ಮೈಮರೆಸುವ ಚಿಗುಳೆ ಜಲಪಾತ

ಮಂಗಳವಾರ, ಜೂನ್ 25, 2019
23 °C

ಮೈಮರೆಸುವ ಚಿಗುಳೆ ಜಲಪಾತ

Published:
Updated:
ಮೈಮರೆಸುವ ಚಿಗುಳೆ ಜಲಪಾತ

ಪಶ್ಚಿಮಘಟ್ಟಗಳ ಹಸಿರು ಬೆಟ್ಟಗಳ ಸಾಲಿನಿಂದ ಉತ್ತರ ದಿಕ್ಕಿನತ್ತ ಬೆಳಗಾವಿ ಮೂಲಕ ಮಹಾರಾಷ್ಟ್ರ ರಾಜ್ಯವನ್ನು ಪ್ರವೇಶಿಸುವಂತೆ, ಸ್ವಲ್ಪ ತಿರುವಿನಿಂದ ಈ ಭಾಗ ಕೊನೆಗೊಳ್ಳುತ್ತದೆ. ವಾಸ್ತವವಾಗಿ, ಇದು ಗುಡ್ಡಬೆಟ್ಟಗಳ ಸಂಗಮವಾಗಿದೆ. ಇಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಗಳು ಒಂದಾಗುತ್ತವೆ. ಇಲ್ಲಿನ ಸ್ಥಳವು ಆಳವಾದ ಕಣಿವೆಗಳು, ದಟ್ಟವಾದ ಮತ್ತು ಪ್ರವೇಶಿಸಲು ಅಸಾಧ್ಯವಾದ ಕಾಡುಗಳಿಂದ ಆವರಿಸಿದೆ. ಇಲ್ಲಿಂದ ಹುಟ್ಟುವ ನದಿಗಳು ಅದ್ಭುತ ಜಲಪಾತಗಳಂತೆ ಕೆಳಗಿಳಿಯುತ್ತವೆ, ಮೈದಾನವನ್ನು ಸೇರುವ ಮುನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಪಾವನಗೊಳಿಸುತ್ತವೆ.ಇಲ್ಲಿಂದ ಗೋಚರಿಸುವ ಕೆಲವು ಹಳ್ಳಿಗಳು ಪ್ರವಾಸಿತಾಣಗಳಂತೆ ಮುದಗೊಳಿಸುತ್ತವೆ.

ಧಾರವಾಡದಿಂದ 101 ಕಿ.ಮೀ. ಮತ್ತು ಬೆಳಗಾವಿಯಿಂದ 42 ಕಿ.ಮೀ. ದೂರದಲ್ಲಿರುವ ‘ಕಣಕುಂಬಿ’ ಎಂಬ ಹೆಸರಿನಿಂದ ಕರೆಯಲಾಗುವ ಒಂದು ಹಳ್ಳಿ ಈ ಪ್ರದೇಶದಲ್ಲಿದೆ. ಮೇಲ್ನೋಟಕ್ಕೆ ಕಣಕುಂಬಿ ನಿಗೂಢತೆಯಿಂದ ಕೂಡಿದಂತೆ ಕಂಡರೂ ಸಮೀಪದಲ್ಲಿ ಜಲಪಾತ, ಐತಿಹಾಸಿಕ ದೇವಾಲಯಗಳಿಂದ ಸಮ್ಮೋಹನಗೊಳಿಸುತ್ತದೆ. ಕಣಕುಂಬಿಯತ್ತ ವಾಹನ ಚಾಲನೆ ಮಾಡುವಾಗ ನಿಗೂಢವಾದ ಹಾಗೂ ಅಷ್ಟೇ ಆಕರ್ಷಕವಾದ ಭೂದೃಶ್ಯಗಳು ನಮ್ಮನ್ನು ಸ್ವಾಗತಿಸುತ್ತವೆ. ಇತ್ತೀಚಿನ ಮಳೆಯಂತೂ ಈ ಭಾಗಗಳನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ.

ಅಲ್ಲಿನ ಪ್ರಾಚೀನ ದೇವಸ್ಥಾನ ಮಹಾಲಕ್ಷ್ಮಿ ಅಥವಾ ಮೌಳಿ ದೇವಸ್ಥಾನ ಬಲು ಮೋಹಕ. ಎರಡು-ಹಂತದ ರಚನೆ ಹೊಂದಿರುವ ಒಂದು ವಿಶಿಷ್ಟ ಕೊಂಕಣ-ಶೈಲಿಯ ದೇವಾಲಯವಿದು. ಇಳಿಜಾರಿನ ಛಾವಣಿಗಳನ್ನು ಸುತ್ತುವರಿದಿರುವ ಕಂಬಗಳ ಮೂಲಕ ನಮ್ಮನ್ನು ಈ ದೇವಾಲಯ ಬೆರಗು ಗೊಳಿಸುತ್ತದೆ. ಆಕರ್ಷಕ ಪ್ರವೇಶ ದ್ವಾರ, ವೇದಿಕೆ, ಗರ್ಭಗುಡಿ ಎಲ್ಲವೂ ಮನಮೋಹಕ. ಈ ದೇವಸ್ಥಾನವು ಅತ್ಯಂತ ಪುರಾತನವಾದುದೆಂದು ಸ್ಥಳೀಯರು ಖುಷಿಯಿಂದ ಹೇಳುತ್ತಾರೆ.

ಇದು ಬಾಗಲಕೋಟೆಯ ಕೂಡಲಸಂಗಮದಲ್ಲಿ ಕೃಷ್ಣಾ ನದಿಯನ್ನು ಸೇರುವ ಮೊದಲು ಪೂರ್ವಕ್ಕೆ ಹರಿಯುವ ಮಲಪ್ರಭಾ ನದಿಯ ಜನ್ಮಸ್ಥಳವಾಗಿದೆ. ದೇವಾಲಯದ ಸಂಕೀರ್ಣದಲ್ಲಿರುವ ಒಂದು ಆಯತಾಕಾರದ ಕಲ್ಲಿನ ಕೊಳವು ಗಮನ ಸೆಳೆಯುತ್ತದೆ. ಇಲ್ಲಿಗೆ ಸಮೀಪದಲ್ಲಿಯೇ ರಾಮಲಿಂಗೇಶ್ವರ ದೇವಸ್ಥಾನವಿದೆ. ದೇವಾಲಯದ ಪಕ್ಕದಲ್ಲೇ ಹಳೆಯ ಬಾವಿಯಿದೆ. ಇದು ಮಲಪ್ರಭಾದ ನಿಜವಾದ ಜನ್ಮಸ್ಥಳ ಎಂದು ಹೇಳುತ್ತಾರೆ. ಪ್ರಾಚೀನ ಕಾಲದಲ್ಲಿ, ಹಲವಾರು ಋಷಿಗಳು ಮತ್ತು ಸಂತರು ಇಲ್ಲಿ ವಾಸಿಸುತ್ತಿದ್ದರು ಎಂಬ ನಂಬಿಕೆ ಇದೆ.

‘ಕುಲಕಾಮುನಿ’ ಎಂಬ ಋಷಿ ಇಲ್ಲಿ ಕಠಿಣ ತಪಸ್ಸು ಮಾಡಿದ್ದರಂತೆ. ಅವರ ಸಂತತಿಯನ್ನು ನಂತರ ‘ಕುಲಕಾಂಬಿ’ ಎಂದು ಹೆಸರಿಸಲಾಯಿತು. ಬಳಿಕ ಇದು ‘ಕಣಕುಂಬಿ’ ಆಗಿದೆ. ಕಣಕುಂಬಿಯಿಂದ ಕೇವಲ 4 ಕಿ.ಮೀ. ದೂರದಲ್ಲಿ ‘ಚಿಗುಳೆ’ ಜಲಪಾತವಿದೆ. ಈ ಸುಂದರವಾದ ಪರಿಸರದಲ್ಲಿ ನವಿಲುಗಳ ಗುಂಪುಗಳನ್ನು ಕಾಣಬಹುದಾಗಿದೆ. ಪರ್ವತದ ಅಂಚಿನಲ್ಲಿರುವ ಈ ಗ್ರಾಮವು ಜಲಪಾತವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಕೊಡುತ್ತದೆ.

ಲೇಖನ, ಚಿತ್ರಗಳು: ಶಶಾಂಕ್ ವರ್ಮಾ ಜಿ.ಆರ್‌.

**

ಹೋಗುವುದು ಹೇಗೆ?

ಬೆಂಗಳೂರಿನಿಂದ ಕಣಕುಂಬಿಗೆ 523 ಕಿಮೀ

ಮಾರ್ಗ: ಹುಬ್ಬಳ್ಳಿ– ಧಾರವಾಡ– ಖಾನಾಪುರ– ಕಣಕುಂಬಿ

ಖಾಸಗಿ ವಾಹನ ಮಾಡಿಕೊಂಡು ಹೋಗುವುದು ಉತ್ತಮ

ಬೆಳಗಾವಿಯಿಂದ ಗೋವಾ ಮಾರ್ಗದಲ್ಲಿ ಕಣಕುಂಬಿಗೆ ದೂರ 42 ಕಿಮೀ

ಕಣಕುಂಬಿಯಿಂದ ಚಿಗುಳೆ ಫಾಲ್ಸ್‌ಗೆ 4 ಕಿಮೀ, ಕಾಲ್ನಡಿಗೆಯ ದಾರಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry