮಪತ್ರ ಸಲ್ಲಿಕೆ ಹಾಗೂ ಮತದಾನದ ನಡುವೆ ಕೇವಲ 9 ದಿನಗಳ ಕಾಲಾವಕಾಶ ನೀಡಲಾಗಿದೆ. ಇದು ನಮ್ಮಂತಹ ಪ್ರಾದೇಶಿಕ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಲಿದೆ.

ನಾನು ಚುನಾವಣಾ ಆಯೋಗದ ಬಗ್ಗೆ ಮಾತನಾಡುವುದಿಲ್ಲ. ರಾಷ್ಟ್ರೀಯ ಪಕ್ಷ ಈ ರೀತಿಯ ಅನಾರೋಗ್ಯಕರ ಸ್ಪರ್ಧೆ ನಡೆಸುವುದು ಒಳ್ಳೆಯದಲ್ಲ. ಉಭಯ ರಾಷ್ಟ್ರೀಯ ಪಕ್ಷಗಳಿಗೆ ಹಣದ ಬಲವಿದೆ. ಅವಶ್ಯಕತೆ ಇದ್ದಾಗ ಮಾತ್ರ ಪ್ರಾದೇಶಿಕ ಪಕ್ಷಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ಬೇಡವಾದಾಗ ನಿರ್ಲಕ್ಷ್ಯ ಮಾಡುತ್ತಾರೆ.

ಪ್ರಾದೇಶಿಕ ಪಕ್ಷಗಳ ದೌರ್ಬಲ್ಯ ರಾಷ್ಟ್ರೀಯ ಪಕ್ಷಗಳಿಗೆ ಲಾಭ. ಇದರಿಂದಾಗಿ ಅನೇಕರು ನನಗೆ ನಾಯಕತ್ವ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT