ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಮುಂದುವರಿದ ಮಳೆಯ ಆರ್ಭಟ

Published:
Updated:

ಚಿಂತಾಮಣಿ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಬಾರಿ ಮಳೆಯಾಗಿದೆ. ಸತತ 3 ಗಂಟೆ ಸುರಿದ ಮಳೆಗೆ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಆಂಜನಿ ಬಡಾವಣೆಯ ಕಿಶೋರ ವಿದ್ಯಾಭವನ, ಮಾತೃಶ್ರೀ ಆಸ್ಪತ್ರೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ, ನಗರಸಭೆ ಪಂಪ್‌ಹೌಸ್‌ ಹಾಗೂ ಸುತ್ತಮುತ್ತಲ ಪ್ರದೇಶ ಸಂಪೂರ್ಣವಾಗಿ ಕೆರೆಯಂತಾಗಿವೆ.

ನಗರದ ಬೆಂಗಳೂರು ರಸ್ತೆ, ಚೇಳೂರು ರಸ್ತೆ ಮತ್ತು ಮುರುಗಮಲ್ಲ ರಸ್ತೆಯ ಕೆಳ ಸೇತುವೆಯಲ್ಲಿ ನೀರು ತುಂಬಿದೆ. ವಾಹನಗಳ ಸಂಚಾರಕ್ಕೂ ಅಡಚಣೆಯಾಯಿತು. ಕೆಲವು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಜನರು ಇಡೀ ರಾತ್ರಿ ಮನೆಗಳಿಂದ ನೀರನ್ನು ಹೊರಹಾಕುವುದರಲ್ಲಿ ಕಾಲ ಕಳೆಯಬೇಕಾಯಿತು.

’ಅಂಜನಿ ಬಡಾವಣೆಯ ಪಂಪ್‌ಹೌಸ್‌ ಸುತ್ತಮುತ್ತಲ ಪ್ರದೇಶದಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿತ್ತು. ರಾಜಕಾಲುವೆ ಒತ್ತುವರಿ ಹಾಗೂ ಬೆಂಗಳೂರು ರಸ್ತೆಯ ಮೋರಿಯನ್ನು ಸ್ವಚ್ಛಗೊಳಿಸದಿರುವುದು ತೊಂದರೆಗೆ ಕಾರಣವಾಗಿದೆ’ ಎಂದು ಸಾರ್ವಜನಿಕರು ದೂರಿದರು.

’ಮೋರಿಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲ್ಲ. ನೀರು ಹರಿದು ಹೋಗದಿರುವುದು ಸಮಸ್ಯೆಗೆ ಕಾರಣ. ನಗರಸಭೆಗೆ ಅನೇಕ ಬಾರಿ ಮನವಿ ಮಾಡಿದ್ದರೂ ಕ್ರಮಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಕರಿಯಪ್ಪಲ್ಲಿರುವ ಅಗ್ನಿಶಾಮಕ ಠಾಣೆಗೆ ಹೋಗುವ ರಸ್ತೆಯು ಮಳೆಗೆ ಕುಸಿದಿರುವುದರಿಂದ ಅಗ್ನಿಶಾಮಕ ವಾಹನ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಜತೆಗೆ ಬಾರಿ ಮಳೆಗೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.

ಒಳಚರಂಡಿ ನೀರು ಮತ್ತು ಮಳೆಯ ನೀರು ಮಿಶ್ರಣವಾಗಿ ಮನೆಗಳಿಗೆ ನುಗ್ಗಿರುವುದು ಹಾಗೂ ರಸ್ತೆಗಳಲ್ಲಿ ಹರಿಯುತ್ತಿರುವುದರಿಂದ ದುರ್ವಾಸನೆ ಬಡಿಯುತ್ತಿದೆ. ನಗರಕ್ಕೆ ಕುಡಿಯುವ ನೀರನ್ನು ಪೂರೈಸುತ್ತಿದ್ದ ಕನಂಪಲ್ಲಿ ಕೆರೆ ತುಂಬಿ ಕೋಡಿ ಹರಿದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ.

Post Comments (+)