ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಹುಟ್ಟುಹಾಕಿದ ಶಿಲ್ಪಕಲಾಕೃತಿಗಳ ಸ್ಥಳಾಂತರ

Last Updated 13 ಅಕ್ಟೋಬರ್ 2017, 9:48 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿದ್ದ 8 ರಿಂದ 17ನೇ ಶತಮಾನಗಳ ನಡುವಿನ ಅವಧಿಯ ಅಪೂರ್ವ ಶಿಲ್ಪ ಕಲಾಕೃತಿಗಳನ್ನು ಸರ್ಕಾರದ ಅನುಮತಿ ಪಡೆಯದೇ ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಸ್ಥಳಾಂತರಿಸಲಾಗಿದೆ. ಇದಕ್ಕೆ ಪರ–ವಿರೋಧ ಅಭಿಪ್ರಾಯಗಳು ಕೇಳಿಬಂದಿವೆ.

ಜಿಲ್ಲೆಯ ಹೊಸನಗರ, ಸಾಗರ, ಸೊರಬ ಭಾಗಗಳಲ್ಲಿ 1994ರಿಂದ 1999ರ ಅವಧಿಯಲ್ಲಿ ಸಂಗ್ರಹಿಸಲಾಗಿದ್ದ ಹಲವು ಶಿಲ್ಪ ಕಲಾಕೃತಿಗಳಿಗೆ ಅಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಸ್‌. ಕೃಷ್ಣಮೂರ್ತಿ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಜಾಗ ಕಲ್ಪಿಸಿದ್ದರು.

ಒಂದು ಕಾಲದಲ್ಲಿ ಸಹ್ಯಾದ್ರಿ ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿದ್ದ ಟಿ.ಜಿ. ದೊರೆಸ್ವಾಮಿ ನಾಯ್ಕ ಅವರು ಎಸ್‌ಪಿಯಾಗಿ ಜಿಲ್ಲೆಗೆ ಬಂದ ನಂತರ ಈ ಶಿಲ್ಪಗಳ ಕುರಿತು ವಿಶೇಷ ಮುತುವರ್ಜಿ ವಹಿಸಿದ್ದರು.

ಹೆಚ್ಚುವರಿ ಎಸ್‌ಪಿ ಡಾ.ಡಿ.ಸಿ.ರಾಜಪ್ಪ ಸಹಕಾರ ಪಡೆದು ಎಲ್ಲ ಶಿಲ್ಪಗಳಿಗೂ ಕಾಯಕಲ್ಪ ನೀಡಿ, ಮತ್ತಷ್ಟು ಸಂಗ್ರಹಿಸಿ ಜಿಲ್ಲಾ ಪೊಲೀಸ್ ಕಚೇರಿಯ ಆವರಣಕ್ಕೆ ಸ್ಥಳಾಂತರಿಸಿದ್ದರು. ಪ್ರತಿಯೊಂದು ಕಲಾಕೃತಿಯನ್ನೂ ಪ್ರತ್ಯೇಕ ಪೀಠದ ಮೇಲೆ ಕೂರಿಸಲಾಗಿತ್ತು. ಪೀಠದ ಕೆಳಗೆ ಆ ಶಿಲ್ಪದ ಗುಣಲಕ್ಷಣ, ಕೆತ್ತನೆಯ ಅವಧಿ, ಶಿಲ್ಪಿಯ ಹೆಸರು, ಆಳ್ವಿಕೆ ನಡೆಸಿದ ರಾಜವಂಶದ ವಿವರಗಳನ್ನು ನಮೂದಿಸಲಾಗಿತ್ತು.

1999ರ ಏಪ್ರಿಲ್‌ನಲ್ಲಿ ಆಗಿನ ಗೃಹ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು ಈ ಪುಟ್ಟ ಬಯಲು ಮ್ಯೂಸಿಯಂ ಅನಾವರಣಗೊಳಿಸಿದ್ದರು. ಆ ಸಮಯದಲ್ಲೇ ಶಿಲ್ಪ ಕಲಾಕೃತಿಗಳ ಸಂಪೂರ್ಣ ವಿವರ ಒಳಗೊಂಡ ಕಿರುಹೊತ್ತಿಗೆ ಹೊರತರಲಾಗಿತ್ತು.

ಸ್ಮಾರಕ ಶಿಲ್ಪಗಳಾದ ವೀರಗಲ್ಲು, ಮಹಾಸತಿ ಕಲ್ಲು, ಜೈನ ಶಿಲ್ಪಗಳು, ವೈಷ್ಣವ, ಶೈವ ದೇವರ ಶಿಲ್ಪಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. ನಾಟ್ಯಭಂಗಿಯ ಶಿಲ್ಪ ಕಲಾಕೃತಿಗಳು, ವಿವಿಧ ರಾಜ ವಂಶಗಳ ಕಾಲದ ವಿಶೇಷ ಶೈಲಿಯ ದೇವಾಲಯಗಳ ಭಾಗಗಳು, ವಿಶೇಷ ಕೆತ್ತನೆಯ ಕಂಬ, ಗೋಡೆಗಳ ತುಣುಕುಗಳನ್ನೂ ಅಲ್ಲಿ ಪ್ರದರ್ಶನದಲ್ಲಿದ್ದವು.

ಆ ಎಲ್ಲ ಶಿಲ್ಪಗಳೂ ಚಾಲುಕ್ಯ, ಹೊಯ್ಸಳ, ವಿಜಯನಗರ, ಕೆಳದಿ ಅರಸರ ಕಾಲದ ರಚನೆಗಳು. ಪ್ರಾಚ್ಯ ಸಂಗ್ರಹಾಲಯದ ಡಾ.ಎಸ್‌.ಜಿ. ಸಮಕ್‌, ಸಂಶೋಧಕ ಗುಂಡಾ ಜೋಯ್ಸ್ ಅವರು ಅವುಗಳ ಇತಿಹಾಸ ಗುರುತಿಸಿ, ಮಾಹಿತಿ ಒದಗಿಸಿದ್ದರು.

ಎರಡು ದಶಕಗಳ ಕಾಲ ಜಿಲ್ಲಾ ಪೊಲೀಸ್ ಕಚೇರಿ ಆವರಣ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ನೆಚ್ಚಿನ ತಾಣವಾಗಿತ್ತು. ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಕಲೆಯ ಬಿಂಬವಾಗಿ ಜನ ಮನ್ನಣೆಗಳಿಸಿತ್ತು.

ಸುಖಾಸನದಲ್ಲಿ ಕಳಿತಿರುವ 10ನೇ ಶತಮಾನದ ಉಮಾ ಮಹೇಶ್ವರ ಶಿಲ್ಪ, ಪದ್ಮಾಸನದಲ್ಲಿ ಕುಳಿತ ತ್ರಿಶೂಲ, ಡಮರುಗಧಾರಿ ಋಷಿಮುನಿ, ಭಗ್ನ ವರುಣಶಿಲ್ಪ, ನಾಲ್ಕು ಕೈಗಳಿರುವ ಹೊಯ್ಸಳರ ಕಾಲದ ಚನ್ನಕೇಶವ, ಭಗ್ನಗೊಂಡ  ತೀರ್ಥಂಕರ ಮೂರ್ತಿ, ಸಮಭಂಗಿಯಲ್ಲಿ ನಿಂತಿರುವ ವಿಷ್ಣು, ವೀರನ ಇಬ್ಬರು ಸತಿಯರು ಒಟ್ಟಿಗೆ ಸತಿಹೋದ ಧ್ಯೋತಕದ ಜೋಡಿ ಮಹಾಸತಿಯರ ಶಿಲ್ಪಗಳು (16ನೇ ಶತಮಾನ), ಪ್ರಭಾವಳಿ ಪೀಠ, ಮಕರ ಪ್ರಭಾವಳಿ, ಯುದ್ಧಕ್ಕೆ ಸಿದ್ಧನಾದ ವೀರನ ಚಿತ್ರಗಳು ಜಿಲ್ಲೆಯ ಇತಿಹಾಸದ ಸಾರ ಉಣಬಡಿಸುತ್ತಿದ್ದವು.

ಎರಡು ದಶಕ ಜಿಲ್ಲೆಗೆ ಬಂದ ಎಲ್ಲ ಐಪಿಎಸ್ ಅಧಿಕಾರಿಗಳೂ ಈ ವಿಶೇಷ ಶಿಲ್ಪಕಲಾಕೃತಿಗಳನ್ನು ಪೋಷಿಸಿಕೊಂಡು ಬಂದಿದ್ದರು. ಈ ಎಲ್ಲ ಶಿಲ್ಪಗಳನ್ನೂ ತಿಂಗಳ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಆವರಣಕ್ಕೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT