ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿ ಮಾರ್ಗ ಕುಸಿತ ಕಳಪೆ ಕಾಮಗಾರಿ ಅನಾವರಣ

Last Updated 13 ಅಕ್ಟೋಬರ್ 2017, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ರಸ್ತೆಯಿಂದ ಸಜ್ಜನ್‌ರಾವ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಸರ್ವೇಯರ್ ಸ್ಟ್ರೀಟ್‌ನ ಪಾದಚಾರಿ ಮಾರ್ಗದಲ್ಲಿ ಶುಕ್ರವಾರ ಭೂಕುಸಿತ ಉಂಟಾಗಿದೆ.

‘ಬೆಳಿಗ್ಗೆ 9 ಗಂಟೆ ಸುಮಾರಿಗೆ ಕುಸಿತ ಉಂಟಾಗಿದೆ. ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿದ್ದ ಕಾರನ್ನು ತೆಗೆಯುತ್ತಿದ್ದಾಗ ಕುಸಿದಂತೆ ಆಯಿತು. ತಕ್ಷಣ ಕಾರು ನಿಲ್ಲಿಸಿ, ಕೆಳಗಿಳಿದು ನೋಡಿದಾಗ ಚಕ್ರಗಳು ಗುಂಡಿಯಲ್ಲಿ ಸಿಲುಕಿದ್ದವು. ನಮ್ಮ ಕಾರಿನ ಪಕ್ಕದಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿನ ಚಕ್ರವೂ ಗುಂಡಿಯಲ್ಲಿ ಸಿಲುಕಿತ್ತು. ನಂತರ ಕ್ರೇನ್‌ ಸಹಾಯದಿಂದ ಕಾರನ್ನು ಸ್ಥಳಾಂತರಿಸಿದೆವು’ ಎಂದು ಚಾಲಕ ವಿವರಿಸಿದರು.

ರಸ್ತೆ ಅಂಚಿನ ಮರಗಳ ನಡುವೆ ಸಿಮೆಂಟ್ ಬ್ಲಾಕ್‌ಗಳಿಂದ ನಿರ್ಮಿಸಿದ್ದ ಪಾದಚಾರಿ ಮಾರ್ಗದಲ್ಲಿ ಸುತ್ತಮುತ್ತಲ ನಿವಾಸಿಗಳು ವಾಹನ ನಿಲುಗಡೆ ಮಾಡುತ್ತಿದ್ದರು. ಈ ಮಾರ್ಗದ ಕೆಳಗೆ ಒಳಚರಂಡಿ ಕೊಳವೆ ಹಾದು ಹೋಗಿದೆ. ‘ಒಳಚರಂಡಿ ಮುಖ್ಯ ಮಾರ್ಗವನ್ನು ಹೊಸದಾಗಿ ಅಳವಡಿಸುವ ಕೆಲಸ ಆಗಬೇಕಿದೆ. ಇದಕ್ಕೆ ಟೆಂಡರ್‌ ಕರೆಯಲಾಗಿದೆ. 45 ವರ್ಷಗಳ ಹಳೆ ಪೈಪ್‌ಲೈನ್‌ಗಳಾಗಿದ್ದು, ಎಲ್ಲೆಲ್ಲಿ ಸೋರುತ್ತಿದ್ದವು ಎಂದು ಗುರುತಿಸುವುದು ಕಷ್ಟ’ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

ಸ್ಥಳೀಯರ ಆತಂಕ: ‘ನಾಲ್ಕು ತಿಂಗಳ ಹಿಂದಷ್ಟೇ ಈ ಕಾಮಗಾರಿಯನ್ನು ನಡೆಸಿದ್ದಾರೆ. ಒಳಚರಂಡಿ ಕೆಲಸ ಮಾಡದೆಯೇ ಇದನ್ನು ಮಾಡಿರುವುದು ಬಿಬಿಎಂಪಿ ಬೇಜವಾಬ್ದಾರಿಗೆ ಕನ್ನಡಿ ಹಿಡಿದಿದೆ. ಇದೇ ಪಾದಚಾರಿ ಮಾರ್ಗದಲ್ಲಿ ಈಗಾಗಲೇ ಎರಡು ಬಾರಿ ಸಣ್ಣದಾಗಿ ಕುಸಿತ ಉಂಟಾಗಿದೆ’ ಎಂದು ನಿವಾಸಿ ಮಾಧು ಹೇಳಿದರು.

‘ಈ ರಸ್ತೆ ಸದಾ ಜನನಿಬಿಡವಾಗಿರುತ್ತದೆ. ಕಲ್ಯಾಣ ಮಂಟಪ, ದೇವಸ್ಥಾನ, ಅಂಗಡಿಗಳು, ಕಾಲೇಜು, ವಸತಿ ಸಮುಚ್ಚಯಗಳು ಇವೆ. ನೂರಾರು ಜನ ಸಂಚರಿಸುತ್ತಿರುತ್ತಾರೆ. ಓಡಾಡುವ ಮಾರ್ಗವೇ ಕುಸಿಯುತ್ತದೆ ಎಂದರೆ ಎಲ್ಲಿ ಓಡಾಡಬೇಕು. ಸಾಕಷ್ಟು ಮಂದಿ ಹಿರಿಯ ನಾಗರಿಕರಿದ್ದಾರೆ, ಏನಾದರೂ ಅವಘಡ ಆದ ಮೇಲೆಯೇ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತದೆ’ ಎಂದು ಸ್ಥಳೀಯ ವರುಣ್‌ ಆಕ್ರೋಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT