ವಾಮಾಚಾರದ ‘ಕಟಕ’ ಪ್ರಯೋಗ

ಸೋಮವಾರ, ಜೂನ್ 17, 2019
31 °C

ವಾಮಾಚಾರದ ‘ಕಟಕ’ ಪ್ರಯೋಗ

Published:
Updated:
ವಾಮಾಚಾರದ ‘ಕಟಕ’ ಪ್ರಯೋಗ

ಚಿತ್ರ: ಕಟಕ

ನಿರ್ಮಾಪಕ: ಎನ್‌.ಎಸ್‌. ರಾಜಕುಮಾರ್

ನಿರ್ದೇಶಕ: ರವಿ ಬಸ್ರೂರ್

ತಾರಾಗಣ: ಅಶೋಕ್‌, ಸ್ಪಂದನಾ, ಶ್ಲಾಘಾ ಸಾಲಿಗ್ರಾಮ, ಉಗ್ರಂ ಮಂಜು

ಹಾರರ್‌, ಸಸ್ಪೆನ್ಸ್‌ ಚಿತ್ರ ಎಂದಾಕ್ಷಣ ಮನದಲ್ಲಿ ಒಂದಿಷ್ಟು ಭಯ ಆವರಿಸುತ್ತದೆ. ಗಾಂಧಿನಗರದಲ್ಲಿ ಇತ್ತೀಚೆಗೆ ಹಾರರ್ ಸಿನಿಮಾಗಳ ಅಬ್ಬರ ಜೋರಿದೆ. ಪ್ರೇಕ್ಷಕರಲ್ಲಿ ಸಿದ್ಧಮಾದರಿಯ ಈ ಚಿತ್ರಗಳ ಬಗ್ಗೆ ಒಂದೆಡೆ ಬೇಸರವೂ ಮಡುಗಟ್ಟಿದೆ. ‘ಕಟಕ’ ಚಿತ್ರ ಇಂಥ ಸಿದ್ಧಸೂತ್ರಗಳನ್ನು ಅಳವಡಿಸಿಕೊಂಡಿರುವ ತುಸು ಭಿನ್ನವಾದ ಸಿನಿಮಾ. ವಾಮಾಚಾರ ಘಟನೆ ಆಧಾರಿತ ಕಥೆಗೆ ಸಿನಿಮೀಯ ಸ್ಪರ್ಶವಿದೆ.

ಕರಾವಳಿ ಭಾಗದಲ್ಲಿ ಹದಿನಾಲ್ಕು ವರ್ಷದ ಹಿಂದೆ ನಡೆದ ವಾಮಾಚಾರದ ಘಟನೆಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವಿ ಬಸ್ರೂರ್. ಐದು ವರ್ಷದ ಬಾಲಕಿ ಮೇಲೆ ವಾಮಾಚಾರದ ಪ್ರಯೋಗ ನಡೆದಾಗ ಏನೆಲ್ಲಾ ಅನಾಹುತಗಳಾಗುತ್ತವೆ ಎನ್ನುವುದೇ ಕಥೆಯ ತಿರುಳು.

ಇಡೀ ಚಿತ್ರವು ವಾಮಾಚಾರದ ಎಳೆಗಳ ಸುತ್ತಲೇ ಸುತ್ತುತ್ತದೆ. ಈ ಎಳೆಗಳನ್ನು ಇಟ್ಟುಕೊಂಡೇ ‌ಗ್ರಾಮೀಣ ಪ್ರದೇಶದ ಹಲವು ಬಿಡಿ ಸನ್ನಿವೇಶಗಳನ್ನೂ ಹೆಣೆಯಲಾಗಿದೆ. ನಗರದ ಅಸಹನೀಯ ಬದುಕಿಗೆ ಬೇಸತ್ತು ಹುಟ್ಟೂರಿಗೆ ಬರುವ ವ್ಯಕ್ತಿ ಹೇಗೆ ಅಲ್ಲಿನವರ ಕುತಂತ್ರಗಳಿಗೆ ಸಿಲುಕುತ್ತಾನೆ ಎನ್ನುವ ಅಂಶವೂ ಚಿತ್ರದಲ್ಲಿ ಬೆಸೆದುಕೊಂಡಿದೆ.  

ಹುಟ್ಟೂರಿಗೆ ನಾಯಕನ ಪಯಣ, ಮನೆ ಸುತ್ತುವ ಬೆಂಕಿಯುಂಡೆಗಳು, ಬೆಚ್ಚಿಬೀಳಿಸುವ ಕರ್ಕಶ ಶಬ್ದ– ಇವು ಮೊದಲಾರ್ಧವನ್ನು ಆವರಿಸಿಕೊಂಡಿವೆ. ಬಾಲಕಿಗೆ ವಾಮಾಚಾರ ಪ್ರಯೋಗವು ಪರಿಣಾಮ ಬೀರುವುದರಲ್ಲಿಯೇ ಮೊದಲಾರ್ಧವು ತೆವಳುತ್ತ ಸಾಗುತ್ತದೆ. ಮತ್ತೊಂದೆಡೆ ಕಥೆಯ ಎಳೆ ಅರ್ಥವಾಗದೆ ನೋಡುಗರಲ್ಲಿ ಗೊಂದಲವೂ ಮೂಡುತ್ತವೆ. ದ್ವಿತೀಯಾರ್ಧದಲ್ಲಿ ಈ ಎಲ್ಲ ಗೊಂದಲಗಳಿಗೆ ನಿರ್ದೇಶಕರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಹಾಲಿವುಡ್‌ ಚಿತ್ರಗಳ ಮಾದರಿಯಲ್ಲಿಯೇ ಈ ಚಿತ್ರಕ್ಕೆ ಸೌಂಡ್‌ ಎಫೆಕ್ಟ್‌ ಸಿಕ್ಕಿರುವುದು ವಿಶೇಷ.

ಕುಮಾರ್ (ಅಶೋಕ್) ವಿಜ್ಞಾನ ಶಿಕ್ಷಕ. ಹುಟ್ಟೂರಿನಲ್ಲಿ ಶಾಲೆ ತೆರೆಯಬೇಕೆಂಬುದು ಅವನ ಮಹದಾಸೆ. ಅದಕ್ಕಾಗಿ ನಗರ ತ್ಯಜಿಸಿ ಕುಟುಂಬ ಸಮೇತ ಹಳ್ಳಿಗೆ ಬರುತ್ತಾನೆ. ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಅವನ ಆಸೆಗೆ ಊರಿನ ಪ್ರಭಾವಿಗಳಿಂದ ಅಡ್ಡಗಾಲು.

ಆತನ ಮಗಳು ಕಾವ್ಯಾ (ಶ್ಲಾಘಾ ಸಾಲಿಗ್ರಾಮ) ಮನೆಯಂಗಳದಲ್ಲಿ ಆಟವಾಡುವಾಗ ವಾಮಾಚಾರದ ‘ಕಟಕ ಪ್ರಯೋಗ’ಕ್ಕೆ ತುತ್ತಾಗುತ್ತಾಳೆ. ಆ ನಂತರ ಅವಳದ್ದು ನರಕಯಾತನೆ. ಆಕೆಯನ್ನು ಉಳಿಸಿಕೊಳ್ಳಲು ತಂದೆ–ತಾಯಿಯದ್ದು ಅವಿರತ ಹೋರಾಟ. ಈ ಪ್ರಯೋಗಕ್ಕೆ ಒಳಗಾದರೆ ಇಪ್ಪತ್ತೆಂಟು ದಿನದಲ್ಲಿ ಸಾವು ನಿಶ್ಚಿತ ಎಂದ ಜ್ಯೋತಿಷಿಯ ಮಾತು ಕೇಳಿ ಕುಮಾರ್ ಕುಸಿದುಹೋಗುತ್ತಾನೆ.

ಬಾಲಕಿಯನ್ನು ಈ ಸಂಕಷ್ಟದಿಂದ ಪಾರು ಮಾಡಲು ಕೇರಳದ ಜ್ಯೋತಿಷಿಯೊಬ್ಬ ಒಪ್ಪಿಕೊಳ್ಳುತ್ತಾನೆ. ಬಾಲಕಿಯನ್ನು ಈ ಪ್ರಯೋಗದಿಂದ ಮುಕ್ತಿಗೊಳಿಸಿದ ಬಳಿಕ ಬೇರೊಬ್ಬರಿಗೆ ಇದನ್ನು ಪ್ರಯೋಗಿಸಬೇಕು ಎಂಬುದು ಜ್ಯೋತಿಷಿಯ ಷರತ್ತು. ಕೊನೆಗೆ, ಮಗಳಿಗಾಗಿ ತಾನೇ ಈ ಪ್ರಯೋಗಕ್ಕೆ ಒಳಗಾಗಲು ಕುಮಾರ್ ಮುಂದಾಗುತ್ತಾನೆ. ನಾಯಕನ ಒಳ್ಳೆಯ ಗುಣಕ್ಕೆ ಮನಸೋತ ಆತನ ಗೆಳೆಯ ಈ ಪ್ರಯೋಗಕ್ಕೆ ತುತ್ತಾಗುವುದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಅಶೋಕ್‌, ಸ್ಪಂದನಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬಾಲನಟಿ ಶ್ಲಾಘಾ ಸಾಲಿಗ್ರಾಮ ಅಭಿನಯ ಸೊಗಸಾಗಿದೆ. ಸಚಿನ್‌ ಬಸ್ರೂರ್‌ ಛಾಯಾಗ್ರಹಣ ಕೆಲವು ದೃಶಗಳಿಗಷ್ಟೇ ಸಹನೀಯವಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry