ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಪಾಡ್ಯಮಿ: ಅಹಂಕಾರದ ‘ಬಲಿ’ಗೆ ಒಲಿದ ನಲಿವು

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹೆಚ್ಚು ಕಡಿಮೆ ನಮ್ಮ ಎಲ್ಲ ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿಯೂ ಪುರಾಣದ ಕಥೆಗಳಿರುತ್ತವೆ. ಈ ಕಥೆಗಳಿಗೂ ಅವು ಹುಟ್ಟಿದ ಸಂಸ್ಕೃತಿಗೂ ನೇರ ಸಂಬಂಧವಿರುತ್ತದೆ. ಜನಮಾನಸಿಕತೆಯ ಆಶಯಗಳನ್ನೂ ಹಂಬಲಗಳನ್ನೂ ಸಿದ್ಧಿಯನ್ನೂ ಸಿದ್ಧಾಂತಗಳನ್ನೂ ಈ ಕಥೆಗಳಲ್ಲಿ ಕಾಣಬಹುದು. ಆದರೆ ಇವು ಯಾವುವೂ ಮೇಲ್ನೋಟಕ್ಕೆ ಸುಲಭವಾಗಿ ಕಾಣಿಸುವುದಿಲ್ಲ. ರಸಪೂರ್ಣವಾದ ಕಾವ್ಯವೊಂದು ಹೊರಗೆ ಕಾಣುವ ಪದಗಳ ಶರೀರದ ಹೃದಯದಲ್ಲಿ ಹೇಗೆ ದಿಟವಾದ ಅರ್ಥವನ್ನೂ ಸೌಂದರ್ಯವನ್ನೂ ಆನಂದವನ್ನೂ ಅಡಗಿಸಿಕೊಂಡಿರುತ್ತದೆಯೋ, ಅಂತೆಯೇ ಪುರಾಣಗಳ ಕಥೆಗಳೂ ಕೂಡ ಸಂಸ್ಕೃತಿಯ ಅರಿವನ್ನು ಅವುಗಳ ಅಂತರಂಗದಲ್ಲಿ ಹುದುಗಿಸಿಕೊಂಡಿರುತ್ತವೆ. 'Myth is metaphor' (ಪುರಾಣ ಎನ್ನುವುದು ರೂಪಕ) – ಎಂಬ ಜೋಸೆಫ್‌ ಕ್ಯಾಂಬೆಲ್‌ ಮಾತು ಮನನೀಯ.

ದೀಪಾವಳಿಯ ಸಾಲು ಹಬ್ಬಗಳಲ್ಲಿ ಬಲಿಪಾಡ್ಯಮಿಯೂ ಒಂದು. ಈ ಹಬ್ಬಕ್ಕೂ ಪೌರಾಣಿಕ ಹಿನ್ನೆಲೆಯಿದೆ. ಬಲಿಚಕ್ರವರ್ತಿ ಪ್ರಹ್ಲಾದನ ಮೊಮ್ಮಗ. ಅವನು ಮಹಾ ವಿಷ್ಣುಭಕ್ತ. ಒಂದು ನೂರು ಅಶ್ವಮೇಧ ಯಾಗಗಳನ್ನು ಮಾಡಿದ್ದ. ಇದರ ಉದ್ದೇಶ ಅವನು ಇಂದ್ರನಾಗ ಬೇಕೆಂಬುದು. ಅವನು ಯಾಗ
ಮಾಡುತ್ತಿದ್ದ ಸ್ಥಳಕ್ಕೆ ವಿಷ್ಣು ವಾಮನನ ರೂಪದಲ್ಲಿ ಬಂದ. ಕೇಳಿದವರಿಗೆಲ್ಲ ಬಲಿ, ಏನು ಬೇಕೋ ಅದನ್ನು ದಾನ ಮಾಡುತ್ತಿದ್ದ. ವಾಮನನಿಗೆ ಏನು ಬೇಕೆಂದು ಕೇಳಿದ; ಏನು ಕೇಳಿದರೂ ಕೊಡಬಲ್ಲೆನೆಂಬ ಉತ್ಸಾಹ ಅವನದು. ವಾಮನನ ಕುಬ್ಜರೂಪವನ್ನು ನೋಡಿ ‘ಇವನು ಏನು ಕೇಳಿಯಾನು?’ ಎಂದು ಅವನನ್ನು ಉಪೇಕ್ಷಿಸಿದ್ದಿರಬಹುದು. ವಾಮನ ಮೂರು ಹೆಜ್ಜೆಗಳಷ್ಟು ಸ್ಥಳವನ್ನು ದಾನವನ್ನಾಗಿ ಕೇಳಿದ; ಬಲಿ ‘ಆಗಲಿ, ಮೂರು ಹೆಜ್ಜೆ ತಾನೆ, ಅಳೆದುಕೊ’ ಎಂದ. ಕುಬ್ಜನಾಗಿದ್ದ ವಾಮನ ಆ ಕೂಡಲೇ ತ್ರಿವಿಕ್ರಮನಾಗಿ ಬೆಳೆದ. ಒಂದು ಹೆಜ್ಜೆಯಿಂದ ಇಡಿಯ ಭೂಮಿಯನ್ನೂ, ಮತ್ತೊಂದು ಹೆಜ್ಜೆಯಿಂದ ಆಕಾಶವನ್ನೂ ಅಳೆದು, ಮೂರನೆಯ ಹೆಜ್ಜೆಯನ್ನು ಇರಿಸಲು ಜಾಗ ಯಾವುದೆಂದು ಮಹಾವಿಷ್ಣು ಬಲಿಯನ್ನು ಕೇಳಿದನಂತೆ. ಬಲಿಯು ತನ್ನ ನೆತ್ತಿಯನ್ನೇ ತೋರಿಸಲು, ವಾಮನ ಬಲಿಯ ತಲೆಯನ್ನು ಮೆಟ್ಟಿ ಅವನನ್ನು ಪಾತಾಳಕ್ಕೆ ಅಟ್ಟಿದನಂತೆ. ಬಲಿಯ ತ್ಯಾಗದಿಂದ ವಿಷ್ಣು ಸಂತೃಪ್ತನಾಗಿ, ಏನು ವರ ಬೇಕೆಂದು ಕೇಳಿದ. ಪಾತಾಳದಲ್ಲಿರುವ ತನ್ನ ಮನೆಯನ್ನು ವಿಷ್ಣು ಕಾವಲು ಕಾಯಬೇಕೆಂದು ಅವನು ಕೋರಿದನಂತೆ; ವರ್ಷದಲ್ಲಿ ಒಂದು ದಿನ ಇಡಿಯ ಭೂಮಂಡಲದಲ್ಲಿ ಅವನದೇ ರಾಜ್ಯಭಾರ ನಡೆಯುವ ಅವಕಾಶವನ್ನು ಕೊಡಬೇಕೆಂದೂ ಪ್ರಾರ್ಥಿಸಿದ. ಈ ಉತ್ಸವವೇ ಬಲಿಪಾಡ್ಯಮಿ.

ಬಲಿಪಾಡ್ಯಮಿಯ ಕಥೆ ಏನನ್ನು ಹೇಳುತ್ತಿದೆ? ಈ ಕಥೆಗೆ ಆಧ್ಯಾತ್ಮಿಕತೆಯ ಹಲವು ಆಯಾಮಗಳು ಉಂಟು. ಒಂದನ್ನು ಇಲ್ಲಿ ನೋಡಬಹುದು. ವಿಷ್ಣು ಎಂದರೆ ಎಲ್ಲೆಲ್ಲೂ ಹರಡಿರುವ ತತ್ತ್ವ; ಸರ್ವವ್ಯಾಪಕತೆ; ನಮ್ಮ ಜೀವನವನ್ನು ಆವರಿಸಿರುವ ಪೂರ್ಣತತ್ತ್ವ. ಆದರೆ ಈ ತತ್ತ್ವ ನಮ್ಮ ಅಹಂಕಾರದ ಕಾರಣದಿಂದ ನಮ್ಮ ಅರಿವಿಗೆ ಬಾರದೆ ಕುಬ್ಜವಾಗಿ, ಎಂದರೆ ತಪ್ಪಾಗಿ ಕಾಣುತ್ತಿರುತ್ತದೆ; ವಿಷ್ಣುವು ವಾಮನನಾಗಿ ಕಂಡಂತೆ. ಒಮ್ಮೆ ಈ ಅಹಂಕಾರ, ನಾನು ಎಂಬ ಭ್ರಮೆ ಅಳಿದಾಗ ಮತ್ತೆ ಆ ಪೂರ್ಣತೆಯಲ್ಲಿ ನಾವು ಒಂದಾಗುತ್ತೇವೆ. ಇದು ಅಂತರಂಗ ಮತ್ತು ಬಹಿರಂಗ - ಎರಡರ ಸಮೃದ್ಧಿಗೂ ಪ್ರತೀಕ. ಮಾತ್ರವಲ್ಲ, ಈ ಪೂರ್ಣತೆಯ ಅನುಭವವೇ ದಿಟವಾದ್ದು, ಶಾಶ್ವತ. ಬಲಿಚಕ್ರವರ್ತಿ ಚಿರಂಜೀವಿಗಳಲ್ಲಿ ಒಬ್ಬ ಎಂಬ ಎಣಿಕೆಯೂ ಉಂಟೆಂಬುದರ ಸ್ವಾರಸ್ಯವಾದರೂ ಇದೇ. ವಾಮನನು ಅಳೆದ ಮೂರು ಹೆಜ್ಜೆಗಳು ಮೂರು ಅವಸ್ಥೆಗಳನ್ನು ಪ್ರತಿನಿಧಿಸುತ್ತವೆ; ಅವೇ ಎಚ್ಚರ, ಕನಸು ಮತ್ತು ಗಾಢವಾದ ನಿದ್ರೆ. ನಮ್ಮ ಬದುಕಿನ ಎಲ್ಲ
ಸ್ಥಿತಿ-ಗತಿಗಳೂ ಈ ಮೂರು ಅವಸ್ಥೆಯನ್ನೇ ಅವಲಂಬಿಸಿರುತ್ತವೆ. ಈ ಮೂರೂ ಸ್ಥಿತಿಗಳನ್ನು ಆವರಿಸಿಕೊಂಡು, ಅದನ್ನು ಮೀರಿರುವ ತತ್ತ್ವವೇ ‘ವಿಷ್ಣು'. ಹೀಗೆ ನಮ್ಮತನದ ಅರಿವನ್ನು ಪಡೆಯುವುದರ ದ್ಯೋತಕವೇ ಬಲಿಪಾಡ್ಯಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT