ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಮಳೆಗೆ ಬೆಚ್ಚಿದ ರಾಜಧಾನಿ– ಹೊಳೆಗಳಾದ ರಸ್ತೆಗಳು; ಮುಂದಿನ ಎರಡು ದಿನ ಭಾರಿ ಮಳೆ ಮುನ್ನೆಚ್ಚರಿಕೆ

Last Updated 13 ಅಕ್ಟೋಬರ್ 2017, 20:37 IST
ಅಕ್ಷರ ಗಾತ್ರ

ಬೆಂಗಳೂರು: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿ ತತ್ತರಿಸಿದೆ. ತಗ್ಗು ಪ್ರದೇಶಗಳ ಹತ್ತಾರು ಮನೆಗಳಿಗೆ ನೀರು ನುಗ್ಗಿತ್ತು. ಅನೇಕ ರಸ್ತೆಗಳು ಜಲಾವೃತಗೊಂಡಿದ್ದವು.

ಮೈಸೂರು ರಸ್ತೆಯ ಸಿರ್ಸಿ ವೃತ್ತ, ರಾಜಾಜಿನಗರದ ಶ್ರೀರಾಮ ಮಂದಿರದ ಬಳಿ ತಲಾ ಒಂದು ಮರ ಉರುಳಿದೆ. ಬಾಪೂಜಿನಗರ, ಯಶವಂತಪುರ, ನಾಯಂಡಹಳ್ಳಿ, ಮಲ್ಲೇಶ್ವರ, ಗಾಯತ್ರಿ ನಗರ, ಪ್ರಕಾಶನಗರದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದೆ. ಸಿದ್ಧಾರ್ಥ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಮೋದಿ ಆಸ್ಪತ್ರೆ, ಕಾಮಾಕ್ಷಿಪಾಳ್ಯ ಮುಖ್ಯರಸ್ತೆ, ಬಸವೇಶ್ವರನಗರ, ರಾಜಾಜಿನಗರ, ವಿಜಯನಗರ ಪೈಪ್‌ಲೈನ್‌, ಕೆ.ಆರ್‌.ಮಾರುಕಟ್ಟೆ, ಕೋರಮಂಗಲದ ಸೋನಿ ವರ್ಲ್ಡ್‌ ಜಂಕ್ಷನ್‌ ಬಳಿ ನೀರು ನಿಂತಿತ್ತು.

ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರಸ್ತೆ ಜಲಾವೃತಗೊಂಡಿತ್ತು. ಕೆಂಪೇಗೌಡನಗರದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಮನೆಗಳ ವಸ್ತುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದವು.

ಹೊಸಗುಡ್ಡದಹಳ್ಳಿಯ ‘ಜಿ’ ಸ್ಟ್ರೀಟ್‌ನಲ್ಲಿ ಮನೆಗಳು ಜಲಾವೃತಗೊಂಡಿದ್ದವು. ವೆಂಕಟೇಶ್‌ ಎಂಬುವರ ಮನೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಗೃಹೋಪಯೋಗಿ ವಸ್ತುಗಳಿಗೆ ಹಾನಿ ಉಂಟಾಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು, ಬೈಕ್‌ಗಳು ನೀರಿನಲ್ಲಿ ಮುಳುಗಡೆಯಾದವು. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೆಣ್ಣೂರು ಮುಖ್ಯರಸ್ತೆಯ ರೈಲ್ವೆ ಕೆಳಸೇತುವೆ ಜಲಾವೃತಗೊಂಡಿತ್ತು

ಜೆ.ಪಿ.ನಗರ, ಜಯನಗರ, ಮೆಜೆಸ್ಟಿಕ್‌ ಸುತ್ತಮುತ್ತಲಿನ ಪ್ರದೇಶಗಳು, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ರಾಜೀವ್‌ ಗಾಂಧಿ ವೃತ್ತ, ಓಕಳಿಪುರ ಮೇಲ್ಸೇತುವೆ, ಹೆಬ್ಬಾಳ, ಕಲ್ಯಾಣನಗರ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ರೈಲ್ವೆ ಕೆಳಸೇತುವೆ ಜಲಾವೃತ: ಹೆಣ್ಣೂರು ಮುಖ್ಯರಸ್ತೆಯ ಗೆದ್ದಲಹಳ್ಳಿಯ ರೈಲ್ವೆ ಕೆಳಸೇತುವೆ ಬಳಿ ನೀರು ನಿಂತಿತ್ತು. ಹೆಬ್ಬಾಳ ಕೆರೆಯಿಂದ ಬರುವ ರಾಜಕಾಲುವೆಯಲ್ಲಿ ಕಸ ತುಂಬಿಕೊಂಡಿದೆ. ಇದರಿಂದ ಸೇತುವೆ ಬಳಿ ನೀರು ಉಕ್ಕಿ ರಸ್ತೆಗೆ ಬರುತ್ತಿದೆ. ‘ರಾಜಕಾಲುವೆಯೂ ಕಿರಿದಾಗಿರು
ವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಸೇತುವೆ ಬಳಿ ನಾಲ್ಕು ಅಡಿ ನೀರು ನಿಂತಿತ್ತು. ಇದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾ
ಗಿತ್ತು’ ಎಂದು ಹೆಣ್ಣೂರು ನಿವಾಸಿ ಮುನಿರಾಜು ದೂರಿದರು.

ಸಚಿವರಿಗಾಗಿ ಏಕಮುಖ ಸಂಚಾರ: ಸಚಿವರೊಬ್ಬರ ಸಂಚಾರಕ್ಕಾಗಿ ರೇಸ್‌ಕೋರ್ಸ್‌ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಪರಿವರ್ತಿಸಲಾಗಿತ್ತು. ಇದರಿಂದ ಒಂದು ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದರು. ಇದರಿಂದಾಗಿ ಬಸವೇಶ್ವರ ವೃತ್ತ, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಾತ್ರಿ 8ರಿಂದ 11ರವರೆಗೆ ವಾಹನ ದಟ್ಟಣೆ ಉಂಟಾಗಿತ್ತು.

ಬಿಬಿಎಂಪಿ ವತಿಯಿಂದ ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಇದರಿಂದ ರಸ್ತೆ ಇಕ್ಕಟ್ಟಾಗಿದ್ದು, ವಾಹನಗಳು ಆಮೆಗತಿಯಲ್ಲಿ ಸಾಗಿದವು. ಇದರ ಜತೆಗೆ, ಇದೇ ವೃತ್ತದ ಕೆಳಸೇತುವೆಯಲ್ಲಿ ನೀರು ನಿಂತಿತ್ತು. ಇದರಿಂದ ಮಲ್ಲೇಶ್ವರ, ಓಕಳಿಪುರ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ: ಮೈಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ನಿಂತಿದ್ದವು. ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ವಾರಾಂತ್ಯವಾಗಿದ್ದರಿಂದ ಜನರು ಊರುಗಳಿಗೆ ತೆರಳಲು ಮುಂದಾಗಿದ್ದರಿಂದ ಮೇಲ್ಸೇತುವೆಯಲ್ಲಿ ದಟ್ಟಣೆ ಕಂಡುಬಂತು. ರಾತ್ರಿ 7ರಿಂದ 11ರವರೆಗೂ ವಾಹನಗಳು ಆಮೆಗತಿಯಲ್ಲಿ ಸಾಗಿದವು.

ಬಿಎಂಟಿಸಿ ಬಸ್‌ ಮುಳುಗಡೆ: ನಾಯಂಡಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಬಿಎಂಟಿಸಿ ಬಸ್‌ ಭಾಗಶಃ ಮುಳುಗಿತ್ತು. ವೃಷಭಾವತಿ ಕಣಿವೆಯ ನೀರು ರಸ್ತೆಗೆ ಹರಿದಿದ್ದರಿಂದ ಈ ಅವಘಡ ಸಂಭವಿಸಿತ್ತು. 10 ಅಡಿಗೂ ಹೆಚ್ಚು ನೀರು ನಿಂತಿತ್ತು. ಅಲ್ಲಿಂದ ಬೇರೆ ಕಡೆಗಳಿಗೆ ಹೋಗಬೇಕಾದ ಜನರು ಅಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಬೆಸ್ಕಾಂಗೆ 683 ದೂರು: ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ ಬೆಸ್ಕಾಂಗೆ ರಾತ್ರಿ 6ರಿಂದ 9ರವರೆಗೆ 683 ದೂರುಗಳು ಬಂದಿವೆ. ವಿಲ್ಸನ್‌ ಗಾರ್ಡನ್‌ ಹಾಗೂ ಮನೋರಾಯನಪಾಳ್ಯದಲ್ಲಿ ತಲಾ ಒಂದು ವಿದ್ಯುತ್‌ ಕಂಬ ಉರುಳಿವೆ.

ವಾಡಿಕೆಗಿಂತ ಮೂರು ಪಟ್ಟು ಜಾಸ್ತಿ ಮಳೆ

ಕಳೆದ ಎರಡು ತಿಂಗಳಿನಿಂದ ನಗರದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ವಾಡಿಕೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ.

ಜೂನ್‌ 1ರಿಂದ ಅಕ್ಟೋಬರ್ 13ರವರೆಗೆ ನಗರದಲ್ಲಿ ಅತಿ ಹೆಚ್ಚು ಸಂಪಂಗಿರಾಮನಗರದಲ್ಲಿ (126.7 ಸೆಂ.ಮೀ) ಹಾಗೂ ಅತಿ ಕಡಿಮೆ ಚೊಕ್ಕಸಂದ್ರ (54.7 ಸೆಂ.ಮೀ) ಮಳೆಯಾಗಿದೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಡಿಎಂಸಿ) ಮಾಹಿತಿ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ 67 ದಿನಗಳಲ್ಲಿ ವರ್ಷಧಾರೆಯಾಗಿದ್ದು, ಒಟ್ಟು 94.5 ಸೆಂ.ಮೀ ಮಳೆ ದಾಖಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚು ದಿನಗಳಲ್ಲಿ ಮಳೆ ಸುರಿದಿದೆ. 2016ರಲ್ಲಿ ಜೂನ್‌ನಿಂದ ಅಕ್ಟೋಬರ್‌ 49.8 ಸೆಂ.ಮೀ ಮಳೆಯಾಗಿತ್ತು.

ಬಿಬಿಎಂಪಿಯ 710 ಚದರ ಕಿ.ಮೀ ವ್ಯಾಪ್ತಿಯಲ್ಲಿ ಕೆಎಸ್‌ಡಿಎಂಸಿ 95 ಮಳೆ ಮಾಪಕಗಳನ್ನು ಅಳವಡಿಸಿದೆ. ‘ಗಾಳಿ ಮತ್ತು ಮೋಡ ರಚನೆ ವ್ಯತ್ಯಾಸದಿಂದ ನಗರದ ಕೆಲವು ಕಡೆ ಹೆಚ್ಚು ಮಳೆಯಾಗಿದ್ದು, ಇನ್ನೂ ಕೆಲವು ಕಡೆ ಕಡಿಮೆ ಮಳೆ ದಾಖಲಾಗಿದೆ’ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದರು.

ಮುಂದಿನ ಎರಡು ದಿನ ಭಾರಿ ಮಳೆ

ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮೈಸೂರು ಮತ್ತು ತುಮಕೂರು ನಗರಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

‘ಗುಂಡಿ ಮುಚ್ಚಲು ಮಳೆ ಅಡ್ಡಿ’

‘ನಗರದಲ್ಲಿ ಎರಡು ತಿಂಗಳ ಅವಧಿಯಲ್ಲಿ 48 ದಿನ ಮಳೆಯಾಗಿದೆ. ಹೀಗಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಇದನ್ನು ಅರ್ಥ
ಮಾಡಿಕೊಳ್ಳದೆ ಬಿಜೆಪಿ ನಾಯಕರು ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದರು.

‘ಸತತ ಮಳೆಯಿಂದ ಗುಂಡಿ ಬೀಳುವುದು ಸಾಮಾನ್ಯ. ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಎಲ್ಲ ಪಕ್ಷಗಳೂ ಒಟ್ಟಾಗಿ ಜನರಿಗೆ ಸಹಕರಿಸಬೇಕು. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಆದರೆ, ಬಿಜೆಪಿಯವರು ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಶುಕ್ರವಾರ ಅವರು ದೂರಿದರು.

‘ಬಿಬಿಎಂಪಿಯಲ್ಲಿ ಬಿಜೆಪಿಯ 100 ಸದಸ್ಯರಿದ್ದಾರೆ. ನಗರ ವ್ಯಾಪ್ತಿಯಲ್ಲಿ ಆ ಪಕ್ಷದ 12 ಶಾಸಕರಿದ್ದಾರೆ. ಪಾಲಿಕೆಯಲ್ಲಿ ಅವರದೇ ಅಧಿಕಾರ ಇದ್ದಾಗಲೂ ರಸ್ತೆ ಗುಂಡಿಗಳಿದ್ದವು. ಆಗ ಅವರು ಯಾಕೆ ಮುಚ್ಚಲಿಲ್ಲ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT