ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಲೋಕದ ವಿಭಿನ್ನ ಪಯಣಿಗನಿಗೆ ‘ಬಸವಶ್ರೀ’ ಗರಿ

Last Updated 14 ಅಕ್ಟೋಬರ್ 2017, 6:27 IST
ಅಕ್ಷರ ಗಾತ್ರ

ಚಿತ್ರದುರ್ಗ: ದಲಿತಪರ ಚಿಂತಕ, ಖ್ಯಾತ ಪತ್ರಕರ್ತ ಪಾಲಗುಮ್ಮಿ ಸಾಯಿನಾಥ್ ಅವರನ್ನು 2016ನೇ ಸಾಲಿನ ಮುರುಘಾಮಠದ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗ್ರಾಮೀಣ ವರದಿಗಾರಿಕೆಗೆ ಹೊಸ ರೂಪಕೊಟ್ಟ ಸಾಯಿನಾಥ್, ಸುದ್ದಿ ಲೋಕದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೊಸ ದಾರಿಯನ್ನು ತೋರಿದರು.

ಹೆದ್ದಾರಿ ಬಿಟ್ಟು ಕಾಲುದಾರಿಯಲ್ಲಿ ಸಾಗುತ್ತಾ ಹಳ್ಳಿಗಳನ್ನು ಸುತ್ತಿ ಮಾಹಿತಿಗಳನ್ನು ದಾಖಲಿಸಿದರು.ದೇಶದಲ್ಲಿನ ರೈತರ ಆತ್ಮಹತ್ಯೆ ಸುತ್ತ ಸುದ್ದಿ ಪ್ರಕಟಿಸಿ, ಸಂಸತ್‌ನಲ್ಲಿ ಧ್ವನಿ ಎತ್ತುವಂತೆ ಮಾಡಿದ ಸಾಯಿನಾಥ್, ಕಡುಬಡವರ ನಿಟ್ಟುಸಿರಿಗೆ ಅಕ್ಷರ ರೂಪ ನೀಡಿದವರು. ಇಂಥ ಮಾಧ್ಯಮ ಲೋಕದ ವಿಭಿನ್ನ ಪಯಣಿಗನಿಗೆ ‘ಬಸವಶ್ರೀ’ ಪ್ರಶಸ್ತಿ ಅರಸಿ ಬಂದಿದೆ.

ಪ್ರಶಸ್ತಿ ಆಯ್ಕೆ ಕುರಿತು ಶುಕ್ರವಾರ ಶ್ರೀಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಘಾ ಶರಣರು, ‘12ನೇ ಶತಮಾನದ ಬಸವಾದಿ ಶರಣರ ಆದರ್ಶಗಳನ್ನಾಧರಿಸಿ ಋಜುಮಾರ್ಗದಲ್ಲಿ ನಡೆಯುವ ಮಹನೀಯರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಸಾಯಿನಾಥ್ ಅವರು ಶರಣರ ತತ್ವಗಳನ್ನು ಅನುಸರಿಸುತ್ತಾ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಾಧ್ಯಮ ಕ್ಷೇತ್ರದ ಸಾಧಕರನ್ನು ‘ಬಸವಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಶರಣರು ತಿಳಿಸಿದರು.

‘1957ರಲ್ಲಿ ಚೆನ್ನೈನ ತೆಲುಗುಭಾಷಾ ಕುಟುಂಬದಲ್ಲಿ ಜನಿಸಿದ ಸಾಯಿನಾಥ್‌, ಅವರು ಮಾಜಿ ರಾಷ್ಟ್ರಪತಿ ವಿ.ವಿ.ಗಿರಿ ಅವರ ಮೊಮ್ಮಗ. ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪದವಿ ಪಡೆದ ಅವರು, ಎಡ್ಮಂಟನ್‌ನ ಅಲ್ಬರ್ಟ್‌ ವಿಶ್ವವಿದ್ಯಾಲಯದಿಂದ 2011ರಲ್ಲಿ ಡಿ.ಲಿಟ್. ಪದವಿ ಗಳಿಸಿದರು. 1980ರಲ್ಲಿ  ಯುಎನ್‌ಐ ವರದಿಗಾರರಾಗಿ ವೃತ್ತಿ ಆರಂಭಿಸಿದ ಅವರು, ಪತ್ರಿಕೋದ್ಯಮ ವಲಯದಲ್ಲಿ ಸಾಮಾಜಿಕ ಹೊಣೆಗಾರಿಕೆ ಜವಾಬ್ದಾರಿಗಳನ್ನು ನಿರ್ವಹಿಸಿ ಯಶಸ್ಸು ಸಾಧಿಸಿದವರು’ ಎಂದು ಶರಣರು ಸಾಯಿನಾಥ್ ಅವರ ಪರಿಚಯ ಮಾಡಿಕೊಟ್ಟರು.

‘ದಿ ಹಿಂದೂ’ ಮತ್ತು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಳಲ್ಲಿ ಗ್ರಾಮೀಣ ವರದಿಗಾರಿಕೆ ವಿಭಾಗದಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ ಅವರು, ಕೃಷಿ, ಗ್ರಾಮೀಣ ಅಭಿವೃದ್ಧಿ ಮತ್ತು ಪರಿಸರ ಕ್ಷೇತ್ರದಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ.

ಗ್ರಾಮೀಣ ಕಸುಬು-ಕೈಗಾರಿಕೆಗಳ ಮಹತ್ವ ಕುರಿತಂತೆ ಮತ್ತು ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೃಷಿ ಪ್ರಧಾನ ಕ್ಷೇತ್ರ ಹಳ್ಳಿಗಳ ಪ್ರಗತಿಯ ಪಾತ್ರ ಕುರಿತಂತೆ ಅವರು ದೇಶದ ಉದ್ದಗಲಕ್ಕೂ ಸಂಚರಿಸಿ ಬರೆದ ವರದಿ, ಲೇಖನಗಳು ನಮ್ಮ ಆರ್ಥಿಕ ನೀತಿಯ ದಿಕ್ಕನ್ನು ಸಾಮಾಜಿಕ ನ್ಯಾಯದತ್ತ ತಿರುಗಿಸುವಲ್ಲಿ ಮಹತ್ವದ ಪಾತ್ರ ವಹಿಸಿವ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಶರಣ ಸಂಸ್ಕೃತಿ ಉತ್ಸವ 2017ರ ಕಾರ್ಯಾಧ್ಯಕ್ಷ ಶಂಕರ ಮೂರ್ತಿ, ಪಟೇಲ್ ಶಿವಕುಮಾರ್, ಕಾರ್ಯದರ್ಶಿ ಸೊಂಡೇಕೊಳ ಶ್ರೀನಿವಾಸ್, ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ.ಈ.ಚಿತ್ರಶೇಖರ್, ಶ್ರೀಮಠದ ವ್ಯವಸ್ಥಾಪಕ ಪರಮಶಿವಯ್ಯ, ಜಯಣ್ಣ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT