ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ನಿರೀಕ್ಷೆ; ಶಾಂತಿ ಅಪೇಕ್ಷೆ

ಅಕ್ಷರ ಗಾತ್ರ

ಉತ್ತರ ಕೊರಿಯಾಗೆ ಹೋಗುವುದೆಂದರೆ ಈಗ ಬೇರೊಂದು ಜಗತ್ತಿಗೇ ಹೋದಂತೆ. ತನ್ನ ‘ಅಪ್ರತಿಮ ದೊರೆ’ಯು ಅಂಜುಕುಳಿ ಅಮೆರಿಕವನ್ನು ಸೋಲಿಸಿಯೇ ತೀರುತ್ತಾನೆಂದು ಭಾವಿಸಿರುವ, ಅಣುಯುದ್ಧದ ಗುಂಗಿನಲ್ಲಿರುವ ಹಾಗೂ ತಾನು ಒತ್ತೆ ಇರಿಸಿಕೊಂಡಿದ್ದ ಅಮೆರಿಕದ ಒಟ್ಟೋ ವಾರ್ಮ್‌ಬಿಯರ್‌ ನಂಥವರ ಬಗ್ಗೆ ಕರುಣೆಯ ಲವಲೇಶವೂ ಇಲ್ಲದಂತಹ ನಾಡು ಅದು.

ವಾರ್ಮ್‌ಬಿಯರ್‌, ವರ್ಜೀನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದವನು. ಭಿತ್ತಿಪತ್ರ ಕಳವು ಮಾಡಿದ ಆರೋಪದ ಮೇಲೆ ಉತ್ತರ ಕೊರಿಯಾ ಅವನನ್ನು ಬಂಧಿಸಿತು. ಅದಕ್ಕಾಗಿ 15 ವರ್ಷಗಳ ಕಠಿಣ ದೈಹಿಕ ದುಡಿಮೆಯ ಶಿಕ್ಷೆಗೆ ಆತ ಗುರಿಯಾದ. ಕೊನೆಯದಾಗಿ ನಿತ್ರಾಣ ಸ್ಥಿತಿಯಲ್ಲಿ ಅಮೆರಿಕಕ್ಕೆ ಹಿಂದಿರುಗಿ, ಬಂದ ಒಂದೇ ವಾರದಲ್ಲಿ ಅಸುನೀಗಿದ. ಈ ಬಗ್ಗೆ ಉತ್ತರ ಕೊರಿಯಾ ವಿದೇಶಾಂಗ ಇಲಾಖೆ ಅಧಿಕಾರಿ ರಿ ಯೊಂಗ್ ಪಿಲ್ ‘ಆತ ನಮ್ಮ ನೆಲದ ಕಾನೂನು ಉಲ್ಲಂಘಿಸಿದ.

ಮಾನವೀಯತೆಯ ನೆಲೆಯಲ್ಲಷ್ಟೇ ಆತನನ್ನು ಅವನ ದೇಶಕ್ಕೆ ವಾಪಸ್ ಕಳುಹಿಸಿಕೊಡಲಾಯಿತು’ ಎಂದು ಹೇಳುತ್ತಾರೆ. ಇದೇ ಇಲಾಖೆಯ ಮತ್ತೊಬ್ಬ ಹಿರಿಯ ಅಧಿಕಾರಿ ಚೊ ಕಾಂಗ್-2 ಹೇಳುವಂತೆ, ‘ಉತ್ತರ ಕೊರಿಯಾ ಆತನಿಗೆ ಉತ್ತಮ ಗುಣಮಟ್ಟದ ಆರೈಕೆ ನೀಡಿದ್ದು, ಅದಕ್ಕಾಗಿ ಅಪಾರ ಹಣವನ್ನು ವೆಚ್ಚ ಮಾಡಿದೆ’. ಈ ಮಾತು ಕೇಳಿ ನನಗೆ ಚುಚ್ಚಿದಂತಾಯಿತು.

ಉತ್ತರ ಕೊರಿಯಾದ ಈ ಬಾರಿಯ ನನ್ನ ಐದು ದಿನಗಳ ಭೇಟಿಯ ಸಂದರ್ಭದಲ್ಲಿ, ನನಗೆ ಎದುರಾದ ಯಾವೊಬ್ಬ ಅಧಿಕಾರಿಯೂ ಈ ಪ್ರಕರಣದ ಕುರಿತು ಬೇಸರದ ಧ್ವನಿಯಲ್ಲಿ ಮಾತನಾಡಲಿಲ್ಲ. ಅಲ್ಲಿ ಅಮೆರಿಕದ ಬಗ್ಗೆ ಯಾವ ರೀತಿಯ ತೀವ್ರವಾದಿ ಮನಸ್ಥಿತಿ ಇದೆ ಎಂಬುದನ್ನು ಇದು ಧ್ವನಿಸಿತು.

ಚೋ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒಬ್ಬ ‘ವಿಕಲ್ಪ ವ್ಯಕ್ತಿ, ಕ್ರೂರ ಆಕ್ರಮಣಕಾರಿ ಹಾಗೂ ಹರಕುಬಾಯಿಯ ಕರುಣಾಜನಕ ಮನುಷ್ಯ’ ಎಂದೂ ಟೀಕಿಸಿದರು.

1980ರಿಂದಲೂ ನಾನು ಆಗಾಗ್ಗೆ ಉತ್ತರ ಕೊರಿಯಾಗೆ ತೆರಳಿ ಅಲ್ಲಿನ ವಿದ್ಯಮಾನಗಳ ಬಗ್ಗೆ ವರದಿ ಮಾಡುತ್ತಲೇ ಬಂದಿದ್ದೇನೆ. ಆದರೆ ಈ ಬಾರಿಯ ಭೇಟಿ ಮಾತ್ರ ನನ್ನಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಮಹಾವಿಪ್ಲವದ ಅಪಾಯಗಳ ಬಗ್ಗೆ ಎಚ್ಚರಿಕೆಯ ಭಾವನೆ ಮೂಡಿಸಿದೆ.

ನನಗೆ ಹಾಗೂ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಇತರ ಮೂವರು ಪತ್ರಕರ್ತರಿಗೆ ಉತ್ತರ ಕೊರಿಯಾಕ್ಕೆ ತೆರಳಲು ವೀಸಾ ನೀಡಲಾಯಿತು. ಅಮೆರಿಕದ ವಿದೇಶಾಂಗ ಇಲಾಖೆಯು ಉತ್ತರ ಕೊರಿಯಾಕ್ಕೆ ತೆರಳಲು ಇರುವ ನಿರ್ಬಂಧದಿಂದ ನಮಗೆ ವಿನಾಯಿತಿ ನೀಡಿ ವಿಶೇಷ ಪಾಸ್‌ಪೋರ್ಟ್‌ಗಳನ್ನು ಕೊಟ್ಟಿತು.

ಈ ಹಿಂದಿನ ಸಲ ನಾನು ಅಲ್ಲಿಗೆ ಭೇಟಿ ನೀಡಿದ್ದಾಗ ಕಂಡುಬಂದದ್ದಕ್ಕಿಂತ ತೀವ್ರ ಪ್ರಮಾಣದಲ್ಲಿ ಈಗ ಉತ್ತರ ಕೊರಿಯಾ ಆಡಳಿತವು ತನ್ನ ಜನರನ್ನು ಅಮೆರಿಕ ವಿರುದ್ಧದ ಸಂಭಾವ್ಯ ಪರಮಾಣು ಯುದ್ಧಕ್ಕೆ ಮಾನಸಿಕವಾಗಿ ಹುರಿದುಂಬಿಸುತ್ತಿದೆ. ಸೇನಾ ಸಮವಸ್ತ್ರ ಧರಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರತಿದಿನವೂ ಅಲ್ಲಿನ ರಸ್ತೆಗಳಲ್ಲಿ ಪಥಸಂಚಲನ ನಡೆಸುತ್ತಾ ಅಮೆರಿಕವನ್ನು ಬಹಿರಂಗವಾಗಿ ಖಂಡಿಸುತ್ತಾರೆ.

ತನ್ನ ಕ್ಷಿಪಣಿಗಳು ಅಮೆರಿಕದ ರಾಜಧಾನಿಯನ್ನು ಹಾಳುಗೆಡವಿ ಅದರ ರಾಷ್ಟ್ರಧ್ವಜವನ್ನು ಛಿದ್ರಗೊಳಿಸುತ್ತಿರುವಂತಹ ಚಿತ್ರಗಳನ್ನು ಒಳಗೊಂಡ ಭಿತ್ತಿಪತ್ರಗಳು ಮತ್ತು ಫಲಕಗಳು ರಸ್ತೆಗಳಲ್ಲಿ ಕಂಡುಬರುತ್ತಿವೆ. ಅಷ್ಟೇ ಅಲ್ಲ, ಕ್ಷಿಪಣಿಯ ಚಿತ್ರಗಳು ಅಲ್ಲಿನ ಶಿಶುವಿಹಾರಗಳ ಮೈದಾನಗಳಲ್ಲಿ, ಡಾಲ್ಫಿನ್ ಮೀನುಗಳ ಪ್ರದರ್ಶನ ತಾಣಗಳಲ್ಲಿ, ಸರ್ಕಾರಿ ಸ್ವಾಮ್ಯದ ಟೆಲಿವಿಷನ್‌ನಲ್ಲಿ- ಹೀಗೆ ಎಲ್ಲೆಲ್ಲೂ ರಾರಾಜಿಸುತ್ತಿವೆ. ತನ್ನ ರಾಷ್ಟ್ರವು ಪರಮಾಣು ಸಮರವನ್ನು ಎದುರಿಸಲಷ್ಟೇ ಅಲ್ಲ, ಅದರಲ್ಲಿ ಜಯಶಾಲಿ ಆಗುವಷ್ಟು ಸಮರ್ಥವಾಗಿದೆ ಎಂಬ ಭಾವನೆ ಉತ್ತರ ಕೊರಿಯಾ ಜನರಲ್ಲಿ ವ್ಯಾಪಕವಾಗಿದೆ ಕೂಡ.

‘ಒಂದೊಮ್ಮೆ ನಾವು ಯುದ್ಧ ಮಾಡಬೇಕಾಗಿ ಬಂದರೆ, ಅಮೆರಿಕವನ್ನು ಇಡಿಯಾಗಿ ಧ್ವಂಸಗೊಳಿಸಲು ಕೂಡ ನಾವು ಹಿಂಜರಿಯುವುದಿಲ್ಲ’ ಎಂದು ಅಲ್ಲಿನ ಅಮ್ಯೂಸ್‌ಮೆಂಟ್ ಪಾರ್ಕೊಂದರಲ್ಲಿ ಹೇಳಿದ 38 ವರ್ಷದ ಶಿಕ್ಷಕ ಮುನ್ ಹಯೋಕ್ ಮ್ಯಾಂಗ್ ಮಾತು ಇದಕ್ಕೊಂದು ನಿದರ್ಶನ.

ಈ ಪ್ರಶ್ನೆಯನ್ನು ನಾನು ವಿದೇಶಾಂಗ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಕೇಳಿದೆ. ಒಂದೊಮ್ಮೆ ಅವರ ಗೈರುಹಾಜರಿಯಲ್ಲೂ ಆ ಜನರ ಉತ್ತರ ಬೇರೆ ಆಗಿರುವ ಸಾಧ್ಯತೆ ಇರಲಿಕ್ಕಿಲ್ಲ. ಏಕೆಂದರೆ, ಒಬ್ಬ ವಿದೇಶಿ ಪತ್ರಕರ್ತನೊಂದಿಗೆ ಅವರು ಮುಕ್ತ ಮನಸ್ಸಿನಿಂದ ಮಾತನಾಡುವ ಸಾಧ್ಯತೆಯನ್ನೇ ಊಹಿಸಲಾಗದು.

ಬಹುಶಃ ಈಗ ಜಗತ್ತಿನಲ್ಲಿ ಉತ್ತರ ಕೊರಿಯಾಕ್ಕಿಂತ ಅತ್ಯಂತ ಕಠಿಣ ಕಟ್ಟುಪಾಡುಗಳಿರುವ ಮತ್ತೊಂದು ರಾಷ್ಟ್ರ ಇರಲಾರದು. ಹೀಗಾಗಿ ಅಲ್ಲಿನ ಜನರ ಅಭಿಪ್ರಾಯಗಳನ್ನು ಆ ಸರ್ಕಾರದ ಪ್ರತಿಬಿಂಬವೆಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ- ಅಂದರೆ ಇದು ಕಳವಳಕ್ಕೀಡುಮಾಡುವ ಹುಚ್ಚು ರಾಷ್ಟ್ರಾಭಿಮಾನ ಎಂದೇ ಹೇಳಬೇಕಾಗುತ್ತದೆ.

ನಾವು ಪತ್ರಕರ್ತರು ಈ ನಾಡಿಗೆ ಹಿಂದೆಲ್ಲ ಭೇಟಿ ನೀಡಿದ್ದಾಗ (2005ರಲ್ಲಿ ನಾನು ಕೊನೆಯದಾಗಿ ಭೇಟಿ ಕೊಟ್ಟಿದ್ದೆ) ರಾಜಧಾನಿಯ ಹೋಟೆಲ್‌ಗಳಲ್ಲಿ ತಂಗಿದ್ದೆವು ಮತ್ತು ನಮಗೆ ಇಷ್ಟ ಬಂದೆಡೆ ಮುಕ್ತವಾಗಿ ಅಡ್ಡಾಡುತ್ತಿದ್ದೆವು. ಆದರೆ ಈ ಬಾರಿ ವಿದೇಶಾಂಗ ಸಚಿವಾಲಯವು ನಮಗೆ ಭದ್ರತಾ ವ್ಯವಸ್ಥೆಯುಳ್ಳ ತನ್ನದೇ ಅತಿಥಿಗೃಹದಲ್ಲಿ ವಾಸ್ತವ್ಯ ಕಲ್ಪಿಸಿತ್ತು.

ಆರಂಭದಲ್ಲಿ ನಾನು ನಮ್ಮನ್ನು ನಿಯಂತ್ರಣದಲ್ಲಿರಿಸಲು ಹೀಗೆ ಮಾಡಲಾಗಿದೆ ಎಂದುಕೊಂಡಿದ್ದೆ. ಆದರೆ ನಂತರ ನನಗೆ ಹೆಚ್ಚು ಆಸಕ್ತಿದಾಯಕವಾದ ಹಾಗೂ ದಿಗಿಲು ಮೂಡಿಸುವ ಸುಳಿವುಗಳು ಕಾಣಲಾರಂಭಿಸಿದವು. ಸಚಿವಾಲಯವು ನಮ್ಮನ್ನು ಸೇನೆ ಹಾಗೂ ಭದ್ರತಾ ಸೇವೆಗಳಲ್ಲಿನ ತೀವ್ರವಾದಿಗಳಿಂದಲೂ ರಕ್ಷಿಸುವ ಕೆಲಸ ಮಾಡುತ್ತಿತ್ತು.

‘ನೀವು ಅಮೆರಿಕದವರು ಎಂಬುದು ಯಾರ ಕಿವಿಗಾದರೂ ಬಿದ್ದರೆ ಅದರಿಂದ ನಿಮಗೆ ತೊಂದರೆ ಉಂಟಾಗಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ವರ್ಷ ಅಲ್ಲಿ ತೀವ್ರವಾದಿಗಳ ಬಲ ಸಾಕಷ್ಟು ವೃದ್ಧಿಸಿದೆ. ಅದರಲ್ಲೂ ಟ್ರಂಪ್ ಅವರು ಉತ್ತರ ಕೊರಿಯಾವನ್ನು ‘ಸಂಪೂರ್ಣ ಧ್ವಂಸ’ಗೊಳಿಸುವುದಾಗಿ ಬೆದರಿಕೆ ಹಾಕಿದ ನಂತರ ಈ ಬೆಳವಣಿಗೆ ನಿಚ್ಚಳವಾಗಿದೆ.

ಪ್ರತಿ ಸಲ ನಾವು ಕಾಂಪೌಂಡ್ ಬಿಟ್ಟು ಹೊರಡುವಾಗಲೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ನಮ್ಮ ಬೆಂಗಾವಲಿಗೆ ಇರುತ್ತಿದ್ದರು. ಬಹುಶಃ ನಮ್ಮನ್ನು ಯಾವುದೇ ಅಪಾಯಕಾರಿ ಸಾಹಸದಿಂದ ತಡೆಯುವುದು ಹಾಗೂ ಭದ್ರತಾ ಸಂಸ್ಥೆಗಳಿಂದ ರಕ್ಷಿಸುವುದು ಅವರ ಉದ್ದೇಶವಾಗಿರಬೇಕು. ಆದರೆ ಇದು ನಮಗೆ ಸ್ವಲ್ಪ ಮಟ್ಟಿಗೆ ಕಿರಿಕಿರಿಯ ಸಂಗತಿಯೇ ಆಗಿತ್ತು.

ಹಿಂದಿನ ಭೇಟಿ ವೇಳೆ ನಾನು ಹಿರಿಯ ಜನರಲ್‌ಗಳನ್ನು ಸಂಧಿಸಿದ್ದೆ. ಆದರೆ ಈ ಸಲ ಸೇನೆಯು ನನ್ನ ಈ ಬೇಡಿಕೆಯನ್ನು ಖಂಡತುಂಡವಾಗಿ ತಳ್ಳಿಹಾಕಿತು. ಮೂಲಭೂತ ಸಮಸ್ಯೆ ಏನೆಂದರೆ, ಅಮೆರಿಕ ಮತ್ತು ಉತ್ತರ ಕೊರಿಯಾ ಎರಡೂ ರಾಷ್ಟ್ರಗಳಲ್ಲಿ ತೀವ್ರವಾದಿಗಳ ಸಂಖ್ಯೆ ವೃದ್ಧಿಸಿದೆ.

ಇತ್ತ ವಾಷಿಂಗ್ಟನ್‌ನಲ್ಲಿ ವಿದೇಶಾಂಗ ಇಲಾಖೆ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಅವರು ಉತ್ತರ ಕೊರಿಯಾದೊಂದಿಗಿನ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಏನೆಂಬ ಕುರಿತು ಸಲಹೆ ನೀಡುತ್ತಿದ್ದಾರೆ. ಆದರೆ ಟ್ರಂಪ್ ಅವರು ಈ ಸಾಧ್ಯತೆಯನ್ನು ತಳ್ಳಿಹಾಕುವುದರ ಜತೆಗೆ, ‘ಟಿಲ್ಲರ್‌ಸನ್ ತಮ್ಮ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಟ್ವಿಟರ್‌ನಲ್ಲೇ ಹೇಳಿದ್ದಾರೆ.

ಮತ್ತೊಂದೆಡೆ, ವಿಶಾಲವಾದ ರಸ್ತೆಗಳು ಹಾಗೂ ಪಾರಂಪರಿಕ ಕಟ್ಟಡಗಳಿಂದ ತುಂಬಿರುವ ಉತ್ತರ ಕೊರಿಯಾ ರಾಜಧಾನಿ ಪ್ಯೋಂಗ್‍ಯಾಂಗ್‌ನಲ್ಲಿರುವ ಅಧಿಕಾರಿಗಳು, ಅಮೆರಿಕದ ಜೊತೆಗಿನ ಸಂಘರ್ಷ ಕೊನೆಗೊಳಿಸಲು ಅತ್ಯಗತ್ಯವಾದ ತೀವ್ರತರ ಹೊಂದಾಣಿಕೆಗಳ ಬಗ್ಗೆ ಯಾವ ಆಸಕ್ತಿಯನ್ನೂ ತೋರುತ್ತಿಲ್ಲ.

ಅಲ್ಲಿನ ವಿದೇಶಾಂಗ ಸಚಿವಾಲಯದ ಅಧಿಕಾರಿ ಚೋ ಹೇಳುವ ಪ್ರಕಾರ, ‘ಕೊರಿಯಾ ಪರ್ಯಾಯ ದ್ವೀಪದ ಈಗಿನ ಪರಿಸ್ಥಿತಿಯು ಸಂಭಾವ್ಯ ಪರಮಾಣು ಸಮರಕ್ಕೆ ಸನ್ನಿಹಿತವಾಗಿದೆ’. ‘ನಾವು ಅಂತಹ ಯುದ್ಧವನ್ನು ಮೆಟ್ಟಿನಿಲ್ಲಬಲ್ಲೆವು’ ಎಂದೂ ಅವರು ಹೇಳುತ್ತಾರೆ.

ಒಂದೊಮ್ಮೆ ಮಾತುಕತೆ ನಡೆಯಬೇಕೆಂದಾದರೆ, ಈ ದಿಸೆಯಲ್ಲಿ ಅಮೆರಿಕ ಮೊದಲ ಹೆಜ್ಜೆ ಇರಿಸಬೇಕು; ತನ್ನೆಡೆಗಿನ ದ್ವೇಷ ಧೋರಣೆಯನ್ನು ಹಾಗೂ ವಿಧಿಸಲಾಗಿರುವ ದಿಗ್ಬಂಧನಗಳನ್ನು ಕೈಬಿಡಬೇಕು ಎಂಬುದು ಉತ್ತರ ಕೊರಿಯಾ ಅಪೇಕ್ಷೆ. ಆದರೆ ಇದು ವಾಸ್ತವದಲ್ಲಿ ಸಾಧ್ಯವಿಲ್ಲ. ಇದೇ ರೀತಿ ಅಮೆರಿಕ ಕೂಡ, ಉತ್ತರ ಕೊರಿಯಾವು ತನ್ನ ಪರಮಾಣು ಕಾರ್ಯಕ್ರಮಗಳನ್ನೆಲ್ಲಾ ತ್ಯಜಿಸಬೇಕು ಎಂದು ಬಯಸುವುದು ಕೂಡ ಅಷ್ಟೇ ಅವಾಸ್ತವಿಕ.

ಈ ಸಲದ ನನ್ನ ಉತ್ತರ ಕೊರಿಯಾ ಭೇಟಿ, ಅಮೆರಿಕದ ದಾಳಿಗೆ ಮುನ್ನ ಸದ್ದಾಂ ಹುಸೇನ್ ಆಡಳಿತದ ಇರಾಕ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿತು. ನನ್ನ ಈ ಅನಿಸಿಕೆಯನ್ನು ಚೋ ಅವರ ಜೊತೆ ನಾನು ಹಂಚಿಕೊಂಡೆ ಕೂಡ. ಆದರೆ ವ್ಯತ್ಯಾಸವೇನೆಂದರೆ, ಒಂದೊಮ್ಮೆ ಉತ್ತರ ಕೊರಿಯಾದೊಂದಿಗೆ ಸಮರ ನಡೆದಿದ್ದೇ ಆದರೆ ಅದು ಕೇವಲ ಪ್ರಾದೇಶಿಕ ದುರಂತವಷ್ಟೇ ಆಗಿರುವುದಿಲ್ಲ; ಬದಲಿಗೆ, ಪರಮಾಣು ವಿಪ್ಲವ ಆಗಿರುತ್ತದೆ. ಆದರೆ ನನ್ನ ಈ ಮಾತುಗಳು ಚೋ ಅವರ ಮೇಲೆ ಯಾವ ಪರಿಣಾಮವನ್ನೂ ಬೀರಿದಂತೆ ತೋರಲಿಲ್ಲ.

‘ಈ ಹಿಂದೆ ಇರಾಕ್ ಮತ್ತು ಲಿಬಿಯಾ ತಮ್ಮ ಪರಮಾಣು ಕಾರ್ಯಕ್ರಮ ಕೈಬಿಟ್ಟು ತಪ್ಪೆಸಗಿದವು. ಈ ಎರಡೂ ಪ್ರಕರಣಗಳಲ್ಲಿ ಅಮೆರಿಕವು ನಂತರ ಅಲ್ಲಿನ ಆಡಳಿತವನ್ನು ಕಿತ್ತೊಗೆಯಿತು. ಹೀಗಾಗಿ ನಾವು ಸರಿಯಾದ ಪಾಠವನ್ನೇ ಕಲಿತಿದ್ದೇವೆ. ಯಾವ ಕಾರಣಕ್ಕೂ ನಮ್ಮ ಅಣ್ವಸ್ತ್ರಗಳನ್ನು ತ್ಯಜಿಸುವ ಪ್ರಶ್ನೆಯೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂಭಾವ್ಯ ಯುದ್ಧದ ಛಾಯೆಯ ನಡುವೆಯೂ ಉತ್ತರ ಕೊರಿಯಾದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಾಗಿವೆ. ಅಲ್ಲಿನ ಶೇ 25ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ನಿಜವಾದರೂ ಆ ರಾಷ್ಟ್ರ ಈಗ ಹಸಿವಿನ ಸಮಸ್ಯೆಯಿಂದ ಹೊರಬಂದಿದೆ; ಆರ್ಥಿಕತೆ ವೃದ್ಧಿಯಾಗಿದೆ. ಈ ಹಿಂದಿನ ಪೀಳಿಗೆಗೆ ಹೋಲಿಸಿದರೆ ಈಗಿನ ಸರ್ಕಾರಿ ಅಧಿಕಾರಿಗಳು ಹೆಚ್ಚು ಮುಕ್ತವಾದ ಮನಸ್ಸು ಹೊಂದಿದ್ದಾರೆ.

ಈ ಹಿಂದೆ ಉತ್ತರ ಕೊರಿಯಾ ಅಧಿಕಾರಿಗಳು, ತಮ್ಮ ರಾಷ್ಟ್ರದಲ್ಲಿ ಅಪರಾಧ ಎಂದಾದರೂ ನಡೆದಿತ್ತು ಎಂಬುದನ್ನು ಕೂಡ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಈಗ ಅವರು, ತಮ್ಮ ನಾಡಿನಲ್ಲಿ ಕಳ್ಳಕಾಕರು ಇದ್ದಾರೆ ಎಂಬುದನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳುತ್ತಾರೆ. ಕೆಲವೊಮ್ಮೆ ಯುವತಿಯರು ಮದುವೆಗೆ ಮುನ್ನವೇ ಗರ್ಭ ಧರಿಸುತ್ತಿದ್ದಾರೆ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ. ಒಂದಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಇದೆ ಎಂಬುದನ್ನು ಸಹ ಅವರು ಅಲ್ಲಗಳೆಯುವುದಿಲ್ಲ.

ಉತ್ತರ ಕೊರಿಯಾಕ್ಕೇನೂ ಈಗ ಎಲ್ಲ ಪ್ರಭಾವಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲಿ ಇಂಟರ್‌ನೆಟ್ ಇಲ್ಲ. ಆದರೆ ಸರ್ಕಾರದ ಬಿಗಿ ನಿಯಂತ್ರಣದಲ್ಲಿರುವ ದೇಶೀಯವಾದ ಇಂಟ್ರಾನೆಟ್ ಇದೆ. ಅಲ್ಲಿನ ವಿದ್ಯಾರ್ಥಿಗಳು 3ನೇ ತರಗತಿಯಿಂದ ಇಂಗ್ಲಿಷ್ ಕಲಿಯುತ್ತಿದ್ದಾರೆ. ಪ್ಯೋಂಗ್‍ಯಾಂಗ್‌ನ ಅತ್ಯುತ್ತಮ ಶಾಲೆಗಳ ವಿದ್ಯಾರ್ಥಿಗಳು ತುಂಬಾ ಬುದ್ಧಿಶಾಲಿಗಳಾಗಿದ್ದು, ಅತ್ಯಂತ ನಯ ನಾಜೂಕಿನೊಂದಿಗೆ ಇಂಗ್ಲಿಷ್‌ನಲ್ಲಿ ಸರಾಗವಾಗಿ ಸಂವಹನ ನಡೆಸಬಲ್ಲವರಾಗಿದ್ದಾರೆ. ಆದರೆ 1989ರಲ್ಲಿ ನಾನು ಇಲ್ಲಿನ ಶಾಲೆಗಳಿಗೆ ಭೇಟಿ ನೀಡಿದ್ದಾಗ ಈ ಪರಿಸ್ಥಿತಿ ಇರಲಿಲ್ಲ.

ಆದರೂ ಇದು ಉತ್ತರ ಕೊರಿಯಾ. ‘ಫೇಸ್‌ಬುಕ್ ಬಗ್ಗೆ ಕೇಳಿದ್ದೀರಾ?’ ಎಂದು ಅಲ್ಲಿನ ಮಕ್ಕಳನ್ನು ಕೇಳಿದೆ. ಒಬ್ಬನೇ ಒಬ್ಬ ವಿದ್ಯಾರ್ಥಿ ಮಾತ್ರ, ಸಾಫ್ಟ್‌ವೇರ್‌ನಲ್ಲಿ ಕೆಲವೊಮ್ಮೆ ಈ ಹೆಸರು ಮೂಡುವುದನ್ನು ನೋಡಿದ್ದೇನೆ ಎಂದ. ಆದರೆ ಹಾಗೆಂದರೇನು ಎಂಬುದು ಅವನಿಗೂ ಗೊತ್ತಿರಲಿಲ್ಲ.

ರೇಡಿಯೊ ಆಗಲಿ ಅಥವಾ ಟೆಲಿವಿಷನ್ ಆಗಲಿ ಇಲ್ಲಿ ವಿದೇಶಿ ಕಾರ್ಯಕ್ರಮ ಬಿತ್ತರಿಸುವುದು ಕಾನೂನುಬಾಹಿರ. ವಿದೇಶಿಯರು ಹಾಗೂ ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಇಂಟರ್‌ನೆಟ್ ಬಳಕೆಗೆ
ಅನುಮತಿ ಇಲ್ಲ.

ಇಲ್ಲಿನ ಪ್ರತಿ ಮನೆ ಹಾಗೂ ಪ್ರತಿ ಗ್ರಾಮವೂ ಧ್ವನಿವರ್ಧಕವನ್ನು ಹೊಂದಿದೆ. ನೇರವಾಗಿ ದೊರೆ ಇರುವಲ್ಲಿಂದ ಇವು ಸಂಪರ್ಕ ಪಡೆದಿವೆ. ಈ ಧ್ವನಿವರ್ಧಕಗಳ ಮೂಲಕ, ಆಳ್ವಿಕೆ ಬಯಸುವ ಆಯ್ದ ಮಾಹಿತಿಗಳು ಪ್ರತಿ ಬೆಳಿಗ್ಗೆ ಜನರನ್ನು ತಲುಪುತ್ತವೆ. ಇಲ್ಲಿ ಕಂಪ್ಯೂಟರ್‌ಗಳು, ಸಿ.ಸಿ. ಟಿ.ವಿ. ಕ್ಯಾಮೆರಾಗಳು, ಮೊಬೈಲ್‌ಗಳು ಹಾಗೂ ಇನ್ನಿತರ ಕಣ್ಗಾವಲು ತಂತ್ರಜ್ಞಾನಗಳು ಇವೆ. ಆದರೆ ಅವೆಲ್ಲವೂ ಸಂಪೂರ್ಣವಾಗಿ ಪ್ರಭುತ್ವದ ನಿಯಂತ್ರಣದಲ್ಲಿವೆ. ಹೀಗಾಗಿ ಸ್ಟಾಲಿನ್ ಅಥವಾ ಮಾವೊ ಕೇವಲ ಕನಸು ಕಾಣಬಹುದಾಗಿದ್ದ ಪ್ರಭುತ್ವದ ನಿಯಂತ್ರಣ ಇಲ್ಲಿ ಸಾಕಾರಗೊಂಡಿದೆ ಎಂದು ಯಾವುದೇ ಅಳುಕಿಲ್ಲದೆ ಹೇಳಬಹುದಾಗಿದೆ.

ಕೆಲವು ವಿಷಯಗಳಲ್ಲಿ ಉತ್ತರ ಕೊರಿಯಾ ವಿಚಿತ್ರ ರಾಷ್ಟ್ರವೂ ಹೌದು. ತ್ರಿವಳಿ ಶಿಶುಗಳನ್ನು ಇಲ್ಲಿ ಶುಭಶಕುನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಯಾರಾದರೂ ತ್ರಿವಳಿಗಳಿಗೆ ಜನ್ಮ ನೀಡಿದರೆ ಅಂತಹ ಶಿಶುಗಳನ್ನು ಅಲ್ಲಿನ ಆಡಳಿತವೇ ಪೋಷಕರಿಂದ ಪಡೆದು ಅವರನ್ನು ಬೆಳೆಸುವ ಹೊಣೆ ಹೊರುತ್ತದೆ. ಅಲ್ಲಿನ ಪ್ರತಿಯೊಬ್ಬ ವಯಸ್ಕನೂ ತಮ್ಮ ಅಪ್ರತಿಮ ನಾಯಕನಾದ, 1994ರಲ್ಲಿ ಸಾವಿಗೀಡಾದ ಕಿಮ್ 2 ಸಂಗ್ ಹೆಸರುಳ್ಳ ಪಿನ್‌ಗಳನ್ನು ಅಥವಾ 2011ರಲ್ಲಿ ಸಾವಿಗೀಡಾದ ಆತ್ಮೀಯ ನಾಯಕ ಕಿಮ್ ಜಾಂಗ್ 2 ಹೆಸರುಳ್ಳ ಪಿನ್‌ಗಳನ್ನು ಧರಿಸಿರುತ್ತಾನೆ. ಅಲ್ಲದೆ, ಇವರ ಭಾವಚಿತ್ರಗಳು ಪ್ರತಿ ಮನೆಯಲ್ಲೂ, ಕಾರ್ಖಾನೆಯಲ್ಲೂ, ತರಗತಿಯ ಕೊಠಡಿಯಲ್ಲೂ ಇರುತ್ತವೆ.

ಈಗ ಅಂಥದ್ದೇ ಆರಾಧನಾ ಭಾವ 33ರ ಹರೆಯದ ದೊರೆ ಕಿಮ್ ಜಾಂಗ್ ಉನ್ ಬಗೆಗೂ ಬೇರುಬಿಟ್ಟಿದೆ. ಈ ಹೆಸರಿನ ಅರ್ಥ ‘ನ್ಯಾಯವಂತ ಹಾಗೂ ಕಾರುಣ್ಯವಂತ’ ಎಂದು. ಸರ್ಕಾರಿ ನಿಯಂತ್ರಣದ ಅಲ್ಲಿನ ಮಾಧ್ಯಮ ಆತನ ಅಪ್ರತಿಮ ಬುದ್ಧಿಮತ್ತೆ, ಸೇನಾ ಚಾತುರ್ಯ, ಅದ್ವಿತೀಯ ಶೌರ್ಯ ಹಾಗೂ ಆಜ್ಞಾ ಕೌಶಲದ ಗುಣಗಾನ ಮಾಡುತ್ತದೆ.

ನಿಜವಾಗಿಯೂ ಜನ ಇವನ್ನೆಲ್ಲಾ ನಂಬುತ್ತಾರಾ? ನಾನು ಹಲವಾರು ವರ್ಷಗಳಿಂದ ಬಹಳಷ್ಟು ಟೀಕಾಕಾರರನ್ನು ಸಂದರ್ಶಿಸಿದ್ದೇನೆ. ತಮ್ಮ ರಾಷ್ಟ್ರ ಹಿಂದುಳಿದಿದೆ ಎಂಬುದನ್ನು ಅರ್ಥೈಸಿಕೊಂಡಿರುವ ಯುವಜನ ಹಾಗೂ ಚೀನಾ ಗಡಿಗೆ ಹೊಂದಿಕೊಂಡ ಪ್ರದೇಶಗಳ ಜನರಲ್ಲಿ ಅಲ್ಲಿನ ಆಡಳಿತದ ಬಗ್ಗೆ ತಾತ್ಸಾರವಿದೆ. ಆದರೆ, ಈ ಟೀಕಾಕಾರರೇ ಹೇಳುವ ಪ್ರಕಾರ, ಹೆಚ್ಚಿನ ಉತ್ತರ ಕೊರಿಯನ್ನರು, ವಿಶೇಷವಾಗಿ ವಯಸ್ಸಾದವರು ಹಾಗೂ ಚೀನಾ ಗಡಿಯಿಂದ ದೂರದ ಭಾಗದಲ್ಲಿರುವವರು ತಮ್ಮ ವ್ಯವಸ್ಥೆ ಬಗ್ಗೆ ಅಚಲ ವಿಶ್ವಾಸ ಹೊಂದಿದ್ದು, ಕಿಮ್ ಕುಟುಂಬಸ್ಥರನ್ನು ಆರಾಧಿಸುತ್ತಾರೆ. ಏಕೆಂದರೆ ಅದನ್ನು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ.

ಉತ್ತರ ಕೊರಿಯನ್ನರಿಗೆ ಮಾಹಿತಿ ಹೇಗೆ ತಲುಪುತ್ತದೆ ಎಂಬ ಬಗ್ಗೆ ಕೃತಿಯೊಂದನ್ನು ಬರೆದಿರುವ ಲೇಖಕಿ ಜಿಯುನ್ ಬೀಕ್ ಹೇಳುವಂತೆ, ಮಾರುಕಟ್ಟೆ ಆರ್ಥಿಕತೆಗೆ ತೆರೆದುಕೊಂಡಿರುವ ಯುವಜನರ ಮನೋಧೋರಣೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಆದರೂ ಸದ್ಯಕ್ಕೆ ಯಾವುದೇ ಕ್ರಾಂತಿಕಾರಿ ಬದಲಾವಣೆ ಆಗುವ ಸಾಧ್ಯತೆ ಇಲ್ಲ.

ತಾವು ಮತ್ತೆ ಮತ್ತೆ ಅಮೆರಿಕಕ್ಕೆ ಸೋಲುಣಿಸಿದ್ದೇವೆ, ಈಗಲೂ ಅದನ್ನು ಮಾಡಲು ಸಮರ್ಥರಿದ್ದೇವೆ ಎಂಬ ಭಾವದಲ್ಲಿ ಉತ್ತರ ಕೊರಿಯನ್ನರು ಮುಳುಗಿರುವುದು ಈಗಿನ ಪರಿಸ್ಥಿತಿಯನ್ನು ಅಪಾಯಕಾರಿಯಾಗಿಸಿದೆ. ಅಧಿಕಾರಿಗಳಿಂದ ಹಿಡಿದು ವಿದ್ಯಾರ್ಥಿಗಳವರೆಗೆ ನಾವು ಮಾತನಾಡಿಸಿದ ಪ್ರತಿಯೊಬ್ಬರೂ, ಒಂದೊಮ್ಮೆ ಯುದ್ಧ ನಡೆದರೆ ಅಮೆರಿಕ ಸುಟ್ಟು ಬೂದಿಯಾಗುತ್ತದೆ, ಕಿಮ್ ಆಡಳಿತ ವಿಜಯಿಯಾಗುತ್ತದೆ ಎಂದೇ ಪ್ರತಿಪಾದಿಸಿದರು.

ಇದೇ ವೇಳೆ ನಾನು, ಕೊರಿಯಾ ಯುದ್ಧದ ನೆನಪಿಗಾಗಿ ಪ್ಯೋಂಗ್‍ಯಾಂಗ್‌ ನಲ್ಲಿ ಕಿಮ್ ನಿರ್ಮಿಸಿರುವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದೆ. ಅಮೆರಿಕವು 1950ರಲ್ಲಿ ಉತ್ತರ ಕೊರಿಯಾವನ್ನು ಆಕ್ರಮಿಸುವ ಮೂಲಕ ಈ ಯುದ್ಧಕ್ಕೆ ಕಾರಣವಾಯಿತು ಎಂಬ ಮಾಹಿತಿ ಅಲ್ಲಿದೆ. ಅಮೆರಿಕವು ಉತ್ತರ ಕೊರಿಯಾದಲ್ಲಿ ಎಸಗಿರುವ ದೌರ್ಜನ್ಯಗಳು ಹಿಟ್ಲರ್ ಎಸಗಿದ ದೌರ್ಜನ್ಯಗಳಿಗಿಂತ ಹೇಯ ಎಂಬ ಮಾಹಿತಿಯೂ ಇದೆ. ‘ಅಮೆರಿಕನ್ನರು ತಮ್ಮ ವಿನೋದಕ್ಕಾಗಿ ಕೊರಿಯನ್ನರನ್ನು ಕೊಂದರು’ ಎಂಬ ಭಾವನೆಯೂ ಅಲ್ಲಿ ದಟ್ಟವಾಗಿದೆ.

ಈ ವಸ್ತುಸಂಗ್ರಹಾಲಯದ ಒಂದು ಕೊಠಡಿಗೆ ‘ಅಮೆರಿಕದ ಸೋಲು’ ಎಂದೇ ಹೆಸರಿಡಲಾಗಿದೆ. ಇಲ್ಲಿನ ಚಿತ್ರಸರಣಿಯಲ್ಲಿ ಅಮೆರಿಕದ ಯೋಧನ ಶವವನ್ನು ಕಾಗೆಗಳು ಕಿತ್ತು ತಿನ್ನುತ್ತಿರುವಂತೆ ಚಿತ್ರಿಸಲಾಗಿದೆ. ಇದರ ಪಕ್ಕದ ಕೊಠಡಿಯಲ್ಲಿ ಉತ್ತರ ಕೊರಿಯಾವು 1968ರಲ್ಲಿ ಅಮೆರಿಕ ನೌಕಾದಳದ ಪ್ಯೂಬ್ಲೊ ಎಂಬ ಹಡಗನ್ನು ವಶಪಡಿಸಿಕೊಂಡಿದ್ದನ್ನು ಬಿಂಬಿಸಲಾಗಿದೆ. ದಕ್ಷಿಣ ಕೊರಿಯಾ ಗಡಿಯಲ್ಲಿರುವ ಮತ್ತೊಂದು ವಸ್ತು ಸಂಗ್ರಹಾಲಯದಲ್ಲಿ 1976ರಲ್ಲಿ ಅಮೆರಿಕದ ಇಬ್ಬರು ಸೈನಿಕರನ್ನು ಹತ್ಯೆ ಮಾಡಲು ಬಳಸಿದ್ದ ಕೊಡಲಿಯನ್ನು
ಪ್ರದರ್ಶನಕ್ಕೆ ಇರಿಸಲಾಗಿದೆ.

ಈ ಎಲ್ಲ ರಾಜತಾಂತ್ರಿಕ ದ್ವೇಷಗಳ ನಡುವೆಯೂ ಉತ್ತರ ಕೊರಿಯನ್ನರು ವ್ಯಕ್ತಿಗತ ನೆಲೆಯಲ್ಲಿ ಅಮೆರಿಕನ್ನರೊಂದಿಗೆ ಸ್ನೇಹಭಾವದಿಂದಲೇ ಇರುತ್ತಾರೆ. ರಾಜಧಾನಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಭವನದಲ್ಲಿ 13 ವರ್ಷದ ಹುಡುಗ ಪೀಕ್ ಸಿನ್ ಹಯೊಕ್‌ನನ್ನು ನಾನು ಭೇಟಿಯಾಗಿದ್ದೆ.  ಅಮೆರಿಕದ ಪ್ರಜೆಯನ್ನು ಆತ ಭೇಟಿಯಾಗಿದ್ದು ಅದೇ ಮೊದಲು.

ಈ ಸಂದರ್ಭದಲ್ಲಿ ಆತ, ‘ನನ್ನ ಎದೆ ಢವಗುಟ್ಟುತ್ತಿದೆ’ ಎಂದ. ‘ತೋಳ ಹೇಗೆ ಕುರಿಯಾಗುವುದು ಸಾಧ್ಯವಿಲ್ಲವೋ ಹಾಗೆಯೇ ಅಮೆರಿಕದ ಸಾಮ್ರಾಜ್ಯಶಾಹಿ ತನ್ನ ಆಕ್ರಮಣಕಾರಿ ಮನೋಭಾವ ಬದಲಿಸಲಾರದು ಎಂಬ ಭಾವನೆ ಉತ್ತರ ಕೊರಿಯಾ ಜನರಲ್ಲಿದೆ.

ನೀನು ಇಲ್ಲಿರುವ ನಮ್ಮ ಬಗ್ಗೆ ಏನನ್ನುತ್ತೀಯಾ? ನಾವು ತೋಳಗಳೋ? ಅಥವಾ ಕುರಿಗಳೋ?’ ಎಂದೆ.ಇದಕ್ಕೆ ಸೌಜನ್ಯದಿಂದ ಹೇಗೆ ಉತ್ತರಿಸಬೇಕು ಎಂದು ತಿಳಿಯದೆ ಪ್ರಯಾಸಪಟ್ಟ ಅವನು ಕೊನೆಗೆ ‘ಇದು ಅರ್ಧ, ಅದು ಅರ್ಧ’ ಎಂದುಬಿಟ್ಟ.

ಬಾಲಕನ ಈ ಉತ್ತರ ಪರಸ್ಪರ ಅಪನಂಬಿಕೆಯ ದ್ಯೋತಕವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ಏನೇನು ಯಡವಟ್ಟುಗಳಾಗಬಹುದು ಎಂಬುದನ್ನು ಸುಲಭವಾಗಿಯೇ ಅಂದಾಜಿಸಬಹುದು.  ಟ್ರಂಪ್ ಒಂದೊಮ್ಮೆ ಉತ್ತರ ಕೊರಿಯಾ ಕ್ಷಿಪಣಿ ಮೇಲೆ ವೈಮಾನಿಕ ದಾಳಿಗೆ ಆದೇಶಿಸಿದರೂ ಸಾಕು ಅದು ಸಮರಕ್ಕೆ ನಾಂದಿಯಾಗುತ್ತದೆ ಎಂದೇ ಪ್ರತಿಯೊಬ್ಬ ಉತ್ತರ ಕೊರಿಯಾ ಅಧಿಕಾರಿ ಹೇಳುತ್ತಾರೆ.

ಕೊರಿಯಾದೊಂದಿಗೆ ಮತ್ತೊಮ್ಮೆ ಯುದ್ಧ ನಡೆದರೆ 10 ಲಕ್ಷ ಜನ ಸಾವಿಗೀಡಾಗಿ ಹತ್ತಾರು ಸಾವಿರ ಕೋಟಿ ಮೌಲ್ಯದಷ್ಟು ಆಸ್ತಿಪಾಸ್ತಿ ನಷ್ಟವಾಗಬಹುದು ಎಂದು ಅಮೆರಿಕ ಸೇನೆಯು 1994ರಲ್ಲೇ ಲೆಕ್ಕಾಚಾರ ಹಾಕಿತ್ತು. ಆದರೆ, ಇಂದು ಅಣ್ವಸ್ತ್ರಗಳ ಪ್ರಯೋಗ ಸಾಧ್ಯತೆ ಇರುವುದರಿಂದ ಈ ಹಾನಿಯ ಪ್ರಮಾಣ ಇದಕ್ಕಿಂತ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಬಹುದು. ಒಂದೊಮ್ಮೆ ಉತ್ತರ ಕೊರಿಯಾವು ಟೋಕಿಯೊ ಅಥವಾ ಸೋಲ್ ಮೇಲೆ ಅಣ್ವಸ್ತ್ರ ಪ್ರಯೋಗಿಸಿದ್ದೇ ಆದರೆ ಈ ಎರಡು ನಗರಗಳಲ್ಲೇ 20 ಲಕ್ಷಕ್ಕಿಂತ ಹೆಚ್ಚು ಜನ ಸಾವಿಗೀಡಾಗ
ಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಅಂದಾಜಿಸಿದೆ.

ನನ್ನ ಗ್ರಹಿಕೆಯ ಪ್ರಕಾರ, ಎರಡೂ ರಾಷ್ಟ್ರಗಳು, ತಾನು ದುರ್ಬಲವೆಂದು ತೋರಿಸಿಕೊಂಡುಬಿಟ್ಟರೆ ಏನಾಗುತ್ತದೋ ಎಂಬ ಭಯದಲ್ಲಿವೆ. ಹೀಗಾಗಿ ಅವೆರಡೂ ಭೀಕರ ಸೇನಾ ದಾಳಿಯ ಮಾತುಗಳನ್ನಾಡುತ್ತಾ ಒಂದನ್ನೊಂದು ಭಯಗೊಳಿಸಲು ಯತ್ನಿಸುತ್ತಿವೆ. ಆದರೆ ಆಂತರ್ಯದಲ್ಲಿ ಅವೆರಡೂ ಶಾಂತಿಯುತ ಇತ್ಯರ್ಥಕ್ಕೆ ಆದ್ಯತೆ ನೀಡುತ್ತಿವೆ. ಆದರೆ, ಅದನ್ನು ರಾಜಕೀಯವಾಗಿ ಸಾಧಿಸುವುದಾದರೂ ಹೇಗೆ? ಈ ಕಗ್ಗಂಟಿನಿಂದ ಹೊರಬರುವುದು ಹೇಗೆ?

ಮೊತ್ತಮೊದಲಿಗೆ, ಟ್ರಂಪ್ ಅವರು ಈ ಸಂಘರ್ಷವನ್ನು ವ್ಯಕ್ತಿಗತ ನೆಲೆಯಲ್ಲಿ ನೋಡುವುದನ್ನು ಹಾಗೂ ಅದರ ಕಾವು ಹೆಚ್ಚಿಸುವುದನ್ನು ಬಿಡಬೇಕು. ಎರಡನೆಯದಾಗಿ, ಯಾವುದೇ ಷರತ್ತುಗಳಿಲ್ಲದೆ ಮಾತುಕತೆ ನಡೆಯಬೇಕು.

ಅಂತಿಮವಾಗಿ, ವಾಸ್ತವವಾದಿ ನೆಲೆಯಲ್ಲಿ ಹೀಗೆ ಹೇಳಬಹುದು: ತನ್ನ ವಿರುದ್ಧದ ದಿಗ್ಬಂಧನಗಳಲ್ಲಿ ಸಡಿಲಿಕೆ ಹಾಗೂ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸೇನಾ ಚಟುವಟಿಕೆಗಳ ಕಡಿತಕ್ಕಾಗಿ ಉತ್ತರ ಕೊರಿಯಾವು ತನ್ನ ಪರಮಾಣು ಹಾಗೂ ಕ್ಷಿಪಣಿ ಪ್ರಯೋಗಗಳನ್ನು ಸ್ಥಗಿತಗೊಳಿಸಬಹುದು. ಪರಮಾಣು ನಿಶ್ಶಸ್ತ್ರೀಕರಣದ ದೀರ್ಘಾವಧಿ ಗುರಿಯನ್ನಿರಿಸಿಕೊಂಡು ಮಧ್ಯಂತರ ಪರಿಹಾರವಾಗಿ ಈ ಮಾರ್ಗೋಪಾಯ ಅನುಸರಿಸಬಹುದು. ದುರದೃಷ್ಟವಶಾತ್, ಎರಡೂ ರಾಷ್ಟ್ರಗಳು ಈ ಧೋರಣೆಯನ್ನು ವಿರೋಧಿಸುತ್ತಿವೆ. ಉತ್ತರ ಕೊರಿಯಾದ ನಿರಾಸಕ್ತಿಯೂ ನನ್ನಲ್ಲಿ ಹತಾಶೆ ಮೂಡಿಸಿದೆ.

ಸದ್ದಾಂ ಹುಸೇನ್ ಆಡಳಿತಾವಧಿಯಲ್ಲಿ ಇರಾಕ್‌ಗೆ 2002ರಲ್ಲಿ ಭೇಟಿ ನೀಡಿದ್ದಾಗ ಯಾವ ರೀತಿ ಅನ್ನಿಸಿತ್ತೋ ಅದೇ ರೀತಿಯ ಅನಿಸಿಕೆಯೊಂದಿಗೆ ಈಗ ಉತ್ತರ ಕೊರಿಯಾದಿಂದ ವಾಪಸ್ ಹೊರಡುತ್ತಿದ್ದೇನೆ. ಕದನದ ಸಂಭವನೀಯತೆಯನ್ನು ತಡೆಯಲು ಸಾಧ್ಯವಿದೆ; ಆದರೆ, ಅದನ್ನು ತಡೆಯಲಾಗುತ್ತದೆ ಎಂಬುದನ್ನು ನಾನು ಖಚಿತವಾಗಿ ಹೇಳಲಾರೆ.
–ದಿ ನ್ಯೂಯಾರ್ಕ್‌ ಟೈಮ್ಸ್‌

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT