ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಯ 2: ಸವೆದ ದಾರಿಯಲ್ಲಿ ಸಲೀಸು ನಡಿಗೆ

Last Updated 13 ಅಕ್ಟೋಬರ್ 2017, 10:51 IST
ಅಕ್ಷರ ಗಾತ್ರ

ಹೆಸರು: ಕರಿಯ 2
ನಿರ್ಮಾಪಕ: ಆನೇಕಲ್‌ ಬಾಲರಾಜ್‌
ನಿರ್ದೇಶಕ: ಪ್ರಭು ಶ್ರೀನಿವಾಸ
ತಾರಾಗಣ: ಸಂತೋಷ್‌ ಬಾಲರಾಜ್‌, ಮಯೂರಿ, ಅಜಯ್‌ ಘೋಷ್‌, ಸಾಧು ಕೋಕಿಲ

ಹಿಂದಿನ ‘ಕರಿಯ’ನಿಗಿಂತ ನಾನು ಬೇರೆ ಥರ ಎಂದು ಹೇಳಿಕೊಂಡು ಬಂದಿರುವ ಚಿತ್ರ ‘ಕರಿಯ 2’. ಆದರೆ ಹಲವು ವಿಷಯಗಳಲ್ಲಿ ಇವನು ಹಳೆ ಕರಿಯನನ್ನು ಹೋಲುತ್ತಾನೆ. ಹಾಗೆಂದು ಅದರ ಮುಂದುವರಿಕೆಯಾಗಲಿ, ಅಥವಾ ಮರುಸೃಷ್ಟಿಯಾಗಲಿ ಖಂಡಿತ ಅಲ್ಲ. ರೌಡಿಸಂ ಕಥೆಯನ್ನು ಇಟ್ಟುಕೊಂಡು ಬಂದಿರುವ ಬಹುತೇಕ ಸಿನಿಮಾಗಳಲ್ಲಿ ಕಾಣಸಿಗುವ ಹಲವು ಸಾಮಾನ್ಯ ಅಂಶಗಳು ಈ ಸಿನಿಮಾದಲ್ಲಿಯೂ ಇವೆ. ಆ ನಿಟ್ಟಿನಲ್ಲಿ ‘ಕರಿಯ 2’ ಕಥೆಯಲ್ಲಾಗಲಿ, ಅದನ್ನು ಹೇಳಿರುವ ರೀತಿಯಲ್ಲಾಗಲಿ ತೀರಾ ವಿಶೇಷವೇನೂ ಇಲ್ಲ. ಈಗಾಗಲೇ ಹಲವು ಸಲ ಬಳಕೆಯಾಗಿರುವ ಯಶಸ್ಸಿನ ಬೇರೆ ಬೇರೆ ಸೂತ್ರಗಳನ್ನೇ  ಕೊಂಚ ಭಿನ್ನವಾಗಿಯೂ, ಸಡಿಲಗೊಳ್ಳದ ಹಾಗೆಯೂ ಹೆಣೆದಿದ್ದಾರೆ ನಿರ್ದೇಶಕ ಪ್ರಭು ಶ್ರೀನಿವಾಸ.

ಅವನು ಕರಿಯಪ್ಪ ಅಲಿಯಾಸ್‌ ಕರಿಯ. ಎದುರಾಳಿಗಳನ್ನು ಹೂವಿನಂತೆ ಎತ್ತಿ, ಕಸದಂತೆ ಬೀಸಿ ಒಗೆಯಬಲ್ಲ ಅಸಮಾನ ಶಕ್ತಿಯೇ ಅವನ ಆಸ್ತಿ. ಅವನು ಒದ್ದರೆ ಅಷ್ಟೆತ್ತರ ಸಿಮೆಂಟ್‌ ಟ್ಯಾಂಕ್‌ ಚಿಂದಿಯಾಗಿ ಸಿಡಿಯುತ್ತದೆ. ಮುಷ್ಟಿಯಿಂದ ಒಂದು ಏಟು ಬಿದ್ದರೆ ದೇಹದ ಅಂಗಾಂಗಗಳೆಲ್ಲ ನುಜ್ಜುಗುಜ್ಜಾಗುತ್ತವೆ. ಹಣಕ್ಕಾಗಿ ಏನು ಬೇಕಾದರೂ ಮಾಡುವ ಒರಟನಾದರೂ ‘ಅಮ್ಮ’ನೆಂಬ ಶಬ್ದ ಕಿವಿಗೆ ಬಿದ್ದರೆ ಕರಗಿ ನೀರಾಗುತ್ತಾನೆ. ಅಮ್ಮನ ಪ್ರೀತಿಯ ನೆನಪಿಸುವ ಗೆಳತಿಗಾಗಿ ಪ್ರಾಣಕೊಡಲೂ ಸಿದ್ಧನಾಗಿರುತ್ತಾನೆ. ಇಂಥ ಒರಟನ ಹೃದಯವನ್ನು, ಸೇಡಿನ ಕಿಡಿಯ ಎದೆಯಲ್ಲಿಟ್ಟುಕೊಂಡ ಜಾನಕಿ ಪ್ರವೇಶಿಸುತ್ತಾಳೆ.

ಪ್ರೀತಿ, ಮೋಸ, ವಂಚನೆ, ಹಣದಾಹ, ತಾಯಿ ಸೆಂಟಿಮೆಂಟ್‌ ಎಲ್ಲವನ್ನೂ ಹದವಾಗಿ ಬೆಸೆದು ಕಥೆ ಕಟ್ಟಿದ್ದಾರೆ ಪ್ರಭು. ಹಲವು ಅಸಂಗತ ಸಂಗತಿಗಳನ್ನಿಟ್ಟುಕೊಂಡೇ ಒಂದು ಸುಸಂಗತ ಸಿನಿಮಾ ರೂಪಿಸಲು ಅವರು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಇದೊಂದು ರೀತಿಯಲ್ಲಿ ಸವೆದ ದಾರಿಯಲ್ಲಿನ ಸಲೀಸು ಪ್ರಯಾಣ. ಈ ದಾರಿಯ ಪಕ್ಕ ಅಪರೂಕ್ಕೊಮ್ಮೆ ಮನತಣಿಸುವ ನೋಟಗಳಂತೂ ಸಿಗುತ್ತವೆ. ಆದರೆ ಅನಗತ್ಯವಾಗಿ ತುರುಕಿರುವ  ಸಾಧುಕೋಕಿಲ ಅವರ ಮ್ಯಾಟರು– ಮೀಟರಿನ ಕೆಟ್ಟ ಹಾಸ್ಯ, ಸುಗಮ ರಸ್ತೆಯ ಮಧ್ಯ ಅಸಹನೀಯ ಹೊಂಡಗಳಂತೆ ಬಂದು ತ್ರಾಸು ಮಾಡುತ್ತವೆ.

ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಮಯೂರಿ ಅಭಿನಯದಲ್ಲಿ ಇನ್ನಷ್ಟು ಪಕ್ವವಾಗಿದ್ದಾರೆ.  ಪಟಪಟ ಮಾತಾಡುವ ಚೂಟಿ ಹುಡುಗಿಯಾಗಿ, ತಂದೆಯನ್ನು ಕಳೆದುಕೊಂಡ ದೀನೆಯಾಗಿ ಅವರು ಕೆಲವು ದೃಶ್ಯಗಳಲ್ಲಿ ಆಪ್ತರಾಗುತ್ತಾರೆ. ನಾಯಕ ಸಂತೋಷ್‌ ಬಾಲರಾಜ್‌ ಅವರಿಗೆ ಮಾತೇ ಕಮ್ಮಿ. ಒರಟ ರೌಡಿಯಾಗಿ, ಮಗುವಿನಂಥ ಮನಸ್ಸಿನ ಮುಗ್ಧನಾಗಿ ಎರಡೂ ಛಾಯೆಯ ಪಾತ್ರಗಳಲ್ಲಿಯೂ ಅವರು ಮಿಂಚಿದ್ದಾರೆ.

ಚುರುಕಾಗಿ ಸಾಗುವ ನಿರೂಪಣೆ ಕೊನೆಯ ಹಂತದಲ್ಲಿ ಕೊಂಚ ಎಳೆದಂತೆನಿಸುತ್ತದೆ. ಇನ್ನು ಕೆಲವು ಕಡೆ ಭಾವುಕ ಗುಳಿಗೆಯ ಪರಿಣಾಮ ತುಸು ಅತಿರೇಕ ಅನ್ನಿಸುವುದೂ ಇದೆ. ಅದನ್ನೇ ಇಷ್ಟಪಡುವವರಿಗೆ ಆಗೀಗ ಎದುರಾಗುವ ಹೊಡೆದಾಟದಲ್ಲಿನ ರಕ್ತಸಿಕ್ತ ದೃಶ್ಯಗಳು ಕಿರಿಕಿರಿ ಹುಟ್ಟಿಸಬಹುದು. ಕರಣ್‌ ಬಿ. ಅವರ ಸಂಗೀತ ಸಂಯೋಜನೆಯ ಎರಡು ಹಾಡುಗಳು ಗುನುಗಿಕೊಳ್ಳುವಂತಿವೆ. ಶ್ರೀನಿವಾಸ್‌ ದೇವಮ್‌ಸಂ  ಅವರ ಕ್ಯಾಮೆರಾ ಅಚ್ಚುಕಟ್ಟಾಗಿದೆ.

ರೌಡಿಸಂ ಕಥೆಯ ಹಿಂಸೆಯನ್ನು ಸಹಿಸಿಕೊಳ್ಳಬಲ್ಲವರು, ಭಾವುಕ ಕಥನವನ್ನು ಇಷ್ಟಪಡುವವರು ಒಮ್ಮೆ ನೋಡಬಹುದಾದ ಸಿನಿಮಾ ‘ಕರಿಯ 2’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT