ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಒಳಿತನ್ನು ಅನುಸರಿಸಬೇಕು

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾಕ್ರೆಟಿಸನ ತಂದೆಯ ಹೆಸರು ಸಾಫ್ರೋನಿಸ್ಕಸ್‌; ಅವನು ಒಬ್ಬ ಶಿಲ್ಪಿ. ಅವನ ತಾಯಿಯ ಹೆಸರು ಫೀನಾರಿಟಿ; ಅವಳು ಸೂಲಗಿತ್ತಿ. ಸಾಕ್ರೆಟಿಸ್‌ ಶಿಲ್ಪಕಲೆಯನ್ನು ಅಭ್ಯಾಸ ಮಾಡಿದ್ದವನು. ಸೈನಿಕನಾಗಿ ಹಲವು ಯದ್ಧಗಳಲ್ಲಿ ಭಾಗವಹಿಸಿದ್ದ ಕೂಡ. ಅವನು ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡಿದ್ದವನು.

ಆದರೆ ಸಾಕ್ರೆಟಿಸನ ನಿಜವಾದ ಯುದ್ಧವಿದ್ದದ್ದು ಅಜ್ಞಾನದೊಂದಿಗೆ ಎನ್ನಬಹುದು. ಜನರು ತಿಳಿವಳಿಕೆಯಿಲ್ಲದೆ ಜೀವನವನ್ನು ನಡೆಸುವುದನ್ನು ಖಂಡಿಸಿದವನು. ಅರಿವನ್ನು ಮೂಡಿಸಲು ಜನರೊಂದಿಗೆ ನಿರಂತರವಾಗಿ ಸಂವಾದ ನಡೆಸಿದವನು. ವ್ಯಷ್ಟಿಯ ಹಿತವನ್ನೂ ಸಮಷ್ಟಿಯ ಹಿತವನ್ನೂ ಕಾಪಾಡಬಲ್ಲ ಅರಿವನ್ನು ದಕ್ಕಿಸಿಕೊಳ್ಳಬೇಕೆಂದು ಪ್ರತಿಪಾದಿಸಿದ. ಇದಕ್ಕಾಗಿ ಅವನು ಎತ್ತಿಹಿಡಿದ ಸೂತ್ರವೂ ವಿಶೇಷವಾದುದು.

ಕೇವಲ ಬುದ್ಧಿ(knowledge)ಯನ್ನು ದಕ್ಕಿಸಿಕೊಂಡರಷ್ಟೇ ಸಾಲದು; ಅಥವಾ ಕೇವಲ ಗುಣ(virtue)ವನ್ನು ದಕ್ಕಿಸಿಕೊಂಡರಷ್ಟೇ ಸಾಲದು. ಈ ಎರಡನ್ನೂ ಗಳಿಸಿಕೊಳ್ಳಬೇಕು. ಮಾತ್ರವಲ್ಲ, ನಮಗೆ ಬುದ್ಧಿ ಬೇಕಿರುವುದು ಗುಣಶೀಲರಾಗುವುದಕ್ಕಾಗಿಯೇ ಎನ್ನುವುದನ್ನು ಮರೆಯುವಂತಿಲ್ಲ – ಎಂದು ಬಲವಾಗಿ ಪ್ರತಿಪಾದಿಸಿದ. ಅವನ ಪ್ರಕಾರ ತಿಳಿವಳಿಕೆ ಮತ್ತು ಶೀಲ – ಎರಡೂ ಕೂಡ ಒಂದೇ. ಬುದ್ಧಿವಂತನಾದ ಮನುಷ್ಯ ಅವನು ಒಳ್ಳೆಯವನೂ ಆಗಿರುತ್ತಾನೆ; ಯಾರು ಶೀಲವಂತನೋ ಅವನು ಬುದ್ಧಿವಂತನೂ ಹೌದು. ಇದನ್ನು ಸಾಕ್ರೆಟಿಸನ ಸೂತ್ರ ಎನ್ನಬಹುದು. ಯಾರೂ ಕೂಡ ತಿಳಿವಳಿಕೆಯಿಂದ ತಪ್ಪು ಮಾಡುವುದಿಲ್ಲ; ತಿಳಿವಳಿಕೆಯಿಲ್ಲದವರೇ ತಪ್ಪು ಮಾಡಲು ಸಾಧ್ಯ ಎಂಬ ಆದರ್ಶ ಅವನದ್ದು. ಹೀಗಾಗಿಯೇ ಅವನ ಸಿದ್ಧಾಂತವನ್ನು ‘ನೈತಿಕ ಬೌದ್ಧಿಕತೆ’ (ethical intellectualism) ಎನ್ನುತ್ತಾರೆ. ಅವನು ಏನನ್ನು ಬೇರೆಯವರಿಗೆ ಉಪದೇಶಿಸಿದನೋ ಅದರಂತೆ ತಾನು ನಡೆದುಕೊಂಡ.  ಸಾಕ್ರೆಟಿಸನ ವಿಚಾರಗಳನ್ನೂ ವ್ಯಕ್ತಿತ್ವವನ್ನೂ ಹಲವರು ಟೀಕಿಸಿದಾಗಲೂ ಅವನು ವಿಚಲಿತನಾಗಲಿಲ್ಲ. ಜನರನ್ನು ಎಚ್ಚರಿಸುವುದು ದೈವವೇ ನನಗೆ ನೀಡಿರುವ ಆದೇಶ ಎಂಬಂತೆ ಶ್ರದ್ಧೆಯಿಂದ ಜನಬೋಧನೆಯಲ್ಲಿ ತೊಡಗಿದ. ಅರಿಸ್ಟೋಫೆನಿಸ್‌ ಎಂಬುವನು ‘ಮೇಘಗಳು’ (Clouds) ಎಂಬ ನಾಟಕವನ್ನು ಬರೆದು ಪ್ರದರ್ಶಿಸಿದ. ಅದರಲ್ಲಿ ಸಾಕ್ರೆಟಿಸನನ್ನು ಹೋಲುವ ಪಾತ್ರವೊಂದನ್ನು ಸೃಷ್ಟಿಸಿ ಅವನನ್ನು ಅಣಕಿಸಲಾಯಿತು. ಇಷ್ಟೆಲ್ಲ ಟೀಕೆಗಳಿಗೆ ತುತ್ತಾದರೂ ಸಾಕ್ರೆಟಿಸ್‌ ಧೃತಿಗೆಡದೆ ತನ್ನ ಕರ್ತವ್ಯದಲ್ಲಿ ಮುಂದುವರೆದ. ಒಮ್ಮೆ ‘ಮೇಘಗಳು’ ನಾಟಕದ ಪ್ರದರ್ಶನಕ್ಕೆ ಅವನು ಕೂಡ ಹೋಗಿದ್ದನಂತೆ. ಅವನ ‘ಪಾತ್ರ’ ಬಂದಾಗ ಜನರೆಲ್ಲ ನಗತೊಡಗಿದರಂತೆ. ಆಗ ಪ್ರೇಕ್ಷಕರ ಮಧ್ಯದಲ್ಲಿ ಕುಳಿತಿದ್ದ ಅವನು ‘ಆ ಪಾತ್ರ ನಾನೇ’ ಎಂದು ಅಲ್ಲಿದ್ದವರಿಗೆ ಸೂಚಿಸಲು ಮೇಲೆದ್ದು ನಿಂತನಂತೆ! ಹೀಗೆ ಅಸಾಧ್ಯ ಸ್ಥಿತಪ್ರಜ್ಞತೆಯನ್ನು ಸಂಪಾದಿಸಿದ್ದ ಸಾಕ್ರೆಟಿಸ್‌.

ನಮ್ಮ ಮಾತು–ಕೃತಿಗಳೆಲ್ಲವೂ ನಮ್ಮ ಒಳಿತಿಗಾಗಿಯೂ ಸಮಾಜದ ಒಳಿತಿಗಾಗಿಯೂ ಪೂರಕವಾಗಿರಬೇಕು ಎಂದು ನಡೆಯಲ್ಲೂ ನುಡಿಯಲ್ಲೂ ತೋರಿಸಿಕೊಟ್ಟ ಶ್ರೇಷ್ಠ ತತ್ತ್ವಜ್ಞಾನಿ ಸಾಕ್ರೆಟಿಸ್‌.

–ಸುಜನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT