ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಒಯು ಮುಚ್ಚುವುದಿಲ್ಲ: ಜಾವಡೇಕರ್‌

ಯುಜಿಸಿ ವರದಿಗಾಗಿ ನಿರೀಕ್ಷೆ
Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು (ಕೆಎಸ್‌ಒಯು) ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌ ಭರವಸೆ ನೀಡಿದ್ದಾರೆ.

ಕೆಎಸ್‌ಒಯು ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ನೇತೃತ್ವದಲ್ಲಿ ಕೆಎಸ್‌ಒಯು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಿಯೋಗ ಜಾವಡೇಕರ್ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿತು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಾವಡೇಕರ್, ‘ಕೆಎಸ್‌ಒಯು ಮುಚ್ಚುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಮೂರೂವರೆ ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಮಗೂ ಕಾಳಜಿಯಿದೆ. ಕೆಎಸ್‌ಒಯು ಪುನರಾರಂಭ ಮಾಡಲು ಅಗತ್ಯ ಕ್ರಮಕೈಗೊಳ್ಳುತ್ತೇವೆ’ ಎಂದು ಆಶ್ವಾಸನೆ ನೀಡಿದರು.

‘ಕೆಎಸ್‌ಒಯು ಮುಚ್ಚಬೇಕಾಗಬಹುದು ಎಂದು ಕರ್ನಾಟಕದ ಸಚಿವರೊಬ್ಬರು ಯಾವ ಕಾರಣಕ್ಕಾಗಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೆಸರನ್ನು ಪ್ರಸ್ತಾಪಿಸದೇ ಜಾವಡೇಕರ್ ಪರೋಕ್ಷವಾಗಿ ಹೇಳಿದರು.

ಕೆಎಸ್ಒಯುನಲ್ಲಿ ₹500 ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಗರಣ ಕುರಿತು ನಾಲ್ಕು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆಂತರಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಕೆಲವು ಗೊಂದಲಗಳಿವೆ. ಈ ಎಲ್ಲವನ್ನು ಪರಿಶೀಲಿಸಿ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ವರದಿ ಸಲ್ಲಿಸಲಿದೆ. ಆ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೆಎಸ್‌ಒಯು ಮಾನ್ಯತೆ ವಿಷಯ ಇತ್ಯರ್ಥವಾಗದೇ ಇರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕಕ್ಕೆ ಸಿಲುಕಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸುವಂತೆ ನಿಯೋಗ ಮನವಿ ಮಾಡಿತು.

ಬಿಜೆಪಿ ಕಚೇರಿ ಎದುರು ಪ್ರತಿಭಟನೆ

ಕೆಎಸ್‌ಒಯು ಮುಚ್ಚುಬಾರದು ಎಂದು ಮನವಿ ಸಲ್ಲಿಸಲು ಬಂದಿದ್ದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆಗೆ ಮುಂದಾಗಿದ್ದರಿಂದಾಗಿ ಕೆಲ ಹೊತ್ತು ಗೊಂದಲ ಸೃಷ್ಟಿಯಾಗಿತ್ತು.

ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಸಲ್ಲಿಸಲು ಮೈಸೂರಿನಿಂದ ಸಿಬ್ಬಂದಿ ಬಂದಿದ್ದರು. ಸಭೆ ನಡೆಸುತ್ತಿದ್ದ ಜಾವಡೇಕರ್ ಕೆಲ ಹೊತ್ತು ಹೊರಗೆ ಬರಲಿಲ್ಲ. ಇದರಿಂದ ಸಿಟ್ಟಾದ ಕೆಲವರು, ಕೆಎಸ್‌ಒಯು ಮುಚ್ಚುವ ತೀರ್ಮಾನದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾದರು. ಬಿಜೆಪಿ ವಿರುದ್ಧವೇ ಘೋಷಣೆ ಕೂಗುತ್ತಿದ್ದಾರೆ ಎಂಬಂತೆ ಭಾಸವಾಗಿದ್ದರಿಂದಾಗಿ ಪಕ್ಷದ ನಾಯಕರು ಗಲಿಬಿಲಿಗೊಂಡರು. ಸ್ಥಳದಲ್ಲಿದ್ದ ಬಿಜೆಪಿ ಪ್ರಮುಖರು, ಘೋಷಣೆ ಕೂಗಿ ಪ್ರತಿಭಟನೆ ನಡೆಸದಂತೆ ಮನವೊಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT