ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸಮಸ್ಯೆಗಳಿಗೆ ಜಲಚಿಕಿತ್ಸೆಯ ಉಪಶಮನ

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪ್ರಕರಣ–1
ಭವ್‌ ಎಂಬ ಅಸ್ಸಾಂನ ದಿಬ್ರುಗಡದ ಬಾಲಕ ಚೂಟಿ, ತುಂಟ ಹಾಗೂ ಮುದ್ದಾದ ಬಾಲಕ. ಎರಡು ವರ್ಷಗಳ ಹಿಂದೆ ಈತ ಒಂದನೇ ತರಗತಿ ಓದುತ್ತಿದ್ದ. ಪೋಷಕರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ, ಒಂದೆಡೆ ಕಾರು ನಿಲ್ಲಿಸಿ ದೊಡ್ಡವರು ಮೂತ್ರ ವಿಸರ್ಜನೆಗೆ ಹೋಗಿದ್ದರು. ಕಾರಿನಲ್ಲಿ ನಿದ್ರೆಯಲ್ಲಿದ್ದ ಈತ ಎಚ್ಚರವಾದಾಗ ಎಲ್ಲರೂ ಹೊರಗಿರುವುದನ್ನು ಕಂಡು, ತಾನು ಕಾರಿನಿಂದ ಇಳಿದ. ರಸ್ತೆಯ ಮತ್ತೊಂದು ಬದಿಗೆ ನಿದ್ದೆಗಣ್ಣಲ್ಲೇ ನಡೆದು ಸಾಗುವಾಗಿ, ವೇಗವಾಗಿ ಬರುತ್ತಿದ್ದ ಕಾರು ಈತನ ತಲೆಯ ಬಲಭಾಗಕ್ಕೆ ಬಡಿದು ಹೋಯಿತು. ಅಲ್ಲಿಂದ ಈತ ಮಾತು ಹಾಗೂ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡ.

ಪ್ರಕರಣ –2
ಬಾಗಲಕೋಟೆಯ ಪ್ರಮಿಳಾ ಜೈನ್‌ ಚಟುವಟಿಕೆಯಿಂದ ಕೂಡಿದ ಮಧ್ಯವಯಸ್ಸಿನ ಮಹಿಳೆ. ಮನೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ, ವ್ಯವಹಾರ ನಡೆಸುವ ಪತಿಗೆ ನೆರವಾಗುತ್ತ ಸದಾ ಲವಲವಿಕೆಯಿಂದ ಇದ್ದರು. ಒಂದು ದಿನ ಇದ್ದಕ್ಕಿದ್ದಂತೆ ತಮ್ಮ ಎಡಭಾಗದ ಸ್ವಾಧೀನವನ್ನು ಕಳೆದುಕೊಂಡರು. ಪಾರ್ಶ್ವವಾಯು ಇವರನ್ನು ಬಾಧಿಸಿತ್ತು.

ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರದ ಅಸ್ಸಾಂನ ವೈಭವ್ ಹಾಗೂ ಬಾಗಲಕೋಟೆಯ ಪ್ರಮೀಳಾ ಹಲವು ವರ್ಷಗಳ ನಂತರ ಹಾಗೂ ಸಾಕಷ್ಟು ಹಣ ಖರ್ಚು ಮಾಡಿದ ನಂತರ ಪರಿಹಾರ ಕಂಡುಕೊಳ್ಳಲು ಧಾರವಾಡಕ್ಕೆ ಬಂದಿದ್ದಾರೆ.

ಹೊಸ ಚಿಕಿತ್ಸೆಯ ವಿಧಾನವೊಂದು ಒಂದಷ್ಟು ಪರಿಹಾರ ನೀಡಬಹುದು ಎಂಬ ನಿರೀಕ್ಷೆ ಅವರನ್ನು ಧಾರವಾಡಕ್ಕೆ ಕರೆತಂದಿತ್ತು. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ರೋಗಿಗಳ ಆತ್ಮವಿಶ್ವಾಸದಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದು ಮಾತ್ರವಲ್ಲ, ಈ ಬದಲಾವಣೆ ಕಂಡ ಅವರ ಮನೆಯವರ ಮೊಗದಲ್ಲಿ ಮಂದಹಾಸ ಮೂಡಿತ್ತು.

ನರ, ಮಾಂಸಖಂಡ ಹಾಗೂ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೀರ್ಘ ಕಾಲ ಬಳಲುತ್ತಿರುವವರು ಅನೇಕರು ಹಲವು ಬಗೆಯ ಚಿಕಿತ್ಸೆಗಳನ್ನು ಪಡೆದು, ಈಗ ಜಲಚಿಕಿತ್ಸೆಯ ಮೂಲಕ ಪರಿಹಾರ ಕಂಡುಕೊಳ್ಳಲು ಉತ್ಸುಕರಾಗಿರುವುದು ವೈದ್ಯಲೋಕದ ಹೊಸ ಬೆಳವಣಿಗೆ. ಜಾಗತಿಕಮಟ್ಟದಲ್ಲಿ ಗುರುತಿಸಿಕೊಂಡಿರುವ ಜಲಚಿಕಿತ್ಸೆ ಈಗ ಕರ್ನಾಟಕದಲ್ಲೂ ಲಭ್ಯ ಎಂಬ ಸಂಗತಿಯೇ ಈಗ ನೆರೆಯ ರಾಜ್ಯಗಳ ಜನರನ್ನು ಆಕರ್ಷಿಸುತ್ತಿದೆ.

ನೋವು ನಿವಾರಿಸಲು ಹಾಗೂ ಚಲನಶಕ್ತಿ ಹೆಚ್ಚಿಸಲು ಫಿಸಿಯೋ ಥೆರಪಿ ಮೊರೆಹೋಗುವುದು ಅಥವಾ ವೈದ್ಯರೇ ಅದನ್ನು ಶಿಫಾರಸು ಮಾಡುವುದು ಸಹಜ. ಅದೇ ವಿಭಾಗಕ್ಕೆ ಸಂಬಂಧಿಸಿದ ಜಲಚಿಕಿತ್ಸೆ ಈಗ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಡಾ. ಸಿ.ಜಿ. ಪ್ರಶಾಂತ್ ಜಲಚಿಕಿತ್ಸೆ ಕುರಿತಂತೆ ಅಂತರರಾಷ್ಟ್ರೀಯ ಮಟ್ಟದ ಹ್ಯಾಲ್ವಾಯಿಕ್‌ ಎಂಬ ಕೋರ್ಸ್‌ ಅನ್ನು ಮುಗಿಸಿ ಮಾನ್ಯತೆ ಪಡೆದ ಮೊದಲ ಭಾರತೀಯ.

ಈ ಹಿಂದೆ ಬುದ್ಧಿಮಾಂದ್ಯ ಮಕ್ಕಳ ಆರೈಕೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಇವರು ಈಗ ಜಲಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ತಮ್ಮ ಮನೆಯಲ್ಲೇ ನಡೆಸುತ್ತಿದ್ದಾರೆ. ಇದಕ್ಕಾಗಿ ಡಾ. ಪ್ರಶಾಂತ್‌ ಮನೆಯಲ್ಲೇ ಚಿಕಿತ್ಸೆಗಾಗಿ ಕೊಳ ನಿರ್ಮಿಸಿದ್ದಾರೆ. ಚಿಕಿತ್ಸೆಗೆ ಬೇಕಾದ ಸಲಕರಣೆಗಳು, ಪ್ರಶಾಂತ ವಾತಾವರಣ ಹಾಗೂ ಆಪ್ತತೆ ಹೆಚ್ಚಿಸುವ ಡಾ. ದೃಷ್ಟಿ ದೇಶಪಾಂಡೆ ಹಾಗೂ ಡಾ. ಸೂರಜ್ ಎಂಬ ಇಬ್ಬರು ವೈದ್ಯರು ಇಲ್ಲಿಗೆ ಬರುವ ರೋಗಿಗಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಗಮನಾರ್ಹ ಬದಲಾವಣೆಗೆ ಸಹಕಾರಿಯಾಗಿದ್ದಾರೆ.

‘ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಗು ನಡಿಗೆ ಮತ್ತು ಮಾತು ಬರುವ ಮೊದಲೇ ಈಜು ಕಲಿತಿರಬೇಕಂತೆ. ಈಜಿನಿಂದಾಗಿ ದೈಹಿಕ ವ್ಯಾಯಾಮದ ಜತೆ, ನರ, ಮಾಂಸಖಂಡ ಹಾಗೂ ಮೂಳೆಗೆ ಸಂಬಂಧಿಸಿದ ಹಲವು ರೋಗಗಳು ಬಾರದಂತೆ ಮುಂಜಾಗ್ರತೆ ವಹಿಸಬಹುದು. ಇನ್ನು ರೋಗಿಗಳಿಗೆ ನೀರಿನಲ್ಲಿ ಚಿಕಿತ್ಸೆ ನೀಡುವುದರಿಂದ ಚಿಕಿತ್ಸೆಯ ಪರಿಣಾಮ ದುಪ್ಪಟ್ಟು ಆಗಲಿದೆ’ ಎಂಬುದು ಡಾ. ಪ್ರಶಾಂತ್ ಅನುಭವದ ಮಾತು.

‘ಸಣ್ಣ ಮಕ್ಕಳಿಂದ ವಯೋವೃದ್ಧರವರೆಗೆ ಜಲಚಿಕಿತ್ಸೆಯನ್ನು ನೀಡಬಹುದು. ಮಕ್ಕಳಲ್ಲಿ ಬೆಳವಣಿಗೆಯ ದೋಷ, ತಲೆ ನಿಲ್ಲದಿರುವುದು, ನಡೆಯಲು ವಿಳಂಬವಾಗಿದ್ದರೆ ಜಲಚಿಕಿತ್ಸೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಇನ್ನು ಬುದ್ಧಿಮಾಂದ್ಯ ಮಕ್ಕಳಿಗೆ ಅಗತ್ಯವಿರುವ ವ್ಯಾಯಾಮ ಹಾಗೂ ದೈಹಿಕ ಚಲನವಲನ ವೃದ್ಧಿಸಲೂ ಜಲಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಇದನ್ನು ಈಗಾಗಲೇ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ’ ಎಂಬುದರ ಕುರಿತೂ ಅವರು ಗಮನ ಸೆಳೆಯುತ್ತಾರೆ.

ನೀರಿನಲ್ಲೇ ಚಿಕಿತ್ಸೆ ಏಕೆ ಎಂಬ ಪ್ರಶ್ನೆ ಸಹಜವಾಗಿ ಮೂಡಲಿದೆ. ನೀರಿನಲ್ಲಿ ಗುರುತ್ವಾಕರ್ಷಣ ಶಕ್ತಿ ಕಡಿಮೆ ಇರುತ್ತದೆ. ಮಾಂಸಖಂಡದಲ್ಲಿ ಶಕ್ತಿ ಇಲ್ಲದಿದ್ದರೂ, ನೀರಿನಲ್ಲಿ ಸುಲಭವಾಗಿ ಚಲನಶಕ್ತಿಯನ್ನು ಕಂಡುಕೊಳ್ಳಬಹುದು. ಇದು ರೋಗಿಯ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವುದರ ಜೊತೆಗೆ, ನೆಲದ ಮೇಲೂ ಅದೇ ರೀತಿಯ ವ್ಯಾಯಾಮ ಪ್ರಯತ್ನಿಸಲು ಪ್ರೇರಣೆಯಾಗಲಿದೆ. ನೀರಿನಲ್ಲಿ ಹತ್ತು ಬಾರಿ ವ್ಯಾಯಾಮ ಮಾಡಿಸಿದರೆ, ನೆಲದ ಮೇಲೆ ನಾಲ್ಕು ಬಾರಿಯಾದರೂ ಅದೇ ರೀತಿಯ ವ್ಯಾಯಾಮ ಮಾಡಲು ಶಕ್ತಿ ಪಡೆಯಲಿದ್ದಾರೆ.

ಹೀಗಾಗಿಯೇ ರೋಗಿಗೆ ಪೂರಕ ವಾತಾವರಣ ಸಜ್ಜುಗೊಳಿಸಲು ಈಜುಕೊಳದ ನೀರಿನ ಉಷ್ಣತೆಯನ್ನು 32ರಿಂದ 34 ಡಿಗ್ರಿ ತಾಪಮಾನ ಇರಲಿದೆ. ರೋಗಿಗಳೊಂದಿಗೆ ತಜ್ಞ ವೈದ್ಯರೂ ನೀರಿಗಿಳಿದು, ಅವರ ಚಲನಶಕ್ತಿ ಹೆಚ್ಚಿಸಲು ತುಸು ವ್ಯಾಯಾಮ ಹಾಗೂ ಅವರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ.

ಡಾ. ಪ್ರಶಾಂತ್‌ ಹೇಳುವಂತೆ, ‘ಪ್ರತಿ ದಿನ ಒಬ್ಬರಿಗೆ 45 ನಿಮಿಷದಿಂದ ಒಂದು ಗಂಟೆಯ ಚಿಕಿತ್ಸೆ ನೀಡಲಾಗುವುದು. ಇದನ್ನು ಆಯಾ ರೋಗಿಯ ದೈಹಿಕ ಸ್ಥಿತಿಗತಿಯನ್ನು ಪರಿಗಣಿಸಿ ಎಷ್ಟು ದಿನ ನಡೆಸಬೇಕು ಎಂಬುದನ್ನು ನಿರ್ಧರಿಸಲಾಗುವುದು. ನಂತರ ಆಯಾ ರೋಗಿಗೆ ಅಗತ್ಯವಿರುವ ಉಪಕರಣಗಳನ್ನು ಬಳಸಿ ಚಿಕಿತ್ಸೆ ಮುಂದುವರಿಸಲಾಗುವುದು. ಚಲನಶಕ್ತಿಯನ್ನು ಕಳೆದುಕೊಂಡವರಿಗೆ ಹೆಚ್ಚು ಅನುಕೂಲವಾಗಲಿರುವ ಇದರಲ್ಲಿ, ನೀರಿನಲ್ಲಿ ಬಿದ್ದು ಅಪಾಯ ಮಾಡಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ’ ಎನ್ನುವುದು ಅವರ ಅನುಭವದ ಮಾತು.

ಈ ಎಲ್ಲಾ ಅಂಶಗಳಿಂದಾಗಿ ಫಿಸಿಯೋ ಥೆರಪಿ ವಿಭಾಗದಲ್ಲಿ ಜಲಚಿಕಿತ್ಸೆ ಅಭ್ಯಾಸ ಮಾಡುತ್ತಿರುವವರ ರಾಷ್ಟ್ರಮಟ್ಟದ ಸಮಾವೇಶ ಇತ್ತೀಚೆಗೆ ಜರುಗಿತು. ಚಿಕಿತ್ಸೆಯ ಫಲಿತಾಂಶ ಉತ್ತಮವಾಗಿರುವುದರಿಂದ ಪ್ರತಿ ರಾಜ್ಯದಲ್ಲೂ ಇಂಥದ್ದೊಂದು ಚಿಕಿತ್ಸಾ ಕೇಂದ್ರ ಹೋಂದಿರಬೇಕು ಎಂಬ ನಿರ್ಣಯವನ್ನು ಅಲ್ಲಿ ಕೈಗೊಳ್ಳಲಾಗಿದೆ. ಉಳಿದಂತೆ ಚಿಕಿತ್ಸೆಯಲ್ಲೇ ಹೊಸ ಬಗೆಯ ಪ್ರಯತ್ನ ನಡೆಸಲು ರಾಷ್ಟ್ರವ್ಯಾಪಿ ಇರುವ ವೈದ್ಯರು ಒಂದೇ ಮಾದರಿಯ ಅಧ್ಯಯನ ನಡೆಸಿ ಅದರ ಫಲಿತಾಂಶವನ್ನು ಒಗ್ಗೂಡಿಸಿ ಅಧ್ಯಯನ ನಡೆಸುತ್ತಿದ್ದಾರೆ. ಆ ಮೂಲಕ ಇಡೀ ಜಗತ್ತಿಗೆ ಜಲಚಿಕಿತ್ಸೆಯ ಪರಿಣಾಮಕಾರಿ ವಿಧಾನಗಳನ್ನು ಹೇಳುವುದು ಈ ವೈದ್ಯರ ಆಶಯ.
ಮಾಹಿತಿಗೆ: 9900194890

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT