ದೀಪಾವಳಿ ರಥಬೀದಿಯಲಿ ನೀರತೇರು

ಬುಧವಾರ, ಜೂನ್ 19, 2019
22 °C

ದೀಪಾವಳಿ ರಥಬೀದಿಯಲಿ ನೀರತೇರು

Published:
Updated:
ದೀಪಾವಳಿ ರಥಬೀದಿಯಲಿ ನೀರತೇರು

ದೀಪಾವಳಿ ಬೆಳಕಿನ ಹಬ್ಬ. ಹೀಗೆಂದು ಒಂದೇ ಸಾಲಿಗೆ ದೀಪಾವಳಿಯ ವಿಶೇಷವನ್ನು ಹೇಳಿ ಮುಗಿಸಬಹುದು. ಆದರೆ ಇದರಿಂದಾಗಿ ಹಬ್ಬದ ಒಂದು ಮುಖವನ್ನಷ್ಟೇ ಹೇಳಿದಂತಾಗುತ್ತದೆ. ದೀಪಾವಳಿಗೆ ಹಲವು ಮುಖಗಳು; ಬೆಳಕಿಗೋ ಅನಂತ ಚಾಚುಗಳು.

ದೀಪಾವಳಿಯೊಂದಿಗೆ ತಳಕು ಹಾಕಿಕೊಂಡಿರುವ ಕೆಲವು ಮುಖಗಳನ್ನು ನೋಡಿ: ಇದು ಲಕ್ಷ್ಮಿಯನ್ನು ಪೂಜಿಸುವ ಹಬ್ಬ. ನರಕ ಮತ್ತು ಬಲಿಯೆಂಬ ಅಸುರರನ್ನು ನೆನಪಿಸಿಕೊಳ್ಳುವ ಹಬ್ಬ. ವಾಮನರೂಪಿ ದೇವನನ್ನು ಸ್ಮರಿಸುವ ಹಬ್ಬ. ಈ ದೀವಳಿಗೆ ರೈತರ ಹಬ್ಬವೂ ಹೌದು. ಕೆಲವೆಡೆ ಜಾನುವಾರುಗಳನ್ನು ಪೂಜಿಸಲಾಗುತ್ತದೆ. ಹಾಗಾಗಿ ಇದು ರೈತರ ಹಬ್ಬವೂ ಹೌದು. ನವ ವಧುವರರಿಗೆ ವಿಶೇಷ ಎನ್ನಿಸುವ ಮೂಲಕ ದೀಪಾವಳಿಗೆ ಹರೆಯದ ಹುಮ್ಮಸ್ಸೂ ಇದೆ. ಹೀಗೆ, ದೀಪದ ಕುಡಿಗಳಂತೆ ಹಬ್ಬಕ್ಕೆ ಹಲವು ಮುಖಗಳು!

ನೀರು ತುಂಬುವ ಆಚರಣೆ ದೀಪಾವಳಿಯ ಮತ್ತೊಂದು ವಿಶೇಷ. ‘ನರಕ ಚತುರ್ದಶಿ’ಯ ಮುನ್ನಾದಿನ ಈ ನೀರು ತುಂಬುವ ಹಬ್ಬ. ಅಂದು ಬಚ್ಚಲಿಗೆ ಅಪರೂಪದ ಕಳೆ. ಇಡೀ ವರ್ಷ ನಮ್ಮ ಮೈ-ಮನಗಳನ್ನು ತೊಳೆದುಕೊಳ್ಳಲು ವೇದಿಕೆಯಾದ ಬಚ್ಚಲು, ‘ನೀರು ತುಂಬುವ ಹಬ್ಬ’ದಂದು ತಾನೂ ಮಿಂದು, ಹೊಸ ಸಂಭ್ರಮದೊಂದಿಗೆ ಕಂಗೊಳಿಸುತ್ತದೆ. ಬಚ್ಚಲಿನಲ್ಲಿನ ಹಂಡೆ-ತೊಟ್ಟಿಗಳು ಕೊಳೆ-ಕಿಲುಬು ಕಳೆದುಕೊಂಡು ಕಂಗೊಳಿಸುತ್ತವೆ. ಲಕಲಕಿಸುವ ಹಂಡೆ-ತೊಟ್ಟಿಗಳಿಗೆ ಹೊಸ ನೀರನ್ನು ತುಂಬಲಾಗುತ್ತದೆ. ಅಡುಗೆ ಮನೆಯಲ್ಲೂ ತೊಳೆದು ಬಳಿಯುವ ಸಂಭ್ರಮ.

‘ನೀರು ತುಂಬುವ ಹಬ್ಬ’ಕ್ಕೊಂದು ಪುರಾಣಕಥನದ ಹಿನ್ನೆಲೆಯೂ ಇದೆ. ತ್ರಿವಿಕ್ರಮನ ಪಾದದಲ್ಲಿ ಗಂಗೆ ಜನಿಸಿದ ದಿನ ಇದೆನ್ನುತ್ತಾರೆ. ನೀರನ್ನು ತುಂಬಿಕೊಳ್ಳುವ ಮೂಲಕ ಗಂಗೆಯನ್ನು ಬರಮಾಡಿಕೊಳ್ಳುವುದು, ಪೂಜಿಸುವುದು ಹಬ್ಬದ ಆಚರಣೆಯಾಗಿದೆ. ಬೆಳಕಿನ ಹಬ್ಬದೊಂದಿಗೆ ನೀರನ್ನು ತಳಕು ಹಾಕಿದರೂ, ಆ ನೀರಿನಲ್ಲಿ ಕೂಡ ಬೆಳಕಿರುವುದನ್ನು ಗಮನಿಸಬೇಕು. ಇದರರ್ಥ ಇಷ್ಟೇ – ಹಬ್ಬಕ್ಕೆ ಏನು ಅರ್ಥ ಹಚ್ಚಿದರೂ ಅದು ಕೊನೆಗೊಳ್ಳುವುದು ಬೆಳಕಿನೊಂದಿಗೆ, ಬೆಳಕು ಸೂಚಿಸುವ ಅರಿವಿನೊಂದಿಗೆ.

ಹಾಗೆ ನೋಡಿದರೆ ನೀರು ತುಂಬುವುದು ಎಲ್ಲ ಹಬ್ಬಗಳೊಂದಿಗೂ ತಳಕು ಹಾಕಿಕೊಂಡಿರುವ ಬಹುದೊಡ್ಡ ಸಂಭ್ರಮ. ಕೊಳಾಯಿಗಳಿಗೆ ಆತುಕೊಂಡಿರುವ ನಗರದ ಜನಕ್ಕೆ ನೀರು ತುಂಬುವುದು ಸರಳಾತಿಸರಳ ಕ್ರಿಯೆ ಇರಬಹುದು. ಆದರೆ, ಬಯಲುಸೀಮೆಯ ಕಥೆ ಹಾಗಲ್ಲ. ಈಗಲೂ ಕೊಡಪಾನಗಳನ್ನು ಹಿಡಿದುಕೊಂಡು ದೂರದಿಂದ ನೀರು ತರುವ ಹೆಣ್ಣುಮಕ್ಕಳ ಚಿತ್ರಗಳು ಬಯಲುಸೀಮೆಯ ಹಳ್ಳಿಗಳಲ್ಲಿ ಸಾಮಾನ್ಯ. ಇಂಥ ಊರುಗಳಲ್ಲಿ ‘ನೀರು ತುಂಬು’ವುದಕ್ಕೆ ವಿಶೇಷ ಅರ್ಥವೇ ಇದೆ. ಹಬ್ಬ ಎಂದರೆ ನೀರಿನ ದುಂದಿಗೆ ಹಲವು ನೆಪಗಳು ದೊರೆಯುತ್ತವೆ. ಆ ಕಾರಣದಿಂದಾಗಿ ನೀರನ್ನು ಕೂಡಿಟ್ಟುಕೊಳ್ಳುವುದು ಅನಿವಾರ್ಯ.

ಬೆಂಗಳೂರು ಕಳೆದ ಎರಡು ಮೂರು ವರ್ಷಗಳಲ್ಲಿ ನೀರಿನ ಕೊರತೆ ಎದುರಿಸಿತ್ತು. ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿಗೂ ಲೆಕ್ಕಹಾಕುವಂತಾಗಿತ್ತು. ಆದರೆ, ಈ ಸಲ ಮಳೆ ಎಲ್ಲ ಅಳತೆಪಟ್ಟಿಗಳನ್ನು ಮೀರಿ ಯಥೇಚ್ಛ ಸುರಿದಿದೆ. ಒಂದರ್ಥದಲ್ಲಿ ಪ್ರಕೃತಿಯೇ ‘ನೀರು ತುಂಬುವ ಹಬ್ಬ’ದಲ್ಲಿ ಸ್ವತಃ ಸಂಭ್ರಮದಿಂದ ಭಾಗವಹಿಸಿದಂತಿದೆ.

ಈ ವರ್ಷದ ಬೆಂಗಳೂರಿನಲ್ಲಿನ ಮಳೆಋತುವಿನ ಸಂಭ್ರಮವನ್ನು ನೋಡಿ. ಆಗಸ್ಟ್‌ನಲ್ಲಿ 348 ಮಿ.ಮೀ. ಮಳೆ ಸುರಿದಿದೆ. ಸೆಪ್ಟೆಂಬರ್‌ನಲ್ಲಿ ಈ ಪ್ರಮಾಣ 54 ಮಿ.ಮೀ.ನಷ್ಟಿದೆ. ಅಕ್ಟೋಬರಲ್ಲಿ ಕೂಡ ಮಳೆಯ ರಿಲೇ ಮುಂದುವರೆದಿದೆ. ಹೀಗೆ ಸತತ ಮೂರು ತಿಂಗಳ ಕಾಲ ಒಳ್ಳೆಯ ಮಳೆ ಕಂಡು ಅದೆಷ್ಟು ವರ್ಷಗಳಾಗಿದ್ದವೋ? ಕಳೆದೊಂದು ದಶಕದಲ್ಲಂತೂ ‘ಇದು ದಾಖಲೆಯ ಮಳೆ’ ಎನ್ನುತ್ತಿದೆ ಹವಾಮಾನ ತಜ್ಞರ ಲೆಕ್ಕಾಚಾರ.

ಪ್ರತಿ ಸಾರಿ ಮಳೆ ಸುರಿದಾಗಲೆಲ್ಲ ತಗ್ಗುಪ್ರದೇಶದ ಮನೆಗಳೊಳಗೆ ನುಗ್ಗಿದ ನೀರಿನ ಬಗ್ಗೆ ಮಾತನಾಡಿದ್ದೇವೆ. ರಸ್ತೆಗಳೆಲ್ಲ ಕೆರೆಗಳಾಗಿ ರೂಪಾಂತರ ಹೊಂದಿದ್ದನ್ನು ನೋಡಿದ್ದೇವೆ. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿನ ಗಂಗಾವತರಣದ ಬಗ್ಗೆ ಸಂತೋಷಪಟ್ಟಿದ್ದೇವೆ. ಬತ್ತಿದ ಬೋರ್‍ವೆಲ್‍ಗಳಲ್ಲಿ ನೀರಿನ ಸೆಲೆ ಮರುಕಳಿಸಿದ್ದನ್ನು ಹಬ್ಬದಂತೆ ಆಚರಿಸಿದ್ದೇವೆ. ಮಳೆಯ ಏನೆಲ್ಲ ತೊಂದರೆಗಳನ್ನು ಅನುಭವಿಸುತ್ತಲೇ, ಇನ್ನೊಂದೆರಡು ವರ್ಷ ಕುಡಿಯುವ ನೀರಿಗೆ ಯೋಚನೆಯಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೇವೆ.

ಪ್ರಕೃತಿ ಎಂಥ ಕರುಣಾಮಯಿ ನೋಡಿ! ‘ನೀರು ತುಂಬುವ’ ಕೆಲಸವನ್ನು ಸದ್ದಿಲ್ಲದೆ ಮಾಡಿದೆ. ಆದರೆ, ನಾವೇನು ಮಾಡುತ್ತಿದ್ದೇವೆ?

ಪ್ರತಿ ಮಳೆಗಾಲದಲ್ಲಿ ಸುಮಾರು 14 ಟಿಎಂಸಿ ಅಡಿಯಷ್ಟು ನೀರು ಬೆಂಗಳೂರಿನ ಚರಂಡಿಗಳಲ್ಲಿ ಹರಿದುಹೋಗುತ್ತದೆ ಎನ್ನುವ ಲೆಕ್ಕಾಚಾರವೊಂದಿದೆ. ಈ ವರ್ಷ ಮಳೆ ಸಮೃದ್ಧಿಯಾಗಿರುವುದರಿಂದ ಚರಂಡಿಪಾಲಾದ ನೀರಿನ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು. ಇದರಲ್ಲಿ ಸಾಕಷ್ಟು ನೀರನ್ನು ತುಂಬಿಕೊಳ್ಳುವ ಅವಕಾಶ ನಮಗೆ ಇತ್ತಲ್ಲವೇ? ನಂನಮ್ಮ ಮನೆಗಳ ಅಂಗಳದಲ್ಲಿ ಬಿದ್ದ ನೀರನ್ನು ಅಲ್ಲಿಯೇ ಇಂಗುವಂತೆ ಮಾಡಿದ್ದರೆ ಮುಂಬರುವ ಬೇಸಗೆ ಕೊಂಚ ತಂಪಾಗಿರುತ್ತಿತ್ತೇನೋ?

ಬೆಂಗಳೂರಿನಲ್ಲಿ 19 ಲಕ್ಷಕ್ಕೂ ಹೆಚ್ಚು ಕಟ್ಟಡಗಳಿದ್ದು, ಅವುಗಳಲ್ಲಿ 54 ಸಾವಿರ ಕಟ್ಟಡಗಳಲ್ಲಷ್ಟೇ ಮಳೆನೀರು ಸಂಗ್ರಹಿಸುವ ವ್ಯವಸ್ಥೆಯಿದೆ. ಅಂದರೆ, ನೀರು ತುಂಬಿಸುವ ಬಗ್ಗೆ ನಗರಕ್ಕೆ ಅಷ್ಟೇನೂ ಕಾಳಜಿ ಇಲ್ಲವೆಂದಾಯಿತು.

ದೀಪಾವಳಿಯ ‘ನೀರು ತುಂಬುವ ಹಬ್ಬ’ದಲ್ಲಿ ಬೆಂಗಳೂರಿನ ನಾಗರಿಕರಿಗೊಂದು ಪಾಠವೂ ಇದೆ. ನೀರು ತುಂಬುವ ಪ್ರಕ್ರಿಯೆ ಔಪಚಾರಿಕವಾಗಿ ಮಾತ್ರವಲ್ಲದೆ, ಅಕ್ಷರಶಃ ಜಾರಿಗೊಳ್ಳಬೇಕಾದ ಜರೂರು ಇಂದಿನದು. ಮಳೆಯ ಮೂಲಕ ಪ್ರಕೃತಿಯೇನೋ ಸಹಜವಾಗಿ ಜಲಪೂರಣ ಮಾಡುತ್ತದೆ. ಅದಕ್ಕೆ ನಾವೂ ಕೈಗೂಡಿಸಿದರೆ ‘ಗಂಗಾಪೂಜೆ’ ನಿಜ ಅರ್ಥದಲ್ಲಿ ಸಾಧ್ಯವಾಗುತ್ತದೆ.

‘ನನ್ನ ತಲೆಯೊಳಗೆ / ನನ್ನ ಬೆಂಬಳಿಗೆ / ನನ್ನ ಒಳಕೆಳೆಗೆ / ನುಗ್ಗಿ ಬಾ’ ಎಂದು ಕವಿ ದ.ರಾ. ಬೇಂದ್ರೆ ತಮ್ಮ ‘ಗಂಗಾವತರಣ’ ಕವಿತೆಯಲ್ಲಿ ಗಂಗೆಯನ್ನು ಆಹ್ವಾನಿಸುತ್ತಾರೆ. ಮತ್ತೂ ಮುಂದುವರಿದು – ‘ಕಣ್ಣ ಕಣ ತೊಳಿಸಿ / ಉಸಿರ ಎಳೆ ಎಳಸಿ / ನುಡಿಯ ಸಸಿ ಮೊಳೆಸಿ / ಹಿಗ್ಗಿ ಬಾ’ ಎಂದು ಮನದುಂಬಿ ನೀರದೇವಿಯನ್ನು ಆಹ್ವಾನಿಸುತ್ತಾರೆ. ಈ ಹೊತ್ತು ಅದ್ಯಾರ ಆಹ್ವಾನಕ್ಕೆ ಓಗೊಟ್ಟೋ ಮಳೆತಾಯಿ ತುಂಬು ಸಂಭ್ರಮದಿಂದ ನಾಡಿಗೆ ಆಗಮಿಸಿದ್ದಾಳೆ. ಅವಳನ್ನು ಮನೆದುಂಬಿಸಿಕೊಳ್ಳಬೇಕಾದ, ಮನದುಂಬಿಸಿಕೊಳ್ಳಬೇಕಾದ ವಿವೇಕವನ್ನು ನಾವು ತೋರಬೇಕಿದೆ. ಆ ವಿವೇಕವೇ ದೀಪಾವಳಿ, ಅಲ್ಲವೇ?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry