ಕೈ ಉತ್ಪನ್ನ ಕರಮುಕ್ತಕ್ಕೆ ಆಗ್ರಹ

ಭಾನುವಾರ, ಮೇ 26, 2019
31 °C
ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಕರ ನಿರಾಕರಣೆ ಸತ್ಯಾಗ್ಯಹ

ಕೈ ಉತ್ಪನ್ನ ಕರಮುಕ್ತಕ್ಕೆ ಆಗ್ರಹ

Published:
Updated:
ಕೈ ಉತ್ಪನ್ನ ಕರಮುಕ್ತಕ್ಕೆ ಆಗ್ರಹ

ಮೈಸೂರು: ಕೃಷಿ ಹಾಗೂ ಕೈ ಉತ್ಪನ್ನಗಳನ್ನು ‘ಶೂನ್ಯಕರ’ ಮಾಡಬೇಕು ಎಂದು ಆಗ್ರಹಿಸಿ ಗ್ರಾಮ ಸೇವಾ ಸಂಘದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ‘ಕರ ನಿರಾಕರಣೆ ಚಳವಳಿ’ ನಡೆಸಿದರು.

ಚಳವಳಿಯ ನೇತೃತ್ವ ವಹಿಸಿದ್ದ ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಸ್ವಾತಂತ್ರ್ಯ ಬಂದ ಮೇಲೆ ಮೊದಲ ಬಾರಿಗೆ ಕೃಷಿ, ಕರಕುಶಲ ಉತ್ಪನ್ನಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಸಣ್ಣ ರೈತರು, ಕೈ ಕಸಬುದಾರರು, ಬಡವರು ಬೀದಿಗೆ ಬೀಳಲಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿ ಸಿಲುಕಿರುವ ಗ್ರಾಮೀಣ ಉತ್ಪಾದನಾ ಕ್ಷೇತ್ರ ನಲುಗಿ ಹೋಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಡಕೆ, ಕುಡಿಕೆ, ಚಪ್ಪಲಿ, ಖಾದಿ ಬಟ್ಟೆ, ಕೈಮಗ್ಗ ಉತ್ಪನ್ನ, ಕಂಬಳಿ, ಇತರ ಉತ್ಪನ್ನಗಳಿಗೂ ಸರಕು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗಿದೆ. ಕೇಂದ್ರ ಸರ್ಕಾರದ ಈ ಕ್ರಮ ಅಮಾನವೀಯ. ದೊಡ್ಡ ಹೂಡಿಕೆದಾರರ ಮುಂದೆ ರೈತರು, ಗುಡಿಕೈಗಾರಿಕೆಗಳ ಶ್ರಮಿಕರು ನಿಲ್ಲಲು ಸಾಧ್ಯವೇ? ವಿವೇಚನೆ ಇಲ್ಲದ ಕರ ಪದ್ಧತಿಯನ್ನು ಕೂಡಲೇ ಹಿಂತೆಗೆಯಬೇಕು’ ಎಂದು ಅವರು ಆಗ್ರಹಿಸಿದರು.

‘ನಗರ ಪ್ರದೇಶದ ಜನ ತಮ್ಮ ಕರುಳಬಳ್ಳಿಯಾದ ಹಳ್ಳಿಗಳನ್ನು ಮರೆಯಬಾರದು. ಪ್ರಜ್ಞಾವಂತಿಕೆಯ ಗ್ರಾಹಕರಾಗಬೇಕು. ಕೃಷಿ, ಕೈ ಉತ್ಪನ್ನಗಳನ್ನು ಕರವಿಲ್ಲದೇ ಖರೀದಿಸಬೇಕು. ಈ ಮೂಲಕ ದೊಡ್ಡ ಪ್ರಮಾಣದ ಚಳವಳಿಗೆ ಮುಂದಾಗಬೇಕು. ಯಾವುದೇ ರಾಜಕೀಯ ಉದ್ದೇಶವಿಲ್ಲದೇ ಎಲ್ಲರೂ ಇದಕ್ಕೆ ದನಿಗೂಡಿಸಬೇಕು’ ಎಂದು ಹೇಳಿದರು.

ಮಡಕೆ, ಬಿದಿರಿನ ಮೊರ, ಬುಟ್ಟಿ, ಚಪ್ಪಲಿಗಳನ್ನು ಕರವಿಲ್ಲದೇ ಕೊಳ್ಳುವ ಮೂಲಕ ಸಾಂಕೇತಿಕವಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಮಾಜಿ ಸ್ಪೀಕರ್‌ ಕೃಷ್ಣ, ಸಂಘದ ಅಧ್ಯಕ್ಷ ಸಿ.ಯತಿರಾಜ್, ಸಾಹಿತಿಗಳಾದ ದೇವನೂರ ಮಹಾದೇವ, ಶಿವರಾಮು ಕಾಡನಕುಪ್ಪೆ, ಸಿಪಿಎಂ ಮುಖಂಡ ನಾಗರಾಜು, ಸಮಾಜವಾದಿ ಪ.ಮಲ್ಲೇಶ, ಎಂ.ಎಸ್.ಗೋಪಿನಾಥ್‌, ಹೆರೆಯಾಲ ದೊರೆಸ್ವಾಮಿ, ಜಿ.ಪಿ.ಬಸವರಾಜ ಮುಂತಾದವರು ಕರ ವಿರೋಧಿ ಘೋಷಣೆ ಕೂಗಿದರು.

ಅ. 14ರಂದು ಬೆಂಗಳೂರಿನ ನಿಡುಮಾಮಿಡಿ ಮಠದ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು ಎಂದು ಸಂಘಟಕರು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry