7

ಆರೋಗ್ಯ ವಿಮೆ; ಆಸ್ಪತ್ರೆ ಖರ್ಚು

Published:
Updated:
ಆರೋಗ್ಯ ವಿಮೆ; ಆಸ್ಪತ್ರೆ ಖರ್ಚು

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ವಿಮೆ ಮಾಡಿಸದವರಿಗೆ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೆನಪಿಸಿಕೊಂಡರೆ ನಡುಕ, ಜ್ವರ – ಒಟ್ಟಿಗೆ ಬರಬಹುದು. ಕಳೆದ ಒಂದೆರಡು ತಿಂಗಳಿನಲ್ಲಿ ಡೆಂಗಿ, ಚಿಕುನ್‌ಗುನ್ಯಾದಂತಹ ಸೊಳ್ಳೆಯಿಂದ ಬರುವಂತಹ ವೈರಾಣುರೋಗಗಳಿಂದ ಆಸ್ಪತ್ರೆಗಳು ಭರ್ತಿಯಾಗಿ ಲಕ್ಷಾಂತರ ಹಣ ಜೇಬಿನಿಂದ ಕಳೆದುಕೊಂಡವರ ಕಥೆ ಕಡಿಮೆಯೇನಿಲ್ಲ.

ಸರ್ಕಾರ ಭರಿಸುವ ಜನರ ಆರೋಗ್ಯದ ವೆಚ್ಚ ಸುಮಾರು ಶೇ. 25. ಮುಕ್ಕಾಲು ಭಾಗ ಜನರಿಗೆ ಆರೋಗ್ಯ ವಿಮೆ ಇಲ್ಲದೆ, ತಮ್ಮ ಸ್ವಂತ ಖರ್ಚಿನಿಂದಲೇ ಆಸ್ಪತ್ರೆಯ ಖರ್ಚು ಮತ್ತು ಔಷಧಗಳ ವೆಚ್ಚವನ್ನು ನಿರ್ವಹಿಸಿಕೊಳ್ಳುವಂತಾಗಿದೆ.  ಒಟ್ಟು ನಮ್ಮ ದೇಶ ಆರೋಗ್ಯಕ್ಕಾಗಿ ಹೊರುವಂತಹ ಆಸ್ಪತ್ರೆ ಮತ್ತು ಇತರೆ ಖರ್ಚು ಸುಮಾರು 7.5 ಲಕ್ಷ ಕೋಟಿ ರೂಪಾಯಿಗಳು. ಅಂದರೆ ಸುಮಾರು 5 ಲಕ್ಷ 60 ಸಾವಿರ ಕೋಟಿ ರೂಪಾಯಿಗಳಷ್ಟು ಖರ್ಚನ್ನು ಭಾರತೀಯರು ತಾವು ಸ್ವತಃ ಭರಿಸುವುದಾಗಿದೆ.

ಈ ಹೊರೆಯನ್ನು ಸರಿದೂಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸೇರಿ ಖರ್ಚು ಮಾಡುತ್ತಿರುವ ಜಿಡಿಪಿಯ ಶೇ.1.2 ರಿಂದ ಶೇ.2.5ರಷ್ಟಾದರೂ ಮಾಡಿದಲ್ಲಿ ಜನಸಾಮಾನ್ಯರ ಹೊರೆಯನ್ನು ನೀಗಿಸಬಹುದು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುವ ಥೈಲ್ಯಾಂಡ್, ಸಿಂಗಪುರ ಮತ್ತು ಬ್ರೆಸಿಲ್ ದೇಶಗಳ ಸರ್ಕಾರಿ ವೆಚ್ಚ ಶೇ.3.7 ಮತ್ತು ಶೇ.4 ಸರಾಸರಿಯಾಗಿರುತ್ತದೆ. ಅಮೆರಿಕದಲ್ಲಿ ಒಟ್ಟು ವೆಚ್ಚ ಶೇ.18ರಷ್ಟಿದ್ದು, ಸರ್ಕಾರ ಅರ್ಧಕ್ಕೆ ಅರ್ಧದಷ್ಟು ಭರಿಸಿದರೂ, ಕೇವಲ ಶೇ.4ರಷ್ಟು ಖರ್ಚು ಮಾಡುವ ಸಿಂಗಪುರದ ಗುಣಮಟ್ಟಕ್ಕಿಂತ ಕಳಪೆ. ಸಿಂಗಪುರದ ಆರೋಗ್ಯ ವ್ಯವಸ್ಥೆಗೆ ಆಧಾರವಾಗಿರುವ ಎಂ.ಎಸ್.ಎ. (medical savings account) ವ್ಯವಸ್ಥೆಯನ್ನು 1984ರಲ್ಲಿ ಅಳವಡಿಸಲಾಯಿತು.

ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಿಗಿಂತಲೂ ಕಡಿಮೆ ಖರ್ಚಿನಲ್ಲಿ ಸಾಧಿಸಿರುವ ಉತ್ತಮ ಗುಣಮಟ್ಟದ ಆರೋಗ್ಯ ವ್ಯವಸ್ಥೆ ಸಿಂಗಪುರದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾರುತ್ತದೆ. ಇದನ್ನು ಚೀನಾ ಕೂಡ ಅಳವಡಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯದ ಹೊರೆಯನ್ನು ವಿಮಾ ಕಂಪನಿಗಳಿಗೆ ವರ್ಗಾಯಿಸುವ ನಿಟ್ಟಿನಲ್ಲಿದೆ. ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಕೇಂದ್ರದ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದರಲ್ಲಿ ಹಳೆಯ ವಾರ್ಷಿಕ ಪ್ರೀಮಿಯಂ ಮೊತ್ತ 3 0ಸಾವಿರದಿಂದ ಒಂದು ಲಕ್ಷಕ್ಕೆ ಏರಿಸಲಾಗಿದೆ. ಅದು ಉತ್ತಮ ಬೆಳವಣಿಗೆಯೇ. ಆದರೆ ಸರ್ಕಾರ ಜನರ ಆರೋಗ್ಯವನ್ನು ಕೇವಲ ವಿಮೆಯ ಕಂತು ಕಟ್ಟಿ ಕೈ ತೊಳೆದುಕೊಳ್ಳಬಹುದೇ? – ಇದು  ಪ್ರಶ್ನೆ.

ಇದಾಗಲೇ ಶೇ.1.2 ಜಿಡಿಪಿ ಖರ್ಚಿನಲ್ಲಿ ಕೇವಲ ಶೇ.7ರಷ್ಟು ಮಾತ್ರ ಆರೋಗ್ಯ ವ್ಯವಸ್ಥೆಗೆ ಬಂಡವಾಳ ಹೂಡಿಕೆಯಾಗಿದೆ. ಮುಖ್ಯವಾಗಿ ಸರ್ಕಾರದ ಖರ್ಚು ಆರೋಗ್ಯ ವ್ಯವಸ್ಥೆಗೆ ಮೂಲಭೂತ ಸೌಕರ್ಯಕ್ಕೆ, ಬಂಡವಾಳ ಹೂಡಿಕೆಗೆ ಅಗತ್ಯವಿರುತ್ತದೆ. ಅಲ್ಲದೆ ಇನ್ಸುರೆನ್ಸ್ ಪ್ರೀಮಿಯಂ ನೋಡಿ ಆಸ್ಪತ್ರೆಗೆ ’ತಕ್ಷಣ ದಾಖಲು’ ಮಾಡಿಕೊಳ್ಳುವ ಸಂದರ್ಭಗಳು ಹೆಚ್ಚಾಗುತ್ತಿವೆ. ಬೇಡದ ಆರೋಗ್ಯ ತಪಾಸಣೆ ಮತ್ತು ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವುದು ಕೂಡ ಕಂಡುಬರುತ್ತಿದೆ. ಎಲ್ಲದಕ್ಕೂ ಮುಖ್ಯವಾಗಿ ಇತ್ತೀಚಿನ ಎಲ್ಲಾ ಸಮೀಕ್ಷೆಗಳೂ ಹೇಳುವಂತೆ ಮಕ್ಕಳ ಜನನಕ್ಕೂ ಹೆಚ್ಚು ಸಿಸೇರಿಯನ್ ಆಗುವುದಕ್ಕೂ ವಿಮಾ ಪ್ರೀಮಿಯಂ ಉತ್ತೇಜಿಸುತ್ತಿರಬಹುದು ಎನ್ನಲಾಗುತ್ತಿದೆ. ಪ್ರೀಮಿಯಂ ದರ ಈ ರೀತಿ ಅನವಶ್ಯಕ ಆಸ್ಪತ್ರೆ ಮತ್ತು ವೈದ್ಯಕೀಯ ಅನ್ವೇಷಣೆಗೆ ಪ್ರೇರಣೆ ನೀಡುತ್ತಿರುವುದು ಕೇವಲ ವಿಮೆಯೊಂದೇ ಪರಿಹಾರವಲ್ಲ ಮತ್ತು ಇದರ ನಿಯಂತ್ರಣ ಕೂಡ ಅಗತ್ಯ ಎನ್ನಬಹುದು.

ರಘು ಕೆ. ಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry