ಸೋಮವಾರ, ಸೆಪ್ಟೆಂಬರ್ 16, 2019
26 °C

‘ಜೀವನವೇ ಒಂದು ನಗೆಕೂಟ’

Published:
Updated:
‘ಜೀವನವೇ ಒಂದು ನಗೆಕೂಟ’

ಸುಮಾರು ಒಂಬತ್ತು ವರ್ಷಗಳ ಹಿಂದಿನ ಮಾತು. 2009ರ ಸುಮಾರಿಗೆ ವೇದಿಕೆ ವ್ಯಾಮೋಹದ ಫಲವಾಗಿ ಇಂಗ್ಲಿಷ್‌ ರಂಗತಂಡದಲ್ಲಿ ತೊಡಗಿಸಿಕೊಂಡಿದ್ದೆ. ಆಶುಭಾಷಣ ಥಿಯೇಟರ್‌ ಷೋ (improvisation show) ಎನ್ನುವ ವಿನೂತನ ಪ್ರಯೋಗ ನಡೆದಿತ್ತು ಆಗ. ಯಾವುದೇ ತಯಾರಿಯಿಲ್ಲದೇ, ಸಭಿಕರೇ ನೀಡುವ ಯಾವುದೊ ವಿಷಯವನ್ನೇ ಬೆಳೆಸುತ್ತಾ ಎಲ್ಲರನ್ನೂ ನಗಿಸುವ ಆಟ ಅದು.

ಇಂತಹ ಕಾರ್ಯಕ್ರಮಗಳು ಸಾಮಾನ್ಯವಾಗಿ ಇಂಗ್ಲಿಷ್‌–ಹಿಂದಿ ಭಾಷೆಯಲ್ಲಿಯೇ ನಡೆಯುತ್ತಿತ್ತು. ನಾನು ನಡು–ನಡುವೆ ಕನ್ನಡ ಪದಗಳನ್ನು ಬಳಸಲು ಆರಂಭಿಸಿದ್ದೆ. ಕನ್ನಡ ಪದ ಬಂದಾಗೊಮ್ಮೆ ಚಪ್ಪಾಳೆಯ ಸದ್ದು ಮೊಳಗುತ್ತಿತ್ತು. ಕನ್ನಡದ ಜನ ಹೊಸ ರೀತಿಯ ನಗೆ ಕಾರ್ಯಕ್ರಮಗಳ ಎದುರು ನೋಡುತ್ತಿದ್ದಾರೆ ಅನ್ನುವುದು ಅರ್ಥವಾಗಿದ್ದೇ ಆಗ. ಕನ್ನಡದಲ್ಲಿ ಸ್ಟಾಂಡ್‌ಅಪ್‌ ಕಾಮಿಡಿಯನ್ನು ಹೊಸ ರೀತಿಯಲ್ಲಿ ಪ್ರಯೋಗಿಸಬೇಕು ಅಂತನ್ನಿಸಿದ್ದು ಆಗಲೇ.

ಸ್ಟಾಂಡ್‌ಅಪ್‌ ಕಾಮಿಡಿ ಷೋ ನೀಡುವುದು ಒಬ್ಬನಿಂದಲೇ ಆಗದು. ಕಾರ್ಯಕ್ರಮದಲ್ಲಿ ಏಕತಾನತೆಯನ್ನು ಮುರಿಯಲು, ವೈವಿಧ್ಯತೆಯನ್ನು ತುಂಬಲು ಒಂದು ತಂಡ ಬೇಕು ಅನಿಸಿದಾಗ ‘ಕನ್ನಡ ಗೊತ್ತಿಲ್ಲ ಡಾಟ್‌ ಕಾಮ್‌’ನ ಅನೂಪ್‌ ಮಯ್ಯ ಅವರನ್ನು ಸಂಪರ್ಕಿಸಿದೆ. ನಂತರ ಸಮಾನ ಮನಸ್ಕ ಕಲಾವಿದರು ಕೂಡಿಕೊಂಡರು. ಅದೇ ‘ಲೋಲ್‌ಬಾಗ್‌’ ಆಯಿತು.

ಮಚ್ಚಾ, ಗುರೂ, ಶಿಷ್ಯ, ಮಗಾ ಎನ್ನುವಂಥ ನಮ್ಮ ಕನ್ನಡದ ಕಾಲೇಜು ಹುಡುಗರ ಬಾಯಲ್ಲಿ ಹರಿದಾಡುವ ಕನ್ನಡದ ಕಚ್ಚಾ ಪದಗಳೇ ಲೋಲ್‌ಬಾಗ್‌ ತಂಡದ ವೈಶಿಷ್ಟ್ಯವಾಯಿತು. ಇತ್ತೀಚೆಗಂತೂ ‘ಲಿಂಗೊ’ ಅನ್ನುವುದು ಕ್ಯಾಂಪಸ್‌ ಭಾಷೆಯಾಗಿ ಬೆಳೆದಿದೆ. ಆ ಪದಗಳಿಗೆ ನಿರ್ದಿಷ್ಟ ಅಥವಾ ಗಂಭೀರ ಅರ್ಥ ಇರುವುದಿಲ್ಲ. ಆದರೂ ಅದರಲ್ಲೇನೊ ಆಪ್ತ ಭಾವ ಇರುತ್ತೆ. ಅಂಥ ಪದಳನ್ನು ಬಳಸಿದಾಗ ವ್ಯಕ್ತವಾಗುವ ಪ್ರತಿಕ್ರಿಯೆ ಅದ್ಭುತ.

ಆರಂಭದಲ್ಲಿ ಯುವಜನರನ್ನು ಮುಟ್ಟಬೇಕು ಎನ್ನುವುದು ನಮ್ಮ ಗುರಿಯಾಗಿತ್ತು. ಅದಕ್ಕೆ ಐಟಿ ಉದ್ಯೋಗಿಗಳನ್ನು, ವಿದ್ಯಾರ್ಥಿ ಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸಿದೆವು. ಈಗ ಎಲ್ಲಾ ವಯೋಮಾನದವರೂ ನಮ್ಮ ಪ್ರೇಕ್ಷಕ ರಾಗಿದ್ದಾರೆ. ‘ಲೋಲ್‌’ ಅಂದರೆ ಸಾಕು ಹಿರಿಯರೂ ನಗುತ್ತಾರೆ. ನಗೆಹಬ್ಬ/ನಗೆ ಕೂಟಗಳು ಸಾಹಿತ್ಯ–ಸಂಸ್ಕೃತಿ, ಗಂಡ–ಹೆಂಡತಿ, ಸಂಸಾರ, ಕಚೇರಿಗಳಂತಹ ಬಹುತೇಕ ಗಂಭೀರ ವಿಷಯಗಳ ಸುತ್ತ ಸುತ್ತುತ್ತವೆ. ಸ್ಟಾಂಡ್‌ಅಪ್‌ ಕಾಮಿಡಿಯಲ್ಲಿ ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ಗಳೂ ಪಾತ್ರಗಳಾಗುತ್ತವೆ. ಲೋಕಲ್‌ ಜನರ ಭಾಷೆ, ಜೀವನಶೈಲಿ, ಮಾತು, ಹರಟೆ, ಪದಗಳು ಮಹತ್ವ ಪಡೆಯುತ್ತವೆ.

ಜೀವನದಲ್ಲಿ ಯಾವಾಗ, ಹೇಗೆ, ಯಾವ ರೂಪದಲ್ಲಿ ಸವಾಲುಗಳು ಎದುರಾಗುತ್ತವೆ ಅಂತ ಹೇಳಲಾಗದು. ಜೀವನದಲ್ಲಿ ಯಾವತ್ತೂ ಮುಗಿಯದ ಅಧ್ಯಾಯವದು. ಒಂದು ಸವಾಲನ್ನು ಗೆಲ್ಲುತ್ತಿದ್ದಂತೆ ಮತ್ತೊಂದು ಎದುರಾಗಿರುತ್ತದೆ. ಬರೀ ಮಾತಿನ ಮೂಲಕ ಎದುರು ಕುಳಿತವರನ್ನು ನಗಿಸುವುದೂ ಒಂದು ಸವಾಲು. ನಮ್ಮ ಮುಖಚರ್ಯೆ, ಹಾವ–ಭಾವ, ವರ್ತನೆಗಳೆಲ್ಲ ಇಲ್ಲಿ ನಗಿಸುವ ಪರಿಕರಗಳಾಗುತ್ತವೆ.

ಹಾಗೆಯೇ ಪ್ರತಿಯೊಂದು ಕಾರ್ಯಕ್ರಮದಲ್ಲೂ ವೈವಿಧ್ಯತೆಯನ್ನು ತುಂಬಬೇಕು. ಹೊಸ ಜೋಕ್‌, ಹೊಸ ವಿಷಯಕ್ಕೆ ಹುಡುಕಬೇಕು. ಕೆಲವೊಮ್ಮೆ ಈ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲ್ಲ. ಅದಕ್ಕೂ ನಾವು ತಯಾರಿರಬೇಕು.

ಜೀವನವೇ ಒಂದು ದೊಡ್ಡ ಭಂಡಾರ. ಎಲ್ಲವೂ ಇಲ್ಲೇ ಸಿಗುತ್ತದೆ. ದಿನನಿತ್ಯ ನಮ್ಮ ಸುತ್ತ ಎಷ್ಟೊ ಘಟನೆಗಳು ನಡೆಯುತ್ತವೆ, ಮಾತುಗಳು ಕೇಳುತ್ತವೆ ಅದರಲ್ಲಿನ ಹಾಸ್ಯವನ್ನು ನಾವು ಗುರುತಿಸಬೇಕಷ್ಟೆ. ತಿಳಿಯಾದ ಮನಸ್ಸಿನಿಂದ ಹುಡುಕಿದರೆ ನಾವು ನಡೆಯುವ ದಾರಿಯಲ್ಲಿ, ಓಡಾಡುವ ಬಸ್ಸುಗಳಲ್ಲಿ, ಕೆಲಸ ಮಾಡುವ ಕಚೇರಿಗಳಲ್ಲಿ ನಕ್ಕು ಹೊಟ್ಟೆ ಹುಣ್ಣಾಗುವಂತಹ ಸಂದರ್ಭಗಳು ಸಿಗುತ್ತವೆ.

ಕಷ್ಟ ಅನ್ನೋದು ನಮ್ಮ ಮನಸ್ಥಿತಿ ಅಷ್ಟೆ. ನಮಗೆ ಕಷ್ಟ ಇದೆ ಅಂದ್ರೆ ಇದೆ, ಇಲ್ಲ ಅಂದ್ರೆ ಇಲ್ಲ. ಕಷ್ಟಗಳನ್ನು ಹಾಸ್ಯದಿಂದ ನೋಡಿದಾಗ ಅವು ಹಗುರವಾಗುತ್ತದೆ. ಒಂದು ಉದಾಹರಣೆ ಹೇಳುತ್ತೇನೆ, ಅಯ್ಯೊ, ಶರ್ಟ್‌ ಮೇಲೆ ಕಾಫಿ ಚೆಲ್ಲಿದೆ. ನೋಡಿದವರು ನಗುತ್ತಾರೆ, ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹಲುಬಿದರೆ ಅದು ಕಷ್ಟ. ನಾವೇ ಮುಂದಾಗಿ ‘ಇಲ್ನೋಡಿ, ನನ್ನ ಶರ್ಟ್‌ ಮೇಲೆ ಹೊಸ ಡಿಸೈನ್‌ ಮೂಡಿದೆ...’ ಅಂತ ಹೇಳಿಕೊಂಡರೆ ಅದು ಹಾಸ್ಯ.

ವೇದಿಕೆ ಮೇಲೆ ನಿಂತು ನಗುಸುವುದು ಬೇರೆ ಮಾತು. ಆದರೆ ದುಡ್ಡು ಕೊಟ್ಟು ಬರುವ ಜನರನ್ನು ಮಾತ್ರ ನಗಿಸಬೇಕು ಎನ್ನುವ ನಿಯಮವೇನೂ ಇಲ್ಲ. ಸಾಮಾನ್ಯವಾಗಿ ನನ್ನ ಜೊತೆ ಇರುವವರು, ಕೆಲಸ ಮಾಡುವವರನ್ನೂ ನಾನು ನಗಿಸುತ್ತೇನೆ. ಅಥವಾ ಅವರೇ ನಗುತ್ತಾರೆ. ನಾನು ಕಾಮಿಡಿಯನ್‌ ಎನ್ನುವ ಪೂರ್ವನಿರ್ಧರಿತ ಮನೋಭಾವ ಇರುವುದರಿಂದಲೊ ಏನೊ. ನನ್ನ ನೋಡಿದೊಡನೆಯೇ ನಗುವವರೂ ಇದ್ದಾರೆ.

**

ನಗಿಸುವ ಯುವಕ

ಸುದರ್ಶನ್‌ ರಂಗಪ್ರಸಾದ್‌ ಹುಟ್ಟಿ ಬೆಳೆದಿದ್ದು ಬೆಂಗಳೂರು. ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿ, ಜರ್ಮನಿಯಲ್ಲಿ ಎಂಬಿಎ ಓದಿ ಬೆಂಗಳೂರಿನ ಐಟಿ ಕಂಪೆನಿಯೊಂದರ ಸೇಲ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಕಲೆ ಬದುಕಿಗೆ, ವೃತ್ತಿ ಜೀವನೋಪಾಯಕ್ಕೆ. ವಾರದಲ್ಲಿ ಎರಡು ದಿನ ನಗೆ ಕಾರ್ಯಕ್ರಮಗಳಿಗೇ ಮೀಸಲು. ವೃತ್ತಿಯ ನಡುವೆ ಇದೆಂದೂ ನನಗೆ ಒತ್ತಡ ಎನಿಸಿಲ್ಲ. ಬದುಕಿನ ಜಂಜಡಗಳನ್ನು ಮರೆಸಲು, ಮರೆಯಲು ಇದೊಂದು ಅವಕಾಶ’ ಎನ್ನುತ್ತಾರೆ ಸುದರ್ಶನ್‌.

**

ಅದು ಕಷ್ಟ, ಇದು ಹಾಸ್ಯ

ಶರ್ಟ್‌ ಮೇಲೆ ಕಾಫಿ ಚೆಲ್ಲಿದೆ. ನೋಡಿದವರು ನಗುತ್ತಾರೆ, ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹಲುಬಿದರೆ ಅದು ಕಷ್ಟ. ನಾವೇ ಮುಂದಾಗಿ ‘ಇಲ್ನೋಡಿ, ನನ್ನ ಶರ್ಟ್‌ ಮೇಲೆ ಹೊಸ ಡಿಸೈನ್‌ ಮೂಡಿದೆ...’ ಅಂತ ಹೇಳಿಕೊಂಡರೆ ಅದು ಹಾಸ್ಯ.

Post Comments (+)