ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಶ್ಚಟವ ಬಿಡಿಸಿತು ಪುಸ್ತಕ...

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ಹೃತಿಕ್ ರೋಷನ್ ಅಭಿನಯವಷ್ಟೇ ಅಲ್ಲ ತಮ್ಮ ದೇಹಸಿರಿ ಮತ್ತು ನೃತ್ಯದಿಂದಲೂ ಅಭಿಮಾನಿಗಳ ಮನಗೆದ್ದವರು. ಫಿಟ್‌ನೆಸ್ ಬಗ್ಗೆ ಸದಾ ಧೇನಿಸುವ ಹೃತಿಕ್‌ಗೆ ಸಿಗರೇಟು ಚಟ ಅಂಟಿಕೊಂಡಿತ್ತು. ಆದರೆ, ಅದನ್ನು ಬಿಡಬೇಕೆಂದು ದೃಢ ಮನಸು ಮಾಡಿದರೂ ಬಿಡಲಾಗದೇ ಒದ್ದಾಡುತ್ತಿದ್ದರು. ಆದರೆ, ಸಿಗರೇಟು ಬಿಡುವ ಕುರಿತ ಒಂದು ಪುಸ್ತಕ ಅವರನ್ನು ಸಿಗರೇಟು ಚಟದಿಂದ ಹೇಗೆ ಮುಕ್ತಗೊಳಿಸಿತು ಎಂಬುದು ಅವರ ಮಾತಿನಲ್ಲೇ ಕೇಳಿ...

‘ಸಿಗರೇಟು ಸೇದುವುದು ಕೆಟ್ಟ ಅಭ್ಯಾಸ ಎಂಬುದು ನನಗೆ ಗೊತ್ತಿತ್ತು. ಆದರೆ ಒಮ್ಮೆ ಅದರ ದಾಸರಾದ ನಂತರ ಅದರಿಂದ ಹೊರಬರುವುದು ಅಷ್ಟೊಂದು ಸುಲಭವಲ್ಲ. ಸಿಗರೇಟು ಬಿಡು ಎಂದು ಆಪ್ತರು ಹೇಳುವ ಕಿವಿಮಾತನ್ನು ಪಾಲಿಸಬೇಕೆಂಬ ಮನಸ್ಸಿದ್ದರೂ, ಅದು ಅಷ್ಟೊಂದು ಸುಲಭವಾಗಿರಲಿಲ್ಲ. ಬಿಡಲೇಬೇಕು ಎಂಬ ತುಡಿತವಿತ್ತು, ಬಿಟ್ಟೇ ಬಿಡುವೆ ಎಂದು  ಐದು ಬಾರಿ ಶಪಥ ಮಾಡಿದ್ದೆ. ಆದರೆ ಸಫಲವಾಗಲಿಲ್ಲ. ಸಿಗರೇಟಿನಿಂದ ಆಗುವ ತೊಂದರೆಗಳ ಬಗ್ಗೆ ಓದಿ ತಿಳಿದುಕೊಂಡೆ.

ಯಾರೆಲ್ಲ ತೊಂದರೆ ಅನುಭವಿಸಿದ್ದಾರೆ ಅವರನ್ನು ಭೇಟಿಯಾದೆ. ಸಾಮಾಜಿಕ ಜಾಲತಾಣಗಳನ್ನು ತಡಕಾಡಿ ಈ ದುಶ್ಚಟದ ಪರಿಣಾಮ ಅರಿತೆ. ವೈದ್ಯರ ಸಲಹೆ ಪಡೆದೆ. ಇವೆಲ್ಲ ನನ್ನ ಪರಿಣಾಮ ಬೀರಿ ನಾನು ಸಿಗರೇಟಿನಿಂದ ಹೊರಬರಬಹುದು ಎಂಬುದು ನನ್ನ ಯೋಚನೆಯಾಗಿತ್ತು. ಆದರೆ ಅದ್ಯಾವುದು ಫಲಿಸಲಿಲ್ಲ.

ಸಿಗರೇಟು ಬಿಟ್ಟ ಕ್ಷಣದಲ್ಲಿ ಏನೋ ಕಳೆದುಕೊಂಡಂತೆ ಆಗುತ್ತಿತ್ತು. ಸಿಗರೇಟಿನ ಹೊಗೆಯನ್ನು ಅನುಭವಿಸಿದರಷ್ಟೇ ಸಮಾಧಾನ ಎನಿಸುತ್ತಿತ್ತು. ನಾನು ಈ ಕೆಟ್ಟ ಚಟದಿಂದ ಹೊರಬರುವುದು ಸಾಧ್ಯವೇ ಇಲ್ಲ ಎಂದುಕೊಂಡೆ.

ಆದರೆ ಅಷ್ಟಕ್ಕೆ ಪ್ರಯತ್ನ ಬಿಡಲಿಲ್ಲ. ಈ ಸಮಯದಲ್ಲಿ ಅಲನ್‌ ಕಾರ್ಸ್‌ ಅವರ ‘ಇಸಿ ವೇ ಟು ಸ್ಟಾಪ್‌ ಸ್ಮೋಕಿಂಗ್‌’ ಪುಸ್ತಕ ಓದಿದೆ. ಈ ಪುಸ್ತಕ ವಿಷಯ ಎಷ್ಟು ಗಾಢವಾಗಿ ನನ್ನ ತಲೆ ಹೊಕ್ಕಿತೆಂದರೆ ಅದನ್ನು ಓದಿ ಮುಗಿಸುವಷ್ಟರಲ್ಲಿ ನನ್ನ ಚಟವೂ ನಿಂತಿತು.

ನಾನು ಸಿಗರೇಟು ಬಿಟ್ಟಂತೆ ಬೇರೆಯವರು ಬಿಡಬೇಕು ಎಂದು ಬಯಸುತ್ತೇನೆ. ಈ ಪುಸ್ತಕದ 20 ಪ್ರತಿಗಳನ್ನು ಕೊಂಡುಕೊಂಡು, ಶಾರೂಖ್‌ ಮತ್ತು ಫರಾನ್‌ ಅಖ್ತರ್‌ಗೂ ಓದುವಂತೆ ಕೊಟ್ಟೆ. ಆದರೆ ಅವರಿಗೆ ಆ ಪುಸ್ತಕವನ್ನು ಓದುವ ಮನಸ್ಸು ಇನ್ನೂ ಆಗಿಲ್ಲವಂತೆ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT