ಬುಧವಾರ, ಸೆಪ್ಟೆಂಬರ್ 18, 2019
21 °C

ಡೀಮ್ಡ್‌ ಅರಣ್ಯ ರಕ್ಷಣೆಗಾಗಿ ಕೇಂದ್ರಕ್ಕೆ ಮನವಿ

Published:
Updated:
ಡೀಮ್ಡ್‌ ಅರಣ್ಯ ರಕ್ಷಣೆಗಾಗಿ ಕೇಂದ್ರಕ್ಕೆ ಮನವಿ

ನವದೆಹಲಿ: ರಾಜ್ಯದಲ್ಲಿನ ಪರಿಭಾವಿತ (ಡೀಮ್ಡ್‌) ಅರಣ್ಯ ಪ್ರದೇಶದ ರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ವೃಕ್ಷಲಕ್ಷ ಆಂದೋಲನವು ಕೇಂದ್ರ ಸರ್ಕಾರವನ್ನು ಕೋರಿದೆ.

ಕೇಂದ್ರದ ಅರಣ್ಯ ಸಚಿವ ಡಾ.ಹರ್ಷವರ್ಧನ್‌ ಅವರಿಗೆ ಈ ಕುರಿತ ಮನವಿ ಸಲ್ಲಿಸಿರುವ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

2002ರಲ್ಲಿ ರಾಜ್ಯದಾದ್ಯಂತ ಇದ್ದ 10 ಲಕ್ಷ ಹೆಕ್ಟೆರ್‌ ಪರಿಭಾವಿತ ಅರಣ್ಯ ಪ್ರದೇಶವು ಒತ್ತುವರಿಯಿಂದಾಗಿ ಇದೀಗ 5 ಲಕ್ಷ ಹೆಕ್ಟೆರ್‌ಗೆ ಇಳಿದಿದೆ. ರಾಜ್ಯ ಸರ್ಕಾರವು ಅರಣ್ಯೇತರ ಉದ್ದೇಶಕ್ಕೆ ಈ ಅರಣ್ಯ ಪ್ರದೇಶವನ್ನು ಬಳಕೆ ಮಾಡುವ ಹುನ್ನಾರ ಹೊಂದಿದೆ ಎಂಬುದನ್ನು ತಿಳಿಸಲಾಗಿದೆ ಎಂದು ಅವರು ಹೇಳಿದರು.

ಪಶ್ಚಿಮ ಘಟ್ಟದಲ್ಲಿನ ದೇವರಕಾಡು, ಕಾನು, ಬೆಟ್ಟ, ಹಾಡಿ ಮತ್ತಿತರ ಕಂದಾಯ ಅರಣ್ಯ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ 25,000 ಹೆಕ್ಟೆರ್‌ ಅರಣ್ಯ ಪ್ರದೇಶವನ್ನು 30 ವರ್ಷಗಳ ಹಿಂದೆಯೇ ಭದ್ರಾವತಿಯ ಕಾಗದ ಕಾರ್ಖಾನೆಗಾಗಿ ನೆಡುತೋಪು ನೆಡಲು ನೀಡಲಾಗಿದೆ. ಕಳೆದ ವರ್ಷ ಕಾರ್ಖಾನೆ ಮುಚ್ಚಿರುವುದರಿಂದ ಈ ಅರಣ್ಯ ಪ್ರದೇಶದ ನಿರ್ವಹಣೆ ಇಲ್ಲದಂತಾಗಿ, ಅತಿಕ್ರಮಣಕ್ಕೆ ಅವಕಾಶವಾಗಿದೆ. ಈ ಪ್ರದೇಶಕ್ಕೆ ಕೇಂದ್ರದ ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸುವ ಮೂಲಕ ಅರಣ್ಯವನ್ನು ಉಳಿಸಬೇಕು ಎಂದು ಕೋರಲಾಗಿದೆ ಎಂದು ಅವರು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಬಳಿಯ ನವಿಲುಗುಡ್ಡ ಭಾಗದ ಕಡ್ಲೂರು, ಶಿವಪುರದಲ್ಲಿ ಅಂದಾಜು 1,000 ಹೆಕ್ಟೆರ್‌ ಅರಣ್ಯ ಪ್ರದೇಶದಲ್ಲಿ ರಾಜ್ಯ ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡಿದೆ. ಇದರ ಸಮೀಪವೇ ಭದ್ರಾ ಹುಲಿ ಯೋಜನೆಯ ಪ್ರದೇಶವಿದ್ದು, ಗ್ರಾಮಸ್ಥರು ನವಿಲುಗುಡ್ಡ ಉಳಿಸಿ ಚಳವಳಿ ನಡೆಸುತ್ತಿದ್ದಾರೆ. ಇರುವಕ್ಕಿ ಬಳಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು 1,000 ಹೆಕ್ಟೆರ್‌ ಅರಣ್ಯ ಭೂಮಿಯನ್ನು ಅಕ್ರಮವಾಗಿ ನೀಡಲಾಗಿದೆ. ಅರಣ್ಯೇತರ ಭೂಮಿಯಲ್ಲಿ ವಿ.ವಿ. ಸ್ಥಾಪನೆಗೆ ಅವಕಾಶ ನೀಡಬಹುದಾಗಿದೆ ಎಂಬ ಕುರಿತು ಮನವಿಯಲ್ಲಿ ಗಮನ ಸೆಳೆಯಲಾಗಿದೆ ಎಂದು ಅವರು ವಿವರಿಸಿದರು.

ಪಶ್ಚಿಮ ಘಟ್ಟದಲ್ಲಿನ ನದಿ ಕಣಿವೆ ಪ್ರದೇಶಗಳಲ್ಲಿ ಖಾಸಗಿಯವರಿಗೆ ಜಲ ವಿದ್ಯುತ್‌ ಉತ್ಪಾದನೆಗಾಗಿ ಅಣೆಕಟ್ಟೆ ಕಟ್ಟುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸುತ್ತಿದ್ದು, ಈ ಎಲ್ಲ ವಿಷಯಗಳ ಕುರಿತು ಗಮನ ಹರಿಸುವ ಮೂಲಕ ಅರಣ್ಯ ಭೂಮಿಯನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರ ಸಚಿವರು ಒಮ್ಮೆ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಸತ್ಯಾಂಶ ಅರಿಯಬೇಕು ಎಂದು ಆಗ್ರಹಿಸಲಾಗಿದೆ ಎಂದು ಅವರು ಹೇಳಿದರು. ಸಂಘಟನೆಯ ಸಂಚಾಲಕ ನಾರಾಯಣ ಹೆಗಡೆ ಗಡೀಕೈ ಹಾಜರಿದ್ದರು.

Post Comments (+)