ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಲು ಮತ್ತು ತೊಟ್ಟಿಲು

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇನ್ನೇನು ಹೊತ್ತು ಕಂತುವ ಹೊತ್ತು. ಬಾನಲ್ಲಿ ಬಣ್ಣದ ರಂಗು. ಕೆಂಪಾನೆ ಕೆಂಪು ಸೂರ್ಯ. ಕಿಟಕಿಯಿಂದಿಣುಕುವ ಉದ್ದ ಕಿರಣ. ತಾಯಿ ತನ್ನ ಮುದ್ದು ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡಿದ್ದಳು. ಅವಳಗೆ ಚೆಲ್ಲಿದ ಕೆಂಪು ರಂಗು ತನ್ನ ಮಗುವಿನ ಮುಖದ್ದೋ, ಮುಳುಗುತ್ತಿರುವ ಸೂರ್ಯನದ್ದೋ ಗೊತ್ತಾಗಲಿಲ್ಲ. ತದೇಕಚಿತ್ತದಿಂದ ಮಗುವಿನ ಮುಖವನ್ನೇ ದಿಟ್ಟಿಸತೊಡಗಿದಳು. ಬಾಳೆಹಣ್ಣಿನ ಮೈಬಣ್ಣದ ಮಗು ಚೆನ್ನಾಗಿ ಹಚ್ಚಿದ ಎಣ್ಣೆಗೆ, ಬಿದ್ದ ಕೆಂಪಿನ ರಂಗಿಗೆ ಥಳ ಥಳ ಹೊಳೆಯುತ್ತಿತ್ತು.

ತಾಯಿಗೆ ಆನಂದ. ದೇವರ ಸೃಷ್ಟಿ ಎಷ್ಟು ಅದ್ಭುತ! ಇಂತಹ ಒಂದು ಜೀವದ ಹುಟ್ಟಿಗೆ ತನ್ನ ಮಡಿಲು ಕಾರಣ. ತಾಯಿಗೆ ಪರವಶತೆ. ಬೆಣ್ಣೆಯ ಮುದ್ದೆಯಂತಿರುವ ಮಗುವಿನ ಪಾದವನ್ನು ಮೆಲ್ಲಗೆ ನೇವರಿಸಿದಳು. ನಿದ್ದೆ ಹೋಗಿದ್ದ ಮಗು ಮೆಲ್ಲಗೆ ನಿಸಿಲು ಮುರಿದು ಬೊಚ್ಚು ಬಾಯಲ್ಲಿ ನಕ್ಕು ಮತ್ತೆ ಮಡಿಲಲ್ಲಿ ಮುದುರಿಕೊಂಡಿತು. ಮಡಿಲಿಗೆ ಆತಂಕ, ಮಗು ಎಲ್ಲಿ ಎದ್ದುಬಿಡುವುದೋ ಎಂದು. ಹಾಗಾಗಲಿಲ್ಲ.... ಮಗುವನ್ನು ಮಲಗಿಸಿಕೊಂಡ ಸುಖಕ್ಕೆ ತೃಪ್ತವಾಯಿತು ಮಡಿಲು. ಹತ್ತಿರದಲ್ಲೇ ಇದ್ದ ತೊಟ್ಟಿಲು ಇದನ್ನೆಲ್ಲ ನೋಡುತ್ತಿತ್ತು. ಅದಕ್ಕೂ ಮಗುವಿನ ಮೈಯ್ಯ ವಾಸನೆಗೆ ಮೂಗೊಡ್ಡಿ ಅರಳಿಕೊಳ್ಳುವ ತವಕ. ಬೆಚ್ಚನೆ ಹಾಸಿಗೆ ಹಾಸಿಕೊಂಡು ಸಿದ್ಧವಾಗಿತ್ತು.

ಆದರೇನು? ಮಡಿಲು ಮಗುವನ್ನು ತೊಟ್ಟಿಲಿನ ಒಡಲಿಗೆ ಹಾಕುವ ಸೂಚನೆ ಕಾಣಲಿಲ್ಲ. ಸುಮಾರು ಹೊತ್ತು ಸುಮ್ಮನೆ ನೋಡಿದ ತೊಟ್ಟಿಲು ಮಡಿಲಿಗೆ ಸೂಚನೆ ನೀಡಿತು. ’ಎಷ್ಟು ಹೊತ್ತು ಮಲಗಿದ ಮಗುವನ್ನು ಕೂರಿಸಿಕೊಂಡಿರುತ್ತೀಯಾ? ನನ್ನೊಡಲಿನಲ್ಲಿ ಮಲಗಿಸಿ ಹಾಯಾಗಿ ವಿಶ್ರಾಂತಿ ಪಡೆಯಬಾರದೇ?’ ಮಡಿಲಿಗೆ ಸರ್ರಂತ ಸಿಟ್ಟು. ’ನನ್ನ ಮಗುವನ್ನು ನಾನು ಮಲಗಿಸಿಕೊಂಡರೆ ಇದಕ್ಕೇನು ಧಾಡಿ?’ ತೊಟ್ಟಿಲಿಗೆ ಮಡಿಲಿನ ’ಭಾರ’ ಅರ್ಥವಾಯಿತು. ಅದಕ್ಕೆ ಬೇಸರ. ಸುಮ್ಮನಾಯಿತು. ಆಸೆ ಇದ್ದಿದ್ದೇನೋ ನಿಜ, ಆದರೆ ಚುಚ್ಚಿದ ನೋಟ? ಮಡಿಲಿಗೆ ಮಗುವನ್ನು ಎಷ್ಟು ನೋಡಿದರೂ ತೃಪ್ತಿಯಿಲ್ಲ. ತಾಸು ಮೇಲರ್ಧ ತಾಸು ಹಾಗೆಯೇ ಕಳೆಯಿತು.

’ಮಗುವನ್ನು ಹಾಗೆಲ್ಲ ತದೇಕವಾಗಿ ನೋಡಬಾರದು, ಮಗುವಿಗೆ ದೃಷ್ಟಿಯಾಗತ್ತೆ, ತೊಟ್ಟಿಲಲ್ಲಿ ಮಲಗಿಸು’ ಮಡಿಲಿನ ಒಡತಿಗೆ ಅವಳಜ್ಜಿಯ ಎಚ್ಚರಿಕೆಯ ಮಾತು ಕೇಳಿತು. ಕೇಳಿದರೂ ಮೈಮರೆತ ಮಗುವಿನ ಸುಖಕ್ಕೆ ಧಕ್ಕೆ ತಂದುಕೊಳ್ಳಲು ಮಡಿಲು ಸಿದ್ಧವಿರಲಿಲ್ಲ. ಕೊಸರಾಡಿತು. ಅಜ್ಜಿ ಮತ್ತೆ ಹೇಳಿದಳು, "ಮೂರು ತಿಂಗಳಿನ್ನೂ ಕಳೆದಿಲ್ಲ, ಆಮೇಲೆ ಬೆನ್ನು ನೋವು ಬರುತ್ತದೆ, ತೊಟ್ಟಿಲಲ್ಲಿ ಮಲಗಿಸಿ ಸ್ವಲ್ಪ ಮಲಗಿಕೋ, ಅಜ್ಜಿಯ ಸೂಚನೆಯಿಂದ ಮಡಿಲಿನ ಒಡತಿಗೆ ಕಸಿವಿಸಿಯಾಯಿತು, ಆದರೂ ನಿಧಾನಕ್ಕೆ ಎದ್ದು ಮಗುವನ್ನು ಹಿಡಿದು ತೊಟ್ಟಿಲಲ್ಲಿ ಮಲಗಿಸಿದಳು. ತೊಟ್ಟಿಲು ಆ ಕ್ಷಣಕ್ಕೆ ಎಷ್ಟು ಆನಂದಪಟ್ಟಿತು! ಥೇಟ್ ಮಡಿಲಿನಂತೆ ಸುಖಿಸಿತು. ಮಗುವನ್ನು ಮಲಗಿಸಿಕೊಂಡ ಚಂದಕ್ಕೆ ಸುಖದ ಮತ್ತಿಗೆಂಬಂತೆ ಸ್ವಲ್ಪೇ ಸ್ವಲ್ಪ ಅತ್ತಿತ್ತ ಹೊಯ್ದಾಡಿತು. ಮಗುವಿಗೆ ಎಚ್ಚರವಾಗಿಬಿಟ್ಟರೆ ಎಂಬ ಆತಂಕಕ್ಕೋ ಏನೋ ಓಲಾಡಿದ ತೊಟ್ಟಿಲು ನಿಧಾನಕ್ಕೆ ಒಂದು ಹದಕ್ಕೆ ಬಂದು ನಿಂತಿತು.

ಮಡಿಲು ಇದನ್ನು ಗಮನಿಸುತ್ತಿತ್ತು. ತೊಟ್ಟಿಲಿಗೆ ಈಗ ಪರಿವೆಗೆ ಬಂತು, ’ಮಡಿಲು ತನ್ನನ್ನೇ ತದೇಕವಾಗಿ ನೋಡುತ್ತಿದೆ, ಅಸೂಯೆಯೋ ಏನೋ?’ ಅಂದುಕೊಂಡಿತು. ತೊಟ್ಟಿಲು ಹೇಳಿದ್ದು ಕೇಳಿತೆಂಬಂತೆ ಮಡಿಲು ಸಣ್ಣಗೆ ನಕ್ಕು ಹೇಳಿತು, ’ಹಾಗೇನಿಲ್ಲ’. ಮೆಲ್ಲಗೆ, ಮಗುವಿಗೆ ಎಚ್ಚರವಾಗಿಬಿಟ್ಟರೆ ಎಂಬ ಕಾಳಜಿಯಿಂದ ತೊಟ್ಟಿಲು ಉಲಿಯಿತು, ’ನಿನ್ನ ಕಂದನ ಬೆಣ್ಣೆಯಂತಹ ಸ್ಪರ್ಶಕ್ಕೆ ಆಸೆಯಾಗುತ್ತದೆಯೇ ವಿನಃ ನಿನ್ನ ಕಂದ ನನ್ನ ಕಂದನಾಗಲು ಸಾಧ್ಯವೇನೇ? ತೊಟ್ಟಿಲು ತೊಟ್ಟಿಲೇ, ಮಡಿಲು ಮಡಿಲೇ, ಈ ಜನ್ಮದಲ್ಲಿ ನಾನು ಹೆರಲು ಸಾಧ್ಯವಿಲ್ಲ. ಹೆದರಬೇಡ , ನಿನ್ನ ಸಂತೋಷವನ್ನು ನಾನೆಂದೂ ಕಳೆಯುವುದಿಲ್ಲ’.

ತೊಟ್ಟಿಲಿನ ಮಾತಿಗೆ ಮಡಿಲು ಪ್ರತಿಕ್ರಯಿಸಿತು, ’ಶ್.. ಮೆತ್ತಗೆ, ನಾನೆಂದೂ ಹಾಗೆ ಹೇಳಲಿಲ್ಲ, ಮತ್ತೇಕೆ ಬೇಸರ? ತಲೆತಲಾಂತರದಿಂದ ನೀನೇ ತಾನೇ ನನ್ನಂತಹ ತಾಯಂದಿರ ಕೆಲಸ ಹಗುರ ಮಾಡಿದ್ದು? ಪ್ರತಿ ಮಗುವೂ ನಿನ್ನೊಡಲಲ್ಲಿ ಹಾಯಾಗಿ ನಿದ್ರಿಸಿದಾಗಲೇ ಉಳಿದ ಕೆಲಸ ಮಾಡಲು ಸಾಧ್ಯವಾಗುವುದು! ನಿನ್ನೊಡಲಲ್ಲಿ ಮಲಗಿಸಲೇ ಅಲ್ಲವೇ ಮೊಟ್ಟಮೊದಲು ಶಾಸ್ತ್ರ ಮಾಡುವುದು? ನಿನ್ನನ್ನು ಸಿಂಗರಿಸುವುದು, ಮಡಿಲಿನ ಅಕ್ಕರೆಯನ್ನು ನೀನೂ ಕೊಡುವೆಯಲ್ಲ, ನಿನಗೆ ಬೇಸರವಿಲ್ಲ, ಭಾರದ ಭಾವವಿಲ್ಲ, ಪ್ರೀತಿ ಮಾತ್ರ ಹರಿಸುವೆ...... ನಿನ್ನ ಮೇಲೆ ನನಗೇಕೆ ಕೋಪ? ಅಸೂಯೆ?’ ಮಡಿಲಿನ ಕೃತಜ್ಞತೆ ತೊಟ್ಟಿಲಿಗೆ ಅರ್ಥವಾಯಿತು. ಅದು ಹೇಳಿತು, ’ ಆದರೂ ತಾಯಕ್ಕರೆಯನ್ನು ನಾನೆಲ್ಲಿ ಕೊಡಬಲ್ಲೆ?’ ’ ಹಾಗೆ ಹೇಳಬೇಡ, ನಿನ್ನ ಪ್ರೀತಿಯೂ ಕಡಿಮೆಯೇನಲ್ಲ, ಮನೆಯ ಪ್ರತಿ ಮಗುವನ್ನೂ ಮಡಿಲಲ್ಲಿ ಮಲಗಿಸಿಕೊಳ್ಳುವೆ, ಜೋ, ಜೋ ತೂಗುವೆ, ಯಾರೋ ಹಾಡಿದ ಲಾಲಿಗೆ ತಾಳ ಹಾಕಿ ಮಗು ನಿದ್ರಿಸುವಂತೆ ಮಾಡುವೆ, ಮಗು ನಿದ್ರಿಸಿದ ಮೇಲೆ ಅತ್ತಿತ್ತ ಕದಲದೇ ನಿಶ್ಯಬ್ದ ನೀನೂ ಮಲಗಿಬಿಡುವೆ. ನಿನ್ನೊಡಲಿನಲ್ಲಿ ಮಲಗಿಸಿದ ತೃಪ್ತಿಯಿಂದಲೇ ತಾಯಿ ಕೆಲಸಕ್ಕೆ ಹೊರಡುತ್ತಾಳೆ.

ನೀ ಕೊಟ್ಟ ಭರವಸೆಗೆ ತಾನೇ ತಾಯಿ ನೆಮ್ಮದಿ ಕಾಣುವುದು!....ಮಡಿಲ ಮಾತನ್ನು ತೊಟ್ಟಿಲು ಕೇಳುತ್ತಿತ್ತು. ಮಡಿಲು ಮುಂದುವರೆಸಿತು. ’ ನೀನು ನನ್ನನ್ನು ತೀರಾ ಭಾವುಕಿ ಎಂದುಕೊಳ್ಳಬೇಡ,.. ಹೇಳುತ್ತೇನೆ ಕೇಳು, ನೀನೆಂದರೆ ನನಗೆ ಇಷ್ಟ. ನನ್ನ ತೌರ ಸುಖದ ತೇರಿನ ಹಿಗ್ಗಿಗೆ ನೀನು ಸಿಂಗಾರಗೊಂಡ ರಥ. ತಾಯ್ತಂದೆಯರ ವಾತ್ಸಲ್ಯ, ತಮ್ಮಂದಿರ ಪ್ರೀತಿ ಎಲ್ಲ ನಿನ್ನಿಂದಲೇ ಆರಂಭವಾಗುತ್ತವೆ, ನಾ ಹೊಕ್ಕ ಮನೆಯಲ್ಲಿ ತೌರ ಸುವಾಸನೆಯ ಘಮ ಕೊಡುವವಳೇ ನೀನು. ಎರಡು ಮನೆತನದ ಪರಂಪರೆಯನ್ನು ಬೆಸೆವ ಭಾವದ ಕೊಂಡಿ. ಪ್ರತಿ ತಾಯಿಯ ಮನವೂ ನಿನ್ನ ಬರುವಿಕೆಗೆ ಸಂಭ್ರಮಗೊಳ್ಳುತ್ತದೆ, ಪ್ರತಿ ಮನೆಯೂ ನಿನಗಾಗಿ ಒಂದಷ್ಟು ಜಾಗ ಮೀಸಲಿಡುತ್ತದೆ, ಪ್ರತಿ ಕುಟುಂಬವೂ ನೀನು ತಮ್ಮ ಮನೆಯಲ್ಲಿರಲೆಂದು ಆಸೆ ಪಡುತ್ತದೆ, ಹೆಚ್ಚಿಗೇನು ಹೇಳಲಿ? ನೀನಿರುವ ಮನೆ ಮಕ್ಕಳ ಕಲಕಲ ನಗುವಿನ ಸಂತಸದ ತಾಣ, ನೀನಿಲ್ಲದ ಮನೆ ಮರಗಿಡಗಳಿಲ್ಲದ ಬೋಳು ಬೇಣ.’ ಮಡಿಲಿನ ಮಾತಿಂದ ತೊಟ್ಟಿಲಿಗೆ ಪರಮಾನಂದವಾಯಿತು.

ಸಂತಸಕ್ಕೆ ಮುಖ ಇಷ್ಟಗಲ ಅರಳಿತು. ಆದರೂ ಹೇಳಿತು’ ನೋಡು ನೀನೇನೋ ಭಾವ ತುಂಬಿ ಹೇಳಿತ್ತೀಯೆ, ಆದರೆ ಕೆಲವರು ನನ್ನನ್ನು ಕೇವಲ ’ಜಡವಸ್ತು’ವೆಂದು ಕೀಳಾಗಿ ಕಾಣುತ್ತಾರೆ’. ’ಅಯ್ಯೋ ಅವರನ್ನು ಬಿಡು, ನಿಜವನರಿಯದ ಮರುಳರು, ಅದಕ್ಕೇಕೆ ಬೇಸರ ಪಡುವೆ? ನಾನು ಹೇಳಿದ್ದು ಕೇಳಿಸಿತೇ? ನೀನು ಪ್ರತಿ ತಾಯಂದಿರ ಎದೆಯ ಹಾಡು, ನಿನಗೊಂದು ನಿಜ ಹೇಳಲೇ? ನಾನು ನವಮಾಸ ನನ್ನ ಕಂದನನ್ನು ಹೊತ್ತಿರಬಹುದು, ಆದರೆ ಅದರ ಭಾರಕ್ಕೆ ಬಸವಳಿದಿದ್ದೇನೆ. ಕೂರಲೂ ,ನಿಲ್ಲಲೂ, ಓಡಾಡಲೂ, ಮಲಗಲೂ ಕಷ್ಟಪಟ್ಟಿದ್ದೇನೆ, ನಿಜ ನನ್ನಷ್ಟು ಕಷ್ಟ ನಿನಗೆ ಆಗಲಿಕ್ಕಿಲ್ಲ. ಆದರೂ ನಿನ್ನ ಸ್ಥಾನ ಕಡಿಮೆಯದೇನಲ್ಲ...’ ಮಡಿಲು ಮಾತಾಡುತ್ತಿರುವಾಗಲೇ ತೊಟ್ಟಿಲು ನಡುವೆ ಮಾತಾಡಿತು.. ’ನಿನ್ನ ಸ್ಥಾನವೇ ದೊಡ್ಡದಲ್ಲವೇನೇ ಹುಚ್ಚಿ’, ’ಇರಬಹುದು, ಈಗ ನನಗೊಂದು ಆತಂಕ ಕಾಡುತ್ತಿದೆ, ಬಾಡಿಗೆ ತಾಯಂದಿರ ಕಾಲದಲ್ಲಿ ನನ್ನ ಸ್ಥಾನ ಕಡಿಮೆಯಾಗುತ್ತಿದೆ..ನೀನು ಹಾಗಲ್ಲ. ನಾನಾ ರೂಪದಲ್ಲಿ ಮಿಂಚುತ್ತಿದ್ದೀಯೆ.

’ ಆ ಮಾತಿಗೆ ತೊಟ್ಟಿಲು ಮರುನುಡಿಯಿತು,’ಅಯ್ಯೋ ದೇವರೆ ನಾನು ರಕ್ತ, ಮಾಂಸ ತುಂಬಬಲ್ಲೆನೇನೆ, ಸೃಷ್ಟಿಕ್ರಿಯೆ ಸುಲಭವೇನೆ? ಜಗತ್ತು ’ಮಾತೃ ದೇವೋ ಭವ’ ಎಂದಿದ್ದು ಸುಮ್ಮನೇನೆ? ನನ್ನದೇನಿದ್ದರೂ ನೀನು ಕೊಟ್ಟಿದ್ದನ್ನು ಕಾಪಾಡುವುದು ಅಷ್ಟೇ.’ ಮಡಿಲಿಗೆ ಹೃದಯ ತುಂಬಿ ಬಂತು. ಅದು ಹೇಳಿತು,’ ನೋಡು ಗೆಳತಿ, ನನಗೆ ಈ ಕ್ಷಣಕ್ಕೆ ಏನೆನಿಸುತ್ತಿದೆ ಗೊತ್ತೇ? ಮನುಷ್ಯನಾಗಿ ಹುಟ್ಟಬೇಕಿದ್ದರೆ ನೂರಾರು ಪ್ರಾಣಿ ,ಪಕ್ಷಿಗಳ ಜನ್ಮ ಎತ್ತಬೇಕಂತೆ, ಆದರೆ ಅದು ಹಾಗಲ್ಲ, ತಾಯ್ತನದ ಭಾವ ಹೊಂದಿದ ಪ್ರತಿ ಹೆಣ್ಣೂ ಮೊದಲು ತೊಟ್ಟಿಲಾಗಿ ಹುಟ್ಟುತ್ತಾಳೆ, ಆಮೇಲಷ್ಟೇ ಮನುಷ್ಯ ಜನ್ಮ ಎತ್ತಿ ತಾಯಿಯಾಗುತ್ತಾಳೆ...ಗೆಳತಿ, ನೀನು ನನ್ನ ತೌರ ಸುಖವನ್ನು ಹೊತ್ತು ನನ್ನ ಮನೆಗೆ ಬಾ.. ಅಪ್ಪ ಕೊಟ್ಟ ಒಡವೆಗಿಂತ ನಿನ್ನನ್ನು ಜೋಪಾನ ಮಾಡುತ್ತೇನೆ..ನೀನು ನನ್ನ ಹೃದಯದ ಅಮೃತ ಕಲಶ, ನನ್ನೆದೆಯ ಭಾವ ಕವನ, ಬರೆದು ಮುಗಿಸಲಾರದ ಕವನದ ಮುಂದಿನ ಸಾಲು..’ ಮಡಿಲಿನ ಸಂತೃಪ್ತಿ ತೊಟ್ಟಿಲಲ್ಲೂ ಅರಳಿತು. ಹೀಗೆ... ತಲೆತಲಾಂತರದಿಂದ ಮಡಿಲು ಮತ್ತು ತೊಟ್ಟಿಲು ಒಟ್ಟಿಗೇ ಸೇರಿ ಹಾಡು ಹೊಸೆಯುತ್ತಿವೆ, ಮಗುವನ್ನು ಜೋಪಾನ ಮಾಡುತ್ತಿವೆ, ಬದುಕು ಕಟ್ಟುತ್ತಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT