ಗುರುವಾರ , ಸೆಪ್ಟೆಂಬರ್ 19, 2019
28 °C

ವಾಹನಗಳಿಗೆ ಬಲಿಯಾಗುತ್ತಿವೆ ಪ್ರಾಣಿಗಳು

Published:
Updated:
ವಾಹನಗಳಿಗೆ ಬಲಿಯಾಗುತ್ತಿವೆ ಪ್ರಾಣಿಗಳು

ಹನೂರು: ರಾಜ್ಯ ಹೆದ್ದಾರಿ 79ರಲ್ಲಿ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ದಾರುಣವಾಗಿ ಸಾವಿಗೀಡಾ ಗುತ್ತಿರುವುದು ಪ್ರಾಣಿಪ್ರಿಯರು ಹಾಗೂ ಅರಣ್ಯ ಅಧಿಕಾರಿಗಳಲ್ಲಿ ತಲ್ಲಣ ಉಂಟು ಮಾಡಿದೆ. ಹನೂರು ಕ್ಷೇತ್ರ ಭೌಗೋಳಿಕವಾಗಿ ವಿಶಿಷ್ಟವಾಗಿದ್ದು, ಬಹುತೇಕ ಅರಣ್ಯದಿಂದಲೇ ಆವೃತವಾಗಿದೆ. ಅವಳಿ ವನ್ಯಜೀವಿಧಾಮಗಳು ಇಲ್ಲಿ ಕೂಡಿಕೊಂಡಿರುವುದರಿಂದ ವನ್ಯಪ್ರಾಣಿಗಳ ಸ್ವಚ್ಛಂದ ವಿಹಾರ ಸಾಮಾನ್ಯ. ಆದರೆ, ಈತ್ತೀಚೆಗೆ ವಾಹನಗಳ ಅಪಘಾತದಿಂದ ಸಾಕಷ್ಟು ವನ್ಯಜೀವಿಗಳು ಪ್ರಾಣ ಕಳೆದು ಕೊಳ್ಳುತ್ತಿವೆ.

ವಿಶಾಲ ವನ್ಯಜೀವಿಧಾಮ: 527 ಚದರ ಕಿ.ಮೀ. ವಿಸ್ತೀರ್ಣವಿದ್ದ ಕಾವೇರಿ ವನ್ಯಜೀವಿಧಾಮವನ್ನು 2011ರ ಡಿಸೆಂಬರ್‌ನಲ್ಲಿ 1,027 ಚದರ ಕಿ.ಮೀಗೆ ವಿಸ್ತರಿಸಲಾಯಿತು. ರಾಜ್ಯದಲ್ಲಿ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ವನ್ಯಜೀವಿಧಾಮ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. 2013ರ ಮೇನಲ್ಲಿ ಮಲೆಮಹದೇಶ್ವರ ವನ್ಯಜೀವಿಧಾಮ ಘೋಷಣೆಯಾಯಿತು. ಇದು 906 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಇಂತಹ ವಿಶಾಲ ಅರಣ್ಯ ಪ್ರದೇಶದಲ್ಲಿ ವಾಹನ ಸಂಚಾರದಿಂದ ಇಲ್ಲಿನ ವನ್ಯಪ್ರಾಣಿಗಳ ಜೀವಕ್ಕೆ ಕುತ್ತು ಬರುತ್ತಿದೆ ಎಂಬುದು ಪ್ರಾಣಿಪ್ರಿಯರ ಆರೋಪ.

ಸಾವಿರ ಸರಮಾಲೆ: 5 ವರ್ಷದ ಅವಧಿಯಲ್ಲಿ ಸಾಕಷ್ಟು ಪ್ರಾಣಿಗಳು ವಾಹನಗಳಿಗೆ ಸಿಲುಕಿ ಬಲಿಯಾಗಿವೆ. 2012ರಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಬಸ್ಸಿಗೆ ಸಿಲುಕಿ ಚಿರತೆ ಮೃತಪಟ್ಟಿತ್ತು. ಇದೇ ರಸ್ತೆಯ ಕೋಣನಕೆರೆ ಹಾಗೂ ತಾಳುಬೆಟ್ಟದ ನಡುವೆ 2013ರ ಜ. 5ರಂದು ಅಪರಿಚಿತ ವಾಹನ ಡಿಕ್ಕಿಗೆ ಚಿರತೆ ಬಲಿಯಾಗಿತ್ತು.

ಕೌದಳ್ಳಿ ಸಮೀಪದ ಸಂತಕಾಣೆ ಬಳಿ ಬಳಿ ಖಾಸಗಿ ಬಸ್ ಹರಿದು ಕಡವೆ ಅಸುನೀಗಿತ್ತು. 2015ರಲ್ಲಿ ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಜಿಂಕೆ ಸ್ಥಳದಲ್ಲಿ ಮೃತಪಟ್ಟು ಹೊಟ್ಟೆಯಲ್ಲಿದ್ದ ಮರಿ ಹೊರಗೆ ಬಂದಿದ್ದ ಹೃದಯ ವಿದ್ರಾವಕ ಘಟನೆ ಇನ್ನೂ ಇಲ್ಲಿನ ಜನರ ಮನಸಿನಿಂದ ಮಾಸಿಲ್ಲ.

ಈಚೆಗೆ, ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಮುಳ್ಳುಹಂದಿ ಸಾವಿಗೀಡಾಗಿದ್ದರೆ, ಕಳೆದ ಬುಧವಾರ ಮಲ್ಲಯ್ಯಪುರ ಬಳಿಯ ಕಣಿವೆಬೋರೆ ಅರಣ್ಯಪ್ರದೇಶದಲ್ಲಿ ಹೆಬ್ಬಾವು ವಾಹನಕ್ಕೆ ಸಿಲುಕಿ ಮೃತಪಟ್ಟಿದೆ. ಇವು ಅರಣ್ಯ ಇಲಾಖೆಯ ಗಮನಕ್ಕೆ ಬಂದು ಪ್ರಕರಣ ದಾಖಲಾದ ಘಟನೆಗಳು ಮಾತ್ರ. ದಾಖಲಾಗದ ಪ್ರಕರಣಗಳಿಗೆ ಲೆಕ್ಕವಿಲ್ಲ. ಮೊಲ ಮತ್ತಿತರ ಸಣ್ಣಪುಟ್ಟ ಪ್ರಾಣಿಗಳು ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕಿ ಸಾಯುವ ಘಟನೆಗಳು ಸದಾ ಜರುಗುತ್ತಲೇ ಇವೆ.

ಪಾಲನೆಯಾಗದ ನಿಯಮ: ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ 40 ಕಿ.ಮೀ. ವೇಗ ಮಿತಿಯಲ್ಲಿ ಚಲಿಸಬೇಕು ಎಂಬುದು ನಿಯಮ. ಆದರೆ ಇದನ್ನು ಪಾಲಿಸುತ್ತಿಲ್ಲ.

ಅತಿ ವೇಗದ ಕಾರಣ ಚಾಲಕರು ವಾಹನ ನಿಯಂತ್ರಿಸಲಾಗದೆ ದಾರಿಯಲ್ಲಿ ಎದುರಾದ ಪ್ರಾಣಿಗಳನ್ನು ಬಲಿಕೊಡುತ್ತಿದ್ದಾರೆ ಎನ್ನುವುದು ವನ್ಯಜೀವಿ ಪ್ರಿಯರ ಆರೋಪ.

ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ತಮ್ಮ ಮೇಲೆ ದಾಳಿ ಮಾಡಬಹುದು ಎಂಬ ಭಯದಿಂದ ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ. ಅಲ್ಲದೆ, ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ರಾತ್ರಿಯಿಡೀ ಇಲ್ಲಿ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಇಂತಹ ಸಮಯದಲ್ಲಿ ಪ್ರಾಣಿಗಳು ರಸ್ತೆ ದಾಟುವಾಗ ಅಪಘಾತದಿಂದ ಸಾವಿಗೀಡಾಗುತ್ತಿವೆ.

ಅರಣ್ಯ ಇಲಾಖೆ ಅಲ್ಲಲ್ಲಿ ನಾಮಫಲಕಗಳನ್ನಿಟ್ಟು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ವನ್ಯಜೀವಿಗಳ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡದ ಹೊರತು ಪ್ರಯೋಜನವಾಗದು ಎಂಬುದು ಪ್ರಾಣಿಪ್ರಿಯರ ಅಭಿಪ್ರಾಯ.

ರಸ್ತೆಯಲ್ಲಿ ಅಲ್ಲಲ್ಲಿ ಹಂಪ್‌ಗಳನ್ನು ನಿರ್ಮಿಸಿ, ವಾಹನಗಳ ವೇಗಕ್ಕೆ ನಿಯಂತ್ರಣ ಹಾಕಬೇಕು. ಇನ್ನೂ ಹೆಚ್ಚು ಸೂಚನಾ ಫಲಕಗಳನ್ನು ಅಳವಡಿಸುವುದರ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ಅವರು.

ಪ್ರಯಾಣಿಕರು ತಿಂಡಿತಿನಿಸುಗಳನ್ನು ರಸ್ತೆಯಲ್ಲಿ ಎಸೆಯುತ್ತಾರೆ. ಅವುಗಳನ್ನು ತಿನ್ನಲು ಬರುವ ಮಂಗ, ಜಿಂಕೆ ಮುಂತಾದ ಪ್ರಾಣಿಗಳು ವಾಹನಗಳಿಗೆ ಸಿಲುಕಿ ಬಲಿಯಾಗುತ್ತಿವೆ. ಅಲ್ಲದೆ, ಮನುಷ್ಯರು ತಿನ್ನುವ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಪ್ರಾಣಿಗಳು ತಮ್ಮ ಮೂಲ ಅರಣ್ಯ ಆಹಾರ ಪದ್ಧತಿಯನ್ನು ತ್ಯಜಿಸುವ ಅಪಾಯವೂ ಇದೆ ಎಂದು ಪರಿಸರ ಪ್ರಿಯರು ಕಳವಳ ವ್ಯಕ್ತಪಡಿಸುತ್ತಾರೆ.

 

Post Comments (+)