ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಲಿ’

ಕರ್ನಾಟಕ ವಿವಿಯಲ್ಲಿ ಡಾ. ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಉದ್ಘಾಟನೆ
Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಧಾರವಾಡ: ‘ದೇಶದಲ್ಲಿ ಮೀಸಲಾತಿ ವ್ಯವಸ್ಥೆಗೆ ಕೊನೆ ಯಾವಾಗ ಎಂದು ಬಹುತೇಕರು ನನಗೆ ಪ್ರಶ್ನೆ ಕೇಳುತ್ತಾರೆ. ಆದರೆ, ಜಾತಿ ವ್ಯವಸ್ಥೆಗೆ ಕೊನೆ ಯಾವಾಗ ಎಂದು ನಾನು ಅವರನ್ನು ಮರು ಪ್ರಶ್ನೆ ಕೇಳಲು ಬಯಸುತ್ತೇನೆ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಇರುವವರೆಗೂ, ಮೀಸಲಾತಿ ನೀತಿ ಇರಬೇಕು’ ಎಂದು ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ಮೀಸಲಾತಿ ಪರ– ವಿರೋಧದ ಚರ್ಚೆಗಳು ನಡೆಯುತ್ತಿವೆ. ಆದರೆ, ಜಾತಿ ವ್ಯವಸ್ಥೆ ಜೀವಂತವಿರುವ ಕಾರಣದಿಂದಲೇ ಮೀಸಲಾತಿ ನೀತಿ ಜಾರಿಗೆ ತರಲಾಗಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಯಾವುದೇ ರಾಷ್ಟ್ರ ಅಥವಾ ಪ್ರದೇಶದ ಅಭಿವೃದ್ಧಿಗೆ ಅಲ್ಲಿರುವ ಕಟ್ಟಡ ಅಥವಾ ರಸ್ತೆಯಂಥ ನಿರ್ಜೀವ ವಸ್ತುಗಳು ಮಾನದಂಡವಲ್ಲ. ಬದಲಿಗೆ ಅಲ್ಲಿ ರಸ್ತೆ ಗುಡಿಸುವ, ಮ್ಯಾನ್‌ಹೋಲ್‌ಗೆ ಇಳಿಯುವವರ ಸ್ಥಿತಿಯನ್ನೂ ನೋಡಬೇಕಾಗುತ್ತದೆ. ಸಮಾಜದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮಹಿಳೆಯರನ್ನು ಗೌರವದಿಂದ ಕಂಡಾಗ ಮಾತ್ರ ಅಭಿವೃದ್ಧಿಗೆ ಅರ್ಥ ಬರುತ್ತದೆ’ ಎಂದು ಮೀರಾ ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮಾತನಾಡಿ, ‘ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಗಜೀವನ್‌ರಾಮ್‌ ಅಧ್ಯಯನ ಕೇಂದ್ರ ಸ್ಥಾಪನೆಗೆ 70 ವರ್ಷ ಬೇಕಾಯಿತು ಎಂಬುದು ಆಶ್ಚರ್ಯದ ಸಂಗತಿ. ಇಂತಹ ಕೇಂದ್ರಗಳು ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಇರಬೇಕು ಎಂದು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ಕಡೆಯೂ ಒಂದೇ ಮಾದರಿಯ ಕಟ್ಟಡ ನಿರ್ಮಿಸಲಾಗುವುದು. ಇದಕ್ಕೆ ತಲಾ ₹2 ಕೋಟಿ ಅನುದಾನ ನೀಡಲಾಗುವುದು’ ಎಂದರು.

ಕವಿವಿ ಕುಲಪತಿ ಡಾ. ಪ್ರಮೋದ ಗಾಯಿ ಅವರ ಕೋರಿಕೆ ಹಾಗೂ ಸಭೆಯಲ್ಲಿದ್ದ ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸಿದ ಆಂಜನೇಯ, ‘ಕರ್ನಾಟಕ ವಿವಿಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ₹ 9 ಕೋಟಿ ಅನುದಾನ ನೀಡುವ ಭರವಸೆ ನೀಡಿದರು. ಇದರಲ್ಲಿ ವಿದ್ಯಾರ್ಥಿನಿಲಯ ಹಾಗೂ ವಿದ್ಯಾರ್ಥಿವೇತನ, ವಿದೇಶ ಪ್ರವಾಸ, ಉನ್ನತ ವ್ಯಾಸಂಗ ಸೇರಿದೆ’ ಎಂದರು.

* ‘ಪ್ರಧಾನಿ ಮೋದಿಯೇ ಖುದ್ದು ರಾಜ್ಯದ ಹಳ್ಳಿ ಹಳ್ಳಿ ಅಡ್ಡಾಡಿದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಪುನಃ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರಲಿದೆ’

– ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT