ಬೆಳೆಯ ನುಂಗಿದ ಹಳ್ಳದ ನೀರು..

ಗುರುವಾರ , ಜೂನ್ 20, 2019
27 °C

ಬೆಳೆಯ ನುಂಗಿದ ಹಳ್ಳದ ನೀರು..

Published:
Updated:
ಬೆಳೆಯ ನುಂಗಿದ ಹಳ್ಳದ ನೀರು..

ಬಳ್ಳಾರಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಸುರಿದ ಧಾರಾಕಾರ ಮಳೆಯಿಂದ ತುಂಬಿದ ಹಳ್ಳಗಳ ನೀರು ಬೆಳೆಗಳನ್ನು ನುಂಗಿ ಹಾಕಿದೆ. ಹಳ್ಳಗಳ ಪಕ್ಕದ ಜಮೀನುಗಳಲ್ಲಿ ಬೆಳೆದಿದ್ದ ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆಗಳ ರೈತರು ನಷ್ಟದ ದಾರಿ ನೋಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಸುರಿದ ಮಳೆ ನೀರಿನ ಜೊತೆಗೆ ನೆರೆಯ ಆಂಧ್ರದ ಗಡಿಭಾಗದ ಪ್ರದೇಶದಲ್ಲಿ ಸುರಿದ ಮಳೆ ನೀರೂ ಇಲ್ಲಿಗೆ ಹರಿದುಬರುತ್ತಿರುವುದರಿಂದ ಜಮೀನುಗಳು ಹಳ್ಳಗಳಾಗಿ ಮಾರ್ಪಟ್ಟಿವೆ. ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹಳ್ಳದ ನೀರು ರಭಸದಲ್ಲಿ ಹರಿಯುತ್ತಿರುವುದರಿಂದ ಸಂಚಾರಕ್ಕೂ ಸಂಚಕಾರ ಒದಗಿದೆ.

‘ತಾಲ್ಲೂಕಿನ ಸಿಂಧುವಾಳ, ಜಾಲಿಹಾಳ್‌ ಸುತ್ತಮುತ್ತಲಿನ ಹಳ್ಳಿಗಳಿಗೆ ಆಂಧ್ರದ ಗುಂತಕಲ್‌,ಚಿಂತಕುಂಟ, ಆಲೂರು, ಅದ್ದಿಗೇರ, ರಾಯದುರ್ಗದಿಂದಲೂ ಮಳೆ ನೀರು ಹರಿದುಬರುತ್ತಿದೆ. ಜಾಲಿಹಾಳ್‌ ಗ್ರಾಮದ ಎರಡು ರಸ್ತೆ ಸೇತುವೆಗಳನ್ನು ಸುಮಾರು ಒಂದು ತಿಂಗಳಿಂದ ನೀರು ಹರಿಯುತ್ತಲೇ ಇದೆ’ ಎನ್ನುತ್ತಾರೆ ರೈತ ಶ್ರೀಧರಗೌಡ.

ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘2015ರಲ್ಲಿ ಮೊಳಕೆಯೊಡೆದಿದ್ದ ಬತ್ತವನ್ನು ಮಳೆ ನೀರು ನುಂಗಿತ್ತು. ಅದಾಗಿ ಎರಡು ವರ್ಷ ಕಳೆಯುವಷ್ಟರಲ್ಲಿ ಮತ್ತೆ ಧಾರಾಕರ ಮಳೆ ಸುರಿದಿದೆ. ಆದರೆ ಕಾಳು ಕಟ್ಟುವ ಮುನ್ನ ಸುರಿದ ಮಳೆಯಿಂದ ಹಾನಿಯ ಪ್ರಮಾಣ ಕಡಿಮೆಯಾಗಬಹುದು’ ಎಂದರು.

ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಕಡೆ ಹಳ್ಳದ ನೀರು ಹರಿಯುತ್ತಿದೆ. ಹಳ್ಳದ ಆಸುಪಾಸಿನ ಜಮೀನುಗಳಲ್ಲೂ ನೀರು ನಿಂತಿದೆ.

ಈ ಗ್ರಾಮಕ್ಕೆ ವಿರುದ್ಧ ದಿಕ್ಕಿನಲ್ಲಿರುವ ಸಿಂಧುವಾಳ ಗ್ರಾಮದಲ್ಲೂ ಹಳ್ಳದ ನೀರು ಹರಿದು ಬೆಳೆನಷ್ಟವಾಗಿದೆ. ‘ಎರಡು ಎಕರೆ ಹತ್ತಿ ಮತ್ತು ಎರಡು ಎಕರೆ ಮೆಣಸಿನಕಾಯಿ ಬೆಳೆಯಷ್ಟೂ ಇನ್ನು ಕೈಗೆ ದಕ್ಕುವುದಿಲ್ಲ. ಹಳ್ಳದ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ’ ಎಂದು ರೈತ ಶಿವಕುಮಾರ ವಿಷಾದಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry